ಇಂದು ವಿಶ್ವ ಅಪ್ಪಂದಿರ ದಿನ

0

ಬದುಕಿನ ಶಿಲ್ಪಿಯಾದ ಅಪ್ಪನಿಗೊಂದು ಕೃತಜ್ಞತೆ

ಅಪ್ಪಾ… ಲವ್ಯೂ ಪಾ…

✍️ ಬೃಂದಾ ಪೂಜಾರಿ ಮುಕ್ಕೂರು

ನಾನು ನೋಡಿದ ಮೊದಲ ವೀರ
ಬಾಳು ಕಲಿಸಿದ ಸಲಹೆಗಾರ ಬೆರಗು
ಮೂಡಿಸೋ ಜಾದುಗಾರ ಅಪ್ಪಾ….

ಹಗಲು ಬೆವರಿನ ಕೂಲಿಕಾರ
ರಾತ್ರಿ ಮನೆಯಲ್ಲಿ ಚೌಕಿದಾರ
ಎಲ್ಲ ಕೊಡಿಸುವ ಸಾಹುಕಾರ ಅಪ್ಪ ..

ಈ ಹಾಡನ್ನು ಪ್ರತಿ ಬಾರಿ ಕೇಳಿದಾಗ ನಮ್ಮ ತಂದೆಯ ಬಗ್ಗೆ ನಮಗೆ ಹೆಮ್ಮೆಯಾಗುವುದು ನಿಜ. ಕರಗದಷ್ಟು ಪ್ರೀತಿಯ ಆಸ್ತಿ ನೀಡಿ, ತನ್ನ ಹೃದಯದೊಳಗೆ ಬೆಚ್ಚಗೆ ಜೋಪಾನ ಮಾಡಿ, ಇಡೀ ಜಗತ್ತನ್ನು ಪರಿಚಯಿಸಿ, ಮಕ್ಕಳಿಗೆ ಕಲ್ಪವೃಕ್ಷವಾಗಿ ನಿಸ್ವಾರ್ಥ ಭಾವನೆಯಿಂದ ದುಡಿಯುವ ಜೀವ ಎಂದರೆ ಅದು ಅಪ್ಪ…

ಪ್ರೀತಿ,ಮಾರ್ಗದರ್ಶನಗಳಿಂದ ನಮ್ಮ ಜೀವನವನ್ನು ತುಂಬಿದ ಅಸಾಮಾನ್ಯ ವ್ಯಕ್ತಿಗೆ ನಮ್ಮ ಕೃತಜ್ಞತೆ ಮತ್ತು ಮೆಚ್ಚುಗೆಯನ್ನು ಸೂಚಿಸುವ ಸಮಯ.


ತಂದೆ ಮತ್ತು ತಂದೆಯ ತರಹ ಬೆನ್ನೆಲುಬಾದ ಅತ್ಯುತ್ತಮ ವ್ಯಕ್ತಿತ್ವಕ್ಕೆ, ತಮ್ಮ ಮಕ್ಕಳ ಜೀವನಕ್ಕೆ ನೀಡುವ ಕೊಡುಗೆಯನ್ನು ಗುರುತಿಸಲು ವಿಶ್ವಾದ್ಯಂತ ತಂದೆಯ ದಿನವನ್ನು ಆಚರಿಸಲಾಗುತ್ತದೆ. ಪ್ರಪಂಚದಾದ್ಯಂತ ಇದನ್ನು ವಿವಿಧ ದಿನಾಂಕಗಳಲ್ಲಿ ಆಚರಿಸಲಾಗುತ್ತದೆಯಾದರೂ, ಅನೇಕ ದೇಶಗಳು ಜೂನ್ ತಿಂಗಳ ಮೂರನೇ ಭಾನುವಾರದಂದು ಈ ದಿನವನ್ನು ಆಚರಿಸುತ್ತವೆ.

ಅಪ್ಪನ ಬೆರಳ ತುದಿಯಲ್ಲಿ ಮಕ್ಕಳ ಭರವಸೆ ಅಡಗಿರುತ್ತದೆ. ಈ ಮಾತು ಅಕ್ಷರಶಹ ಸತ್ಯ. ಉತ್ತಮ ಆದರ್ಶ ಇರುವ ಅಪ್ಪ ಎಂದಿಗೂ ಮಕ್ಕಳ ಭರವಸೆಯಾಗಿರುತ್ತಾರೆ. ಆದರೆ ಮಕ್ಕಳಿಗೆ ಮಾತ್ರ ಅಪ್ಪ ಎಂದರೆ ಅದೇನೋ ವಿಶೇಷ ಕಾಳಜಿ, ಪ್ರೀತಿ, ಮಮತೆ ಎಲ್ಲವೂ. ಮಕ್ಕಳಿಗೆ ತನ್ನ ಅಪ್ಪನ ಮೇಲಿರುವ ಈ ಪ್ರೀತಿಗೆ ಕಾರಣ ಗೊತ್ತಿಲ್ಲ, ಈ ಪ್ರೀತಿಯನ್ನು ವರ್ಣಿಸಲು ಸಹ ಅಸಾಧ್ಯ. ಈ ಬಾಂಧವ್ಯ ಅಪ್ಪ ಮತ್ತು ಮಕ್ಕಳ ನಡುವಿಗೆ ಮಾತ್ರ ಸೀಮಿತವಾಗಿರುತ್ತದೆ. ಹೆಣ್ಣು ಮಕ್ಕಳು ತಂದೆಯನ್ನು ಅತಿ ಹೆಚ್ಚು ಇಷ್ಟಪಡುತ್ತಾರೆ. ಏಕೆಂದರೆ ಈ ಪ್ರಪಂಚದಲ್ಲಿ ತನ್ನನ್ನು ನೋಯಿಸದ ಏಕೈಕ ಪುರುಷ ತಂದೆ ಮಾತ್ರ. ಅಪ್ಪ – ಎಲ್ಲ ಮಕ್ಕಳ ಪಾಲಿನ ಮೊದಲ ಸೂಪರ್ ಹೀರೋ. ಅದರಲ್ಲೂ ಹೆಣ್ಣು ಮಕ್ಕಳ ಪಾಲಿಗಂತೂ ಆತ ಯಾವಾಗಲೂ ಪ್ರಥಮ ಪ್ರೀತಿಯಾಗಿರುತ್ತಾನೆ.

ಅಪ್ಪ ಅನ್ನುವ ಬಂಧವೇ ಅಂಥದ್ದು. ಅಪ್ಪ ಅಂದರೆ ಕೆಲವರಿಗೆ ಸಿಡುಕು, ಗಂಭೀರ ಮುಖವೊಂದು ನೆನಪಾಗಬಹುದು, ಹಾಗೆಯೇ ಹೆಗಲಿಗೇರಿಸಿಕೊಂಡು ನಡೆದ ಜೀವವೊಂದು ಕಣ್ಣ ಮುಂದೆ ಸುಳಿದು ಹೋಗಬಹುದು. ಚಿಕ್ಕಂದಿನಲ್ಲಿ ಶಿಕ್ಷೆ ಕೊಡುವ, ಗದರುವ ಅಪ್ಪ , ಬೆಳೆಯುತ್ತಿದ್ದಂತೆ ಹೆಗಲ ಮೇಲೆ ಕೈ ಹಾಕಿಕೊಂಡು ನಡೆಯುವ ಸ್ನೇಹಿತನಾಗುತ್ತಾನೆ. ಅಮ್ಮ ಎನ್ನುವ ದೇವತೆ ಹೊತ್ತು, ಹೆತ್ತು ಹಾಲನ್ನಿತ್ತು ಬೆಳೆಸಿದರೆ, ಅಪ್ಪ ಅನ್ನೋ ಜೀವ ಮಗುವಿಗೆ ಬಲ ತುಂಬುತ್ತದೆ, ರಕ್ಷಣೆ ಒದಗಿಸುತ್ತದೆ. ಮೌನವಾಗಿಯೇ ನಮ್ಮೆಲ್ಲ ಜವಾಬ್ದಾರಿಯನ್ನು ಹೊರುವ ಅಪ್ಪ ಮಳೆ, ಚಳಿ, ಗಾಳಿ ಎನ್ನದೇ ನಮಗಾಗಿ ಬೆವರು ಸುರಿಸುತ್ತಾರೆ. ನಿದ್ದೆಗೆಡುತ್ತಾರೆ. ನಮಗಾಗಿ ಬದುಕು ತೆತ್ತೆ ನಮ್ಮ ಅಪ್ಪ ಸದಾ ನಮಗಾಗಿಯೇ ಹೆಣಗಾಡುತ್ತಾರೆ.

ಜೀವನದಲ್ಲಿ ಅಪ್ಪ ಎಂಬ ಆಲದ ಮರದ ನೆರಳಲ್ಲಿ ಬಾಳಿ ಬದುಕುತ್ತಿರುವ ನಮ್ಮಂತವರ ಪಾಲಿಗೆ ಆತನೇ ಸರ್ವಸ್ವ. ಅಪ್ಪ ಎಂದರೆ ಪ್ರೀತಿ, ಗೌರವ, ಭಯ ಎಲ್ಲ ಭಾವನೆಗಳೂ ಒಟ್ಟಿಗೆ ಉಮ್ಮಳಿಸುವ ಅಪರೂಪದ ಜೀವ.ಅಪ್ಪಂದಿರು ಮಾಡುವ ದಾನ ಧರ್ಮದ ಫಲಗಳು ಒಳ್ಳೆಯ ಕೆಲಸಗಳು ಮಕ್ಕಳಿಗೆ ಲಭಿಸುತ್ತವೆ ಪ್ರತೀ ಕ್ಷಣದಲ್ಲಿಯೂ ಬೇರೆಯವರಿಗಾಗಿಯೇ ಬದುಕುವ ಜೀವ ಹಾಗೂ ಯಾವಾಗ್ಲೂ ಮಕ್ಕಳನ್ನು ಬೆಂಬಲಿಸುವ ಇಂತಹ ಪವಿತ್ರ ಜೀವಕ್ಕೆ ಒಂದು ನಮನ.