ಬಕ್ರೀದ್ ಹಬ್ಬದ ಪ್ರಯುಕ್ತ ಸುಳ್ಯ ಪೊಲೀಸ್ ಠಾಣೆಯಲ್ಲಿ ಶಾಂತಿ ಸಭೆ

0

ಶಾಂತಿ ಕಾಪಾಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ: ಎಸ್‌ಐ ಈರಯ್ಯ

ಸುಳ್ಯ ಶಾಂತಿಯುತವಾದ ಊರಾಗಿದ್ದು ಅದೇ ರೀತಿಯಲ್ಲಿ ಕಾಪಾಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ ಎಂದು ಸುಳ್ಳಕ್ಕೆ ನೂತನವಾಗಿ ಪೊಲೀಸ್ ಠಾಣಾ ಉಪನಿರೀಕ್ಷಕರಾಗಿ ಆಗಮಿಸಿರುವ ಈರಯ್ಯ ರವರು ಇಂದು ನಡೆದ ಶಾಂತಿ ಸಭೆಯಲ್ಲಿ ಮಾತನಾಡಿದ್ದಾರೆ.

ಜೂನ್ ೨೯ರಂದು ನಡೆಯಲಿರುವ ಬಕ್ರೀದ್ ಹಬ್ಬದ ಅಂಗವಾಗಿ ಸುಳ್ಯ ಪೊಲೀಸ್ ಠಾಣಾ ಸಭಾಂಗಣದಲ್ಲಿ ಇಂದು ವಿವಿಧ ಧರ್ಮಗಳ ಮುಖಂಡರೊಂದಿಗೆ ಎಸ್ ಐ ಈರಯ್ಯ ರವರ ನೇತೃತ್ವದಲ್ಲಿ ಶಾಂತಿ ಸಭೆ ನಡೆಯಿತು. ಸಭೆಯನ್ನು ಉದ್ದೇಶಿಸಿ ಮಾತನಾಡಿರುವ ಈರಯ್ಯ ಸುಳ್ಯದ ಜನತೆ ಮೊದಲಿನಿಂದಲೇ ಶಾಂತಿ ಸೌಹಾರ್ತೆಯನ್ನು ಕಾಪಾಡಿಕೊಂಡು ಬರುತ್ತಿದ್ದು ಪೊಲೀಸ್ ಇಲಾಖೆಗೆ ಸದಾ ಸಹಕಾರಿಯಾಗಿರುತ್ತಾರೆ. ಆದ್ದರಿಂದ ಮುಂದಿನ ದಿನಗಳಲ್ಲಿಯೂ ಕೂಡ ಸಾರ್ವಜನಿಕರಿಂದ ಇದೇ ರೀತಿಯ ಸಹಕಾರವನ್ನು ಪೋಲಿಸ್ ಇಲಾಖೆ ಬಯಸುತ್ತದೆ.


ಯಾವುದೇ ಕಾನೂನುಬಾಹಿರ ಚಟುವಟಿಕೆಗಳು ಕಂಡು ಬಂದಲ್ಲಿ ಕೂಡಲೆ ಸಂಬಂಧಪಟ್ಟ ಪೊಲೀಸ್ ಇಲಾಖೆಗಳಿಗೆ ಮಾಹಿತಿಯನ್ನು ನೀಡಿ.ಯಾವುದೇ ಕಾರಣಕ್ಕೂ ಸಾರ್ವಜನಿಕರು ಕಾನೂನನ್ನು ಕೈಗೊತ್ತಿಕೊಳ್ಳುವ ಕೆಲಸ ಮಾಡಬಾರದು.
ಯಾವುದೇ ಧರ್ಮದ ಹಬ್ಬ ಹರಿದಿನವಾಗಲಿ ಮತ್ತೊಂದು ಧರ್ಮದವರಿಗೆ ತೊಡಕು ಉಂಟಾಗುವ ರೀತಿಯಲ್ಲಿ ಆಚರಿಸಿಕೊಳ್ಳುವುದು ಸರಿಯಲ್ಲ.ಇತರರಿಗೆ ಸಮಸ್ಯೆ ಆಗದ ರೀತಿಯಲ್ಲಿ ನಮ್ಮ ಆಚಾರ ವಿಚಾರಗಳು ಕಾರ್ಯ ಚಟುವಟಿಕೆಗಳು ಇದ್ದಲ್ಲಿ ಸಮಾಜಕ್ಕೆ ಯಾವುದೇ ತೊಂದರೆ ಆಗುವುದಿಲ್ಲ ಎಂದು ಹೇಳಿದರು.

ಸುಳ್ಯ ಪೊಲೀಸ್ ಠಾಣೆಗೆ ಉಪನಿರೀಕ್ಷಕರಾಗಿ ನೂತನವಾಗಿ ಕರ್ತವ್ಯಕ್ಕೆ ಬಂದ ಹಿನ್ನೆಲೆಯಲ್ಲಿ ಸಭೆಯಲ್ಲಿ ನಗರದ ವಿವಿಧ ಸಮಸ್ಯೆಗಳ ಬಗ್ಗೆ ಮಾಹಿತಿಯನ್ನು ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ನಾನು ನನ್ನ ಕರ್ತವ್ಯವನ್ನು ಸಂವಿಧಾನ ಬದ್ಧವಾಗಿ ಮಾಡುತ್ತೇನೆ. ಆದ್ದರಿಂದ ಸಾಮರಸ್ಯವನ್ನು ಎಲ್ಲರೂ ಕಾಪಾಡಿಕೊಳ್ಳಬೇಕಾಗುತ್ತದೆ. ಯಾವುದೇ ಅಹಿತಕರ ಘಟನೆಗಳು ನಡೆದಂತೆ ನೋಡಿಕೊಳ್ಳುವುದು ನಮ್ಮ ಕರ್ತವ್ಯವಾಗಿದೆ. ಆದ್ದರಿಂದ ವಿನಾಕಾರಣ ಜನರು ರಾತ್ರಿ ಸಮಯದಲ್ಲಿ ಗುಂಪು ಸೇರಿಕೊಳ್ಳುವುದು,ಮಾದಕ ದ್ರವ್ಯಗಳ ವ್ಯಸನಕ್ಕೆ ಬಲಿಯಾಗಿ ಸಮಾಜಘಾತಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು, ಸಂಚಾರ ನಿಯಮಗಳನ್ನು ಪಾಲಿಸದೆ ವಾಹನ ಚಲಾಯಿಸುವುದು ಮುಂತಾದ ಚಟುವಟಿಕೆಗಳು ಕಂಡು ಬಂದಲ್ಲಿ ಅಂಥವರ ಮೇಲೆ ಕಠಿಣ ಕ್ರಮವನ್ನು ಕೈಗೊಳ್ಳಲಾಗುವುದು.


ನಗರದಲ್ಲಿ ಉಂಟಾಗುವ ಟ್ರಾಫಿಕ್ ಸಮಸ್ಯೆಗಳನ್ನು ಮುಂದಿನ ದಿನಗಳಲ್ಲಿ ಬಗೆಹರಿಸುವ ಪ್ರಯತ್ನವನ್ನು ಮಾಡಲಾಗುವುದು.ಇತ್ತೀಚಿನ ದಿನಗಳಲ್ಲಿ ಉಂಟಾಗುತ್ತಿರುವ ಹೆದ್ದಾರಿ ಅಪಘಾತಗಳ ಬಗ್ಗೆ ಮುನ್ನೆಚ್ಚರಿಕಾ ಕ್ರಮ ರೂಪಿಸುವುದು ಈ ಎಲ್ಲಾ ಕೆಲಸಗಳಿಗೆ ಸಾರ್ವಜನಿಕರ ಸಹಕಾರ ಅಗತ್ಯವಾಗಿದೆ ಎಂದು ಹೇಳಿದರು.


ಸಭೆಯಲ್ಲಿ ಮುಖಂಡರುಗಳಾದ ಪಿ ಕೆ ಉಮೇಶ್,ಸುಳ್ಯ ಬಜರಂಗದಳದ ಅಧ್ಯಕ್ಷ ಸೋಮಶೇಖರ ಪೈಕಾ, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಪಿ ಎಸ್ ಗಂಗಾಧರ, ನಗರ ಪಂಚಾಯತ್ ಸದಸ್ಯ ಕೆ ಎಸ್ ಉಮ್ಮರ್, ಗಾಂಧಿನಗರ ಜುಮಾ ಮಸೀದಿ ಅಧ್ಯಕ್ಷ ಕೆ ಎಂ ಮುಸ್ತಫ ಜನತಾ, ಅಲ್ಪಸಂಖ್ಯಾತ ಸೊಸೈಟಿ ಅಧ್ಯಕ್ಷ ಇಕ್ಬಾಲ್ ಎಲಿಮಲೆ, ಜಾಲಸೂರು ಗ್ರಾಮ ಪಂಚಾಯತ್ ಅಧ್ಯಕ್ಷ ಕೆಎಂ ಬಾಬು, ಅಂದಾನ್ ಹಾಜಿ ಪ್ರಗತಿ,ಅಬ್ಬಾಸ್ ಸಂಟ್ಯಾರ್ ಕಲ್ಲುಗುಂಡಿ, ನ್ಯಾಯವಾದಿ ಅಬೂಬಕ್ಕರ್ ಅಡ್ಕಾರ್, ಅಡ್ವಕೇಟ್ ಮೂಸಾ ಪೈಬೆಂಚ್ಚಲ್, ಆರ್ ಬಿ ಬಶೀರ್ ಪೈಚಾರ್,ಅಬ್ದುಲ್ ಖಾದರ್ ಅಜ್ಜಾವರ, ಶಾಫೀ ಮುಕ್ರಿ ಅಜ್ಜಾವರ, ರಾಜು ಪಂಡಿತ್, ಶಾಫಿ ಕುತ್ತಮಟ್ಟೆ, ಹರಿಪ್ರಸಾದ್ ಬಿವಿ, ಪ್ರಕಾಶ್ ಪಿ ಎಸ್, ದೇವಿಪ್ರಸಾದ್ ಕುತ್ಪಾಜೆ, ರಾಧಾಕೃಷ್ಣ ಪರಿವಾರಕಾನ, ಜಗದೀಶ್ ಸಿ, ಮೊದಲಾದವರು ಉಪಸ್ಥಿತರಿದ್ದರು.