ಸಾಮೂಹಿಕ ಸಂಕಲ್ಪ ನಿರ್ಧಾರದಿಂದ ಹಿಂದೆ ಸರಿದ ಆಡಳಿತ ಮಂಡಳಿ
ಭಕ್ತರ ಮನಸ್ಸಿಗೆ ನೋವಾಗಬಾರದು ಎಂದು ಈ ನಿರ್ಧಾರ : ಹರೀಶ್ ಇಂಜಾಡಿ
ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಜಾರಿಗೊಂಡಿದ್ದ ಸಾಮೂಹಿಕ ಸಂಕಲ್ಪ ವ್ಯವಸ್ಥೆಯನ್ನು ಹಿಂಪಡೆದು, ನಾಳೆಯಿಂದ (ಅ. 28)ರಿಂದ ಮೊದಲಿನ ರೀತಿಯಲ್ಲಿಯೇ ಸಂಕಲ್ಪ ಮಂದಿರದಲ್ಲಿ ಪತ್ಯೇಕ ಸಂಕಲ್ಪ ಸೇವೆ ನಡೆಸಲು ದೇವಸ್ಥಾನದ ಆಡಳಿತ ಮಂಡಳಿ ನಿರ್ಧರಿಸಿದೆ ಎಂದು ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಹರೀಶ್ ಇಂಜಾಡಿ ತಿಳಿಸಿದ್ದಾರೆ.














ದಿನದಿಂದ ದಿನಕ್ಕೆ ದೇವಸ್ಥಾನಕ್ಕೆ ಆಗಮಿಸುವ ಭಕ್ತರ ಸಂಖ್ಯೆ ಹೆಚ್ಚುತ್ತಿದ್ದು, ವಿಶೇಷವಾಗಿ ರಜಾದಿನಗಳು ಹಾಗೂ ಆಶ್ಲೇಷ ನಕ್ಷತ್ರದ ದಿನಗಳಲ್ಲಿ ಸಾವಿರಾರು ಭಕ್ತರು ಆಗಮಿಸುತ್ತಾರೆ. ಈ ಸಂದರ್ಭದಲ್ಲಿ ದಿನವೊಂದಕ್ಕೆ ಸುಮಾರು 2,000ರಿಂದ 3,000ರವರೆಗೆ ಆಶ್ಲೇಷ ಬಲಿ ಪೂಜೆಗಳು ಸೇರಿದಂತೆ ವಿವಿಧ ಸೇವೆಗಳ ಸಂಕಲ್ಪ ನಡೆಯುತ್ತಿತ್ತು. ಇದರಿಂದಾಗಿ ಭಕ್ತರು ಸಂಕಲ್ಪಕ್ಕಾಗಿ ಗಂಟೆಗಟ್ಟಲೆ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತಿತ್ತು.
ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಸೇರುವ ಸಂದರ್ಭಗಳಲ್ಲಿ ನೂಕುನುಗ್ಗಲು ಉಂಟಾಗದಂತೆ ತಡೆಯುವುದು, ಭಕ್ತರ ಸುರಕ್ಷತೆ ಕಾಪಾಡುವುದು ಹಾಗೂ ಎಲ್ಲರಿಗೂ ಅನುಕೂಲಕರ ವ್ಯವಸ್ಥೆ ಕಲ್ಪಿಸುವ ಉದ್ದೇಶದಿಂದ ಅಷ್ಟಮಂಗಲ ಪ್ರಶ್ನೆಯಲ್ಲಿ ಚಿಂತನೆ ನಡೆಸಿದ ಬಳಿಕ ಸಾಮೂಹಿಕ ಸಂಕಲ್ಪ ವ್ಯವಸ್ಥೆಯನ್ನು ಜಾರಿಗೆ ತರಲು ಆಡಳಿತ ಮಂಡಳಿ ನಿರ್ಧರಿಸಿತ್ತು.
ಸಾಮೂಹಿಕ ಸಂಕಲ್ಪ ವ್ಯವಸ್ಥೆಗೆ ಶೇ. 99 ಭಕ್ತರು ತಮ್ಮ ಒಪ್ಪಿಗೆ ಹಾಗೂ ಮೆಚ್ಚುಗೆ ಸೂಚಿಸಿದ್ದಾರೆ. ಆದರೂ, ದೇವಸ್ಥಾನಕ್ಕೆ ಶ್ರದ್ಧಾಭಕ್ತಿಯಿಂದ ಬರುವ ಒಬ್ಬ ಭಕ್ತನ ಮನಸ್ಸಿಗೂ ನೋವಾಗಬಾರದು ಎಂಬ ಉದ್ದೇಶದಿಂದ ಸಾಮೂಹಿಕ ಸಂಕಲ್ಪ ವ್ಯವಸ್ಥೆಯನ್ನು ಹಿಂಪಡೆದು, ಮೊದಲಿನ ರೀತಿಯಲ್ಲಿಯೇ ಸಂಕಲ್ಪ ಸೇವೆ ನಡೆಸಲು ನಿರ್ಧರಿಸಲಾಗಿದೆ ಎಂದು ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಹರೀಶ್ ಇಂಜಾಡಿ ತಿಳಿಸಿದ್ದಾರೆ.
ಭಕ್ತರ ಧಾರ್ಮಿಕ ಭಾವನೆಗಳಿಗೆ ಗೌರವ ನೀಡುವುದು ಹಾಗೂ ಪ್ರತಿಯೊಬ್ಬ ಭಕ್ತನಿಗೂ ತನ್ನ ಇಷ್ಟದಂತೆ ಸಂಕಲ್ಪ ಸೇವೆ ಸಲ್ಲಿಸಲು ಅನುಕೂಲ ಕಲ್ಪಿಸುವುದು ಆಡಳಿತ ಮಂಡಳಿಯ ಉದ್ದೇಶವಾಗಿದೆ. ಈ ಹಿನ್ನೆಲೆಯಲ್ಲಿ ನಾಳೆಯಿಂದ ಸಂಕಲ್ಪ ಮಂದಿರದಲ್ಲಿ ಮೊದಲಿನ ರೀತಿಯಲ್ಲಿಯೇ ಸಂಕಲ್ಪ ಸೇವೆಗಳು ನಡೆಯಲಿವೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.







