ಸುಳ್ಯ‌ ಗೌಡರ ಯುವ ಸೇವಾ ಸಂಘದ ವತಿಯಿಂದ ಮೇ 24 ರಂದು ಸಾಮೂಹಿಕ ಲಕ್ಷ್ಮೀಸಹಿತ ಸತ್ಯನಾರಾಯಣ ದೇವರ ಪೂಜೆ

0

ಹಾಗೂ ಅಭಿನಂದನಾ ಕಾರ್ಯಕ್ರಮ

ಸುಳ್ಯ ಗೌಡರ ಯುವ ಸೇವಾ ಸಂಘ ಇದರ ನೇತೃತ್ವದಲ್ಲಿ ಮೇ 24 ರಂದು ಪ್ರತಿ ವರ್ಷ ನಡೆಸಲ್ಪಡುವ ಸಾಮೂಹಿಕ ಲಕ್ಷ್ಮೀಸಹಿತ ಶ್ರೀ ಸತ್ಯನಾರಾಯಣ ದೇವರ ಪೂಜೆ ಮತ್ತು ವಧು-ವರರ ಮನೆ (ಐನ್‌ಮನೆ)ಯ ನವೀಕರಣಕ್ಕೆ ಚಾಲನೆ ಮತ್ತು ದೇವಸ್ಥಾನಗಳ ವ್ಯವಸ್ಥಾಪನಾ ಸಮಿತಿಗೆ ಇತ್ತೀಚೆಗೆ ನೇಮಕಗೊಂಡ ಸಮಾಜದ ಅಧ್ಯಕ್ಷರು ಮತ್ತು ಸದಸ್ಯರುಗಳಿಗೆ ಅಭಿನಂದನಾ ಕಾರ್ಯಕ್ರಮವನ್ನು ಮೇ 24 ಶನಿವಾರದಂದು ಕೊಡಿಯಾಲಬೈಲಿನ ಗೌಡ ಸಮುದಾಯಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಗೌಡರ ಯುವ ಸೇವಾ ಸಂಘದ ಅಧ್ಯಕ್ಷ ಪಿ. ಎಸ್. ಗಂಗಾಧರ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಪ್ರತಿ ವರ್ಷದಂತೆ ಈ ಬಾರಿಯೂ ಸಾಮೂಹಿಕ ಲಕ್ಷ್ಮೀಸಹಿತ ಶ್ರೀ ಸತ್ಯನಾರಾಯಣ ದೇವರ ಪೂಜೆಯನ್ನು ಏರ್ಪಡಿಸಿದ್ದು, ಪುರೋಹಿತ ನಟರಾಜ್ ಶರ್ಮರವರ ಪೌರೋಹಿತ್ಯದಲ್ಲಿ ನಡೆಯಲಿದೆ. ಇದರ ಮಧ್ಯೆ ದೀಪಾಂಜಲಿ ಮಹಿಳಾ ಭಜನಾ ತಂಡ ಶಾಂತಿನಗರ ಇವರಿಂದ ಭಜನಾ ಕಾರ್ಯಕ್ರಮ ನಡೆಯಲಿದ್ದು, ಪೂ.ಗಂಟೆ 11.30 ರಿಂದ ಸಭಾ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದಲ್ಲಿ ಗೌಡ ಸಮುದಾಯಭವನದಲ್ಲಿ ಈಗಾಗಲೇ ನಿರ್ಮಾಣಗೊಂಡಿರುವ ವಧು-ವರರ ಮನೆ (ಐನ್ ಮನೆ) ಯನ್ನು ಡಾ| ರೇಣುಕಾಪ್ರಸಾದ್ ಕೆ. ವಿ. ಮನೆಯವರ ಕೊಡುಗೆಯಿಂದ ನಿರ್ಮಿಸಿದ್ದು, ಇದೀಗ ಅದೇ ಮನೆಯನ್ನು ನವೀಕರಣ ಮಾಡುವ ಬಗ್ಗೆ ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷ ಡಾ| ರೇಣುಕಾಪ್ರಸಾದ್ ಕೆ. ವಿ.ಯವರು ಚಾಲನೆ ನೀಡಿ, ಸಭಾ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸಿ ಉದ್ಘಾಟನೆ ಮಾಡಿ, ಇತ್ತೀಚೆಗೆ ದೇವಸ್ಥಾನಗಳಿಗೆ ಸರಕಾರದಿಂದ ನೇಮಕಗೊಂಡ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರು ಮತ್ತು ಸದಸ್ಯರುಗಳಿಗೆ ಅಭಿನಂದಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಸುಳ್ಯದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಕ್ರಿಯಾಶೀಲರಾಗಿ ದುಡಿಯುತ್ತಿರುವ ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯ ಬೆಳಗಾವಿ ಇದರ ಎಕ್ಸ್ ಕ್ಯೂಟಿವ್ ಕೌನ್ಸಿಲ್ ಸದಸ್ಯರಾದ ಡಾ। ಉಜ್ವಲ್ ಯು. ಜೆ. ಮತ್ತು ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ ಬೆಂಗಳೂರು ಇದರ ಆಯುರ್ವೇದ ಪದವಿ ಅಧ್ಯಯನ ಮಂಡಳಿಯ ಅಧ್ಯಕ್ಷರಾದ ಡಾ| ಲೀಲಾಧರ್ ಡಿ. ವಿ. ಯವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಶ್ರೀ ವೆಂಕಟರಮಣ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಅಧ್ಯಕ್ಷರಾದ ಕೆ. ಸಿ. ಸದಾನಂದ ಮತ್ತು ಎಂ.ಜಿ.ಎಂ. ಶಿಕ್ಷಣ ಸಂಸ್ಥೆಗಳ ಶಾಲಾ ಸಂಚಾಲಕರಾದ ದೊಡ್ಡಣ್ಣ ಬರೆಮೇಲು ರವರುಗಳು ಗೌರವ ಉಪಸ್ಥಿತರಾಗಿರುತ್ತಾರೆ. ಸಭಾ ಕಾರ್ಯಕ್ರಮದ ಬಳಿಕ ಮಹಾ ಮಂಗಳಾರತಿ ನಡೆದು ಪ್ರಸಾದ ವಿತರಣೆಯಾಗಲಿದೆ. ಅನಂತರ ಅನ್ನಸಂತರ್ಪಣೆ ನಡೆಯಲಿದೆ. ಈಗಾಗಲೇ ಪೂಜಾ ರಶೀದಿಗಳನ್ನು ವಿತರಿಸಿದ್ದು, ಕನಿಷ್ಠ 1000 ಜನ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿ, ಕಾರ್ಯಕ್ರಮ ಸಂಚಾಲಕರಾಗಿ ಯಂ. ಹೆಚ್. ಸುರೇಶ್, ಬೆಳ್ಯಪ್ಪ ಗೌಡ ಬಳ್ಳಡ್ಕ ಮತ್ತು ತಿಮ್ಮಯ್ಯ ಪಿಂಡಿಮನೆಯವರು ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಅಧ್ಯಕ್ಷರು ತಿಳಿಸಿದ್ದಾರೆ.