ಮೂರು ಸಾವಿರ ಮಂದಿಗೆ ಭೋಜನ ಶಾಲೆ ಶೀಘ್ರವಾಗಿ ಕಟ್ಟಲಾಗುವುದು
ಸುತ್ತುಪೌಲಿ, ಹೊಸ ಆಶ್ಲೇಷ ಬಲಿ ಸೇವೆ ನೆರವೇರಿಸಲು ಹೊಸ ಕಟ್ಟಡಕ್ಕೂ ಚಾಲನೆ ನೀಡಲಿದ್ದೇವೆ
ಪತ್ರಿಕಾಗೋಷ್ಠಿಯಲ್ಲಿ ವ್ಯವಸ್ಥಾಪನಾ ಸಮಿತಿ ಮಾಹಿತಿ
ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಕಳೆದ ಹಲವಾರು ವರ್ಷಗಳಿಂದ ಭಕ್ತರಿಗೆ ಮಧ್ಯಾಹ್ನ ಮತ್ತು ರಾತ್ರಿ ಅನ್ನದಾಸೋಹ ಭೋಜನಪ್ರಸಾದದ ವ್ಯವಸ್ಥೆ ಜಾರಿಯಲ್ಲಿದ್ದು, ಶ್ರೀ ದೇಗುಲಕ್ಕೆ ಆಗಮಿಸುವ ಭಕ್ತರಿಗೆ ಬೆಳಗ್ಗಿನ ಉಪಹಾರ ಪ್ರಸಾದದ ವ್ಯವಸ್ಥೆ ಯೋಜನೆ ಮೇ ೩೦ರಿಂದ ವಿದ್ಯುಕ್ತವಾಗಿ ಆರಂಭವಾಗಲಿದೆ ಎಂದು ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಇಂಜಾಡಿ ಹೇಳಿದರು.















ಅವರು ದೇಗುಲದ ಆಡಳಿತ ಕಛೇರಿಯಲ್ಲಿ ಮೇ.,28 ರಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಮುಜರಾಯಿ ಸಚಿವರ ಸಲಹೆಯಂತೆ, ಇತ್ತೀಚೆಗೆ ಅಧಿಕಾರಿಗಳು ನಡೆಸಿದ ಸಭೆಯಲ್ಲಿ ಕುಕ್ಕೆಯಲ್ಲಿ ಭಕ್ತರಿಗೆ ಬೆಳಗ್ಗಿನ ಉಪಹಾರ ನೀಡುವ ಬಗ್ಗೆ ಚರ್ಚೆ ನಡೆಸಿದ್ದು, ಬೆಳಗ್ಗೆ ಆಗಮಿಸಿ, ಸೇವೆ ಸಲ್ಲಿಸಿ ತೆರಳುವ ಭಕ್ತರಿಗೆ ಹಾಗೂ ಭಕ್ತರಿಗೆ ಬೆಳಗ್ಗಿನ ಉಪಹಾರ ನೀಡುವ ಚಿಂತನೆಯಂತೆ ನಮ್ಮ ಹೊಸ ಆಡಳಿತ ಸಮಿತಿಯ ಪ್ರಥಮ ಸಭೆಯಲ್ಲಿ ಸಚಿವರ ಸಲಹೆಯ ಯೋಜನೆಯನ್ನು ಜಾರಿಗೊಳಿಸಲು ತೀರ್ಮಾನಿಸಿದ್ದೇವೆ. ಮೇ ೩೦ರಂದು ಯೋಜನೆಗೆ ಚಾಲನೆ ನೀಡಲಿದ್ದೇವೆ. ದೇಗುಲದ ಷಣ್ಮುಖ ಭೋಜನ ಶಾಲೆಯಲ್ಲಿ ಬೆಳಗ್ಗೆ ೮ ಗಂಟೆಯಿಂದ ೧೦ರ ವರೆಗೆ ಉಪಹಾರ ನೀಡುವ ಯೋಜನೆ ಇದಾಗಿದ್ದು, ದಿನವೊಂದರಂತೆ ಮೂರು-ನಾಲ್ಕು ಬಗೆಯ ಉಪಹಾರ(ತಿಂಡಿ), ಜತೆಗೆ ಕಸಾಯ ನೀಡುವ ಬಗ್ಗೆ ನಿರ್ಧರಿಸಿದಂತೆ ಯೋಜನೆ ಆರಂಭವಾಗಲಿದ್ದು, ಎಲ್ಲೆಡೆ ಶ್ಲಾಘನೆ ವ್ಯಕ್ತವಾಗಿದೆ.
ಭಕ್ತರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಹಾಗೂ ಮುಂದಿನ ದಿನಗಳಲ್ಲಿ ಯೋಜನೆಯಲ್ಲಿ ಇನ್ನಷ್ಟು ಬದಲಾವಣೆಗಳೊಂದಿಗೆ ಮುಂದುವರಿಯುವ ಬಗ್ಗೆಯೂ ಸಲಹೆಗಳನ್ನು ಸ್ವೀಕರಿಸಲಾಗುವುದು ಎಂದವರು ತಿಳಿಸಿದರು.
ಮೂರು ಸಾವಿರ ಮಂದಿಗೆ ಭೋಜನ ಶಾಲೆ
ಕ್ಷೇತ್ರದ ಅಭಿವೃದ್ಧಿ ಯೋಜನೆಗಳಲ್ಲಿ ಒಂದಾದ ಏಕಕಾಲದಲ್ಲಿ ಮೂರು ಸಾವಿರ ಮಂದಿ ಕುಳಿತು ಭೋಜನ ಪ್ರಸಾದ ಸ್ವೀಕರಿಸುವ ನೂತನ ಭೋಜನ ಶಾಲೆಯ ಕಟ್ಟಡ ನಿರ್ಮಿಸುವ ಬಗ್ಗೆ ಈಗಾಗಲೇ ಮಾಸ್ಟರ್ ಪ್ಲಾನ್‌ನಲ್ಲಿ ಯೋಜನೆ, ನಕಾಶೆ ರೂಪಿಸಲಾಗಿದೆ. ಮುಂದಿನ ೨-೩ ವರ್ಷಗಳಲ್ಲಿ ನೂತನ ಕಟ್ಟಡ ಸಿದ್ದವಾಗಲಿದೆ ಎಂದರು.
ಕ್ಷೇತ್ರಕ್ಕೆ ದಿನದಿಂದ ದಿನಕ್ಕೆ ಆಗಮಿಸುವ ಭಕ್ತರ ಸಂಖ್ಯೆ ಹೆಚ್ಚುತ್ತಿದ್ದು, ಆ ದೃಷ್ಟಿಯಿಂದ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದೆ. ಮುಖ್ಯವಾಗಿ ಯಾತ್ರಿಕರಿಗೆ ತಂಗಲು ಇನ್ನಷ್ಟು ವಸತಿ ನಿಮಾಣವಾಗಬೇಕಾಗಿದ್ದು, ಅದರ ಬಗ್ಗೆ ಪ್ರಕ್ರಿಯೆಗಳು ಅಂತಿಮ ಹಂತದಲ್ಲಿದೆ. ಮುಂದಿನ ತಿಂಗಳಲ್ಲಿ ಮುಜರಾಯಿ ಸಚಿವರು ಸುಬ್ರಹ್ಮಣ್ಯಕ್ಕೆ ಬಂದು ಸಭೆ ನಡೆಸಲಿದ್ದು, ಆ ಸಭೆಯಲ್ಲಿ ಅಭಿವೃದ್ಧಿ ಯೋಜನೆಗಳ ಬಗ್ಗೆ ಚರ್ಚಿಸಲಾಗುವುದು ಎಂದರು.
ಸುತ್ತುಪೌಲಿ, ಹೊಸ ಆಶ್ಲೇಷ ಬಲಿ ಸೇವೆ ನೆರವೇರಿಸಲು ಹೊಸ ಕಟ್ಟಡದ ಕೆಲಸವೂ ಶೀಘ್ರ ಆರಂಭಕ್ಕೆ ಪ್ರಯತ್ನ ನಡೆಯುತ್ತಿದೆ ಎಂದರು. ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಅಶೋಕ್ ನೆಕ್ರಾಜೆ, ಅಜಿತ್ ಕುಮಾರ್, ಶ್ರೀಮತಿ ಲೀಲಾ ಮನಮೊಇಹನ್, ಶ್ರೀಮತಿ ಪ್ರವೀಣ ರೈ, ಶ್ರೀಮತಿ ಸೌಮ್ಯ, ಮಾಸ್ಟರ್ ಪ್ಲಾನ್ ಸಮಿತಿ ಸದಸ್ಯರಾದ ಅಚ್ಚತ ಆಲ್ಕಬೆ, ಪವನ್ ಎಂ.ಡಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.










