ಪೆರಾಜೆ ಚಿಗುರು ಯುವಕಮಂಡಲ ವತಿಯಿಂದ ಹೆಲ್ಮೆಟ್ ಜಾಗೃತಿ ಅಭಿಯಾನ

0

ಪೆರಾಜೆಯ ಚಿಗುರು ಕ್ರೀಡಾ ಮತ್ತು ಕಲಾ ಯುವಕಮಂಡಲ (ರಿ) ವತಿಯಿಂದ ಹೆಲ್ಮೆಟ್ ಜಾಗೃತಿ ಅಭಿಯಾನ ಕಾರ್ಯಕ್ರಮ ಹಾಗೂ ಕೊಡಗು ಜಿಲ್ಲಾ ಪೋಲಿಸ್ ಮಡಿಕೇರಿ ಗ್ರಾಮಾಂತರ ಠಾಣೆ ಇವರ ವತಿಯಿಂದ ಅಪರಾಧ ತಡೆ ಮಾಸಾಚರಣೆ ಮತ್ತು ಮಾದಕ ದ್ರವ್ಯ ವಸ್ತುಗಳ ದುರುಪಯೋಗ ಮತ್ತು ಅಕ್ರಮ ಸಾಗಾಣೆ ವಿರುದ್ಧ ಅಂತರಾಷ್ಟ್ರೀಯ ದಿನ ಎನ್ನುವ ವಿಷಯಗಳ ಕುರಿತಾದ ಕಾರ್ಯಕ್ರಮವು ಇತ್ತೀಚೆಗೆ ಪೆರಾಜೆ ಜಂಕ್ಷನ್ ನಲ್ಲಿ ನಡೆಯಿತು.


ಕಾರ್ಯಕ್ರಮದಲ್ಲಿ ಮಡಿಕೇರಿ ಗ್ರಾಮಾಂತರ ಠಾಣೆಯ ಪೋಲಿಸ್ ನಿರೀಕ್ಷರಾದ ಉಮೇಶ್ ಉಪ್ಪಳಿಕೆ ಮಾತನಾಡಿ ವಾಹನ ಚಾಲನೆ ಮಾಡುವಾಗ ಸುರಕ್ಷತಾ ಕ್ರಮಗಳನ್ನು ಅನುಸರಿಸುವುದು ಕಡ್ಡಾಯ. ರಸ್ತೆ ನಿಯಮಗಳನ್ನು ಚಾಲಕರು ತಿಳಿದಿರುವುದು ಅಗತ್ಯ ಎಂದರು. ವಾಹನ ಸವಾರರು ವಾಹನಗಳಿಗೆ ಸಂಬಂಧಪಟ್ಟ ಎಲ್ಲಾ ದಾಖಲೆಗಳನ್ನು ಸದಾ ಕಡ್ಡಾಯವಾಗಿ ಜತೆಯಲ್ಲಿಟ್ಟುಕೊಂಡಿರಬೇಕು. ಹೆಲ್ಮೆಟ್‌ ಧರಿಸದೆ ವಾಹನ ಚಲಾಯಿಸಿದರೆ ಸ್ಥಳದಲ್ಲಿಯೇ ದಂಡ ತೆರಬೇಕಾಗುತ್ತದೆ. 18 ವರ್ಷದ ಒಳಗಿನವರು ವಾಹನ ಚಲಾಯಿಸುವುದು ಅಪರಾಧ’ ಹಾಗೂ ಇದಕ್ಕೆ ನಿರ್ಬಂಧ ಹಾಕಲು ಪೋಷಕರು ಗಮನ ಹರಿಸಬೇಕು ಎಂದರು.


ವಾಹನ ಚಲಾಯಿಸುವಾಗ ಹೆಲ್ಮೆಟ್‌ ಧರಿಸುವುದರಿಂದ ಸಂಭವನೀಯ ಅಪಘಾತಗಳಿಂದ ತಲೆಗೆ ಪೆಟ್ಟಾಗುವುವುದು ತಪ್ಪುತ್ತದೆ. ವಾಹನ ಚಾಲನೆ ಮಾಡುವ ಚಾಲಕ ಎಲ್ಲಾ ದಾಖಲೆಗಳನ್ನು ಇಟ್ಟುಕೊಳ್ಳುವುದು ಕಡ್ಡಾಯ, ಮತ್ತು ಚಾಲನಾ ಪರವಾನಗಿ ಪಡೆದಿರುವುದು , ಮತ್ತು ವಾಹನ ನೋಂದಣಿ ಪ್ರಮಾಣ ಪತ್ರ,ವಿಮಾ ಪ್ರಮಾಣ ಪತ್ರದಂತಹ ಪ್ರಮುಖ ದಾಖಲೆಗಳು ಅಗತ್ಯ . ಮದ್ಯಪಾನ ಮಾಡಿ ವಾಹನ ಚಾಲನೆ, ಚಾಲನೆ ಮಾಡುವಾಗ ಸೆಲ್ ಪೋನ್ ಬಳಕೆಗಳಂತಹ ಪ್ರಕರಣಗಳಿಗೆ ದಂಡ ವಿಧಿಸಲಾಗುತ್ತದೆ, ಪೊಲೀಸರು ನೀಡುವ ಸೂಚನೆಗಳನ್ನು ಅಗತ್ಯವಾಗಿ ಪಾಲಿಸಬೇಕು’ ಎಂದು ಹೇಳಿದರು.


ರಾಜ್ಯ ಮತ್ತು ಜಿಲ್ಲೆಯಾದ್ಯಂತ ಎಲ್ಲ ಕಡೆಗಳಲ್ಲಿ ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್ ಕಡ್ಡಾಯ ಮಾಡಿದ್ದು ಸಾರ್ವಜನಿಕರು ಪಟ್ಟಣ ಹಾಗೂ ಹೊರಗೆ ಪ್ರಯಾಣ ಬೆಳೆಸಬೇಕಾರೆ ಕಡ್ಡಾಯವಾಗಿ ಗುಣಮಟ್ಟದ ಹೆಲ್ಮೆಟ್ ಅನ್ನು ಅವುಗಳನ್ನು ಸುರಕ್ಷಿತವಾಗಿ ಜೋಡಿಸಿ ಧರಿಸಿಕೊಳ್ಳಬೇಕು. ಹೆಲ್ಮೆಟ್ ಧರಿಸದೇ ದ್ವಿಚಕ್ರ ವಾಹನ ಚಲಾಯಿಸಿದರೆ ಅಂತವರ ಮೇಲೆ ಕಟ್ಟುನಿಟ್ಟಿನ ಕಾನೂನು ಕ್ರಮ ಜರುಗಿಸಲಾಗುವುದು ಹಾಗೂ ದಂಡ ವಿಧಿಸಲಾಗುವುದು ಎಂದರು, ಪ್ರತಿಯೊಬ್ಬ ವಾಹನ ಸವಾರರು ಹೆಲ್ಮೆಟ್ ಬಳಕೆ ಮಾಡುವ ಮೂಲಕ ತಮ್ಮ ಅಮೂಲ್ಯವಾದ ಜೀವವನ್ನು ರಕ್ಷಿಸಿಕೊಳ್ಳುವುದರ ಜೊತೆಗೆ ತಮ್ಮ ಕುಟುಂಭದ ಭದ್ರತೆ ಕಾಪಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.


ಅಪರಾಧ ತಡೆ ಮಾಸಾಚರಣೆ ಹಾಗೂ ಮಾದಕ ದ್ರವ್ಯ ವಸ್ತುಗಳ ದುರುಪಯೋಗ ಮತ್ತು ಅಕ್ರಮ ಸಾಗಾಣೆ ಕುರಿತು ಮಾತನಾಡಿ ಗ್ರಾಮದಲ್ಲಿ ಹೊರಜಿಲ್ಲೆ ಹಾಗೂ ಹೊರ ರಾಜ್ಯಗಳಿಂದ ವಿವಿಧ ಕೆಲಸಕಾರ್ಯಗಳ ನಿಮಿತ್ತ ಬಂದವರ ಮಾಹಿತಿಯನ್ನು ಪಡೆದುಕೊಳ್ಳಬೇಕು, ಬಾಡಿಗೆ ಮನೆ ಕೊಡುವವರು ಕಡ್ಡಾಯವಾಗಿ ಆಧಾರ್ ಕಾರ್ಡ್ ಅನ್ನು ಪಡೆದುಕೊಂಡಿರಬೇಕು ಎಂದರು. ಮತ್ತು ಮಾದಕ ದ್ರವ್ಯ ವಸ್ತುಗಳ ದುರುಪಯೋಗದ ಬಗ್ಗೆ ಶಾಲಾ ಮಕ್ಕಳಿಗೆ ಹಾಗೂ ಗ್ರಾಮಸ್ಥರಿಗೆ ವಿವರವಾಗಿ ತಿಳಿಸಿ ಇಂತಹ ಪ್ರಕರಣಗಳು ತಮ್ಮ ಗಮನಕ್ಕೆ ಬಂದರೆ ಪೋಲಿಸ್ ಸಹಾಯವಾಣಿಗೆ ಕರೆ ನೀಡಿ ನಿಮ್ಮ ಹೆಸರನ್ನು ಗೌಪ್ಯವಾಗಿ ಇಡಲಾಗುತ್ತದೆ ಎಂದು ಮನವಿ ಮಾಡಿಕೊಂಡರು.


ಈ ಸಂದರ್ಭದಲ್ಲಿ ಮಡಿಕೇರಿ ಗ್ರಾಮಾಂತರ ಠಾಣ ಸಿಬ್ಬಂದಿಗಳಾದ ಮಹೇಶ್, ಪ್ರವಿಣ್ , ಸಂಪಾಜೆ ಆರಕ್ಷಕ ಠಾಣ ಸಿಬ್ಬಂದಿ ಅ್ಯಂಥೋನಿ , ಗ್ರಾಮ ಪಂಚಾಯತ್ ಅಧ್ಯಕ್ಷೇ ಚಂದ್ರಕಲಾ ಬಳ್ಳಡ್ಕ, ಪಂಚಾಯತ್ ಕಾರ್ಯದರ್ಶಿ ಕುಮಾರ್, ಮಡಿಕೇರಿ ತಾಲ್ಲೂಕು ಪಂಚಾಯತ್ ಮಾಜಿ ಸದಸ್ಯ ನಾಗೇಶ್ ಕುಂದಲ್ಪಾಡಿ, ಗ್ರಾಮ ಪಂಚಾಯತ್ ಸದಸ್ಯರಾದ ಜಯಲಕ್ಷ್ಮಿ ಧರಣೀಧರ, ಉದಯಚಂದ್ರ ಕುಂಬಳಚೇರಿ, ಪ್ರವೀಣ ಮಜಿಕೋಡಿ, ಚಿಗುರು ಯುವಕಮಂಡಲದ ಅಧ್ಯಕ್ಷ ಭುವನ್ ಕುಂಬಳಚೇರಿ, ಕಾರ್ಯದರ್ಶಿ ಜೀವನ್ ಮಜಿಕೋಡಿ ,ಚಿಗುರು ಯುವಕಮಂಡಲದ ಸದಸ್ಯರು ಸೇರಿದಂತೆ ಪಂಚಾಯತ್ ಸಿಬ್ಬಂದಿಗಳು ಪ್ರಾಥಮಿಕ ಕೃಷಿ ಪತ್ತಿನ ನಿರ್ದೇಶಕರುಗಳು, ಶಾಲಾ ಶಿಕ್ಷಕರು ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮಸ್ಥರು, ಶಾಲಾ ಕಾಲೇಜು ಮಕ್ಕಳು ಇದ್ದರು.