ಶಿಕ್ಷಕ ಎಂದರೆ ಯಾರು…??

ಡಾ. ಅಚ್ಯುತ ಪೂಜಾರಿ. ಕೆ ಸಹ ಪ್ರಾಧ್ಯಾಪಕರು ವಾಣಿಜ್ಯಶಾಸ್ತ್ರ ಸರಕಾರಿ ಪ್ರಥಮ ದರ್ಜೆ ಕಾಲೇಜು, ಬಂಟ್ವಾಳ

0

ಗುರು ಬ್ರಹ್ಮ ಗುರು ವಿಷ್ಣು

ಗುರು ದೇವೋ ಮಹೇಶ್ವರ

ಗುರು ಸಾಕ್ಷಾತ್ ಪರಬ್ರಹ್ಮ

ತಸ್ಮೈ ಶ್ರೀ ಗುರುವೇ ನಮಃ

ಗುರುವನ್ನು ಹೀಗೆಂದು ಸಂಸ್ಕೃತದಲ್ಲಿ ಉಲ್ಲೇಖಿಸಲಾಗಿದೆ. ಜಗಜ್ಜನಕರಾದ ಸೃಷ್ಟಿ, ಸ್ಥಿತಿ, ಲಯ ಪಾಲಕರಾದ, ತ್ರಿಮೂರ್ತಿಗಳ ಸ್ಥಾನದಲ್ಲಿ ಗುರುವಿನ ಸ್ಥಾನ ಗುರುತಿಸಲ್ಪಡುತ್ತದೆ. ಆದುದರಿಂದಲೇ ಭಾರತದ ಮೊದಲ ಪ್ರಧಾನಿಗಳಾದ ದಿ| ಜವಾಹರಲಾಲ್ ನೆಹರುರವರು ಶಿಕ್ಷಕ ದೇಶದ ಭಾವಿ ಭವಿಷ್ಯದ ನಿರ್ಮಾಪಕ ಎಂದು ಬಣ್ಣಿಸಿದರು.

ದೇಶ ಎಂದರೆ ಬರೀ ಮಣ್ಣಲ್ಲ ಮನುಷ್ಯ ಸ್ವರೂಪದ ಸಮೂಹ. ಈ ಮನುಷ್ಯ ಸ್ವರೂಪದ ಪ್ರಜೆಗಳನ್ನು ಶಿಸ್ತಿನ ಕುಲುಮೆಯಲ್ಲಿ ಪುಟಗೊಳಿಸುವ ಶಿಕ್ಷಕನ ಜ್ಞಾನ ಅತ್ಯುಚ್ಚಮಟ್ಟದ್ದು. ಡಾ. ಸರ್ವಪಲ್ಲಿ ರಾಧಾಕೃಷ್ಣನ್ ನವರು ಸ್ವತಂತ್ರ ಭಾರತ ಕಂಡ ಅತ್ಯುತ್ತಮ ರಾಷ್ಟ್ರಪತಿಗಳು. ‘ನನ್ನ ದೇಶದ ಕಟ್ಟಕಡೆಯ ಪ್ರಜೆಯ ಸ್ಥಾನ ಮತ್ತು ಮಾನ ನನಗಿರಲಿ’ ಎಂದು ದೇಶದ ಪ್ರಥಮ ಪ್ರಜೆಯಾಗಿ ರಾಷ್ಟ್ರಪತಿ ಭವನವನ್ನು ತ್ಯಜಿಸಿ, ಸರಳವಾಗಿ ಜೀವಿಸಿದ ಆದರ್ಶಪ್ರಾಯರು.

ಇವರು ತಮ್ಮ ಜನ್ಮದಿನವನ್ನು ಶಿಕ್ಷಕರ ದಿನವನ್ನಾಗಿ ಆಚರಿಸ ಬಯಸಿದರು. ವಿಶ್ವದ ಅತೀ ದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹೊಂದಿರುವ ಭಾರತದ ರಾಷ್ಟ್ರ ಅಧ್ಯಕ್ಷರಾಗಿ ಅಲಂಕೃತರಾಗಿದ್ದರೂ ತಮ್ಮನ್ನು ಶಿಕ್ಷಕರಾಗಿ ಗುರುತಿಸಿಕೊಳ್ಳಲು ಅವರು ಇಚ್ಛೆಪಟ್ಟರೆಂದರೆ ಪ್ರತಿಯೊಬ್ಬ ಶಿಕ್ಷಕ ತನ್ನ ವೃತ್ತಿಯ ಬಗ್ಗೆ ನಿಜಕ್ಕೂ ಹೆಮ್ಮೆ ಪಡಬೇಕು.ಶಿಕ್ಷಕನಾಗಬೇಕಾದರೆ ವಿದ್ಯಾರ್ಹತೆಯ ಜೊತೆಗೆ ಹಲವು ವೈಯಕ್ತಿಕ ಅರ್ಹತೆಗಳನ್ನು ಮೈಗೂಡಿಸಿಕೊಂಡಿರಬೇಕಾಗುತ್ತದೆ. ಶಿ ಎಂದರೆ ಶಿಸ್ತು. ಶಿಸ್ತನ್ನು ನಡತೆ/ ಸಚ್ಚಾರಿತ್ರ್ಯ ಎಂದು ಗುರುತಿಸುತ್ತಾರೆ. ಕ್ಷ ಎಂದರೆ ಕ್ಷಮಾಗುಣ, ದಯೆ, ಧರ್ಮದ ಮೂಲವೆಂದು ಗುರುತಿಸಲ್ಪಡುತ್ತದೆ. ಹಾಗೆಯೇ ಕ ಎಂದರೆ ಕರುಣೆ, ಹೀಗೆ ಶಿಕ್ಷಕ ಎಂಬ ಪದ ತನ್ನ ಸ್ಥಾನದ ಅರ್ಹತೆಯ ಪ್ರತಿಬಿಂಬವಾಗಿ ಈ ಮೂರು ಗುಣಗಳ ಮೂರ್ತಿ ಸ್ವರೂಪವೇ ಆಗಿದೆ.

ಅನಾದಿ ಕಾಲದಿಂದಲೂ ಆಚಾರ್ಯ ಸ್ಥಾನವನ್ನು ಗೌರವಿಸಲಾಗುತ್ತಿದೆ. ಸ್ವತಃ ಶಿಸ್ತನ್ನು ಬೆಳೆಸಿಕೊಂಡು ಪ್ರಾಯಶ್ಚಿತದಿಂದ ಬಳಲುವವರನ್ನು ಕ್ಷಮಿಸಿ, ಕರುಣೆಯಿಂದ ಮೇಲೆತ್ತಿ ತಮಸೋಮ ಜ್ಯೋತಿರ್ಗಮಯಕ್ಕೆ ಕೊಂಡೊಯ್ಯುವ ಅಂಬಿಗರೇ ಶಿಕ್ಷಕ. ಇನ್ನೂ ಶಿಕ್ಷಕನೆಂದರೆ ಶಿಕ್ಷಣ ನೀಡುವವ ಎಂದರ್ಥ. ಆತ ಶಿಕ್ಷಣ ನೀಡಬೇಕಾದರೆ ಮೊದಲು ತಾನು ಸುಶಿಕ್ಷಿತನಾಗಿರಬೇಕು ಸಮಾಜಕ್ಕೆ ವಿದ್ಯೆಯನ್ನು ಪಸರಿಸುವ ಸಾಮರ್ಥ್ಯ ಹಾಗೂ ಅರ್ಹತೆ ಆತನಲ್ಲಿರಬೇಕು.

ಯಾರು ನಿತ್ಯ ವಿದ್ಯಾರ್ಥಿಯಾಗಿರುವನೋ ಆತ ಮಾತ್ರ ನಿತ್ಯ ಶಿಕ್ಷಕನಾಗಬಲ್ಲ ಎಂಬ ಮಾತಿದೆ. ಅದರರ್ಥ ಆತ ನಿತ್ಯ ಓದನ್ನು ಮೈಗೂಡಿಸಿಕೊಂಡು ತಾನೊಬ್ಬ ಮೂಲತಃ ವಿದ್ಯಾರ್ಥಿ ಎಂಬ ಸರಳತೆಯನ್ನು ಹೊಂದಿರಬೇಕಾಗುತ್ತದೆ. ಯಾಕೆಂದರೆ ಬಾವಿಯಲ್ಲಿ ಈಜಲು ಕಲಿಸುವವನಿಗೆ ಸಮುದ್ರದಲ್ಲಿ ಈಜಲು ಬರಬೇಕು.ಸೂಕ್ಷ್ಮವಾಗಿ ಹೇಳಬೇಕೆಂದರೆ ಮೈಯಲ್ಲಿ ಕೆಸರು ಬಳಿದುಕೊಂಡು ಬೇರೆಯವರ ಮೈ ಮೇಲಿನ ಧೂಳನ್ನು ಒರೆಸಲು ಹೋಗಬಾರದು. ಉದಾಹರಣೆಗೆ ಸಿಗರೇಟು ತಂದುಕೊಟ್ಟ ವಿದ್ಯಾರ್ಥಿಗೆ ಬೀಡಿ ಸೇದಬೇಡ ಎಂದು ಹೇಳುವಂತಾಗಬಾರದು ಪ್ರತಿಯೊಬ್ಬ ಶಿಕ್ಷಕ ಸಾಮಾಜಿಕ ಪ್ರಜ್ಞೆಯ ರಕ್ಷಣೆಯ ಜವಾಬ್ದಾರಿಯನ್ನು ಹೊತ್ತಿರುತ್ತಾನೆ.ನಮ್ಮ ದೇಶದ ಅತೀ ದೊಡ್ಡ ಸಮಸ್ಯೆ ಅನಕ್ಷರತೆ.

ಈ ಅನಕ್ಷರತೆ ಅಂಧಾನುಕರಣೆಗೆ ದಾರಿ ಮಾಡಿ ಜನಸಂಖ್ಯೆಯನ್ನು ವೃದ್ಧಿಸಿ, ಜನತಂತ್ರ ಹಾಗೂ ಗಣತಂತ್ರ ವ್ಯವಸ್ಥೆಯನ್ನು ಬುಡಮೇಲು ಮಾಡುತ್ತಿದೆ. ಇಂತಹ ಅಜ್ಞಾನದ ಸಮಾಜದಲ್ಲಿ ಜ್ಞಾನಾಂಜನ ಹಂಚುವ ಹೋಣೆಯನ್ನು ಸಿಂಹಪಾಲು ಶಿಕ್ಷಕರು ಹೊತ್ತಿದ್ದಾರೆ. ನಮ್ಮ ದೇಶದ ಪ್ರಜೆಗಳ ಮಹಾ ದೌರ್ಭಾಗ್ಯವಾದ ರಾಜಕೀಯ ಅಷ್ಟಪದಿ ಶಿಕ್ಷಣ ರಂಗದಲ್ಲಿ ಬಹುಪಾದವನ್ನು ಊರಿರುವುದರಿಂದ ದೇಶದ ಭವಿಷ್ಯವನ್ನು ಬರೆಯುವ ಶಿಕ್ಷಕ ವರ್ಗ ಹಾಗೂ ಶಿಕ್ಷಣ ರಂಗ ಶೋಷಣೆಯ ಚದುರಂಗವಾಗಿದೆ. ಶಿಕ್ಷಕ ಹಾಗೂ ಶಿಕ್ಷಣಕ್ಕೆ ಸಿಗಬೇಕಾದ ಮಾನ್ಯತೆ ಗೌರವ ಇಂದು ಮಾಯವಾಗುತ್ತಿದೆ.

ರೈತರು ದೇಶದ ಬೆನ್ನೆಲುಬು, ಸೈನಿಕರು ದೇಶದ ನರನಾಡಿಗಳು, ಅದೇ ರೀತಿ ದೇಶದ ಮೆದುಳು ಎಂದು ಗುರುತಿಸಿಕೊಳ್ಳಬೇಕಾದ ಶಿಕ್ಷಕರು ಮಾತ್ರ ವರ್ಷಕ್ಕೊಮ್ಮೆ ಬರುವ ಶಿಕ್ಷಕರ ದಿನಾಚರಣೆಗೆ ಸೀಮಿತಗೊಂಡಿರುವುದು ವಿಪರ್ಯಾಸವೇ ಸರಿ. ಇಂದು ಶಿಕ್ಷಕ ಚದುರಂಗದಾಟದ ದಾಳವಾಗಿದ್ದಾನೆ. ವಿದ್ಯಾರ್ಥಿಗಳು ಅದರ ಕಾಯಿಗಳಾಗಿದ್ದಾರೆ. ಇಡೀ ಶಿಕ್ಷಕ ವೃತ್ತಿಗೆ ಗೌರವ ಸಲ್ಲುವಂತಾಗಬೇಕೇ ಹೊರತು ಆ ಸ್ಥಾನಕ್ಕಲ್ಲ, ಗೌರವವು ಶಿಕ್ಷಣ ಕೈಂಕರ್ಯಕ್ಕೆ ಸಲ್ಲಿಸುವ ಪ್ರಾರ್ಥನೆಯಾಗಬೇಕು.

ಆದುದರಿಂದಲೇ ಡಾ. ರಾಧಾಕೃಷ್ಣನ್‌ರವರು ಶಿಕ್ಷಕರ ದಿನಾಚರಣೆಯನ್ನು ಆಚರಿಸಲ್ಪಡುವ ಒಬ್ಬ ವ್ಯಕ್ತಿಯಾಗಿರದೇ ದೊಡ್ಡ ಶಕ್ತಿಯಾಗಿ ಕಾಣಿಸಿಕೊಂಡರು. ಅವರ ಮಾತಿನಲ್ಲೇ ಹೇಳುವುದಾದರೆ ನಾಲ್ಕು ರೀತಿಯ ಶಿಕ್ಷಕರು ನಮ್ಮ ಸಮಾಜದಲ್ಲಿ ಕಾಣಿಸಿಕೊಳ್ಳುತ್ತಾರೆ. ಒಬ್ಬ ಕಳಪೆ ಶಿಕ್ಷಕ ವಿದ್ಯಾರ್ಥಿಗಳನ್ನು ನಿಂದಿಸುತ್ತಾನೆ, ಸಾಮಾನ್ಯ ಶಿಕ್ಷಕ ಬೋಧನೆಯನ್ನು ಮಾಡುತ್ತಾನೆ.

ಉತ್ತಮ ಶಿಕ್ಷಕ ಪಾಠವನ್ನು ವಿವರಿಸುತ್ತಾನೆ ಹಾಗೂ ಅಸಾಮಾನ್ಯ ಶಿಕ್ಷಕ ತನ್ನ ವಿಷಯದ ಮೇಲೆ ವಿದ್ಯಾರ್ಥಿಗಳಲ್ಲಿ ಸ್ಫೂರ್ತಿಯನ್ನು ಹುಟ್ಟಿಸುತ್ತಾನೆ. ಡಾ. ರಾಧಾಕೃಷ್ಣನ್ ಅವರು ಮೇಲಿನ ಕೊನೆಯ ಸಾಲಿಗೆ ಉಪಮೆಯಾಗಿ ನಿಲ್ಲುತ್ತಾರೆ. ಆದುದರಿಂದ ಪ್ರತಿಯೊಬ್ಬ ಶಿಕ್ಷಕನು ತಮ್ಮ ಅತ್ಯುನ್ನತ ಸ್ಥಾನದ ಮೌಲ್ಯವನ್ನು ಅರಿತು ಇಂದು ಮುಸುಕಿರುವ ಅಜ್ಞಾನದ ಕಾರ್ಮೋಡವನ್ನು ಸರಿಸುವ ಕಾರ್ಯವೆಸಗಬೇಕಾಗಿದೆ. ಹಾಗೆಯೇ ಪ್ರತಿಯೊಬ್ಬ ವಿದ್ಯಾರ್ಥಿಯೂ ಶಿಕ್ಷಕನಿಗೆ ತನ್ನನ್ನು ತಾನು ಸಂಪೂರ್ಣವಾಗಿ ಅರ್ಪಿಸಿಕೊಂಡು ತನ್ನ ವ್ಯಕ್ತಿತ್ವ ವಿಕಸನಕ್ಕೆ ಅಣಿಗೊಳ್ಳಬೇಕಾಗಿದೆ.

ಇದೇ ತಾನೇ ಶಿಕ್ಷಕ ಹಾಗೂ ವಿದ್ಯಾರ್ಥಿಯ ನೆನಪಿನಾಳದಲ್ಲಿ ಉಳಿಯಬೇಕಾದ ಅಂಶಗಳು.ಡಾ. ಅಚ್ಯುತ ಪೂಜಾರಿ. ಕೆ ಸಹ ಪ್ರಾಧ್ಯಾಪಕರು ವಾಣಿಜ್ಯಶಾಸ್ತ್ರ ಸರಕಾರಿ ಪ್ರಥಮ ದರ್ಜೆ ಕಾಲೇಜು, ಬಂಟ್ವಾಳ