ಇಂದು (ಏ. 7-8)ಬೆಳ್ಳಾರೆ ಒತ್ತೆಕೋಲ

0

ಬೆಳ್ಳಾರೆಯ ಅಜಪಿಲ‌ ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನದಲ್ಲಿ ಶ್ರೀ ಮಹಾವಿಷ್ಣುಮೂರ್ತಿ ದೈವದ ಒತ್ತೆಕೋಲವು (ಏ. 7-8 ರಂದು) ಇಂದು ಮತ್ತು ನಾಳೆ ನಡೆಯಲಿದೆ.
ಏ. 7ರಂದು ಸಂಜೆ 6.00 ಗಂಟೆಗೆ ಭಂಡಾರ ತೆಗೆದು ಬಳಿಕ ಮೇಲೇರಿಗೆ ಅಗ್ನಿಸ್ಪರ್ಶ ನಡೆಯಲಿದೆ.

ರಾತ್ರಿ 8.00 ಗಂಟೆಗೆ ಅಜಪಿಲ ಶ್ರೀ ಮಹಾವಿಷ್ಣುಮೂರ್ತಿ ಸೇವಾ‌ ಸಮಿತಿ ಬೆಳ್ಳಾರೆ ಇದರ ಅಧ್ಯಕ್ಷ ಚಂದ್ರಹಾಸ ಮಣಿಯಾಣಿಯವರ ಅಧ್ಯಕ್ಷತೆಯಲ್ಲಿ ಧಾರ್ಮಿಕ ಸಭಾ‌ ಕಾರ್ಯಕ್ರಮ ನಡೆಯಲಿದ್ದು, ತುಳುನಾಡ ದೈವಾರಾಧನೆ ಮತ್ತು ಸಾಂಸ್ಕೃತಿಕ ವಿಮರ್ಶಕರಾದ ತಮ್ಮಣ್ಣ ಶೆಟ್ಟಿಯವರು ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಬೆಳ್ಳಾರೆ ಇದರ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುರೇಶ್ ಕುಮಾರ್ ಶೆಟ್ಟಿ ಪನ್ನೆಗುತ್ತು, ಬೆಳ್ಳಾರೆ ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ರಾಮಕೃಷ್ಣ ಭಟ್ ಕುರುಂಬುಡೇಲು ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸಮಿತಿಯ ಗೌರವಾಧ್ಯಕ್ಷ ಆನಂದ ರೈ ಪುಡ್ಕಜೆ ಮತ್ತು ಬೆಳ್ಳಾರೆ ಸ್ನೇಹಿತರ ಕಲಾ ಸಂಘದ ಅಧ್ಯಕ್ಷ ಪದ್ಮನಾಭ ಗೌಡ ಬೀಡು ವೇದಿಕೆಯಲ್ಲಿ ಗೌರವ ಉಪಸ್ಥಿತರಿರಲಿದ್ದಾರೆ.

ರಾತ್ರಿ 8.30ರಿಂದ ಅನ್ನ ಸಂತರ್ಪಣೆ ನಡೆದು ರಾತ್ರಿ 10.00 ಗಂಟೆಯಿಂದ ಶ್ರೀ ಮಹಾವಿಷ್ಣುಮೂರ್ತಿ ದೈವದ ಕುಳಿಚಟ್ಟು ನಡೆಯಲಿದೆ. ಬಳಿಕ ಶ್ರೀ ದೇಯಿ ಬೈದೆತಿ ಕೃಪಾಪೋಷಿತ ಯಕ್ಷಗಾನ ಮಂಡಳಿ ಗೆಜ್ಜೆಗಿರಿ ಮೇಳ ಇವರಿಂದ ಯಕ್ಷಗಾನ ಬಯಲಾಟ ಕರಿಕಲ್ಲ ಬೈರವೆ ನಡೆಯಲಿದೆ. ಏ. 8 ರಂದು ಪ್ರಾತಃಕಾಲ 5.00 ಗಂಟೆಗೆ ಶ್ರೀ ಮಹಾವಿಷ್ಣುಮೂರ್ತಿ ದೈವದ ಅಗ್ನಿ ಪ್ರವೇಶ, ಶ್ರೀ ಮಹಾಲಿಂಗೇಶ್ವರ ದೇವರ ಭೇಟಿ ನಂತರ ಮಾರಿಕಳ ನಡೆದು ಪ್ರಸಾದ ವಿತರಣೆ ನಡೆಯಲಿದೆ. ಬಳಿಕ ಮುಳ್ಳು ಗುಳಿಗ ದೈವದ ಕೋಲ ನಡೆಯಲಿದೆ.