ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಡಾ.ಕೆ.ವಿ.ರೇಣುಕಾಪ್ರಸಾದ್ ಅವರಿಂದ ಬೆಳ್ಳಿರಥ ಕೊಡುಗೆ ನಿರ್ಧಾರ

0

ಶಿಲ್ಪಿ ರಾಜಾಗೋಪಾಲ ಆಚಾರ್ಯ ಕೋಟೇಶ್ವರರಿಂದ ರಥ ತಯಾರಿ

ನವೆಂಬರ್ ನಲ್ಲಿ ಸಮರ್ಪಣೆ : ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಇಂಜಾಡಿ ಮಾಹಿತಿ

ಸುಳ್ಯದ ಶಿಲ್ಪಿ ಕುರುಂಜಿ ವೆಂಕಟ್ರಮಣ ಗೌಡರ ಸುಪುತ್ರ ಡಾ.ಕೆ.ವಿ.ರೇಣುಕಾಪ್ರಸಾದ್ ಕುರುಂಜಿ ಅವರು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಸೇವಾ ರೂಪದಲ್ಲಿ ನೂತನವಾಗಿ ಬೆಳ್ಳಿ ರಥ ಸಮರ್ಪಿಸಲಿದ್ದಾರೆ.


ಸುಮಾರು ರೂ.1 ಕೋಟಿ ರೂ ಮೌಲ್ಯದಲ್ಲಿ ರಥ ನಿರ್ಮಾಣಗೊಳ್ಳಲಿದೆ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್.ಎಸ್.ಇಂಜಾಡಿ ತಿಳಿಸಿದ್ದಾರೆ.

ಶ್ರೀ ದೇವಳದ ಆಡಳಿತ ಕಚೇರಿ ಸಭಾಂಗಣದಲ್ಲಿ ಮೇ.22 ರಂದು ಈ ಬಗ್ಗೆ ನಡೆದ ಸಮಾಲೋಚನಾ ಸಭೆಯ ಬಳಿಕ ಅವರು ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು. ಡಾ.ಕೆ.ವಿ.ರೇಣುಕಾಪ್ರಸಾದ್ ಕುರುಂಜಿ ಅವರು ಬೆಳ್ಳಿರಥ ನಿರ್ಮಾಣ ಮಾಡಿ ಕೊಡಲು ಅನುಮತಿ ನೀಡಬೇಕಾಗಿ ಶ್ರೀ ದೇವಳಕ್ಕೆ ಪತ್ರ ಮುಖೇನ ವಿನಂತಿಸಿದ್ದರು. ಈ ಹಿನ್ನೆಲೆಯಲ್ಲಿ ಆಡಳಿತ ಮಂಡಳಿ ಮೇ.21 ರಂದು ಸಭೆ ನಡೆಸಿ ಅವರಿಗೆ ಅನುಮತಿ ನೀಡಲು ತೀರ್ಮಾನ ಕೈಗೊಳ್ಳಲಾಗಿದೆ.ಇದಕ್ಕೆ ಸಂಬಂಧಿಸಿದಂತೆ ಕೆಲವೊಂದು ಇಲಾಖಾ ಪ್ರಕ್ರೀಯೆಗಳು ಕೂಡಾ ಶೀಘ್ರ ನೆರವೇರಲಿದೆ .


ಕೋಟೇಶ್ವರ ಶಿಲ್ಪಿಗಳಿಂದ ರಥ ನಿರ್ಮಾಸಿ ಶ್ರೀ ದೇವರಿಗೆ ಸಮರ್ಪಿಸಲು ಸೇವಾರ್ಥಿಗಳು ತೀರ್ಮಾನಿಸಿದ್ದಾರೆ.ಇನ್ನು ಒಂದು ವಾರದ ಒಳಗೆ ಬೆಳ್ಳಿ ರಥ ನಿರ್ಮಾಣಕ್ಕೆ ಶ್ರೀ ದೇವಳದಲ್ಲಿ ಅವರು ಸಂಕಲ್ಪ ಮಾಡಲಿದ್ದಾರೆ.ಬಳಿಕ ರಥ ನಿರ್ಮಾಣ ಕಾರ್ಯ ಆರಂಭವಾಗಲಿದೆ. ರಥವನ್ನು ರಾಷ್ಟ್ರ ಮಟ್ಟದ ಶ್ರೇಷ್ಠ ಶಿಲ್ಪಿ ಮತ್ತು ಕುಕ್ಕೆ ದೇವಳದ ಬ್ರಹ್ಮರಥ ನಿರ್ಮಿಸಿದ ರಾಜಗೋಪಾಲ ಆಚಾರ್ಯ ಕೋಟೇಶ್ವರ ನಿರ್ಮಾಣ ಮಾಡಲಿದ್ದಾರೆ. ಈಗಾಗಲೇ ಸುಮಾರು ೧೭೨ ರಥ ನಿರ್ಮಿಸಿ ಕೊಟ್ಟ ಹೆಗ್ಗಳಿಕೆ ಶಿಲ್ಪಿಗಳಿಗಿದೆ.೧೩ ಬೆಳ್ಳಿರಥ ನಿರ್ಮಿಸಿರುವ ಇವರು ೧೪ನೇ ಬೆಳ್ಳಿರಥವನ್ನು ಕುಕ್ಕೆ ಸುಬ್ರಹ್ಮಣ್ಯ ದೇವರಿಗೆ ನಿರ್ಮಿಸಿಕೊಡಲಿದ್ದಾರೆ. ಸೇವಾರ್ಥಿಗಳು ಸಂಕಲ್ಪಿಸಿದಂತೆ ಬೆಳ್ಳಿರಥ ನಿರ್ಮಾಣ ಮಾಡಲಿದ್ದಾರೆ.

ಶ್ರೀ ದೇವಳದ ಪ್ರಧಾನ ಅರ್ಚಕರ ಮಾರ್ಗದರ್ಶನದಂತೆ ಪೂರ್ವ ಶಿಷ್ಠ ಸಂಪ್ರದಾಯಕ್ಕೆ ಅನುಗುಣವಾಗಿ ರಥ ನಿರ್ಮಾಣವಾಗಲಿದೆ.ಅನೇಕ ಕೆತ್ತನೆಗಳೊಂದಿಗೆ ಭವ್ಯವಾಗಿ ರಥ ನಿರ್ಮಾಣವಾಗಲಿದೆ ಎಂದು ಹರೀಶ್ ಇಂಜಾಡಿ ಹೇಳಿದರು.

ನವೆಂಬರ್‌ನಲ್ಲಿ ಸಮರ್ಪಣೆ:
ಈ ವರ್ಷ ನವಂಬರ್‌ನಲ್ಲಿ ನಡೆಯುವ ಚಂಪಾಷಷ್ಠಿ ಜಾತ್ರೋತ್ಸವದ ಮೊದಲು ಬೆಳ್ಳಿರಥ ನಿರ್ಮಾಣಗೊಂಡು ಪುರಪ್ರವೇಶಿಸಲಿದೆ.ಆದುದರಿಂದ ಮುಂದಿನ ೬ ತಿಂಗಳ ಒಳಗೆ ರಥ ನಿರ್ಮಿತವಾಗಿ ದೇವರಿಗೆ ಸಮರ್ಪಣೆ ಆಗಬೇಕೆಂಬುದು ನಮ್ಮ ಸಂಕಲ್ಪ. ಎಂದು ನುಡಿದರು.

ಘೋಷಣೆಯ ಸೌಭಾಗ್ಯ


:
ಶ್ರೀ ದೇವರಿಗೆ ಬೆಳ್ಳಿರಥದ ಪ್ರಥಮ ಉತ್ಸವ ನೆರವೇರಿದ ಬಳಿಕ ಭಕ್ತರಿಗೆ ಬೆಳ್ಳಿರಥದ ಹರಕೆ ಸೇವೆ ಸಮರ್ಪಿಸಲು ಅವಕಾಶ ಲಭಿಸಲಿದೆ.ನಂತರ ಭಕ್ತರು ಶ್ರೀ ದೇವರಿಗೆ ಈಗಾಗಲೇ ಇತರ ರಥೋತ್ಸವ ಸೇವೆ ನೆರವೇರಿಸುವಂತೆ ಬೆಳ್ಳಿರಥೋತ್ಸವ ಸೇವೆ ನೆರವೇರಿಸಬಹುದು. ನೂತನ ಆಡಳಿತ ಮಂಡಳಿ ಅಧಿಕಾರ ಸ್ವೀಕರಿಸಿ ಒಂದು ವಾರ ಆಗುತ್ತಿರುವ ವೇಳೆ ಪ್ರಪ್ರಥಮವಾಗಿ ಶ್ರೀ ದೇವರಿಗೆ ದಾನಿಗಳ ಮೂಲಕ ಬೆಳ್ಳಿರಥ ಸಮರ್ಪಣೆಯಾಗಲಿದೆ ಎಂದು ಘೋಷಿಸುವ ಸೌಭಾಗ್ಯವನ್ನು ಶ್ರೀ ದೇವರು ನೀಡಿದ್ದು ನಮ್ಮ ಪುಣ್ಯ ಎಂದು ಭಾವಿಸುತ್ತೇವೆ ಎಂದು ಹೇಳಿದರು.

ಬೆಳಗ್ಗೆ ಶ್ರೀ ದೇವಳದ ಆಡಳಿತ ಕಚೇರಿ ಸಭಾಂಗಣದಲ್ಲಿ ರಥ ನೀಡಿಕೆ ಬಗ್ಗೆ ಸಮಾಲೋಚನಾ ಸಭೆ ನಡೆಯಿತು.ಸಭೆಯಲ್ಲಿ ಶಿಲ್ಪಿಗಳು ಬೆಳ್ಳಿರಥದ ಮಾದರಿ ಭಾವಚಿತ್ರವನ್ನು ಆಡಳಿತ ಮಂಡಳಿಗೆ ನೀಡಿದರು.ಅಲ್ಲದೆ ವಿವಿಧ ವಿಚಾರಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಈ ಸಂದರ್ಭ ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ, ಶ್ರೀ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್.ಎಸ್.ಇಂಜಾಡಿ, ಸಹಾಯಕ ಕಾರ್ಯನಿರ್ವಹಣಾಧಿಕಾರಿ ಎಸ್.ಜೆ.ಯೇಸುರಾಜ್, ವ್ಯವಸ್ಥಾಪನಾ ಸಮಿತಿ ಸದಸ್ಯ ಅಶೋಕ್ ನೆಕ್ರಾಜೆ, ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ, ದಾನಿಗಳ ಕಚೇರಿ ಮುಖ್ಯಸ್ಥರಾದ ದಿನೇಶ್ ಮಡ್ತಿಲ ಮತ್ತು ವಸಂತ ಕಿರಿಭಾಗ, ಮಾಸ್ಟರ್‌ಪ್ಲಾನ್ ಸಮಿತಿ ಸದಸ್ಯರಾದ ಸತೀಶ್ ಕೂಜುಗೋಡು, ಲೋಲಾಕ್ಷ ಕೈಕಂಬ, ಪವನ್ ಎಂ.ಡಿ, ದೇವಳದ ಅಭಿಯಂತರ ಉದಯ ಕುಮಾರ್, ಸ್ಥಳೀಯರಾದ ಅಭಿಲಾಷ್, ಕಿಶೋರ್ ಅರಂಪಾಡಿ, ಸಿಬ್ಬಂದಿಗಳಾದ ಸರಸ್ವತಿ, ಕೃಷ್ಣಪ್ರಸಾದ್ ಕೆ.ಜಿ.ಭಟ್, ಸುಪ್ರಿತ್ ಕುಲ್ಕುಂದ ಮತ್ತಿತರರು ಉಪಸ್ಥಿತರಿದ್ದರು