ಪೆರ್ನಾಜೆಯಲ್ಲಿ ಮತ್ತೆ ಕಾಡಾನೆ ಹಾವಳಿ

0

ಪುತ್ತೂರು ಗ್ರಾಮಾಂತರ: ನೆಟ್ಟಣಿಗೆ ಮುಡೂರು ಗ್ರಾಮದ ಪೆರ್ನಾಜೆ ವ್ಯಾಪ್ತಿಯಲ್ಲಿ ೪ ತಿಂಗಳ ಬಳಿಕ ಮತ್ತೆ ಕಾಡಾನೆ ಹಾವಳಿ ಆರಂಭಗೊಂಡಿದೆ. ಮಂಗಳವಾರ ರಾತ್ರಿ ವೇಳೆ ಇಬ್ಬರು ಕೃಷಿಕರ ತೋಟಗಳಿಗೆ ನುಗ್ಗಿ ಕೃಷಿ ಹಾನಿ ಮಾಡುವ ಮೂಲಕ ಮತ್ತೆ ಜನತೆಗೆ ಆತಂಕ ಸೃಷ್ಟಿಸಿದೆ.
ಪೆರ್ನಾಜೆಯ ಕೃಷಿಕ ಕುಮಾರ್ ಪೆರ್ನಾಜೆ ಅವರ ತೋಟಕ್ಕೆ ಮಂಗಳವಾರ ರಾತ್ರಿ ನುಗ್ಗಿರುವ ಕಾಡಾನೆ ೩ ಬಾಳೆಗಿಡಗಳನ್ನು ಮುರಿದು ತಿಂದು ನಾಶಗೊಳಿಸಿದೆ. ಅಲ್ಲದೆ ದೀವಿ ಹಲಸು ಮರದ ತೊಗಟೆಗಳನ್ನು ಕಿತ್ತು ತಿಂದು ಹಾನಿಗೊಳಿಸಿದೆ. ಪೆರ್ನಾಜೆಯ ರಾಘವೇಂದ್ರ ಭಟ್ ತೋಟಕ್ಕೆ ಲಗ್ಗೆಯಿಟ್ಟ ಕಾಡಾನೆ ೧೦ ಬಾಳೆಗಿಡಗಳನ್ನು ನಾಶ ಮಾಡಿವೆ. ದೀವಿ ಹಲಸು ಮರಕ್ಕೆ ಹಾನಿಗೊಳಿಸಿದೆ. ಈ ಭಾಗದಲ್ಲಿ ಲಕ್ಷಾಂತರ ಹಣ ವ್ಯಯಿಸಿ ಅರಣ್ಯ ಇಲಾಖೆ ಸೋಲಾರ್ ಬೇಲಿ ಅಳವಡಿಸಿದ್ದರೂ ಕಾಡಾನೆ ಈ ಬೇಲಿಯನ್ನು ದಾಟಿ ಬಂದಿರುವುದು ಕೃಷಿಕರ ನಿದ್ದೆಗೆಡಿಸಿದೆ. ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ಪಾಣಾಜೆ ವಲಯ ಅರಣ್ಯಾಧಿಕಾರಿ ಮದನ್ ಹಾಗೂ ಇಲಾಖಾ ಸಿಬ್ಬಂದಿ ಬುಧವಾರ ಬೆಳಗ್ಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.