”ರಾಜ್ಯದಲ್ಲಿ ತುಳು ಭಾಷೆಯ ಮಾನ್ಯತೆಗೆ ಧ್ವನಿ ಎತ್ತುವವರಿಗೆ ಈ ಸಾರಿ ತುಳುವರು ಮತನೀಡಬೇಕು” : ವಸಂತ ಶೆಟ್ಟಿ ಬೆಳ್ಳಾರೆ

0

ಕರ್ನಾಟಕ ರಾಜ್ಯದ ಮುಂಬರುವ ಚುನಾವಣೆಯಲ್ಲಿ ತುಳುವನ್ನು ರಾಜ್ಯದ ಅಧೀಕೃತ ಭಾಷೆಯನ್ನಾಗಿಸಲು ಸಹಕರಿಸುವವರಿಗೆ ಪಕ್ಷಾತೀತವಾಗಿ ಮತ ಕೊಟ್ಟು ಬೆಂಬಲಿಸಲು ತುಳುವರ ಮನ ಒಲಿಸುವ ಅಭಿಯಾನವನ್ನು ಶೀಘ್ರವಾಗಿ ಆರಂಭಿಸಲಾಗುವುದು ಎಂದು ಹೇಳುವ ಮೂಲಕ ದೆಹಲಿಯ ತುಳುಸಿರಿ ಸಂಘಟನೆಯ ಅಧ್ಯಕ್ಷ ವಸಂತ್ ಶೆಟ್ಟಿ ಬೆಳ್ಳಾರೆ ಅನೇಕ ಕಾಲದಿಂದ ನೆನೆಗುದಿಗೆ ಬಿದ್ದಿದ್ದ ತುಳು ಭಾಷೆಯ ರಾಜ್ಯ ಮಾನ್ಯತೆಯ ತುಳುವರ ಮಹತ್ವಾಕಾಂಕ್ಷೆಗೆ ಹೊಸ ಮುನ್ನುಡಿ ಬರೆದಿದ್ದಾರೆ.

ತುಳುವಿನ ಉಳಿವಿಗಾಗಿ ಈ ವರೆಗೂ ನಡೆದ ಪ್ರಯತ್ನಗಳು ನಿರೀಕ್ಷಿತ ಫಲ ನೀಡದೆ ಇರುವುದರಿಂದ ಈ ರಾಜಕೀಯ ನಡೆಯನ್ನು ಅನುಸರಿಸಬೇಕಾದ ಅನಿರೀಕ್ಷಿತ ಪರಿಸ್ಥಿತಿ ನಿರ್ಮಾಣವಾಗಿದೆ , ಹಾಗಾಗಿ ತುಳುನಾಡಿನ ವಿವಿಧ ಸಂಘಟನೆಗಳು ಮನೆ ಮನೆಗೆ ತೆರಳಿ ಜನರಿಗೆ ತಿಳುವಳಿಕೆ ನೀಡುವ ಮೂಲಕ ಮತ್ತು ರಾಜಕೀಯ ಕಾರ್ಯಕ್ರಮಗಳಲ್ಲಿ ಜನಪ್ರತಿನಿಧಿಗಳನ್ನು ಆಗ್ರಹಿಸುವ ಮೂಲಕ ಸಮಗ್ರ ಯೋಜನಾಬದ್ಧ ಹೋರಾಟವನ್ನು ನಡೆಸಿ ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳಿಂದ ಲಿಖಿತ , ಅಥವಾ ಬಹಿರಂಗ ಘೋಷಣೆಗಳನ್ನು ಪಡೆದು ಅವರನ್ನು ಪಕ್ಷಾತೀತ ವಾಗಿ ಬೆಂಬಲಿಸಲು ಸಮಾನ ಮನಸ್ಕ ತುಳು ಸಂಘಟನೆಗಳ ಮುಖ್ಯಸ್ಥರಿಗೆ ಅವರು ಕರೆ ನೀಡಿದರು .

”ಈ ಬಾರಿ ತುಳುವಿಗೆ ನನ್ನ ಮತ” ಎಂಬ ದೃಢ ನಿಲುವಿನೊಂದಿಗೆ ತಮ್ಮ ಮನೆಗೆ ಮತ ಯಾಚಿಸಲು ಬಂದಾಗ ”ನನ್ನ ಭಾಷೆ ತುಳುವಿಗೆ ನಿಮ್ಮಲ್ಲಿ ಏನು ಯೋಜನೆಯಿದೆ?” ಎಂದು ಪ್ರಶ್ನಿಸಿ ಅವರಿಂದ ಲಿಖಿತ, ಮುಖತಃ ಹೇಳಿಕೆಗಳನ್ನು ಪಡೆದು , ಚುನಾವಣಾ ಪ್ರಣಾಳಿಕೆಗಳಲ್ಲಿ ತುಳುವಿನ ರಾಜ್ಯಭಾಷಾ ಸ್ಥಾನಮಾನದ ಸೇರ್ಪಡೆಗೆ ಒತ್ತಾಯಿಸಬೇಕು ಎಂದು ಅವರು ಕರೆ ನೀಡಿದರು.

ತುಳು ಪರ ಅಭ್ಯರ್ಥಿಗಳನ್ನು ಪಕ್ಷ ಬೇಧ ಮರೆತು ಸಾಮಾಜಿಕ ಜಾಲತಾಣಗಳಲ್ಲಿ ಅವರ ಪರ ಮತಯಾಚಿಸುವ ಮೂಲಕ ಅವರನ್ನು ಬೆಂಬಲಿಸಲಾಗುವುದು, ದೇಶ ವಿದೇಶದ ತುಳು ಭಾಷಾಭಿಮಾನಿಗಳಲ್ಲಿ ತಮ್ಮ ತಮ್ಮ ಮನೆಯವರ ಮನ ಒಲಿಸಿ ತುಳು ಭಾಷೆಯ ಮಾನ್ಯತೆಯ ಬಗ್ಗೆ ಧ್ವನಿಯೆತ್ತಲು ಮನವಿ ಮಾಡಲಾಗುವುದು ಮತ್ತು ಎಲ್ಲಾ ಹಿರಿಯ , ಅನುಭವಿ ಹೋರಾಟಗಾರರ ಸಲಹೆಯನ್ನು ಪಡೆದು ಈ ಹೋರಾಟವನ್ನು ನಿರಂತರ ಚೈತನ್ಯಪೂರ್ಣವಾಗಿಟ್ಟು ಗುರಿ ಮುಟ್ಟುವ ತನಕ ಬೆಂಬಿಡದೆ ಸಾಗುವಂತೆ ಮಾಡಿ ರಾಜಕೀಯ ಒತ್ತಡವನ್ನು ಹೇರಲು ಪರಿಪೂರ್ಣ ಪ್ರಮಾಣದ ಸೂಕ್ಷ್ಮಗ್ರಾಹಿ ರೂಪುರೇಷೆಗಳನ್ನು ಎಲ್ಲಾ ಸಂಘ ಸಂಸ್ಥೆ , ಅಂತರ್ಜಾಲ ಮಾಧ್ಯಮಗಳಲ್ಲಿ ಮತ್ತು ಟ್ವಿಟ್ಟರ್ ಅಭಿಯಾನಗಳ ಮೂಲಕ ಯೋಜಿತವಾಗಿ ಪ್ರಯತ್ನಿಸಲಾಗುವುದು” ಎಂದು ಅವರು ಹೇಳಿದರು.

”ತುಳು ಭಾಷೆ ಎಂಟನೇ ಪರಿಚ್ಚೇದಕ್ಕೆ ಸೇರುವಲ್ಲಿ ಈಗಾಗಲೇ ಹಲವಾರು ಪ್ರಯತ್ನಗಳನ್ನು ಕೇಂದ್ರದಲ್ಲಿ ಮಾಡಿಯೂ ಅದು ಸಫಲವಾಗಲಿಲ್ಲ , ರಾಜ್ಯಭಾಷೆಯಾಗಿ ಆಯ್ಕೆಯಾದಾಗ ಎಂಟನೇ ಪರಿಚ್ಛೇದಕ್ಕೆ ಸೇರುವ ದಾರಿ ಸುಗಮವಾಗಲಿದೆ . ಹಾಗಾಗಿ ಇದು ತುಳುವರ ”ಮಾಡು ಇಲ್ಲವೇ ಮಡಿ” ಸ್ವರೂಪದ ಏಕಸ್ವರದ , ಏಕಮುಖದ ಹೋರಾಟವಾಗಬೇಕು . ಕನ್ನಡದ ಸಾಹಿತಿಗಳನ್ನು , ಕಲಾವಿದರನ್ನು ವಿಶ್ವಾಸಕ್ಕೆ ತೆಗೆದುಕೊಂಡು ತುಳುವಿನ ಕಲಾವಿದರು ಹಾಗೂ ಸಾಹಿತಿಗಳು ಮತ್ತು ತುಳುವನ್ನು ಬೆಂಬಲಿಸುವ ಎಲ್ಲಾ ಪಕ್ಷಗಳ ರಾಜಕೀಯ ನಾಯಕರನ್ನು ಒಳಗೊಂಡ ಬ್ರಹತ್ ಹೋರಾಟಕ್ಕೆ ಮುನ್ನಡಿ ಬರೆಯಲು ಈಗ ಕಾಲ ಪಕ್ವವಾಗಿದೆ , ಅದಕ್ಕೆ ಪ್ರತೀ ತುಳುವರೂ ಈಗಿಂದೀಗಲೇ ಸನ್ನದ್ಧರಾಗಬೇಕು” ಎಂದು ಅವರು ಮನವಿ ಮಾಡಿದರು.

ಡಿಜಿಟಲ್ ಮೀಡಿಯಾದಲ್ಲಿ ತುಳು ವರ್ಲ್ಡ್ ನೆಟ್ವರ್ಕ್ ಇದರ ಮುಖ್ಯಸ್ಥ ಡಾ. ರಾಜೇಶ್ ಆಳ್ವ ಕಾರ್ಯಕ್ರಮ ಆಯೋಜಿಸಿ ನಿರೂಪಿಸಿದರು . ದೇಶ ವಿದೇಶದ ತುಳು ಸಂಘಟನೆಗಳ ಮುಖ್ಯಸ್ಥರು ಮತ್ತು ಯುವ ಸಂಘಟನೆಗಳ ಪ್ರಮುಖರು ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ಸಹಕಾರ ಮತ್ತು ಮುಕ್ತ ಬೆಂಬಲವನ್ನು ಸೂಚಿಸಿದರು.