ಉಪಮುಖ್ಯಮಂತ್ರಿ ಡಿ.ಕೆ.ಶಿ. ಬಳಿಗೆ ಸುಳ್ಯ ಕಾಂಗ್ರೆಸ್ ನಿಯೋಗ

0

ಕ್ಷೇತ್ರದ ಅಭಿವೃದ್ಧಿಗೆ ಅನುದಾನ, ಸುಳ್ಯಕ್ಕೆ ನಿಗಮಾಧ್ಯಕ್ಷತೆ ಬೇಡಿಕೆ ಮುಂದಿಟ್ಟ ನಾಯಕರು

ರಾಜ್ಯದ ಉಪಮುಖ್ಯಮಂತ್ರಿ, ಕೆ.ಪಿ.ಸಿ.ಸಿ. ಅಧ್ಯಕ್ಷ ಡಿ.ಕೆ.ಶಿವಕುಮಾರ್ ರನ್ನು ಸುಳ್ಯ ಬ್ಲಾಕ್ ಕಾಂಗ್ರೆಸ್ ನಿಯೋಗ ಬೆಂಗಳೂರಿನ ಕುಮಾರಕೃಪದಲ್ಲಿ ಭೇಟಿ ಮಾಡಿ ಕ್ಷೇತ್ರದ ಅಭಿವೃದ್ಧಿಗೆ ಅನುದಾನಕ್ಕಾಗಿ ಹಾಗೂ ಸುಳ್ಯಕ್ಕೆ ಈ ಬಾರಿ ಮಹತ್ವದ ನಿಗಮಾಧ್ಯಕ್ಷತೆ ನೀಡಬೇಕೆನ್ನುವ ಬೇಡಿಕೆಯನ್ನು ಮುಂದಿಟ್ಟಿರುವುದಾಗಿ ತಿಳಿದು ಬಂದಿದೆ.

ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ.ಜಯರಾಮ, ಕೆ.ಪಿ.ಸಿ.ಸಿ. ಪ್ರಧಾನ ಕಾರ್ಯದರ್ಶಿ ಧನಂಜಯ ಅಡ್ಪಂಗಾಯ, ಪ್ರಮುಖ ನಾಯಕರಾದ ಭರತ್ ಮುಂಡೋಡಿ, ಎನ್.ಜಯಪ್ರಕಾಶ್ ರೈ, ಪಿ.ಎಸ್.ಗಂಗಾಧರ್, ಗೀತಾ ಕೋಲ್ಚಾರ್, ರಾಜೀವಿ ಆರ್ ರೈ, ಅಬುಲ್ ಗಫೂರ್ ಕಲ್ಮಡ್ಕ, ಸದಾನಂದ ಮಾವಾಜಿ, ಸುರೇಶ್ ಅಮೈ, ಅಶೋಕ್ ಚೂಂತಾರು, ವಿಶ್ವನಾಥ ರೈ ಕಳಂಜ, ಚಂದ್ರಲಿಂಗಂ ಐವರ್ನಾಡು , ಗುಣವರ್ಧನ ಕೆದಿಲ, ಕೀರ್ತನ್ ಕೊಡಪಾಲ, ಮೋಹನ್ ಮೊದಲಾದವರು ತಂಡದಲ್ಲಿದ್ದರು.

ಡಿ.ಕೆ.ಶಿ.ಯವರನ್ನು ಭೇಟಿ ಮಾಡಿ ಬೇಡಿಕೆ ಮುಂದಿಟ್ಟಿರುವ ಬಳಿಕ, ವಿಧಾನಸಭಾಧ್ಯಕ್ಷ ಯು.ಟಿ. ಖಾದರ್‌ರನ್ನು ಭೇಟಿ ಮಾಡಿದರು. ಅಲ್ಲದೆ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ ಖರ್ಗೆ, ಕಂದಾಯ ಸಚಿವ ಕೃಷ್ಣ ಬೈರೇಗೌಡ, ಸಾರಿಗೆ ಸಚಿವ ರಾಮಲಿಂಗ ರೆಡ್ಡಿ, ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ರನ್ನು ನಿಯೋಗ ಭೇಟಿ ಮಾಡಿ ಕ್ಷೇತ್ರದ ಅಭಿವೃದ್ಧಿಗೆ ಮನವಿ ಸಲ್ಲಿಸಿದೆ ಎಂದು ತಿಳಿದು ಬಂದಿದೆ.

ಈ ಕುರಿತು ಸುದ್ದಿಯೊಂದಿಗೆ ಮಾತನಾಡಿದ ಬ್ಲಾಕ್ ಅಧ್ಯಕ್ಷ ಪಿ.ಸಿ.ಜಯರಾಮರು, “ಕೆ.ಪಿ.ಸಿ.ಸಿ. ಅಧ್ಯಕ್ಷರ ಭೇಟಿಗೆ ನಾವು ಸಮಯ ಕೇಳಿಕೊಂಡಾಗ ಅಧಿವೇಶನ ಮುಗಿದ ಬಳಿಕ ಬರುವಂತೆ ಸೂಚಿಸಿದ ಮೇರೆಗೆ ನಮ್ಮ ತಂಡ ಹೋಗಿದ್ದೆವು. ಕ್ಷೇತ್ರದ ಅಭಿವೃದ್ಧಿಯ ಬೇಡಿಕೆ ಹಾಗೂ ಈ ಬಾರಿ ಸುಳ್ಯಕ್ಕೆ ನಿಗಮಾಧ್ಯಕ್ಷತೆ ನೀಡಬೇಕೆನ್ನುವ ಭೇಡಿಕೆಯನ್ನು ಮುಂದಿಟ್ಟಿzವೆ. ಅಲ್ಲದೆ, ಜಿ.ಪಂ., ತಾ.ಪಂ. ಗಳ ಕ್ಷೇತ್ರ ವಿಂಗಡಣೆ ಕುರಿತು ಚರ್ಚೆ ನಡೆಸಲಾಗಿದೆ. ಅವರ ಭೇಟಿಯ ಬಳಿಕ ಇತರ ಸಚಿವರನ್ನು ಭೇಟಿ ಮಾಡಿ ಕ್ಷೇತ್ರ ಅಭಿವೃದ್ಧಿಗೆ ಅನುದಾನಕ್ಕೆ ಮನವಿ ಮಾಡಿಕೊಂಡಿರುವುದಾಗಿ ತಿಳಿಸಿದ್ದಾರೆ.