ಸೇತುವೆಯಲ್ಲಿ ವಾಹನ ಸಂಚಾರ ಸ್ಥಗಿತ : ಬದಲಿ ರಸ್ತೆ ಬಳಸಲು ಜಿಲ್ಲಾಧಿಕಾರಿ ಆದೇಶ














ಸುಳ್ಯದಿಂದ ಆಲೆಟ್ಟಿ ಸಂಪರ್ಕಿಸುವ (ಪಯಸ್ವಿನಿ ನದಿಗೆ ಕಟ್ಟಲಾದ) ನಾಗಪಟ್ಟಣ ಸೇತುವೆ ದುರಸ್ತಿ ಕಾರ್ಯ ಅ.26ರಿಂದ ನಡೆಯಲಿದ್ದು ವಾಹನ ಸಂಚಾರ ಸ್ಥಗಿತಗೊಳಿಸಲಾಗುವುದು. ಈ ಭಾಗದ ಜನರು ಬದಲಿ ರಸ್ತೆ ಬಳಸುವಂತೆ ಜಿಲ್ಲಾಧಿಕಾರಿಗಳು ಆದೇಶ ಮಾಡಿದ್ದಾರೆ.
ಸೇತುವೆ ದುರಸ್ತಿ ಹಾಗೂ ಬದಲಿ ರಸ್ತೆ ಬಳಸಲು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಹೆಚ್.ವಿ.ದರ್ಶನ್ ಆದೇಶ ಮಾಡಿದ್ದು, ಸುಳ್ಯ ತಾಲೂಕು ಸುಳ್ಯ ವಿಧಾನ ಸಭಾ ಕ್ಷೇತ್ರದ ಸುಳ್ಯ ಆಲೆಟ್ಟಿ ಬಡ್ಡಡ್ಕ-ಕೂರ್ನಡ್ಕ ಜಿಲ್ಲಾ ಮುಖ್ಯ ರಸ್ತೆಯ ಕಿ.ಮೀ.0.80 ರಲ್ಲಿನ ಪಯಸ್ವಿನಿ ನದಿಯ ಸೇತುವೆಯ ದುರಸ್ತಿ ಕೆಲಸದ ಪ್ರಯುಕ್ತ ದಿನಾಂಕ:19.10.2026 ರಿಂದ 30.11.2026 ರವರೆಗೆ ಆಲೆಟ್ಟಿ ಬಡ್ಡಡ್ಕ ಕೂರ್ನಡ್ಕ ಮತ್ತು ಅಲೆಟ್ಟಿ-ಕೊಲ್ಟಾರು-ಕಣಕ್ಕೂರು-ಬಂದ್ಯಡ್ಕ ಹಾಗೂ ಕೇರಳ ಭಾಗಕ್ಕೆ ಸಂಚರಿಸುವ ವಾಹನಗಳು ಜಿಲ್ಲಾ ಮುಖ್ಯ ರಸ್ತೆಯಾದ ಸುಳ್ಯ-ಕಾಂತಮಂಗಲ-ಅಜ್ಜಾವರ-ಮಂಡೆಕೋಲು-ಕನ್ಯಾನ ಮಾರ್ಗವಾಗಿ ಮತ್ತು ನಾರ್ಕೋಡು-ಅಜ್ಜಾವರ ಗ್ರಾಮೀಣ ರಸ್ತೆ ಮೂಲಕ ಸಂಚರಿಸುವಂತೆ ಹಾಗೂ ಆ ಭಾಗಗಳಿಂದ ಸುಳ್ಯಕ್ಕೆ ಬರುವ ವಾಹನಗಳು ಸಹ ಇದೇ ಮಾರ್ಗವಾಗಿ ಸಂಚರಿಸುವಂತೆ ಸಂಚಾರ ಮಾರ್ಗ ಬದಲಾವಣೆ ಮಾಡಿ ಆದೇಶಿಸಲಾಗಿದೆ ಎಂದು ತಿಳಿಸಿದ್ದಾರೆ.
ನಾಗಪಟ್ಟಣ ಸೇತುವೆ ದುರಸ್ತಿಗೆ ರೂ.1 ಕೋಟಿ ಸರಕಾರದಿಂದ ಮಂಜೂರಾಗಿದ್ದು ಮಂಗಳೂರಿನ ಸಂತೋಷ್ ರವರು ಟೆಂಡರ್ ಪಡೆದುಕೊಂಡಿದ್ದಾರೆ. ಸೇತುವೆಯ ಬೇರಿಂಗ್ ಸಹಿತ ಇತ್ಯಾದಿ ದುರಸ್ತಿ ಕಾರ್ಯ ಅ.26ರಿಂದ ನಡೆಯಲಿದೆ. ಸುಮಾರು 45 ದಿನ ಸೇತುವೆ ಸಂಚಾರ ಸ್ಥಗಿತವಾಗಲಿದೆ” ಎಂದು ಸುಳ್ಯ ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ ಮಾಹಿತಿ ನೀಡಿದ್ದಾರೆ.







