ಇಂದು ರಾಷ್ಟ್ರೀಯ ಕೈಮಗ್ಗ ದಿನ

0

ನಮ್ಮ ದೇಶದಲ್ಲಿ ಕೈಮಗ್ಗದ ಇತಿಹಾಸವು ಶತಮಾನಗಳಿಗೂ ಹಿಂದಿನದು. ಕೈಮಗ್ಗ ಉದ್ಯಮವು ಭಾರತದ ಸಾಂಸ್ಕೃತಿಕ ಪರಂಪರೆಯ ಪ್ರಮುಖ ಭಾಗವಾಗಿದೆ. ಕೈಮಗ್ಗ ಎಂದಾಗ ಮೊದಲಿಗೆ ನೆನಪಿಗೆ ಬರುವಂತಹದ್ದೇ ಕೈಮಗ್ಗದ ಸೀರೆಗಳು. ಆಂಧ್ರಪ್ರದೇಶದ ಕಲಮಕಾರಿ, ಕರ್ನಾಟಕದ ಮೈಸೂರು ರೇಶ್ಮೆ ಸೀರೆ, ಗುಜರಾತ್​ನ ಬಂಧನಿ, ತಮಿಳುನಾಡಿನ ಕಾಂಜೀವರಂ, ಮಹರಾಷ್ಟ್ರದ ಪೈಥಾನಿ, ಮಧ್ಯಪ್ರೇಶದ ಚಮದೇರಿ, ಬಿಹಾರದ ಭಾಗಲ್ಪುರಿ ರೇಷ್ಮೆ ಇಂತಹ ಕೆಲವು ಕೈಮಗ್ಗದ ಉತ್ಪನ್ನಗಳು ಪ್ರಪಂಚದಾದ್ಯಂತ ಪ್ರಸಿದ್ಧವಾಗಿದೆ. ಕೈಮಗ್ಗ ಉದ್ಯಮವು ಹೆಚ್ಚಿನ ಸಂಖ್ಯೆಯ ಜನರಿಗೆ ಉದ್ಯೋಗನ್ನು ಒದಗಿಸಿಕೊಡುತ್ತದೆ. ಅಲ್ಲದೆ ಇದು ಮಹಿಳಾ ಸಬಲೀಕರಣವನ್ನು ಬಿಂಬಿಸುವ ಕ್ಷೇತ್ರವಾಗಿದೆ. ಇಂತಹ ಅದ್ಭುತ ಇತಿಹಾಸವಿರುವ ಕೈಮಗ್ಗ ಕ್ಷೇತ್ರವು ಇಂದು ತಂತ್ರಜ್ಞಾನದ ಕಾರಣದಿಂದ ಹಾಗೂ ಪಾಶ್ಚಿಮಾತ್ಯ ಉಡುಗೆಗಳ ಪ್ರಭಾವದ ಕಾರಣದಿಂದ ಕುಂಠಿತಗೊಳ್ಳುತ್ತಿದೆ. ಹಾಗಾಗಿ ದೇಶದಲ್ಲಿ ಕೈಮಗ್ಗ ಉದ್ಯಮವನ್ನು ಬಲಪಡಿಸಲು ಮತ್ತು ಕೈಮಗ್ಗದ ಉತ್ಪನ್ನಗಳ ಬಗ್ಗೆ ಜನರಿಗೆ ಅರಿವು ಮೂಡಿಸಲು ಭಾರತದಲ್ಲಿ ಪ್ರತಿ ವರ್ಷ ಆಗಸ್ಟ್ 7 ರಂದು ರಾಷ್ಟ್ರೀಯ ಕೈಮಗ್ಗ ದಿನವನ್ನು ಆಚರಿಸಲಾಗುತ್ತದೆ.

1905, ಆಗಸ್ಟ್ 7 ರಂದು ನಡೆದ ಸ್ವದೇಶಿ ಚಳುವಳಿಯು ಭಾರತದ ಸ್ವಾತಂತ್ರ್ಯ ಹೋರಾಟದ ಅನೇಕ ಚಳುವಳಿಗಳಲ್ಲಿ ಒಂದಾಗಿದೆ. ಕಲ್ಕತ್ತಾ ಟೌನ್ ಹಾಲ್​​​ನಲ್ಲಿ ಪ್ರಾರಂಭವಾದ ಈ ಚಳುವಳಿಯು ಬಂಗಾಳವನ್ನು ವಿಭಜಿಸುವ ಬ್ರಿಟೀಷ್ ಸರ್ಕಾರದ ನಿರ್ಧಾರದ ವಿರುದ್ಧದ ಪ್ರತಿಭಟನೆಯಾಗಿತ್ತು. ಅಲ್ಲದೆ ಮುಖ್ಯವಾಗಿ ಬ್ರಿಟೀಷರ ಹಾಗೂ ವಿದೇಶಿ ಉತ್ಪನ್ನಗಳನ್ನು ನಿಷೇಧಿಸಿ ಸ್ಥಳೀಯ ಕೈಗಾರಿಕೆಗಳನ್ನು ಉತ್ತೇಜಿಸಲು ಮತ್ತು ಜನರಲ್ಲಿ ಸ್ವದೇಶಿ ಉತ್ಪನ್ನಗಳ ಭಾವನೆಗಳನ್ನು ಜಾಗೃತಗೊಳಿಸಲು ಈ ಚಳುವಳಿಯನ್ನು ಪ್ರಾರಂಭಿಸಲಾಯಿತು. ಈ ಆಂದೋಲನದಲ್ಲಿ ಹೆಚ್ಚಿನ ಸಂಖ್ಯೆಯ ಕೈಮಗ್ಗ ನೇಕಾರರು ಪ್ರಮುಖ ಪಾತ್ರ ವಹಿಸಿದ್ದರು. ಈ ಒಂದು ಸ್ವದೇಶಿ ಆಂದೋಲನದ ಗೌರವಾರ್ಥವಾಗಿ ಮೊದಲ ಬಾರಿಗೆ ರಾಷ್ಟ್ರೀಯ ಕೈಮಗ್ಗ ದಿನವನ್ನು ಆಗಸ್ಟ್ 7, 2015 ರಂದು ಆಚರಿಸಲಾಯಿತು. ನಂತರದಲ್ಲಿ ಪ್ರತಿವರ್ಷ ರಾಷ್ಟ್ರೀಯ ಕೈಮಗ್ಗ ದಿನವನ್ನು ಆಚರಿಸುತ್ತಾ ಬರಲಾಗುತ್ತಿದೆ.

ಕೈಮಗ್ಗ ದಿನವನ್ನು ಆಚರಿಸುವ ಮುಖ್ಯ ಉದ್ದೇಶವೆಂದರೆ ಸಣ್ಣ ಮತ್ತು ಮಧ್ಯಮ ಪ್ರಮಾಣದ ಕೈಗಾರಿಕೆಗಳನ್ನು ಉತ್ತೇಜಿಸುವುದು. ಹಾಗೂ ನೇಕಾರರ ಸಮುದಾಯವನ್ನು ಗೌರವಿಸಲು ಮತ್ತು ಭಾರತದ ಸಾಮಾಜಿಕ-ಆರ್ಥಿಕ ಅಭಿವೃದ್ಧಿಗೆ ಅವರ ಕೊಡುಗೆಯನ್ನು ಗುರುತಿಲು ಕೈಮಗ್ಗದ ದಿನವನ್ನು ಆಚರಿಸಲಾಗುತ್ತದೆ.

ಭಾರತದಲ್ಲಿ ಕೈಮಗ್ಗ ಉದ್ಯಮದ ಇತಿಹಾಸವು ಬಹಳ ಹಳೆಯದು. ಪ್ರಾಚೀನ ಕಾಲದಿಂದಲೂ ಭಾರತದಲ್ಲಿ ಈ ಉದ್ಯಮವು ನೇಕಾರರಿಗೆ ಜೀವನೋಪಾಯವನ್ನು ಒದಗಿಸುತ್ತಿದೆ. ಕೈಮಗ್ಗದ ಉತ್ಪನ್ನಗಳು ದೊಡ್ಡ ಪ್ರಮಾಣದಲ್ಲಿ ವಿದೇಶಗಳಿಗೂ ರಫ್ತಾಗುತ್ತವೆ. ಈ ಉದ್ಯಮದಿಂದ ಲಕ್ಷಾಂತರ ಜನರು ತಮ್ಮ ಜೀವನೋಪಾಯವನ್ನು ಕಂಡುಕೊಂಡಿದ್ದಾರೆ. ಜೊತೆಗೆ ಪ್ರಸ್ತುತ ದಿನಗಳಲ್ಲಿ ತಂತ್ರಜ್ಞಾನದ ಕ್ಷಿಪ್ರ ಬೆಳವಣಿಗೆಯಿಂದ ಕೈಮಗ್ಗದ ಉತ್ಪನ್ನಗಳು ಕಡಿಮೆಯಾಗುತ್ತಿವೆ. ಹಾಗಾಗಿ ರಾಷ್ಟ್ರೀ ಯ ಕೈಮಗ್ಗ ದಿನದ ಮೂಲಕ ಕೈಮಗ್ಗದಿಂದ ತಯಾರಿಸಿದ ಉತ್ಪನ್ನಗಳ ಪ್ರಾಮುಖ್ಯತೆಯ ಬಗ್ಗೆ ದೇಶದ ಜನರಿಗೆ ಅರಿವು ಮೂಡಿಸಲಾಗುತ್ತಿದೆ. ಇದರಿಂದ ಗರಿಷ್ಟ ಮಟ್ಟದಲ್ಲಿ ಕೈಮಗ್ಗದಿಂದ ತಯಾರಿಸಿದ ಉತ್ಪನ್ನಗಳನ್ನು ಖರೀದಿಸುವ ಮೂಲಕ ನೇಕಾರರ ಉದ್ಯೋಗಕ್ಕೂ ಸಹಾಯವಾಗಬಹುದು.