ಹಣ ಪಡೆದ ಕೆಡಿಪಿ ಸದಸ್ಯ ಸದಸ್ಯತನಕ್ಕೆ ರಾಜಿನಾಮೆ ನೀಡಲಿ : ಸರಿತಾ ಗುಂಡ್ಯ














94(ಸಿ) ಅಡಿಯಲ್ಲಿ ಜಮೀನು ಮಂಜೂರು ಮಾಡಿಸಿಕೊಡುವುದಾಗಿ ನಂಬಿಸಿ ತಮ್ಮಿಂದ 3.25 ಲಕ್ಷ ಹಣವನ್ನು ಕೆಡಿಪಿ ಸಮಿತಿ ಸದಸ್ಯರಾಗಿರುವ ಗುಂಡ್ಯ ಬೇರಿಕೆ ಪದ್ಮನಾಭ ಗೌಡ ಅವರ ವಿರುದ್ದ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿರುವುದಾಗಿ ಶಿರಾಡಿ ಗ್ರಾಮದ ಗುಂಡ್ಯ ನಿವಾಸಿ ಸರಿತಾ ಸುಬ್ರಹ್ಮಣ್ಯದಲ್ಲಿ ಅ.4 ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
2024ರ ಅ.12ರಂದು 1 ಲಕ್ಷ ನಗದು, ಅ.16ರಂದು 30 ಸಾವಿರದ ಚಿಕ್, ಅ.25ರಂದು ₹95 ಸಾವಿರದ ಚೆಕ್, ನ.14ರಂದು ₹10 ಸಾವಿರ ನಗದು ಹಾಗೂ 2025ರ ಮೇ 30ರಂದು 90 ಸಾವಿರ ನಗದು ನೀಡಲಾಗಿದೆ. ಒಟ್ಟು 3.25 ಲಕ್ಷ ಹಣ ನೀಡಿದ್ದರೂ ಜಮೀನಿಗೆ ಸಂಬಂಧಿಸಿದ ದಾಖಲೆಗಳನ್ನು ಮಾಡಿಸಿಕೊಟ್ಟಿಲ್ಲ. ಎಂದು ಸರಿತಾ ಆರೋಪಿಸಿದರು.
ಹಣವನ್ನು ಹಿಂದಿರುಗಿಸುವಂತೆ ಕೇಳಿಕೊಂಡರೂ ಹಿಂತಿಸರುಗಿಸಿಲ್ಲ ಸಮಸ್ಯೆ ಬಗೆಹರಿಯದ ಹಿನ್ನೆಲೆಯಲ್ಲಿ ಪೊಲೀಸರಿಗೆ ದೂರು ನೀಡಬೇಕಾಯಿತು. ಹಣ ಹಾಗೂ ದಾಖಲೆಗಳ ಬಗ್ಗೆ ಪ್ರಶ್ನಿಸಿದಾಗ ಬೆದರಿಕೆ ಹಾಕಲಾಗಿದೆ ಎಂಬುದನ್ನೂ ದೂರಿನಲ್ಲಿ ತಿಳಿಸಿರುವುದಾಗಿ ಅವರು ಹೇಳಿದರು.
ತಾವು ನೀಡಿದ ಹಣವನ್ನು ಅಧಿಕಾರಿಗಳಿಗೆ ನೀಡಿರುವುದಾಗಿ ಹೇಳಲಾಗುತ್ತಿದೆ ಎಂಬ ಮಾಹಿತಿ ಬಂದಿದ್ದು, ಅದು ನಿಜವೇ ಎಂಬುದನ್ನು ತನಿಖೆ ಮೂಲಕ ಸ್ಪಷ್ಟಪಡಿಸಬೇಕು. ಹಣ ಯಾರಿಗೆ, ಯಾವ ಉದ್ದೇಶಕ್ಕಾಗಿ ನೀಡಲಾಗಿದೆ ಹಾಗೂ ಯಾವುದೇ ದಾಖಲೆ ಅಥವಾ ಸಾಕ್ಷ್ಯಗಳಿವೆಯೇ ಎಂಬುದನ್ನು ಪರಿಶೀಲಿಸಬೇಕು ಎಂದು ಅವರು ಆಗ್ರಹಿಸಿದರು.
ಸಂಬಂಧಪಟ್ಟವರು ನೈತಿಕ ಹೊಣೆಗಾರಿಕೆ ವಹಿಸಿ ಕೆಡಿಪಿ ಸದಸ್ಯತ್ವಕ್ಕೆ ರಾಜೀನಾಮೆ ನೀಡಬೇಕು ಹಾಗೂ ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದು ಸರಿತಾ ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ನಿತ್ಯಾನಂದ ಗುಂಡ್ಯ, ರಾಜು ಅಡ್ಡಹೊಳೆ ಹಾಗೂ ಸಂತೋಷ್ ಕೋಲ್ಪೆ ಉಪಸ್ಥಿತರಿದ್ದರು.








