ಬೆಳ್ಳಾರೆ: ನೆಟ್ಟಾರು ನವಗ್ರಾಮ ಬಳಿ ಧರೆ ಕುಸಿತ ಸ್ಥಳಕ್ಕೆ ಗ್ರಾ. ಪಂ ಅಧ್ಯಕ್ಷರ ಭೇಟಿ

0


ನೆಟ್ಟಾರು ನವಗ್ರಾಮದ ಜಯರಾಮ ಉಮಿಕ್ಕಳ ಅವರ ಮನೆಯ ಬಳಿ ಇತ್ತೀಚೆಗೆ ಸುರಿದ ಮಳೆಗೆ ಧರೆ ಕುಸಿತವಾಗಿದ್ದು ಸ್ಥಳಕ್ಕೆ ಜುಲೈ ಒಂದರಂದು ಬೆಳ್ಳಾರೆ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ನಮಿತಾ ಎಲ್ ರೈ ಭೇಟಿ ನೀಡಿದರು. ಬರೆ ಕುಸಿತದಿಂದ ಇನ್ನಷ್ಟು ಹಾನಿ ತಪ್ಪಿಸಲು ತಾತ್ಕಾಲಿಕವಾಗಿ ಕುಸಿತ ಜಾಗಕ್ಕೆ ಪಂಚಾಯತ್ ಅಧ್ಯಕ್ಷರ ಸೂಚನೆಯಂತೆ ನಿನ್ನೆ ಟಾರ್ಪಲ್ ಹಾಕಿ ಮುಚ್ಚಲಾಗಿದೆ.

ಸ್ಥಳದಲ್ಲಿ ನೆಟ್ಟಾರು ವಾರ್ಡು ಸದಸ್ಯೆ ಶ್ರೀಮತಿ ಶ್ವೇತಾ ಶೈಲೇಶ್, ಲೋಹಿತ್ ರೈ ಹಾಗೂ ಬಿಜೆಪಿ ಸ್ಥಾನೀಯ ಸಮಿತಿ ಅಧ್ಯಕ್ಷರಾದ ಪ್ರವೀಣ್ ಚಾವಡಿಬಾಗಿಲು ಹಾಜರಿದ್ದರು. ಕಳೆದ ಬಾರಿಯೂ ಕಾಲನಿಯಲ್ಲಿ ಭೂ ಕುಸಿತ ಸಂಭವಿಸಿತ್ತು.ಈ ನಿವೇಶನಗಳನ್ನು ಹಂಚಿಕೆ ಮಾಡುವ ಸಂದರ್ಭದಲ್ಲಿ ಅವೈಜ್ಞಾನಿಕವಾಗಿ ಮಾಡಲಾಗಿದ್ದು ಕನಿಷ್ಠ ಮೂಲಸೌಕರ್ಯದ ಸೂಕ್ತ ರಸ್ತೆ ನಿರ್ಮಾಣವನ್ನು ಸಹ ಮಾಡಿರಲಿಲ್ಲ. ಇದರ ಜೊತೆಗೆ ಇದೀಗ ಈ ಕಾಲನಿಯ ಜನರು ಧರೆ ಕುಸಿತದ ಭೀತಿಯನ್ನು ಎದುರಿಸುತ್ತಿದ್ದಾರೆ.ಇಲ್ಲಿರುವ ರಸ್ತೆ ಹಾಗೂ ತಡೆಗೋಡೆ ನಿರ್ಮಾಣಕ್ಕೆ ತುರ್ತು ಅನುದಾನದ ಅಗತ್ಯವಿದ್ದು ಕೂಡಲೇ ಸಂಬಂಧ ಇಲಾಖಾ ಅಧಿಕಾರಿಗಳು ಗಮನ ಹರಿಸಿ ಸಂಭಾವ್ಯ ಅಪಾಯವನ್ನು ತಪ್ಪಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಪಂಚಾಯತ್ ಅಧ್ಯಕ್ಷರು ಮನವಿ ಮಾಡಿದ್ದಾರೆ.

ಸ್ಥಳಕ್ಕೆ ಮಾನ್ಯ ಶಾಸಕರಾದ ಕುಮಾರಿ ಭಾಗೀರಥಿ ಮುರುಳ್ಯರವರು ಭೇಟಿ ನೀಡಿದ್ದು ಅವರಿಗೂ ಸಹ ಮನವಿ ನೀಡಲಾಗುವುದು ಎಂದು ಸ್ಥಳೀಯ ನಿವಾಸಿಗಳಿಗೆ ಅಧ್ಯಕ್ಷರು ತಿಳಿಸಿದ್ದಾರೆ.