ಬಿಜೆಪಿ ಬಿಡುವ ಪ್ರಶ್ನೆಯೇ ಇಲ್ಲ: ಡಿ.ವಿ.ಸದಾನಂದ ಗೌಡ ಹೇಳಿಕೆ

0

ಕರ್ನಾಟಕದ ಎಲ್ಲಾ 28 ಲೋಕ ಸಭಾ ಕ್ಷೇತ್ರಗಳಲ್ಲೂ ಬಿಜೆಪಿ ಗೆಲುವು

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಮಾಜಿ ಮುಖ್ಯಮಂತ್ರಿ ಮಾತು

ಕಳೆದ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಎನ್.ಡಿ.ಎ. 25 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಇದೀಗ ಜೆಡಿಎಸ್ ಕೂಡ ಎನ್.ಡಿ.ಎ. ಜೊತೆಯಿದ್ದು, ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಎಲ್ಲ 28 ಸ್ಥಾನಗಳನ್ನು ಎನ್.ಡಿ.ಎ. ಗೆದ್ದುಕೊಳ್ಳುವ ಮೂಲಕ ವಿಧಾನ ಸಭಾ ಚುನಾವಣೆಯಲ್ಲಿ ಕಳೆದುಕೊಂಡದನ್ನು ಬಡ್ಡಿ ಸಮೇತ ಪಡೆದುಕೊಳ್ಳಲಿದ್ದೇವೆ ಎಂದು ಮಾಜಿ ಮುಖ್ಯಮಂತ್ರಿ, ಸಂಸದ ಡಿ.ವಿ. ಸದಾನಂದ ಗೌಡ ಹೇಳಿದ್ದಾರೆ.

ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಿನ್ನೆ ಮಾಧ್ಯಮದವರೊಂದಿಗೆ ರಂದು ಮಾತನಾಡಿದ ಅವರು, ಕರ್ನಾಟಕದ ವಿಧಾನ ಸಭಾ ಚುನಾವಣೆಯಲ್ಲಿ ಅನೀರಿಕ್ಷಿತ ಹಿನ್ನಡೆಯಾಗಿದೆ. ಆದರೆ ಲೋಕಸಭಾ ಚುನಾವಣೆಯಲ್ಲಿ ಹಿನ್ನಡೆ ಅಸಾಧ್ಯ. ಲೋಕಸಭಾ ಚುನಾವಣೆ ರಾಷ್ಟ್ರೀಯ ವಿಚಾರದಲ್ಲಿ ನಡೆಯುವ ಚುನಾವಣೆ. ನರೇಂದ್ರ ಮೋದಿ ನೇತೃತ್ವದ ಒಂಬತ್ತೂವರೆ ವರ್ಷದ ಆಡಳಿತ ಅತ್ಯಂತ ಯಶಸ್ವಿಯಾಗಿದೆ. ಅವರಿಂದ ಅಭಿವೃದ್ಧಿಗೆ ಅರ್ಥ ಬಂದಿದೆ ಎಂದು ಅವರು ಹೇಳಿದರು.

ಬಿಜೆಪಿ ಎಲ್ಲವನ್ನೂ ನೀಡಿದೆ

ಬಿಜೆಪಿ ಪಕ್ಷ ನನಗೆ ಎಲ್ಲವನ್ನು ನೀಡಿದೆ. ಎಂಎಲ್ಎ, ಎಂಪಿ, ಎಂಎಲ್ಸಿ, ಮುಖ್ಯಮಂತ್ರಿ, ಕೇಂದ್ರ ಸಚಿವ ಸ್ಥಾನ, ರಾಜ್ಯ, ರಾಷ್ಟ್ರೀಯ ಹುದ್ದೆಗಳನ್ನು ನೀಡಿದೆ. ಇನ್ನು ಏನಾದರೂ ಅಪೇಕ್ಷೆ ಪಡಲಿಕ್ಕಿದೆಯೇ? ಆದ್ದರಿಂದ ಪಕ್ಷ ಬಿಡುವ ಪ್ರಶ್ನೆಯೇ ಇಲ್ಲ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಕಡಿಮೆ ಅವಧಿಯ ಕಾಂಗ್ರೆಸ್ ಸರ್ಕಾರ;

ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದ ಎರಡು ತಿಂಗಳಲ್ಲೇ ಆಂತರಿಕ ಕಚ್ಚಾಟ ಆರಂಭಗೊಂಡಿದೆ. ಪಕ್ಷದ ಶಾಸಕರು, ಸಚಿವರೇ ಅಸಮಾಧಾನ ಹೊರಹಾಕುತ್ತಿದ್ದಾರೆ. ರಾಜ್ಯ ಕಾಂಗ್ರೆಸ್ ಸರಕಾರ ಮನೆಯೊಂದು ನೂರು ಬಾಗಿಲಿನಂತೆ ಇದೆ ಎಂದ ಅವರು ರಾಜ್ಯದ ಜನರೇ ರಾಜ್ಯದ ಕಾಂಗ್ರೆಸ್ ಸರಕಾರ ಹೆಚ್ಚು ಸಮಯ ಬಾಳ್ವಿಕೆ ಬರುವುದಿಲ್ಲ ಎನ್ನುತ್ತಿದ್ದಾರೆ ಎಂದರು. ಕಾಂಗ್ರೆಸ್ ಈ ಹಿಂದಿನಿಂದಲೂ ಅಲ್ಪಸಂಖ್ಯಾಕರ ಓಲೈಕೆ ಮಾಡುತ್ತಲೇ ಬಂದಿದೆ ಎಂದರು.

ದ.ಕ.ದಲ್ಲೆ ಮತ್ತೆ ಬಿಜೆಪಿಯೇ;

ದ.ಕ.ದಲ್ಲಿ ಲೋಕಸಭಾ ಚುನಾವಣೆಗೆ ಅರುಣ್ ಕುಮಾರ್ ಪುತ್ತಿಲ ಬಂಡಾಯ ಸ್ಪರ್ಧೆ ಮಾಡುವ ಸಾಧ್ಯತೆ ಬಗ್ಗೆ ಪ್ರಶ್ನೆಗೆ ಉತ್ತರಿಸಿದ ಸದಾನಂದ ಗೌಡರು, ನಾನು ಯಾವುದೇ ವ್ಯಕ್ತಿಯ ಬಗ್ಗೆ ಮಾತನಾಡುವುದಿಲ್ಲ‌. ಆದರೆ ಲೋಕಸಭಾ ಚುನಾವಣೆಯಲ್ಲಿ ಯಾರೇ ಸ್ಪರ್ಧೆ ಮಾಡಿದರೂ ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸಲಿದ್ದಾರೆ ಎಂದರು.

ಕಸ್ತೂರಿ ರಂಗನ್ ವರದಿ ಜಾರಿಗೆ ವಿರೋಧ:


ಕಸ್ತೂರಿ ರಂಗನ್ ವರದಿಯನ್ನು ಈ ಭಾಗದಲ್ಲಿ ಅನುಷ್ಠಾನ ಮಾಡುವುದನ್ನು ನಾನು ಈ ಹಿಂದಿನಿಂದಲೂ ವಿರೋಧಿಸಿದ್ದೇನೆ. ಸ್ಯಾಟಲೈಟ್ ಮೂಲಕ ಸಮೀಕ್ಷೆ ನಡೆಸಿದ್ದರಿಂದ ಈ ಭಾಗದ ಅಡಿಕೆ, ರಬ್ಬರ್ ಕೃಷಿ ಪ್ರದೇಶವನ್ನೂ ಅರಣ್ಯ ಎಂದು ಕಸ್ತೂರಿ ರಂಗನ್ ವರದಿಗೆ ಸೇರಿಸಲಾಗಿದೆ. ಈ ಹಿಂದೆ ಕಸ್ತೂರಿ ರಂಗನ್ ವರದಿ ಅನುಷ್ಠಾನ ಮಾಡದಂತೆ ಪ್ರಧಾನಿಗೂ ಒತ್ತಡ ಹಾಕಿದ್ದೆವು ಎಂದ ಅವರು ಇದಕ್ಕೆ ಬದಲಿ ವ್ಯವಸ್ಥೆ ನೋಡುವ ಅಗತ್ಯ ಇದೆ ಎಂದರು.

ಅಡಿಕೆ ಬೆಳೆಗಾರರ ಹಿಂದೆ ಸದಾ ನಾನಿದ್ದೇನೆ

ಅಡಿಕೆ ಬೆಳೆಗಾರರ ಬಗ್ಗೆ ನಾನು ತಿಳಿದವನು. ಅಡಿಕೆ ಬೆಳೆಗಾರರ ಹಿತ ಕಾಯಲು ನಾನು ಸದಾ ಬದ್ಧನಾಗಿದ್ದೇನೆ ಹಾಗೂ ಈವರೆಗೂ ಅದನ್ನು ಮಾಡಿದ್ದೇನೆ. ಅಡಿಕೆ ಬೆಲೆ ಕುಸಿತ, ಕಳ್ಳ ಸಾಗಾಟ ತಡೆಗೆ ಪೂರಕ ಕ್ರಮಕೈಗೊಂಡಿದ್ದೇನೆ. ಅಡಿಕೆ ಹಳದಿ ರೋಗಕ್ಕೆ ನಮ್ಮ ಸರಕಾರ 25 ಕೋಟಿ ಅನುದಾನ ಇರಿಸಿ, ಸಂಶೋಧನಾ ಕೇಂದ್ರಕ್ಕೆ ಮುಂದಾಗಿತ್ತು. ರೋಗ ಬಾರದ ತಳಿ ಅಭಿವೃದ್ಧಿ, ಇತರೆ ಪೂರಕ ಕ್ರಮಗಳನ್ನು ನಮ್ಮ ಸರಕಾರ ಕೈಗೊಳ್ಳುವ ಮೂಲಕ ಅಡಿಕೆ ಬೆಳೆಗಾರರ ಜೊತೆ ಕೈಜೋಡಿಸಿದ್ದೇವೆ ಎಂದರು.