ಕಲ್ಮಕಾರು, ಕೂಜುಮಲೆ, ಕಡಮಕಲ್ ನಲ್ಲಿ ಭಾರಿ ಮಳೆ

0

ಕೊಲ್ಲಮೊಗ್ರದ ಬೆಂಡೋಡಿ ಸೇತುವೆ ಸಂಪರ್ಕ ಕಡಿತ

100 ಕ್ಕೂ ಅಧಿಕ ಮನೆಗಳಿಗೆ ಸಂಪರ್ಕ ಕಡಿತದ ಭೀತಿ

ಕಲ್ಮಕಾರು, ಕೂಜುಮಲೆ, ಕಡಮಕಲ್ ನಲ್ಲಿ ಭಾರಿ ಮಳೆಯಾಗಿದ್ದು, ಕೊಲ್ಲಮೊಗ್ರು ಗ್ರಾಮದ ಬೆಂಡೋಡಿ ಸೇತುವೆ ಇಂದು ಸುರಿದ ಭಾರಿ ಮಳೆಗೆ ಸಂಪರ್ಕ ಕಳೆದುಕೊಂಡಿರುವುದಾಗಿ ವರದಿಯಾಗಿದೆ.

ನಿನ್ನೆಯಿಂದ ಸುರಿದ ಭಾರಿ ಮಳೆಗೆ ಅಪಾರ ಪ್ರಮಾಣದ ನೀರು ಹರಿದು ಬಂದಿದ್ದು ಪರಿಣಾಮ ಮೋರಿ ಅಳವಡಿಸಿ ಸಂಪರ್ಕ ಮಾಡಿದಲ್ಲಿ ಮತ್ತೆ ಸಂಪರ್ಕ ಕಳೆದುಕೊಂಡಿದೆ.

ಕಳೆದ ಸಾಲಿನಲ್ಲಿ ಮಳೆಗೆ ಸೇತುವೆಯ ಒಂದು ಭಾಗ ಪೂರ್ಣ ಕೊಚ್ಚಿ ಹೋಗಿತ್ತು. ಅಲ್ಲಿಗೆ ಎನ್‌.ಡಿ .ಆರ್ ಎಫ್, ಸ್ಥಳೀಯರು, ವಿಪತ್ತು ತಂಡ, ತಾಲ್ಲೂಕು ಆಡಳಿತ, ಗ್ರಾಮಾಡಳಿತ ಇದ್ದು ಮೋರಿ ಅಳವಡಿಸಿ ಮರಳು ಚೀಲ ತುಂಬಿ ಸಂಪರ್ಕ ರಸ್ತೆ ಮಾಡಲಾಗಿತ್ತು. ಅದು ಇಂದು ಭಾರಿ ಪ್ರಮಾಣದ ನೀರು ಹರಿದು ಕೊಚ್ಚಿ ಹೋಗಿದೆ.

ಹರಿಹರ ಪಲ್ಲತಡ್ಕದಲ್ಲಿ ನೀರಿನಿಂದ ಕೊಚ್ಚಿ ಹೋದ ಕಡೆ ಒಂದು ವರ್ಷದೊಳಗೆ ತಡೆಗೋಡೆ ಮಾಡಲಾಗಿತ್ತಾದರೂ ಕೊಲ್ಲಮೊಗ್ರದ ಬೆಂಡೋಡಿ ಮತ್ತು ಕಲ್ಮಕಾರಿನ ಸಂತೆಡ್ಕ ಸೇತುವೆಯ ಬಳಿ ಸಂಪರ್ಕ ರಸ್ತೆ ಕೊಚ್ಚಿಹೋದರು ಶಾಶ್ವತ ವ್ಯವಸ್ಥೆ ಮಾಡಲಾಗಿಲ್ಲ. ಇದೀಗ ಬೆಂಡೋಡಿ ಸೇತುವೆಯ ಸಂಪರ್ಕ ಕಡಿದುಕೊಂಡು ಸುಮಾರು 100 ಕ್ಕೂ ಅಧಿಕ ಮನೆಗಳು ತೊಂದರೆಗೆ ಸಿಲುಕಿವೆ ಎಂದು ತಿಳಿದು ಬಂದಿದೆ.