ಸೂಜಿ ರಹಿತ ಇಂಜೆಕ್ಷನ್… ಜೆಟ್ ಇಂಜೆಕ್ಟರ್

0

ಇಂಜೆಕ್ಷನ್ ಅಥವಾ ಚುಚ್ಚುಮದ್ದು ಎಂದಾಗ ಪ್ರತಿಯೊಬ್ಬ ವ್ಯಕ್ತಿಯೂ ಒಂದು ಕ್ಷಣ ಭಯಬೀತರಾಗದೇ ಉಳಿಯುವುದೇ ಇಲ್ಲ. ಎಷ್ಟೇ ಧೈರ್ಯಶಾಲಿಯಾಗಿದ್ದರೂ, ಚುಚ್ಚುಮದ್ದು ಎಂದಾಗ ರೋಗಿಯ ಜಂಘಾಬಲ ಒಂದು ಕ್ಷಣ ಕುಗ್ಗಿ ಹೋಗುತ್ತದೆ. ಸಣ್ಣ ಮಕ್ಕಳಂತೂ ಇಂಜೆಕ್ಷನ್ ಎಂಬ ವಿಚಾರ ಬಂದಾಗಲೇ ಅಳು ಸುರು ಹಚ್ಚಿಕೊಳ್ಳುತ್ತಾರೆ. ವೈದ್ಯರು ಎಂದರೆ ಚುಚ್ಚುಮದ್ದು ಕೊಡಲಿಕ್ಕೆ ಇರುವವರು ಎಂಬ ಭಾವನೆ ಹೆಚ್ಚಿನ ಎಲ್ಲಾ ಮಕ್ಕಳಲ್ಲಿ ಇದೆ. ವೈದ್ಯರು ಎಷ್ಟೇ ಪ್ರೀತಿಯಿಂದ ಮಮತೆಯಿಂದ ಮಕ್ಕಳನ್ನು ಮಾತಾಡಿಸಿದರೂ ಚುಚ್ಚುಮದ್ದಿನ ಭಯದಿಂದಾಗಿ ಹೆಚ್ಚಿನ ವೈದ್ಯರು ವಿಲನ್ ಆಗಿ ಮಕ್ಕಳ ಕನಸಿನಲ್ಲೂ ಕಾಡಿದ್ದು ಉಂಟು. ಇದೀಗ ಅಂತಹಾ ಮಕ್ಕಳಿಗೆ ಸಿಹಿ ಸುದ್ದಿ ಬಂದಿದೆ. ಸೂಜಿ ಇಲ್ಲದೇ ಔಷಧಿಯನ್ನು ರೋಗಿಯ ದೇಹಕ್ಕೆ ಸೇರಿಸುವ ‘ಜೆಟ್ ಇಂಜೆಕ್ಟರ್’ ಎಂಬ ವಿಶಿಷ್ಟ ಸಾಧನ ಮಾರುಕಟ್ಟೆಯಲ್ಲಿ ಲಭ್ಯವಿದೆ. ಇದರಲ್ಲಿ ಸೂಜಿಯ ಬದಲಾಗಿ ಅತೀ ಹೆಚ್ಚಿನ ಒತ್ತಡವಿರುವ ಅಗಲಕಿರಿದಾದ ‘ಜೆಟ್’ನ ನಳಿಕೆಯ ಮುಖಾಂತರ ಔಷಧಿಯನ್ನು ರೋಗಿಯ ದೇಹಕ್ಕೆ ಸೇರಿಸಲು ಸಾಧ್ಯವಿದೆ. ಸಂಪೂರ್ಣವಾಗಿ ನೋವಿಲ್ಲದ ಪ್ರಕ್ರಿಯೆ ಇದಲ್ಲವಾದರೂ, ಸೂಜಿ ಇಲ್ಲದ ಕಾರಣದಿಂದ ಹೆಚ್ಚಿನ ರೋಗಿಗಳಿಗೆ ಮಾನಸಿಕವಾಗಿ ನೆಮ್ಮದಿಯನ್ನು ಈ ಜೆಟ್ ಇಂಜೆಕ್ಷನ್ ನೀಡಿದೆ. ಅತೀ ಒತ್ತಡದಿಂದ ದೇಹಕ್ಕೆ ಔಷಧಿ ಅಥವಾ ಲಸಿಕೆ ಸೇರಿದಾಗ ಒಂದಷ್ಟು ಕ್ಷಣಿಕ ನೋವಾಗಬಹುದು. ಆದರೆ ಸೂಜಿ ಇಲ್ಲದ ಕಾರಣದಿಂದ ರೋಗಿಗಳಿಗೆ ಹೆಚ್ಚಿನ ಧೈರ್ಯ ಮತ್ತು ನೆಮ್ಮದಿಯನ್ನು ಈ ಸಾಧನ ನೀಡಿರುವುದಂತೂ ನಿಜವಾಗಿದೆ. ಇದೊಂದು ಅತ್ಯಾಧುನಿಕ ತಂತ್ರಜ್ಞಾನದಿಂದ ತಯಾರಿಸಿದ ಸಾಧನವಾಗಿದ್ದು ಸೂಜಿಯ ಸಹಾಯ ಇಲ್ಲದೆ ನೇರವಾಗಿ ಚರ್ಮದ ಮುಖಾಂತರ ಔಷಧಿಯನ್ನು ಚರ್ಮದ ಒಳಭಾಗಕ್ಕೆ ತಲುಪುವಂತೆ ಮಾಡುತ್ತದೆ. ಸಾಮಾನ್ಯವಾಗಿ ಏಕಕಾಲಕ್ಕೆ ನೂರಾರು ಮಂದಿಗೆ ಲಸಿಕೆ ಹಾಕುವಾಗ ಅಥವಾ ಮಧುಮೇಹದ ರೋಗಿಗಳಿಗೆ ಇನುಸಿಲಿನ ಔಷಧಿಯನ್ನು ನೀಡುವಾಗ ಈ ರೀತಿಯ ಜೆಟ್ ಇಂಜೆಕ್ಟರ್ ಬಳಸುತ್ತಾರೆ. 1866ರ ಡಿಸೆಂಬರ್ 18ರಂದು ಮೊದಲ ಬಾರಿಗೆ, ಡಾ|ಜೀನ್ ಸೆಲ್ಸ್ ಗಿರೋನ್ಸ್ ಇವರು ಆವಿಷ್ಕರಿಸಿದ ಜೆಟ್ ಇಂಜೆಕ್ಷರ್‍ನ್ನು ಜೂಲಿಸ್ ಅಗಸ್ಟಿ ಬೆಕ್ಲಾರ್ಡ್ ಎಂಬವರು ಮೊದಲ ಬಾರಿಗೆ ಪ್ಯಾರಿಸ್‍ನಲ್ಲಿ ಬಳಸಿದರು. ಅನಂತರ ಹಲವಾರು ಸಂಶೋ ಧನೆಗಳು ಮತ್ತು ತಂತ್ರಜ್ಞಾನದ ಪರಿಪೂರ್ಣತೆ ಪಡೆದ ಬಳಿಕ ಹೊಸ ಹೊಸ ಜೆಟ್ ಇಂಜೆಕ್ಟರ್‍ಗಳು ದೊರಕಿತು. ಇದೀಗ ಲೆಸರ್ ಮುಖಾಂತರ ಔಷಧಿ ದೇಹಕ್ಕೆ ಸೇರಿಸಲು ಲೇಸರ್ ಜೆಟ್ ಇಂಜೆಕ್ಟರ್ ಅಕ್ಟೋಬರ್ 2017ರಂದು ಡೇವಿಡ್ ಪೆರ್ನಾಂಡಿಸ್ ರಿವಾಸ್ ಎಂಬಾತ ಅವಿಷ್ಕರಿಸಿ ಬಳಸಿ ಯಶಸ್ಸನ್ನು ಕಂಡಿರುತ್ತಾರೆ.


ಆರಂಭದಲ್ಲಿ ಬಳಸುವಾಗ ಒಬ್ಬರಿಂದ ಇನ್ನೊಬ್ಬರಿಗೆ ಸೋಂಕು ಹರಡಿ, ಋಣಾತ್ಮಕ ಪ್ರತಿಕ್ರಿಯೆ ಬಂದಿತ್ತು. 1996ರಲ್ಲಿ ಸುಮಾರು 150 ಮಂದಿಗೆ ಈ ಸಾಧನದ ಮುಖಾಂತರ ಹೆಪಟೈಟನ್ ಬಿ ಹರಡಿತ್ತು. ಕ್ರಮೇಣ ಹೊಸ ಆವಿಷ್ಕಾರಗಳು ನಡೆದು ಆ ಭಯ ನಿವಾರಣೆಯಾಗಿದೆ. ಈಗ ಜೆಟ್ ಇಂಜೆಕ್ಟರ್ ಎಂಬ ಹೆಸರಿನ ಬದಲಾಗಿ ‘ಸೂಜಿ ರಹಿತ ಇಂಜೆಕ್ಷನ್’ ಎಂದು ಸಂಬೋಧಿಸಲಾಗುತ್ತಿದೆ. ಬಯೋಜೆಕ್ಟರ್ 2000 ಎಂಬ ಸಾಧನದ ಮುಖಾಂತರ ಸುಮಾರು 1 ಮಿ.ಲೀನಷ್ಟು ಔಷಧಿಯನ್ನು ಸ್ನಾಯುಗಳ ಒಳಗೆ ಅಥವಾ ಚರ್ಮದ ಕೆಳಗೆ ನೀಡಲು ಸಾಧ್ಯವಿದೆ. ವಿಷನ್‍ಜೆ ಯಂತ್ರದ ಮುಖಾಂತರ 1.6 ಮಿ.ಲೀನಷ್ಟು ಔಷಧಿಯನ್ನು ಏಕಕಾಲಕ್ಕೆ ನೀಡಬಹುದಾಗಿದೆ. ಯುರೋಪ್ ಮತ್ತು ಅಮೇರಿಕದಲ್ಲಿ ಈಗ ಹೆಚ್ಚಿನ ಎಲ್ಲಾ ಮಧುಮೇಹಿಗಳು ಈಗ ಸೂಜಿ ರಹಿತ ಇಂಜೆಕ್ಟರ್‍ಗಳನ್ನು ಇನುಸಿಲಿನ್ ಔಷಧಿ ತೆಗೆದುಕೊಳ್ಳಲು ಬಳಸುತ್ತಾರೆ.
ದಂತ ವೈದ್ಯಕೀಯದಲ್ಲಿ ಜೆಟ್ ಇಂಜೆಕ್ಟರ್
ದಂತ ವೈದ್ಯರನ್ನು ವಿಲನ್ ಆಗಿ ಕಾಣುವಂತೆ ಮಾಡಿದ್ದು ಅವರು ಬಳಸುವ ಉದ್ದದ ಸೂಜಿ ಎಂದರೂ ತಪ್ಪಾಗಲಾರದು. ಅದು ಬಾಯಿಯ ಒಳಗೆ ಇಂಜೆಕ್ಷನ್ ಎಂದರೆ ಯಾಕೋ ವಿಚಿತ್ರವಾದ ಅವ್ಯಕ್ತವಾದ ಭಯ. ಈ ಭಯವನ್ನು ಹೋಗಲಾಡಿಸಲೆಂದೇ ಹುಟ್ಟಿದ ಜೆಟಿಪ್ ಎಂಬ ಸೂಜಿ ರಹಿತ ಚುಚ್ಚುಮದ್ದು ಇದೀಗ ಬಹಳ ಜನಪ್ರಿಯವಾಗಿದೆ. ಬಾಯಿಯ ಒಳಗೆ ಹಲ್ಲು ಕೀಳುವ ಜಾಗಕ್ಕೆ ಈ ರೀತಿಯ ಜೆಟ್ ಇಂಜೆಕ್ಟರ್ ಬಳಸಿ ಹಲ್ಲಿನ ಸಂವೇದನೆ ಇಲ್ಲದಂತೆ ಮಾಡಲಾಗುತ್ತದೆ. ಅದೇ ರೀತಿ ರಕ್ತನಾಳಗಳಿಂದ ರಕ್ತ ಪರೀಕ್ಷೆಗೆ ರಕ್ತ ತೆಗೆಯುವ ಮೊದಲು ಈ ಜೆಟ್ ಇಂಜೆಕ್ಟರ್ ಬಳಸಿ ನೋವಿಲ್ಲದಂತೆ ಮಾಡಲಾಗುತ್ತದೆ ಸಂವೇದನೆ ಇಲ್ಲದಂತಾದಾಗ ಸೂಜಿ ಬಳಸಿ ರಕ್ತವನ್ನು ಸಂಗ್ರಹಿಸಲಾಗುತ್ತದೆ. ಅಥವಾ ರಕ್ತನಾಳಕ್ಕೆ ನೇರವಾಗಿ ಔಷಧಿ ನೀಡಬೇಕಾದಾಗ ಸೂಜಿಯನ್ನು ಚುಚ್ಚುವ ಮೊದಲು ಈ ಜೆಟ್ ಇಂಜೆಕ್ಟರ್ ಬಳಸಿ, ನೋವಿಲ್ಲದಂತೆ ಅರಿವಳಿಗೆ ಔಷಧಿ ಬಳಸಿ ಸಂವೇದನಾ ರಹಿತವಾಗಿ ಮಾಡಿ ಔಷಧಿ ಅಥವಾ ಇತರ ದ್ರಾವಣಗಳನ್ನು ರಕ್ತನಾಳಕ್ಕೆ ನೀಡಲಾಗತ್ತದೆ.
ಕೊನೆ ಮಾತು
ವಿಜ್ಞಾನ, ತಂತ್ರಜ್ಞಾನ ಬೆಳೆದಂತೆಲ್ಲಾ ವೈದ್ಯಕೀಯ ಕ್ಷೇತ್ರದಲ್ಲಿ ಸಾಕಷ್ಟು ಆವಿಷ್ಕಾರಗಳು ಮತ್ತು ಸಂಶೋಧನೆಗಳು ಬಂದಿದೆ. ಈ ಸಾಲಿಗೆ ಸೇರಿದ ಮತ್ತೊಂದು ಆವಿಷ್ಕಾರವೇ ಈ ಜೆಟ್ ಇಂಜೆಕ್ಟರ್ ಅಥವಾ ಸೂಜಿ ರಹಿತ ಇಂಜೆಕ್ಟನ್. ಇದು ನಿಜಕ್ಕೂ ಮನಕುಲಕ್ಕೆ ದೊರಕಿದ ವರದಾನ ಎಂದರೂ ತಪ್ಪಲ್ಲ. ಹೆಚ್ಚಿನ ರೋಗಿಗಳು ಇಂಜೆಕ್ಷನ್ ಭಯದಿಂದ ವೈದ್ಯರ ಬಳಿ ಹೋಗಲು ಹಿಂದೇಟು ಹಾಕುತ್ತಾರೆ. ನಗರ ಪ್ರದೇಶಗಳಲ್ಲಿ ಈ ತೊಂದರೆ ಇಲ್ಲದಿದ್ದರೂ ಗ್ರಾಮೀಣ ಪ್ರದೇಶದ ಜನರಲ್ಲಿ ಇನ್ನೂ ಇಂಜೆಕ್ಷನ್ ಬಗ್ಗೆ ಅಥವಾ ಸೂಜಿಯ ಬಗ್ಗೆ ಬಹಳಷ್ಟು ಅವ್ಯಕ್ತ ಭಯ ಇರುವುದಂತೂ ನಿಜ. ಈ ನಿಟ್ಟಿನಲ್ಲಿ ಸೂಜಿ ರಹಿತ ಇಂಜೆಕ್ಷನ್ ಒಂದು ಗುರುತರವಾದ ಸಂಶೋದನೆಯಾಗಿದ್ದು ಜನರಿಗೆ ಬಹಳ ಅನುಕೂಲಕರವಾಗಿದೆ. ಆರಂಭದಲ್ಲಿ ಎಲ್ಲಾ ಹೊಸ ಆವಿಷ್ಕರಗಳು ದುಬಾರಿಯಾಗಿರುತ್ತದೆ ಎನ್ನುವುದು ಸ್ವಲ್ಪ ಕಹಿಯಾದ ವಿಚಾರವಾದರೂ ಮುಂದಿನ ದಿನಗಳಲ್ಲಿ ಈ ಜೆಟ್ ಇಂಜೆಕ್ಷನ್‍ಗಳು ಎಲ್ಲಾ ಸರಕಾರಿ ಆಸ್ಪತ್ರೆ ಮತ್ತು ಗ್ರಾಮೀಣ ಪ್ರದೇಶಗಳಲ್ಲೂ ದೊರಕಲಿ ಮತ್ತು ಜನರಿಗೆ ಕಡಮೆ ವೆಚ್ಚದಲ್ಲಿ ಸಿಗುವಂತಾಗಲಿ ಎಂದು ಹಾರೈಸೋಣ.

ಡಾ| ಮುರಲೀ ಮೋಹನ್ ಚೂಂತಾರು