ಕ್ರೀಡೆಯಲ್ಲಿ ಸೋಲು-ಗೆಲುವು ಸಹಜ. ಆಟದ ನಿಯಮಗಳನ್ನು ಪಾಲಿಸಿಕೊಂಡು ಕ್ರೀಡಾಸ್ಫೂರ್ತಿಯಿಂದ ಆಡುವವನೇ ನಿಜವಾದ ಕ್ರೀಡಾಪಟು : ಜಯಪ್ರಕಾಶ್ ರೈ














ಸುಳ್ಯದ ಕೆವಿಜಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಬೆಂಗಳೂರು ಇದರ ಸಹಯೋಗದೊಂದಿಗೆ ಮಂಗಳೂರು ವಲಯ ಮಟ್ಟದ ಅಂತರ್ ಕಾಲೇಜು ಪುರುಷರ ಮತ್ತು ಮಹಿಳೆಯರ ವಾಲಿಬಾಲ್ ಪಂದ್ಯಾವಳಿಯು ಅ. 27 ಮತ್ತು 28ರಂದು ಕೆವಿಜಿ ಕ್ಯಾಂಪಸ್ನ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಪಂದ್ಯಾವಳಿಯ ಉದ್ಘಾಟನಾ ಸಮಾರಂಭ ಅ. 27ರಂದು ನಡೆಯಿತು.

ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ಅಧ್ಯಕ್ಷ ಹಾಗೂ ಕೆವಿಜಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ. ಕೆ.ವಿ. ಚಿದಾನಂದ ವಹಿಸಿ ಶುಭ ಹಾರೈಸಿದರು. ಕರ್ನಾಟಕ ರಾಜ್ಯ ವಾಲಿಬಾಲ್ ಅಸೋಸಿಯೇಷನ್ ಸಹಾಯಕ ಕಾರ್ಯದರ್ಶಿ ಜಯಪ್ರಕಾಶ್ ರೈ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ “ಕ್ರೀಡೆಯಲ್ಲಿ ಸೋಲು-ಗೆಲುವು ಸಹಜ. ಆಟದ ನಿಯಮಗಳನ್ನು ಪಾಲಿಸಿಕೊಂಡು ಕ್ರೀಡಾಸ್ಫೂರ್ತಿಯಿಂದ ಆಡುವವನೇ ನಿಜವಾದ ಕ್ರೀಡಾಪಟು. ಕ್ರೀಡಾಕ್ಷೇತ್ರಕ್ಕೆ ಕೆವಿಜಿ ಸಂಸ್ಥೆಯ ಕೊಡುಗೆ ಅಪಾರವಾಗಿದೆ. ಪ್ರತಿಯೊಬ್ಬರೂ ಗೆಲ್ಲಲು ಸಾಧ್ಯವಿಲ್ಲ, ಆದರೆ ಪರಿಪೂರ್ಣವಾಗಿ ಆಟವಾಡುವುದು ಮತ್ತು ತಮ್ಮ ಸಾಮರ್ಥ್ಯವನ್ನು ಸಂಪೂರ್ಣವಾಗಿ ಪ್ರದರ್ಶಿಸುವುದೇ ನಿಜವಾದ ಗೆಲುವು. ವಿದ್ಯಾರ್ಥಿಗಳು ಸೋಲಿನಿಂದ ನಿರಾಶರಾಗದೆ, ಗೆಲುವಿನಿಂದ ಅಹಂಕಾರ ಪಡದೆ ಕ್ರೀಡಾಸ್ಫೂರ್ತಿಯನ್ನು ಬೆಳೆಸಿಕೊಳ್ಳಬೇಕು. ಇಂತಹ ಕ್ರೀಡಾಕೂಟಗಳು ವಿದ್ಯಾರ್ಥಿಗಳ ಪ್ರತಿಭೆಯನ್ನು ಗುರುತಿಸುವುದರ ಜೊತೆಗೆ ಶಿಸ್ತು, ಆತ್ಮವಿಶ್ವಾಸ ಮತ್ತು ತಂಡಭಾವನೆಯನ್ನು ಬೆಳೆಸಲು ಸಹಕಾರಿಯಾಗಿವೆ” ಎಂದರು.
ಸುಳ್ಯ ಪೊಲೀಸ್ ಠಾಣೆಯ ಉಪನಿರೀಕ್ಷಕರಾದ ಉದಯ ರವಿ ಎಂ.ವೈ. ಗೌರವ ಅತಿಥಿಯಾಗಿ ಮತ್ತು
ಮಂಗಳೂರು ಎ.ಜೆ. ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ದೈಹಿಕ ಶಿಕ್ಷಣ ನಿರ್ದೇಶಕ ಹಾಗೂ ವಲಯ ಸಂಯೋಜಕ ಹರೀಶ್ ಗೌಡ ಉಪಸ್ಥಿತರಿದ್ದು, ಪಂದ್ಯಾಟಕ್ಕೆ ಶುಭ ಹಾರೈಸಿದರು.
ವೇದಿಕೆಯಲ್ಲಿ ಕೆವಿಜಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಡೀನ್ ಡಾ. ನೀಲಾಂಬಿಕೈ ನಟರಾಜನ್, ಸಂಸ್ಥೆಯ ಕ್ರೀಡಾ ಸಂಯೋಜಕರು ಹಾಗೂ ಆರ್ಥೋಪೆಡಿಕ್ ವಿಭಾಗದ ಮುಖ್ಯಸ್ಥರಾದ ಪ್ರೊ. ಡಾ. ರಂಗನಾಥ್ ಎನ್ , ಕೆವಿಜಿ ಆಯುರ್ವೇದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಪ್ರಾಂಶುಪಾಲರಾದ ಡಾ ಲೀಲಾಧರ್ ಡಿ.ವಿ, ಸಂಸ್ಥೆಯ ದೈಹಿಕ ಶಿಕ್ಷಣ ನಿರ್ದೇಶಕ ಮತ್ತು ಪಂದ್ಯಾವಳಿಯ ಸಂಘಟನಾ ಸಮಿತಿಯ ಸಂಯೋಜಕರಾದ ಮಿಥನ್ ಎಸ್ ಉಪಸ್ಥಿತರಿದ್ದರು. ಟ್ರೋಫಿ ಅನಾವರಣ ಹಾಗೂ ವಾಲಿಬಾಲ್ ಅಂಕಣದ ಉದ್ಘಾಟನೆಯೊಂದಿಗೆ ಪಂದ್ಯಾವಳಿಗೆ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ರಿಜಿಸ್ಟ್ರಾರ್ ಡಾ. ಸಂದೇಶ್ ಕೆ.ಎಸ್, ಡಾ ನಮೃತಾ ಕೆ.ಜಿ, ಡಾ ನವ್ಯ ಬಿ.ಎನ್, ಡಾ ಗೀತಾ ದೊಪ್ಪ, ಡಾ ಪ್ರಮೋದ್ ಕೆ ಜೆ,ಡಾ ಮನೀಶ್ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ರಕ್ಷಿತ್ ಪ್ರಾರ್ಥಿಸಿದರು. ಪ್ರೊ. ಡಾ. ರಂಗನಾಥ್ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು, ಅನ್ಶು ಮರಿಯಾ ಹಾಗೂ ದಿಶಾ ಕಾರ್ಯಕ್ರಮ ನಿರೂಪಿಸಿದರು. ಡಾ ಸವಿನ್ ಸಿ.ಜಿ ವಂದಿಸಿದರು. ಉದ್ಘಾಟನಾ ಕಾರ್ಯಕ್ರಮದ ಬಳಿಕ ವಾಲಿಬಾಲ್ ಪಂದ್ಯಾಟ ಪ್ರಾರಂಭಗೊಂಡಿತು
ಎರಡು ದಿನಗಳ ಕಾಲ ನಡೆಯುವ ಈ ಪಂದ್ಯಾವಳಿಯಲ್ಲಿ ವಿವಿಧ ಕಾಲೇಜುಗಳಿಂದ ಆಗಮಿಸಿದ 21 ಪುರುಷ ಮತ್ತು 9 ಮಹಿಳೆಯರ ತಂಡಗಳು ಭಾಗವಹಿಸಲಿವೆ.
ಕಾರ್ಯಕ್ರಮದಲ್ಲಿ ಕೆವಿಜಿ ಸಮೂಹ ಶಿಕ್ಷಣ ಸಂಸ್ಥೆಗಳ ಎಲ್ಲಾ ಪ್ರಾಂಶುಪಾಲರು, ವಿವಿಧ ವಿಭಾಗಗಳ ಮುಖ್ಯಸ್ಥರು, ಬೋಧಕ ವರ್ಗದವರು ಹಾಗೂ ಬೋಧಕೆತರ ಸಿಬ್ಬಂದಿ ವಿವಿಧ ಕಾಲೇಜುಗಳಿಂದ ಆಗಮಿಸಿದ ದೈಹಿಕ ಶಿಕ್ಷಣ ನಿರ್ದೇಶಕರುಗಳು, ಕ್ರೀಡಾಪಟುಗಳು ಉಪಸ್ಥಿತರಿದ್ದರು.








