ಹೆಬ್ಬೆರಳು ಚೀಪುವುದು ಯಾಕೆ?

0

ಸಣ್ಣ ಮಕ್ಕಳು ಬಾಯಲ್ಲಿ ಕೈಬೆರಳು ಹಾಕಿ ಚೀಪುವುದು ಸಾಮಾನ್ಯ ಲಕ್ಷಣ. ಇದೇನೂ ಬಹಳ ದೊಡ್ಡ ಸಮಸ್ಯೆ ಏನಲ್ಲ. ಸಾಮಾನ್ಯವಾಗಿ ಚಿಕ್ಕ ಮಕ್ಕಳು ಸುಸ್ತಾದಾಗ, ಬೇಸರವಾದಾಗ, ನಿದ್ದೆ ಬರುವ ಹೊತ್ತಲ್ಲಿ, ಸಾಂತ್ವನದ ಅವಶ್ಯಕತೆ ಇದ್ದಾಗ ಹೆಬ್ಬೆರಳನ್ನು ಚೀಪುವುದು ಕಂಡು ಬರುತ್ತದೆ. ಈ ಬೆರಳು ಚೀಪುವ ಅಭ್ಯಾಸ ಗರ್ಭಾವಸ್ಥೆಯ (15ನೇ ವಾರದಲ್ಲಿ) ಆರಂಭವಾಗುತ್ತದೆ ಎಂದು ಸಂಶೋಧನೆಗಳಿಂದ ತಿಳಿದು ಬಂದಿದೆ. ಗರ್ಭಾಶಯದ ಒಳಗೆ ಮಗು ದಿನಕ್ಕೆ ನೂರಾರು ಬಾರಿ ಆಕಳಿಸುತ್ತದೆ ಎಂದೂ ತಿಳಿದು ಬಂದಿದೆ. ಇದೇ ಅಭ್ಯಾಸ ಹುಟ್ಟಿದ ಬಳಿಕವೂ ಮುಂದುವರಿಯುತ್ತದೆ. ಮಗು ತನ್ನ ತಾಯಿಯಿಂದ ದೂರವಿದ್ದಾಗಲೂ ಸಾಂತ್ವನಕ್ಕಾಗಿ ಬೆರಳು ಚೀಪುತ್ತದೆ ಎಂದು ಮನೋವಿಶ್ಲೇಷಕರು ಪ್ರತಿಪಾದಿಸುತ್ತಾರೆ. ಸಾಮಾನ್ಯವಾಗಿ ಈ ಹವ್ಯಾಸ 4ರಿಂದ 5 ವರ್ಷದ ವರೆಗೆ ಮುಂದುವರಿಯುತ್ತದೆ. ಆ ನಂತರವೂ ಮಗು ಇದನ್ನೇ ಮುಂದುವರಿಸಿದ್ದಲ್ಲಿ ಮುಂದೆ ಅದೇ ಒಂದು ದುರಾಭ್ಯಾಸವಾಗಿ ಪರಿಣಮಿಸಬಹುದು. 5 ವರ್ಷದ ನಂತರವೂ ಮಕ್ಕಳು ಇದೇ ಅಭ್ಯಾಸವನ್ನು ಮುಂದುವರಿಸಿದ್ದಲ್ಲಿ ದಂತ ವೈದ್ಯರ ಸಲಹೆ, ಸಂದರ್ಶನ ಮತ್ತು ಮಾರ್ಗದರ್ಶಕ ಅತೀ ಅವಶ್ಯಕ. ಇದೇ ರೀತಿ ದೀರ್ಘಕಾಲದವರೆಗೆ ಹೆಬ್ಬೆರಳು ಚೀಪಿದ್ದಲ್ಲಿ ಮೇಲಿನ ದವಡೆಯ ಒಳಭಾಗಕ್ಕೆ ಹೆಚ್ಚು ಒತ್ತಡ ಬಿದ್ದು ಮೇಲ್ದವಡೆಯ ಹಲ್ಲುಗಳು ಉಬ್ಬು ಹಲ್ಲಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಮೇಲ್ಭಾಗದ ದಂತ ಪಂಕ್ತಿಯೂ ಕೂಡ ಅಡ್ಡಾದಿಡ್ಡಿಯಾಗಿ ಬೆಳೆಯುವ ಸಾಧ್ಯತೆ ಇರುತ್ತದೆ. ಇದರ ಜೊತೆಗೆ ಮೇಲಿನ ದವಡೆಯ ಎಲುಬುಗಳು ಕೂಡ ಹೆಚ್ಚು ಮುಂದಕ್ಕೆ ಬೆಳೆಯುವ ಸಾಧ್ಯತೆ ಇರುತ್ತದೆ. ಇದರ ಜೊತೆಗೆ ಮೇಲಿನ ತುಟಿಯ ಬೆಳವಣಿಗೆಗೆ ತೊಂದರೆ ಆಗಬಹುದು. ಒಟ್ಟಿನಲ್ಲಿ ಹಲ್ಲು, ಎಲುಬು, ಸ್ನಾಯುಖಂಡ ಹೀಗೆ ಎಲ್ಲಾ ಅಂಗಾಂಗಗಳ ಬೆಳೆವಣಿಗೆಗೆ ತೊಂದರೆ ಉಂಟಾಗಿ ಕೋಲು ಮುಖ (ಉದ್ದ ಮುಖ) ಉಂಟಾಗುವ ಸಾಧ್ಯತೆ ಇದೆ. ಹಾಗೆಂದ ಮಾತ್ರಕ್ಕೆ 2ರಿಂದ 4 ವರ್ಷದ ವರೆಗೆ ಮಗು ಬೆರಳು ಚೀಪಿದ್ದಲ್ಲಿ ಅದನ್ನು ತಡೆಯುವ ಗೋಜಿಗೆ ಹೋಗಬೇಡಿ. ಮಗುವಿನ ಮಾನಸಿಕ ದೈಹಿಕ ಬೆಳವಣಿಗೆಗೆ ಇದು ಖಂಡಿತವಾಗಿಯೂ ಮಾರಕವಲ್ಲ. ಮಗು ಬೆರಳು ಚೀಪುವಾಗ ಮಾನಸಿಕವಾಗಿ ಭದ್ರತೆಯ ಭಾವನೆ ಬಂದು, ಅದು ಬೆಳವಣಿಗೆ ಪೂರಕವಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಕೆಲವೊಂದು ಮಕ್ಕಳಲ್ಲಿ ಹುಟ್ಟಿದ ಕೆಲವೇ ವಾರಗಳಲ್ಲಿ ಬಾಯಿ ತೆರೆದು ಬೆರಳು ಚೀಪುವ ಪ್ರಕ್ರಿಯೆ ಆರಂಭವಾಗುತ್ತದೆ. ಖ್ಯಾತ ಮಕ್ಕಳ ತಜ್ಞ ರಾರ್ಡ್ ಆಂಡರ್‍ಸನ್ ಹೇಳುವಂತೆ ಬೆರಳು ಚೀಪುವಿಕೆ ಮನುಷ್ಯ ಅಲ್ಲದೆ ಮಂಗಗಳಲ್ಲಿ ಚಿಂಪಾಜಿಗಳಲ್ಲಿಯೂ ಕಂಡು ಬರುತ್ತದೆ. ಹುಟ್ಟಿನಿಂದಲೇ ಆರಂಭವಾಗುವ “ಚೀಪುವ ಪ್ರಕ್ರಿಯೆ” ಎಲ್ಲ ಸ್ತನ್ಯಪಾನ ನೀಡುವ ಸಸ್ತನಿಗಳಲ್ಲಿ ಸಾಮಾನ್ಯವಾಗಿ ಕಂಡು ಬರುತ್ತದೆ. ಸುಮಾರು 4 ತಿಂಗಳವರೆಗೆ ಈ ಪ್ರಕ್ರಿಯೆ ನಿರಾಂತಂಕವಾಗಿ ಮುಂದುವರಿಯುತ್ತದೆ ಅದರಲ್ಲಿ ದೊರಕುವ ನೆಮ್ಮದಿ, ಸಾಂತ್ವನ, ಸಂತಸದಿಂದಾಗಿ ಈ ಅಭ್ಯಾಸ ಹವ್ಯಾಸವಾಗಿ ಮುಂದುವರಿಯುತ್ತದೆ.

ಹೇಗೆ ಬಿಡಿಸುವುದು :-

  1. ಮಕ್ಕಳಿಗೆ ಹೊಡೆಯದೆ, ಬಡಿಯದೆ, ಬಯ್ಯದೆ, ಅವಹೇಳನ ಮಾಡದೆ ತಿಳಿ ಹೇಳಬೇಕು.
  2. ಬೆರಳು ಚೀಪುವುದಕ್ಕೆ ಕಾರಣವಾದ ಅಂಶಗಳನ್ನು ಮನನ ಮಾಡಬೇಕು. ತಾಯಂದಿರಿಂದ ದೂರವಿದ್ದು ಮಾನಸಿಕವಾಗಿ ಕುಗ್ಗಿದ್ದಲ್ಲಿ, ಮಗುವನ್ನು ತಾಯಂದಿರ ಬಳಿ ಹೆಚ್ಚು ಇರುವಂತೆ ವ್ಯವಸ್ಥೆ ಮಾಡ ತಕ್ಕದ್ದು.
  3. ಬೆರಳು ಚೀಪುವ ಮಕ್ಕಳಿಗೆ, ಚೀಪುವುದನ್ನು ನಿಲ್ಲಿಸುವಂತೆ ಬುದ್ಧಿ ಹೇಳಿ ಚೀಪುವುದನ್ನು, ನಿಲ್ಲಿಸಿದಲ್ಲಿ ಉಡುಗೊರೆ, ಬಹುಮಾನ ನೀಡಿ, ಮಗುವಿನ ಆತ್ಮವಿಶ್ವಾಸ ವೃದ್ಧಿಸುವಂತೆ ಮಾಡಿ.
  4. ಮಗುವನ್ನು ಯಾವತ್ತೂ ಒಂಟಿಯಾಗಿ ಇರದಂತೆ ನೋಡಿಕೊಳ್ಳುತ್ತಾ, ಮಗು ಸದಾ ನಗುತ್ತಾ, ಚಟುವಟಿಕೆಯಿಂದ ಇರುವಂತಹ ಸನ್ನಿವೇಶಗಳನ್ನು ಸೃಷ್ಟಿ ಮಾಡಿ, ಯಾರಾದರೂ ಮಗುವಿನ ಸುತ್ತವಿದ್ದು, ಒಂಟಿತನ ಕಾಡದಂತೆ ಎಚ್ಚರ ವಹಿಸಿ.
  5. ಕೈ ಬೆರಳಿಗೆ ಬಟ್ಟೆ ಕಟ್ಟುವುದು, ಮುಲಾಮು ಹಚ್ಚುವುದು, ಗದರಿಸುವುದು, ಶಿಕ್ಷೆ ನೀಡುವುದು ಮಾಡಲೇಬಾರದು.
  6. ಮೇಲೆ ತಿಳಿಸಿದ ಯಾವುದೇ ಉಪಾಯಗಳಿಗೆ ಸ್ಪಂದಿಸದಿದ್ದಲ್ಲಿ ಮೊದಲು ದಂತ ವೈದ್ಯರ ಬಳಿ ತೋರಿಸಿಕೊಳ್ಳಿ. ಬಾಯಿಗೆ ಬೆರಳು ಹಾಕದಂತೆ ತಡೆಯುವ ಪರಿಕರಗಳನ್ನು ದಂತ ವೈದ್ಯರು ಮಗುವಿನ ಹಲ್ಲಿನ ಅಚ್ಚು ತೆಗೆದು ತಯಾರಿಸಿಕೊಡುತ್ತಾರೆ. ಅದನ್ನು ನಿಯಮಿತವಾಗಿ ದಂತ ವೈದ್ಯರ ಸಲಹೆಯಂತೆ ಧರಿಸಿದರೆ ಮಕ್ಕಳನ್ನು ಈ ಅಭ್ಯಾಸದಿಂದ ಮುಕ್ತಗೊಳಿಸಲು ಬಹುತೇಕ ಸಾಧ್ಯ.
  7. ಮಕ್ಕಳು ಮಾನಸಿಕವಾಗಿ ಕುಗ್ಗಿದ್ದಲ್ಲಿ, ಮಕ್ಕಳ ತಜ್ಞರು ಅಥವಾ ಮನೋವೈದ್ಯರ ಸಹಾಯವನ್ನು ಪಡೆಯಬಹುದು.

ಕೊನೆ ಮಾತು :-

ಗರ್ಭಾವಸ್ಥೆಯ 15ನೇ ವಾರದಲ್ಲಿ ಆರಂಭವಾಗುವ ಈ ಬೆರಳು ಚೀಪುವ ಪ್ರಕ್ರಿಯೆ ಹುಟ್ಟಿನಿಂದ 5 ವರ್ಷದ ವರೆಗೂ ಮುಂದುವರಿಯುತ್ತದೆ. ಈ ಪ್ರಕ್ರಿಯೆ ಒಂದು ಹಂತದ ವರೆಗೆ ಮಾತ್ರ ಅಭ್ಯಾಸ ಎಂದೂ, ಆ ಬಳಿಕವೂ ಮುಂದುವರಿದಲ್ಲಿ ದುರಾಭ್ಯಾಸ ಎಂದೂ ಕರೆಯಲಾಗುತ್ತದೆ. ಬೆರಳು ಚೀಪುವಿಕೆ ಎನ್ನುವುದು ಮಗುವಿನ ಮಾನಸಿಕ, ದೈಹಿಕ ಮತ್ತು ಸರ್ವಾಂಗೀಣ ಬೆಳವಣಿಗೆಗೆ ಅತೀ ಅವಶ್ಯಕ ಎಂದೂ ಸಂಶೋಧನೆಗಳಿಂದ ತಿಳಿದು ಬಂದಿದೆ. ಹಾಗೆಂದ ಮಾತ್ರಕ್ಕೆ ಬೆರಳು ಚೀಪದ ಮಕ್ಕಳು ಸರಿಯಾಗಿ ಬೆಳವಣಿಗೆ ಹೊಂದುವುದಿಲ್ಲ ಎಂದರ್ಥವಲ್ಲ. ಬೆರಳು ಚೀಪುವುದರಿಂದ ಮಗುವಿಗೆ ಸಿಗುವ ಸಾಂತ್ವನ, ನೆಮ್ಮದಿ ಸಂತಸ ಖಂಡಿತವಾಗಿಯೂ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಪೂರಕ ಎಂದರ್ಥ. ಬೆಳೆಯುವ ಮಕ್ಕಳಲ್ಲಿ ತಾಯಂದಿರ ಪ್ರೀತಿ ಮಮತೆ ಸರಿಯಾಗಿ ಸಿಗದೆ ಮಕ್ಕಳಲ್ಲಿ ಅಭದ್ರತೆಯ ಭಾವನೆ ಉಂಟಾಗಿ ಬೆರಳು ಚೀಪುವ ಅಭ್ಯಾಸ ಮುಂದುವರೆದು ದುರಭ್ಯಾಸವಾಗಿ ಮಾರ್ಪಾಡುಗುವ ಹೆಚ್ಚಿನ ಸಾಧ್ಯತೆ ಇರುತ್ತದೆ. ಈ ಕಾರಣದಿಂದಲೇ ಬೆಳೆಯುವ ಮಕ್ಕಳಿಗೆ ತಾಯಂದಿರ ಮಮತೆ, ಪ್ರೀತಿ, ಆರೈಕೆ ಮತ್ತು ಬೆಚ್ಚಗಿನ ಬಿಗಿದಪ್ಪುವಿಕೆ ಅತೀ ಅಗತ್ಯ. ಇದೆಲ್ಲಾ ಎಲ್ಲಾ ಮಕ್ಕಳಿಗೆ ಸರಿಯಾಗಿ ಸಿಕ್ಕಿದಲ್ಲಿ ಆರೋಗ್ಯವಂಥ ಮಗು ಸಮಾಜದ ಆಸ್ತಿಯಾಗುವುದರಲ್ಲಿ ಎರಡು ಮಾತಿಲ್ಲ.

ಡಾ|| ಮುರಲೀ ಮೋಹನ್ ಚೂಂತಾರು
BDS,MDS,DNB,MBA,
FPFA,MOSRCSEd (UK)
Consultant Oral and Maxillofacial Surgeon
www.surakshadental.com
ಸುರಕ್ಷ ದಂತ ಚಿಕಿತ್ಸಾಲಯ
ಹೊಸಂಗಡಿ – 671 323