ಮಾರ್ಚ್ 21 : ಡೌನ್ ಸಿಂಡ್ರೋಮ್ ತಿಳುವಳಿಕಾ ದಿನ

0

ಡೌನ್ ಸಿಂಡ್ರೋಮ್ ಎನ್ನುವುದು ಜನ್ಮಜಾತವಾಗಿ ಕಂಡುಬರುವ ಖಾಯಿಲೆಯಾಗಿದ್ದು, ವಾರ್ಷಿಕವಾಗಿ ಭಾರತ ದೇಶವೊಂದರಲ್ಲಿಯೇ ಸುಮಾರು 1 ಮಿಲಿಯನ್ ಮಕ್ಕಳು ಈ ರೋಗಕ್ಕೆ ತುತ್ತಾಗುತ್ತಾರೆ. 21ನೇ ಕ್ರೋಮೋಸೋಮ್‍ನಲ್ಲಿ ಕಂಡು ಬರುವ ವ್ಯತ್ಯಯದಿಂದ ಈ ರೋಗ ಬರುತ್ತದೆ. ಇಲ್ಲಿ ಒಂದು ಜೋಡಿ ಕ್ರೋಮೋಸೋಮ್‍ಗಳ ಜೊತೆ ಒಂದು ಹೆಚ್ಚಿನ ಕ್ರೋಮೋಸೋಮ್ ಇರುತ್ತದೆ. ಈ ಕಾರಣಕ್ಕಾಗಿಯೇ ಮಾರ್ಚ್ 21 ರಂದು ವಿಶ್ವ ಡೌನ್ ಸಿಂಡ್ರೋಮ್ ತಿಳುವಳಿಕಾ ದಿನ ಎಂದು ಜಾಗತಿಕವಾಗಿ ಆಚರಿಸಿ, ಜನರಲ್ಲಿ ಈ ರೋಗದ ಬಗ್ಗೆ ಇರುವ ತಪ್ಪು ಕಲ್ಪನೆಗಳು ಮತ್ತು ಮಿಥ್ಯಗಳನ್ನು ತೊಡೆದು ಹಾಕಿ, ಜನರಲ್ಲಿ ರೋಗದ ಬಗ್ಗೆ ಜಾಗೃತಿ ಮೂಡಿಸಿ, ಅಂತಹಾ ಮಕ್ಕಳನ್ನು ಸಮಾಜದ ಮುಖ್ಯ ವಾಹಿನಿಗೆ ಸೇರಿಸಿಕೊಳ್ಳುವ ವಿಶೇಷ ಪ್ರಯತ್ನವನ್ನು ಮಾಡುತ್ತಾರೆ. ಗುಣಮಟ್ಟದ ಚಿಕಿತ್ಸೆಯಿಂದ ರೋಗಿಯ ಜೀವನ ಶೈಲಿ ಸುಧಾರಿಸಬಹುದೇ ಹೊರತು, ರೋಗವನ್ನು ಸಂಪೂರ್ಣವಾಗಿ ಗುಣಪಡಿಸಲು ಸಾಧ್ಯವಿಲ್ಲದ ಕಾರಣದಿಂದಾಗಿ ಈ ತಿಳುವಳಿಕಾ ದಿನಕ್ಕೆ ಹೆಚ್ಚಿನ ಮಹತ್ವ ಬಂದಿದೆ.
ಈ ದಿನ ಇಂತಹಾ ನತದೃಷ್ಟ ಮಕ್ಕಳಿಗೆ ನೈತಿಕ ಬೆಂಬಲ ನೀಡಲು ಮಾರ್ಚ್ 3 ರಂದು ನೀಲಿ ಮತ್ತು ಹಳದಿ ಬಣ್ಣದ ಬಟ್ಟೆ ಧರಿಸಲಾಗುತ್ತದೆ. ಮನೆ, ಕಛೇರಿಗಳನ್ನು ನೀಲಿ ಹಾಗೂ ಹಳದಿ ಬಣ್ಣಗಳಿಂದ ಸಿಂಗರಿಸಲಾಗುತ್ತದೆ. ನೀಲಿ ಮತ್ತು ಹಳದಿ ಬಣ್ಣದ ಬಲೂನ್‍ಗಳಿಂದ ಅಲಂಕರಿಸಲಾಗುತ್ತದೆ. ಈ ದಿನ ಈ ರೋಗದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಜಾಗೃತಿ ಜಾಥಾ, ವಾಕಾಥಾನ್, ಮ್ಯಾರಾಥಾನ್‍ಗಳನ್ನು ಆಯೋಜಿಸಿ ಜನರಿಗೆ ಈ ರೋಗದ ತಡೆಗಟ್ಟುವಿಕೆ ಬಗ್ಗೆಯೂ ಅರಿವು ಮೂಡಿಸಲಾಗುತ್ತದೆ. ಅಮೇರಿಕಾ ದೇಶವೊಂದರಲ್ಲಿಯೇ ಸುಮಾರು 4,00,000 ಕುಟುಂಬಗಳು ಈ ರೋಗದಿಂದ ಭಾದಿತರಾಗಿದ್ದು ಮತ್ತು ವಾರ್ಷಿಕವಾಗಿ ಸುಮಾರು 6000 ಮಕ್ಕಳು ಈ ರೋಗದೊಂದಿಗೆ ಜನಿಸುತ್ತಾರೆ. ಹುಟ್ಟುವ ಪ್ರತಿ 700 ಮಕ್ಕಳಲ್ಲಿ ಒಬ್ಬರು ಈ ರೋಗದಿಂದ ಬಳಲುತ್ತಿದ್ದಾರೆ. ಯಾವುದೇ ನಿರ್ದಿಷ್ಟ ಕಾರಣವಿಲ್ಲದ ಈ ರೋಗಕ್ಕೆ, ಯಾವ ಕಾರಣದಿಂದಾಗಿ ಈ ರೋಗ ಬರುತ್ತದೆ ಎನ್ನುವುದರ ಬಗ್ಗೆ ಹೆಚ್ಚಿನ ಸಂಶೋಧನೆಗಳು ಈಗಲೂ ನಡೆಯುತ್ತಿದೆ.

ಏನಿದು ಡೌನ್ ಸಿಂಡ್ರೋಮ್?

ನಮ್ಮ ದೇಹದ ಪ್ರತಿಯೊಂದು ಜೀವಕೋಶದ ಒಳಗೆ ಒಂದು ನ್ಯೂಕ್ಲಿಯಸ್ ಇರುತ್ತದೆ. ಇದರಲ್ಲಿ ವಂಶವಾಹಕವಾಗಿ ಬರುವ ಗುಣಗಳು, ಜೀನ್ ಅಥವಾ ವಂಶವಾಹಿನಿಗಳಲ್ಲಿ ಅಡಕವಾಗಿರುತ್ತದೆ. ಈ ವಂಶವಾಹಿನಿಗಳಲ್ಲಿ ವಂಶ ಪಾರಂಪರ್ಯವಾಗಿ ಹೆತ್ತವರಿಂದ ಬರುವ ಎಲ್ಲಾ ಗುಣ, ನಡತೆ, ರೋಗ ರುಜಿನಗಳು ಈ ಕ್ರೋಮೋಸೋಮ್ ಅಥವಾ ವರ್ಣತಂತು ಎಂಬ ರಾಡ್ ರೀತಿಯ ರಚನೆಯಲ್ಲಿ ಹುದುಗಿರುತ್ತದೆ. ಸಾಮಾನ್ಯವಾಗಿ ಪ್ರತಿ ಜೀವಕೋಶದ ನ್ಯೂಕ್ಲಿಯಸ್‍ನಲ್ಲಿ 23 ಜೊತೆ ವರ್ಣತಂತು ಇರುತ್ತದೆ. ಇದರಲ್ಲಿ ಅರ್ಧದಷ್ಟು ತಂದೆಯಿಂದ ಮತ್ತು ಉಳಿದರ್ಧ ತಾಯಿಯಿಂದ ಬಳುವಳಿಯಾಗಿ ಬಂದಿರುತ್ತದೆ. ಆದರೆ ಈ ಜೀವಕೋಶದ ವಿಭಜನೆ ಹಳಿ ತಪ್ಪಿ, ಒಂದು ಹೆಚ್ಚಿನ ವರ್ಣತಂತು (ಅದು ಪೂರ್ತಿ ಅಥವಾ ಅರ್ಧ ಬೆಳೆದ ವರ್ಣತಂತು) 21ನೇ ಜೋಡಿಯ ಕ್ರೋಮೋಸೋಮ್ ಜೊತೆ ಸೇರಿಕೊಂಡಾಗ “ಡೌನ್ ಸಿಂಡ್ರೋಮ್” ರೋಗ ಬರುತ್ತದೆ ಎಂದು ತಿಳಿದು ಬಂದಿದೆ.

1866ರಲ್ಲಿ, ಇಂಗ್ಲೇಡ್ ದೇಶದ ಪಿಸಿಷಿಯನ್ ಜಾನ್ ಲಾಂಗ್‍ಡನ್ ಡೌನ್ ಎಂಬಾತ ಈ ರೋಗದ ಬಗ್ಗೆ ಪರಿಪೂರ್ಣ ವಿವರಣೆ ನೀಡಿದ ಕಾರಣದಿಂದ ಈ ರೋಗಕ್ಕೆ ಆತನ ಹೆಸರೇ ತಳುಕುಹಾಕಿಕೊಂಡಿದೆ. ಆತ ರೋಗದ ಲಕ್ಷಣಗಳ ಬಗ್ಗೆ ವಿವರಣೆ ನೀಡಿ ಡೌನ್ ಸಿಂಡ್ರೋಮ್ ಎನ್ನುವುದು ಒಂದು ಇತರ ರೋಗಕ್ಕಿಂತ ಭಿನ್ನವಾದ ಜನ್ಮಜಾತ ರೋಗ ಎಂದು ಕಂಡುಹಿಡಿದ. 1959 ರಲ್ಲಿ ಫ್ರೆಂಚ್ ಫಿಸಿಷಿಯನ್ ಜೆರೋಮ್ ಲಿಜೂನ್ ಎಂಬಾತ ಡೌನ್ ಸಿಂಡ್ರೋಮ್ ರೋಗಿಗಳಲ್ಲಿ 46 ಕ್ರೋಮೋಸೋಮ್ ಬದಲಾಗಿ 47 ಕ್ರೋಮೋಸೋಮ್ ಹೊಂದಿರುತ್ತಾರೆ ಎಂದು ಕಂಡುಹಿಡಿದ. ನಂತರ 2000ನೇ ಇಸವಿಯಲ್ಲಿ ವಿಜ್ಞಾನಿಗಳು 21ನೇ ಕ್ರೋಮೋಸೋಮ್‍ನಲ್ಲಿ ಇರುವ ಎಲ್ಲಾ 329 ಜೀನ್‍ಗಳ ಬಗ್ಗೆ ಮಾಹಿತಿ ಪಡೆದರು. ಇದರಿಂದ ಈ ರೋಗದ ಬಗ್ಗೆ ಇನ್ನೂ ಹೆಚ್ಚಿನ ಸಂಶೋಧನೆಗಳು ನಡೆಸಲು ಅನುಕೂಲ ಆಗಿದೆ ಮತ್ತು ಈಗಲೂ ಸಂಶೋಧನೆಗಳು ನಡೆಯುತ್ತಿದೆ.
ಕ್ರೋಮೋಸೋಮ್ ಎಂದರೆ ವರ್ಣ ತಂತುಗಳ ಗುಚ್ಚವಾಗಿರುತ್ತದೆ. ಈ ಕ್ರೋಮೋಸೋಮ್ ಹುಟ್ಟುವ ಮಗುವಿನ ದೇಹದ ಆಕೃತಿ, ಆಕಾರ ಮತ್ತು ಬೆಳವಣಿಗೆ ಎಲ್ಲವನ್ನು ನಿರ್ಧರಿಸುತ್ತದೆ. ಡೌನ್ ಸಿಂಡ್ರೋನ್ ಇರುವ ಮಕ್ಕಳಿಗೆ 21 ನೇ ಕ್ರೋಮೋಸೋಮ್‍ನ ಭಾಗದಲ್ಲಿ ಒಂದು ಹೆಚ್ಚಿನ ಕ್ರೋಮೋಸೋನ್ ಇರುತ್ತದೆ ಇದನ್ನೇ ಟ್ರೈಸೋಮಿ ಎನ್ನಲಾಗುತ್ತದೆ. ಈ ಕಾರಣದಿಂದ ಡೌನ್ ಸಿಂಡ್ರೋಮ್ ಅನ್ನು ಟ್ರೈಸೋಮಿ 21 ಎಂದೂ ಕರೆಯುತ್ತಾರೆ. ಈ ಹೆಚ್ಚಾದ ಅನಗತ್ಯ ಕ್ರೋಮೋಸೋಮ್ ಮಗುವಿನ ತಲೆ, ದೇಹ ಮತ್ತು ಮೆದುಳಿನ ಬೆಳವಣಿಗೆಯ ಮೇಲೆ ಪ್ರಭಾವ ಬೀರಿ ಮಗುವಿನ ಮಾನಸಿಕ ಮತ್ತು ದೈಹಿಕ ಬೆಳವಣಿಗೆಯ ಹಾದಿಯನ್ನು ತಪ್ಪಿಸುತ್ತದೆ. ಡೌನ್ ಸಿಂಡ್ರೋಮ್ ಇರುವ ಎಲ್ಲಾ ಮಕ್ಕಳು ನೋಡಲು ದೈಹಿಕವಾಗಿ ಒಂದೇ ರೀತಿ ಕಂಡರೂ, ಅವರ ಚತುರತೆ ಮತ್ತು ವಿಚಾರ ಶಕ್ತಿ ಭಿನ್ನವಾಗಿರುತ್ತದೆ. ಈ ಮಕ್ಕಳ IQ ಅಂದರೆ ಬುದ್ಧಿಮತ್ತೆಯ ಅನುಪಾತ ಇತರ ಸಹಜ ಮಕ್ಕಳಿಗಿಂತ ಕಡಿಮೆ ಇರುತ್ತದೆ ಮತ್ತು ಈ ಮಕ್ಕಳು ಇತರ ಮಕ್ಕಳಿಗಿಂತ ಬಹಳ ನಿಧಾನವಾಗಿ ಮಾತನಾಡುತ್ತಾರೆ ಮತ್ತು ಸಂವಹನೆ ಮಾಡುತ್ತಾರೆ.

ಲಕ್ಷಣಗಳು:

  1. ಮುಖ ಚಪ್ಪಟೆಯಾಗಿರುತ್ತದೆ. ಮೂಗಿನ ಬೇರಿನ ಭಾಗದಲ್ಲಿ ಮುಖ ಬಹಳ ಚಪ್ಪಟೆಯಾಗಿ ವಿಭಿನ್ನವಾಗಿರುತ್ತದೆ.
  2. ಬಾದಾಮಿ ಆಕಾರದ ಕಣ್ಣುಗಳು ಮತ್ತು ಅವುಗಳ ಮೇಲ್ಭಾಗಕ್ಕೆ ತೆರೆದುಕೊಂಡಿರುತ್ತದೆ.
  3. ಸಣ್ಣ ಕಿವಿಗಳು ಮತ್ತು ಗಿಡ್ಡದಾದ ಕೊರಳು ಇರುತ್ತದೆ.
  4. ದೊಡ್ಡದಾದ ನಾಲಗೆ ಇದ್ದು, ಅದು ಬಾಯಿಯಿಂದ ಹೊರ ಭಾಗಕ್ಕೆ ಚೆಲ್ಲುತ್ತಿರುತ್ತದೆ.
  5. ಸಣ್ಣದಾದ ಕೈಗಳು ಮತ್ತು ಕಾಲುಗಳು
  6. ಚಿಕ್ಕದಾದ ಬಿಳಿ ಕಲೆಗಳು ಕಣ್ಣಿನ ಐರಿಸ್ ಭಾಗ ( ಬಣ್ಣದ ಭಾಗ)ದಲ್ಲಿ ಇರುತ್ತದೆ.
  7. ಗಂಟುಗಳು ಬಹಳ ಸಡಿಲವಾಗಿರುತ್ತದೆ, ಸ್ನಾಯುಗಳು ಶಕ್ತಿ ಹೀನವಾಗಿರುತ್ತದೆ
  8. ಮಗುವಿನ ಎತ್ತರ ಬಹಳ ಚಿಕ್ಕದಾಗಿ ಕುಬ್ಜವಾಗಿರುತ್ತದೆ
  9. ಅಂಗೈಯಲ್ಲಿ ಗೆರೆಗಳು ಇರುವುದಿಲ್ಲ, ಒಂದೇ ಒಂದು ಗೆರೆ ಇರುತ್ತದೆ
  10. ಕೈ ಬೆರಳುಗಳು ಬಹಳ ಚಿಕ್ಕದಾಗಿರುತ್ತದೆ ಮತ್ತು ಗುಲಾಬಿ ಬಣ್ಣದ್ದಾಗಿರುತ್ತದೆ ಹಾಗೂ ಹೆಬ್ಬೆರಳುಗಳ ಕಡೆ ವಾಲಿರುತ್ತದೆ.

ಕಾರಣಗಳು ಏನು?

  1. ಗರ್ಭಧರಿಸುವ ಸಂದರ್ಭದಲ್ಲಿ ದಂಪತಿಗಳ ಮನಸ್ಸಿನ ಮೇಲೆ ವಿಪರೀತವಾದ ಒತ್ತಡದಿಂದಾಗಿ ಜೀವಕೋಶಗಳ ವಿಭಜನೆಯ ಹಳಿ ತಪ್ಪಿ, ಒಂದು ಹೆಚ್ಚು ಕ್ರೋಮೋಸೋಮ್ 21ನೇ ಜೋಡಿ ಕ್ರೋಮೋಸೋಮ್‍ಗಳ ಜೊತೆ ಸೇರಿ ಈ ಡೌನ್ ಸಿಂಡ್ರೋಮ್ ಬರುತ್ತದೆ ಎಂದು ಅಂದಾಜಿಸಲಾಗಿದೆ. ಡೌನ್ ಸಿಂಡ್ರೋಮ್ ಫೆಡರೇಶನ್ ಆಫ್ ಇಂಡಿಯಾ ಇದರ ಸ್ಥಾಪಕ ಅಧ್ಯಕ್ಷೆ ಸುರೇಖಾ ರಾಮಚಂದ್ರನ್ ಅವರು ತಮ್ಮ ಮಗಳು ಡೌನ್ ಸಿಂಡ್ರೋಮ್‍ನಿಂದ ಜನಿಸಿದ ಬಳಿಕ ಈ ವಿಚಾರದ ಬಗ್ಗೆ ಬಹಳಷ್ಟು ಅಧ್ಯಯನ ಮಾಡಿ, ಗಂಡ ಹೆಂಡಿರ ಸಮಾಗಮದ ಸಮಯದ ಒತ್ತಡವೇ ಇದಕ್ಕೆ ಪ್ರಮುಖ ಕಾರಣ ಎಂದು ಪ್ರತಿಪಾದಿಸಿದ್ದಾರೆ. ಅವರ ಪ್ರಕಾರ ಹುಟ್ಟುವ ಪ್ರತಿ 750 ರಲ್ಲಿ ಒಂದು ಮಗು ಈ ರೋಗಕ್ಕೆ ತುತ್ತಾಗುತ್ತಾರೆ ಮತ್ತು 90 ಶೇಕಡಾ ಮಕ್ಕಳು ಅವರ ತಾಯಂದಿರ ಎರಡನೇ ಮಗು ಆಗಿರುತ್ತದೆ ಎಂದು ತಮ್ಮ ಅಧ್ಯಯನಗಳಿಂದ ತಿಳಿಸಿದ್ದಾರೆ. ಆರಂಭಿಕ ಹಂತದಲ್ಲಿಯೇ ಇಂತಹಾ ಮಕ್ಕಳನ್ನು ಗುರುತಿಸಿ ಅವರ ಹೃದಯ, ಕಣ್ಣು, ಕಿವಿ ಮತ್ತು ಹೊಟ್ಟೆಗಳ ಬಗ್ಗೆ ಕೂಲಂಕುಷ ಅಧ್ಯಯನ ನಡೆಸಿ, ಸರಿಯಾದ ಮಾರ್ಗದರ್ಶನ ಹಾಗೂ ಚಿಕಿತ್ಸೆ ನೀಡಿದಲ್ಲಿ ಅಂತಹಾ ಮಕ್ಕಳು ಇತರ ಮಕ್ಕಳಂತೆ ಸಹಜ ಜೀವನ ನಡೆಸಲು ಸಾಧ್ಯ ಎಂದೂ ತಿಳಿಸಿರುತ್ತಾರೆ.
  2. ಮಗು ಹುಟ್ಟುವ ಸಮಯದಲ್ಲಿ ತಾಯಿಯ ವಯಸ್ಸು 35ಕ್ಕಿಂತ ಜಾಸ್ತಿ ಇದ್ದಲ್ಲಿ ಈ ಡೌನ್ ಸಿಂಡ್ರೋಮ್ ಬರುವ ಸಾಧ್ಯತೆ ಹೆಚ್ಚು ಎಂದು ಸಾಬೀತಾಗಿದೆ. 35 ವರ್ಷದಲ್ಲಿ ತಾಯಿಯಾದಾಗ ಪ್ರತಿ 350 ರಲ್ಲಿ ಒಂದು, 40 ವರ್ಷದಲ್ಲಿ ತಾಯಿಯಾದಾಗ ಪ್ರತಿ 100ರಲ್ಲಿ ಒಂದು ಮತ್ತು 45 ವರ್ಷದ ತಾಯಿಯಾದಾಗ ಪ್ರತಿ 30 ರಲ್ಲಿ ಒಬ್ಬರಿಗೆ ಈ ರೋಗ ಬರುವ ಸಾಧ್ಯತೆ ಇರುತ್ತದೆ ಎಂದು ತಿಳಿದು ಬಂದಿದೆ.
  3. ವಾತಾವರಣದ ಕಾರಣಗಳು ಮತ್ತು ತಂದೆ ತಾಯಂದಿರ ( ಗರ್ಭಧರಿಸುವ ಸಮಯದಲ್ಲಿನ) ಚಟುವಟಿಕೆಗಳು ಕೂಡಾ ಈ ರೋಗಕ್ಕೆ ಕಾರಣವಾಗುತ್ತದೆ ಎಂದು ಅಂದಾಜಿಸಲಾಗಿದ್ದು, ಯಾವುದೇ ಸಂಶೋಧನೆಗಳಿಂದ ಸಾಬೀತಾಗಿರುವುದಿಲ್ಲ.

ಕೊನೆಮಾತು:

ಡೌನ್ ಸಿಂಡ್ರೋಮ್ ಎನ್ನುವುದು ಜನ್ಮಜಾತ ರೋಗವಾಗಿದ್ದರೂ ಅನುವಂಶಿಕ ರೋಗವಲ್ಲ. ಕೇವಲ 1 ಶೇಕಡಾ ಮಕ್ಕಳಲ್ಲಿ ಮಾತ್ರ ಈ ರೋಗ ಅನುವಂಶಿಕವಾಗಿ ಬರುತ್ತದೆ. ಅಂದರೆ ತಂದೆ ತಾಯಂದಿರಿಂದ ಮಕ್ಕಳಿಗೆ ಬಳುವಳಿಯಾಗಿ ದೊರಕುತ್ತದೆ. ಮಗು ತಾಯಿಯ ಗರ್ಭದಲ್ಲಿರುವಾಗಲೇ ಈ ರೋಗವನ್ನು ಪತ್ತೆ ಹಚ್ಚಲು ಸಾಧ್ಯವಿದೆ. ಅಮ್ನಿಯೋ ಸೆಂಟಿಸಿಸ್ ಎಂಬ ಪರೀಕ್ಷೆ ಮುಖಾಂತರ ಗರ್ಭಕೋಶದ ಒಳಗಿನ ಭ್ರೂಣ ದ್ರವ್ಯವನ್ನು ಪಡೆದು ಅದರಲ್ಲಿ ಡೌನ್ ಸಿಂಡ್ರೋಮ್ ಮಾರ್ಕರ್ ಪತ್ತೆ ಹಚ್ಚಿ ರೋಗ ಪತ್ತೆ ಹಚ್ಚಲಾಗುತ್ತದೆ. ಅದೇ ರೀತಿ ಕೊರಿಯೋನಿಕ್ ವಿಲ್ಲಸ್ ಸಾಂಪ್ಲಿಂಗ್ (CVS) ಎಂಬ ಪರೀಕ್ಷೆ ಮುಖಾಂತರ ರೋಗ ಪತ್ತೆ ಹಚ್ಚಲು ಸಾಧ್ಯವಿದೆ. ಹೆಚ್ಚಾಗಿ 35 ವರ್ಷ ದಾಟಿದ ಬಳಿಕ ಗರ್ಭಧರಿಸಿದ ಮಹಿಳೆಯಲ್ಲಿ ಹೆಚ್ಚು ಮುತುವರ್ಜಿಯಿಂದ ಈ ಪರೀಕ್ಷೆ ಮಾಡಲಾಗುತ್ತದೆ. ಈ ಎರಡೂ ಪರೀಕ್ಷೆಗಳಲ್ಲಿ ಪರೀಕ್ಷೆ ಕಾರಣದಿಂದ ಎಬಾರ್ಷನ್ ಅಂದರೆ ಮಗು ಸತ್ತು ಹೋಗುವ ಸಾಧ್ಯತೆ ಒಂದು ಶೇಕಡಾ ಇರುತ್ತದೆ. ಆದರೆ ಈ ಎರಡೂ ಪರೀಕ್ಷೆಗಳ ಶೇಕಡಾ 100 ರಷ್ಟು ಪರಿಪೂರ್ಣ ಪರೀಕ್ಷೆಯಾಗಿದ್ದು, ರೋಗ ಪತ್ತೆ ಹಚ್ಚಲು ಸಾಧ್ಯವಿದೆ. ಅಮ್ನಿಯೋ ಸೆಂಟಿಸಿಸ್ ಪರೀಕ್ಷೆಯನ್ನು ಎರಡನೇ ಟ್ರೆಮಿಸ್ಟರ್ ಅಂದರೆ 15 ರಿಂದ 20ನೇ ಗರ್ಭಧರಿಸಿದ ವಾರದಲ್ಲಿ ನಡೆಸಲಾಗುತ್ತದೆ ಮತ್ತು CVS ಪರೀಕ್ಷೆಯನ್ನು ಮೊದಲನೇ ಟ್ರೆಮಿಸ್ಟರ್‍ನಲ್ಲಿ 14ನೇ ಗರ್ಭಧರಿಸಿದ ವಾರದಲ್ಲಿ ನಡೆಸಲಾಗುತ್ತದೆ. ಮೊದಲೆಲ್ಲಾ ಡೌನ್ ಸಿಂಡ್ರೋಮ್ ಇರುವ ಮಕ್ಕಳು 10 ರಿಂದ 20 ವರ್ಷದ ಒಳಗೆ ಮರಣ ಹೊಂದುತ್ತಿದ್ದರು. ಆದರೆ ಈ ಮುಂದುವರಿದ ತಂತ್ರಜ್ಞಾನ , ವೈದ್ಯರ ಲಭ್ಯತೆ, ಆಧುನಿಕ ಸಂಶೋಧನೆ , ಹೊಸ ಹೊಸ ಔಷಧಿಗಳ ಲಭ್ಯತೆ ಮುಂತಾದ ಕಾರಣದಿಂದ ಈ ರೋಗ ಇದ್ದರೂ 50 ರಿಂದ 60 ವರ್ಷದ ವರೆಗೆ ಬದುಕಲು ಸಾಧ್ಯವಾಗಿದೆ. ಈ ನಿಟ್ಟಿನಲ್ಲಿ ಸಮಾಜ ಮತ್ತು ವೈದ್ಯರಿಗೆ ವಿಶೇಷ ಜವಾಬ್ದಾರಿ ಇದ್ದು, ಇಂತಹಾ ಮಕ್ಕಳಿಗೆ ವಿಶೇಷ ಮುತುವರ್ಜಿ ವಹಿಸಿ, ಚಿಕಿತ್ಸೆ ನೀಡಿ, ಆರೈಕೆ ಮಾಡಿ, ಮಾನಸಿಕ ಧೈರ್ಯ ಸ್ಥೈರ್ಯ ನೀಡಿ, ಅವರನ್ನು ಸಮಾಜದ ಮುಖ್ಯ ವಾಹಿನಿಗೆ ತರುವ ಕೆಲಸವನ್ನು ಮಾಡಬೇಕಾಗಿದೆ. ಹಾಗೆ ಮಾಡಿದರೆ ಮಾತ್ರ ಈ ಡೌನ್ ಸಿಂಡ್ರೋಮ್ ದಿನಾಚರಣೆ ಹೆಚ್ಚಿನ ಮೌಲ್ಯ ಮತ್ತು ಮೆರುಗು ಸಿಕ್ಕಿ, ಆಚರಣೆ ಅರ್ಥಪೂರ್ಣವಾಗಬಹುದು.

ಡಾ|| ಮುರಲೀ ಮೋಹನ್ ಚೂಂತಾರು