ಶಿಕ್ಷಣಕ್ಕೆ ಆದ್ಯತೆ ನೀಡಿ ಹಾಸ್ಟೆಲ್ ಸ್ಥಾಪಿಸಿ ಹಿಂದುಳಿದ ವರ್ಗಗಳ ಏಳಿಗೆಯ ಹರಿಕಾರರಾದವರು ದೇವರಾಜ ಅರಸು : ತಹಶೀಲ್ದಾರ್ ಮಂಜುನಾಥ್

0

ಹಿಂದುಳಿದ ವರ್ಗಗಳಿಗೆ ಧ್ವನಿ ನೀಡಿ, ಅವರ ಶೈಕ್ಷಣಿಕ ಅಭಿವೃದ್ಧಿಗಾಗಿ ಹಾಸ್ಟೆಲ್‌ಗಳನ್ನು, ಇಲಾಖೆಯನ್ನು ಸ್ಥಾಪಿಸಿ, ಉದ್ಯೋಗದಲ್ಲಿ ಮೀಸಲಾತಿ ಕಲ್ಪಿಸಿ ಅವರ ಏಳಿಗೆಯ ಹರಿಕಾರರಾದ ಡಿ.ದೇವರಾಜ ಅರಸು ಅವರ ಆಡಳಿತ ಇಂದಿಗೂ ಎಲ್ಲರಿಂದ ಪ್ರಶಂಸಿಸಲ್ಪಡುತ್ತಿದೆ ಎಂದು ಸುಳ್ಯ ತಹಶೀಲ್ದಾರ್ ಮಂಜುನಾಥ್ ಹೇಳಿದರು.

ಅವರು ಆ.೨೦ ರಂದು ಸುಳ್ಯದ ಬಂಟರ ಭವನದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ ಆಯೋಜಿಸಲ್ಪಟ್ಟ ಹಿಂದುಳಿದ ವರ್ಗಗಳ ಧೀಮಂತ ನಾಯಕ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸುರವರ ೧೦೮ ನೆಯ ಜನ್ಮದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.

ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ ಮುಖ್ಯ ಅತಿಥಿಯಾಗಿದ್ದರು. ನ.ಪಂ. ಸದಸ್ಯರುಗಳಾದ ಎಂ.ವೆಂಕಪ್ಪ ಗೌಡ, ಡೇವಿಡ್ ಧೀರ ಕ್ರಾಸ್ತಾ, ಸುಧಾಕರ ಕುರುಂಜಿಗುಡ್ಡೆ, ನ.ಪಂ. ಮುಖ್ಯಾಧಿಕಾರಿ ಸುಧಾಕರ ಎಂ.ಎಚ್., ಉಬರಡ್ಕ ಗ್ರಾ.ಪಂ. ಉಪಾಧ್ಯಕ್ಷೆ ಶ್ರೀಮತಿ ಚಿತ್ರಕುಮಾರಿ, ಶಿಕ್ಷಣ ಇಲಾಖೆಯ ಅಧಿಕಾರಿ ಶ್ರೀಮತಿ ನಳಿನಿ ಪುರುಷೋತ್ತಮ್ ಅತಿಥಿಗಳಾಗಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಬೆಳ್ಳಾರೆಯ ವಿದ್ಯಾರ್ಥಿನಿ ಕು.ದೀಕ್ಷಿತಾ ಡಿ.ದೇವರಾಜ ಅರಸು ಬಗ್ಗೆ ವಿಶೇಷ ಭಾಷಣ ಮಾಡಿದರು. ನ.ಪಂ. ಸದಸ್ಯ ಎಂ.ವೆಂಕಪ್ಪ ಗೌಡರು ತಾನು ಹಾಸ್ಟೆಲ್‌ನಲ್ಲಿದ್ದು, ಕಲಿತ ಅನುಭವ ಮತ್ತು ಮಹತ್ವವನ್ನು ವಿವರಿಸಿದರು. ೨೦೨೨-೨೩ ನೇ ಸಾಲಿನ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿನಿಯರಾದ ಮೌಲ್ಯ ಕೆ.ಆರ್., ಉಷಾ ಬಿ., ದಿಶಾ ಕೆ.ಟಿ. ಹಾಗೂ ರೇಶ್ಮಾ ಡಿ., ರಕ್ಷಾ ಕೆ.ಬಿ., ಸಿಂಚನ ಕೆ.ಎಂ. ರವರನ್ನು ಮತ್ತು ಅತ್ಯುತ್ತಮ ಅಡುಗೆ ಸಿಬ್ಬಂದಿಗಳೆಂದು ಕಾಂತಮಂಗಲ ಹಾಸ್ಟೆಲ್‌ನ ನಾರಾಯಣ ಗೌಡ ಹಾಗೂ ಸುಬ್ರಹ್ಮಣ್ಯ ಹಾಸ್ಟೆಲ್‌ನ ರತ್ನಾವತಿ ಹೊಸೊಳಿಕೆರವರನ್ನು ಸನ್ಮಾನಿಸಲಾಯಿತು.

ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಶೇ.೧೦೦ ಫಲಿತಾಂಶ ಪಡೆದ ಹಾಸ್ಟೆಲ್‌ಗಳನ್ನು ಅಭಿನಂದನಾ ಪತ್ರ ನೀಡಿ ಪುರಸ್ಕರಿಸಲಾಯಿತು. ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಶ್ರೀಮತಿ ಗೀತಾ ಸ್ವಾಗತಿಸಿ, ಪ್ರಾಸ್ತಾವಿಕ ಭಾಷಣಗೈದರು. ಹಾಸ್ಟೆಲ್ ಮೇಲ್ವಿಚಾರಕಿ ಶ್ರೀಮತಿ ಗೀತಾ ವಂದಿಸಿದರು. ದೀಪಿಕಾ ಮತ್ತು ಸೌಮ್ಯ ಕಾರ್ಯಕ್ರಮ ನಿರೂಪಿಸಿದರು.