ಜು.15 ರಂದು ರೋಟರಿ ಕ್ಲಬ್ ಬೆಳ್ಳಾರೆ ಟೌನ್ ಪದಗ್ರಹಣ ಸಮಾರಂಭ

0

ರೋಟರಿ ಕ್ಲಬ್ ಬೆಳ್ಳಾರೆ ಟೌನ್ ಇದರ ಪದಗ್ರಹಣ ಸಮಾರಂಭ ಜು.15 ರಂದು ಬೆಳ್ಳಾರೆ ದೇವಿ‌ಹೈಟ್ಸ್ ನಲ್ಲಿ ‌ನಡೆಯಲಿದೆ ಎಂದು ರೋಟರಿ ನೂತನ ಅಧ್ಯಕ್ಷ ಶಶಿಧರ್ ಬಿ.ಕೆ. ಹೇಳಿದ್ದಾರೆ.

ಜು.8ರಂದು ಸುಳ್ಯದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು‌ ಕಾರ್ಯಕ್ರಮದ ವಿವರ ನೀಡಿದರು.

2007-08ರಲ್ಲಿ ಪ್ರಾರಂಭಗೊಂಡ ರೋಟರಿ ಕ್ಲಬ್ ಬೆಳ್ಳಾರೆ ಟೌನ್‌ ಹಲವಾರು ಜನೋಪಯೋಗಿ ಕಾರ್ಯಕ್ರಮಗಳು, ಕೊಡುಗೆಗಳ ಮುಖಾಂತರ ಉತ್ತಮ ಸೇವಾ ಸಂಸ್ಥೆಯಾಗಿ ಮೂಡಿಬಂದಿದೆ. ಇದೀಗ 16ನೇ ವರ್ಷಕ್ಕೆ ಪಾದಾರ್ಪಣೆ ಗೈಯುತ್ತಿದೆ. ಕಳೆದ ವರ್ಷ ನಮ್ಮ ಸಮಾಜಮುಖಿ ಕಾರ್ಯಗಳು ನಿರಂತರವಾಗಿ ನಡೆದಿದ್ದು, ನಮ್ಮ ಯೋಜನೆಗಳನ್ನು ಮನಗಂಡ ರೋಟರಿ ಜಿಲ್ಲೆ 3181 “ಗೋಲ್ಡನ್ ಕ್ಲಬ್‌’ ಪ್ರಶಸ್ತಿ ನೀಡಿ ಗೌರವಿಸಿದೆ ಹಾಗೂ ‘ಅಂತಾರಾಷ್ಟ್ರೀಯ ಅಧ್ಯಕ್ಷರ ಮನ್ನಣೆ’ಗೂ ಪಾತ್ರರಾಗಿದ್ದೇವೆ.

ಇದೀಗ 2023-24ನೇ ಸಾಲಿಗೆ ನೂತನ ತಂಡ ಆಯ್ಕೆಗೊಂಡಿದ್ದು ಅಧ್ಯಕ್ಷರಾಗಿ ರೊ.ಶಶಿಧರ್ ಬಿ.ಕೆ., ನಿಕಟಪೂರ್ವಾಧ್ಯಕ್ಷರಾಗಿ ರೊ. ಕೇಶವಮೂರ್ತಿ, ಕಾರ್ಯದರ್ಶಿಯಾಗಿ ರೊ. ವಿಶ್ವನಾಥ ಕೆ., ಕೋಶಾಧಿಕಾರಿಯಾಗಿ ರೊ. ನಾಗೇಶ್‌ ಕುಲಾಲ್‌, ನಿಯೋಜಿತ ಅಧ್ಯಕ್ಷರಾಗಿ ರೊ. ಚಂದ್ರಶೇಖರ ರೈ ಬಜನಿ, ಸಾರ್ಜೆಂಟ್ ಅಟ್ ಆರ್ಮ್ಸ್ ಆಗಿ ರೊ. ಪ್ರಮೋದ್ ರೈ ವೈಪಾಲ, ಸಂಘ ಸೇವೆ ನಿರ್ದೇಶಕರಾಗಿ ರೊ. ಎ.ಕೆ. ಮಣಿಯಾಣಿ, ಸಮುದಾಯ ಸೇವೆ ನಿರ್ದೇಶಕರಾಗಿ ರೊ| ಪದ್ಮನಾಭ ಬೀಡು, ವೃತ್ತಿ ಸೇವೆ ನಿರ್ದೇಶಕರಾಗಿ ರೋ ಪ್ರಭಾಕರ ಆಳ್ವ, ಅಂತಾರಾಷ್ಟ್ರೀಯ ಸೇವೆ ನಿರ್ದೇಶಕರಾಗಿ ರೊ. ಪ್ರಸಾದ್ ಕೆ.ವಿ., ಯುವಜನ ಸೇವೆ ನಿರ್ದೇಶಕರಾಗಿ ರೊ.ರವೀಂದ್ರ ಗೌಡ ಎಂ. ಕಾರ್ಯನಿರ್ವಹಿಸಲಿದ್ದಾರೆ. ವಲಯ 5ರ ರೋನಲ್ ಲೆಫ್ಟಿನೆಂಟ್ ಆಗಿ ನಮ್ಮ ಕ್ಲಬ್‌ನ ಪೂರ್ವಾಧ್ಯಕ್ಷರಾದ ರೊ. ಪದ್ಮನಾಭ ಬೀಡುರವರು ಆಯ್ಕೆಯಾಗಿದ್ದಾರೆ.

ಜು.15 ರಂದು ಸಂಜೆ ಬೆಳ್ಳಾರೆಯ ದೇವಿ ಹೈಟ್ಸ್‌ನಲ್ಲಿ ನೂತನ ತಂಡದ ಪದಗ್ರಹಣ ಕಾರ್ಯಕ್ರಮ ನೆರವೇರಲಿದ್ದು, ಪದಗ್ರಹಣ ಅಧಿಕಾರಿಯಾಗಿ ಪೂರ್ವ ಜಿಲ್ಲಾ ಗವರ್ನರ್ ರೊ. ಡಾ| ರವಿ ಅಪ್ಪಾಜಿಯವರು, ಗೌರವ ಅತಿಥಿಗಳಾಗಿ ವಲಯದ ಸಹಾಯಕ ಗವರ್ನರ್ ರೊ.ಪುರಂದರ ರೈ, ರೋನಲ್ ಲೆಫ್ಟಿನೆಂಟ್ ರೊ. ಪದ್ಮನಾಭ ಬೀಡು, ಸುಳ್ಯ ರೋಟರಿ ಕ್ಲಬ್‌ ಅಧ್ಯಕ್ಷರಾದ ರೊ| ಆನಂದ ಖಂಡಿಗರವರು ಉಪಸ್ಥಿತರಿರುತ್ತಾರೆ. ಈ ಕಾರ್ಯಕ್ರಮದಲ್ಲಿ ಬೆಂಗಳೂರಿನಲ್ಲಿ ಆಟೋಮೇಶನ್ ಆದರಿತ ಉದ್ಯಮ ‘ಮೆಖೋಸ್ ಟೆಕ್ನಾಲಜಿ ಸರ್ವಿಸಸ್ ಪ್ರೈ ಲಿ.’ನ ಮಾಲಕರಾದ ಮೋಹನ್‌ ತಂಟೆಪ್ಪಾಡಿ ಇವರನ್ನು ಸನ್ಮಾನಿಸಿ ಗೌರವಿಸಲಿದ್ದೇವೆ. ಅಲ್ಲದೇ ಹಲವು ಸಮುದಾಯ ಸೇವಾ ಕೊಡುಗೆಗಳು ಹಾಗೂ ಪ್ರತಿಭಾವಂತ ವಿದ್ಯಾರ್ಥಿಯ ಗುರುತಿಸುವಿಕೆ, ಬಡ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನವನ್ನೂ ನೀಡಲಿದ್ದೇವೆ.


ಈ ವರ್ಷದಲ್ಲಿ ಜಿಲ್ಲಾ ಗವರ್ನರ್ ರೊ. ಹೆಚ್.ಆರ್, ಕೇಶವ್‌ರವರ ಆಶಯದಂತೆ ಅಂಗನವಾಡಿಗಳ ಸಬಲೀಕರಣ, ಮಳೆ ನೀರು ಇಂಗಿಸುವಿಕೆ ಮತ್ತು ಜಲಸಿರಿ, ವಿದ್ಯಾಸಿರಿ, ವನಸಿರಿ, ಆರೋಗ್ಯಸಿರಿ’ ಎಂಬ ಆರು ಯೋಜನೆಗಳಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಈ ಬಾರಿಯ ಅಂತಾರಾಷ್ಟ್ರೀಯ ಅಧ್ಯಕ್ಷ ರೊ ಜೋರ್ಡನ್ ಆರ್. ಮಾಕ್ಸೆಲಿಯವರ ಧೈಯವಾಕ್ಯ `Create Hope in the World’ನ್ನು ಸಾಕಾರಗೊಳಿಸುವತ್ತ ಮುನ್ನಡೆಯಲಿದ್ದೇವೆ ಎಂದು‌ ಅವರು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಕ್ಲಬ್ ನ ಪೂರ್ವಾಧ್ಯಕ್ಷರುಗಳಾದ ವಿನಯಕುಮಾರ್, ಎ.ಕೆ.ಮಣಿಯಾಣಿ, ಕಾರ್ಯದರ್ಶಿ ರವೀಂದ್ರ ಗೌಡ, ಪ್ರಮೋದ್ ಬೆಳ್ಳಾರೆ ಇದ್ದರು.