ಸುಳ್ಯಕ್ಕೆ ಆಧಾರ್ ಕೇಂದ್ರ ಜಿಲ್ಲಾಧಿಕಾರಿ ಜತೆ ಮಾತನಾಡುವೆ : ಸಂಸದರ ಭರವಸೆ
ತಹಶೀಲ್ದಾರ್ ವಿರುದ್ಧ ಎಂ.ಪಿ. ಗರಂ
ಸುಳ್ಯದಲ್ಲಿ ಆಧಾರ್ ಕೇಂದ್ರ ಸೇರಿದಂತೆ ಇನ್ನಿತರ ಬೇಡಿಕೆಯನ್ನು ಶಾಸಕಿ ಭಾಗೀರಥಿ ಮುರುಳ್ಯರು ಸಂಸದ ಕ್ಯಾ.ಬ್ರಿಜೇಶ್ ಚೌಟರ ಮುಂದೆ ಸಲ್ಲಿಸಿದ್ದು, ಸಂಸದರು ಸಕಾರಾತ್ಮಕವಾಗಿ ಸ್ಪಂದನೆ ನೀಡಿದ್ದಾರೆ.
ಸುಳ್ಯ ತಾಲೂಕು ಪಂಚಾಯತ್ ನಲ್ಲಿ ನಡೆದ ಯುವ ವಿಕಾಸ್ ಕಾರ್ಯಕ್ರಮದ ವೇದಿಕೆಯಲ್ಲಿ ಮಾತನಾಡಿದ ಶಾಸಕರು ಬೆಳೆವಿಮೆ ಪ್ರತಿ ಸಲ ಜೂನ್ ತಿಂಗಳಲ್ಲಿ ಆಗುತ್ತಿತ್ತು. ಆದರೆ ಈ ಬಾರಿ ಇನ್ನೂ ಅವಕಾಶ ನೀಡಿಲ್ಲ. ಮಳೆ ವಿಪರೀತವಾಗಿ ಬೆಳೆ ನಷ್ಟವಾಗಿದೆ. ಆದ್ದರಿಂದ ಬೆಳೆವಿಮೆಗೆ ಆದಷ್ಟು ಶೀಘ್ರ ಅವಕಾಶ ನೀಡಬೇಕು ಎಂದು ಶಾಸಕರು ಕೇಳಿಕೊಂಡರು.
ಸುಳ್ಯದಲ್ಲಿ ಆಧಾರ್ ಕೇಂದ್ರ ಇಲ್ಲದೆ ವಿದ್ಯಾರ್ಥಿಗಳಿಗೆ ತುಂಬಾ ಸಮಸ್ಯೆ ಆಗುತ್ತಿದೆ. ಆದ್ದರಿಂದ ಸುಳ್ಯದಲ್ಲಿ ಆಧಾರ್ ಕೇಂದ್ರಕ್ಕೆ ಜಿಲ್ಲಾಧಿಕಾರಿಗಳಿಗೆ ತಾವು ಸೂಚಿಸಬೇಕು ಎಂದು ಶಾಸಕರು ಕೇಳಿಕೊಂಡರು.
ಸುಳ್ಯ ಭಾಗದ ಹಲವು ಭಾಗದಲ್ಲಿ ಆನೆ ಹಾವಳಿ ಹೆಚ್ಚಾಗಿದೆ. ಆದ್ದರಿಂದ ಸೋಲಾರ್ ಬೇಲಿಗೆ ತಾವು ಸಹಕಾರ ನೀಡಬೇಕು. ಸುಳ್ಯದಲ್ಲಿ ಮಳೆಹಾನಿ ತುಂಬಾ ಕಡೆ ಆಗಿದೆ. ಆದ್ದರಿಂದ ಪ್ರಾಕೃತಿಕ ವಿಕೋಪದಡಿ ಸುಳ್ಯಕ್ಕೆ ಹೆಚ್ಚು ಅನುದಾನ ಬರುವಂತೆ ಮಾಡಬೇಕು ಎಂದು ಶಾಸಕರು ಕೇಳಿಕೊಂಡರು.















ಶಾಸಕರು ಮಾತನಾಡಿದ ಬಳಿಕ ಸಭೆ ಮುಕ್ತಾಯಗೊಂಡಿತು. ಅವರು ವೇದಿಕೆಯಿಂದ ಇಳಿಯುತ್ತಿದ್ದಂತೆ ಸಭೆಯಲ್ಲಿದ್ದ ಬಿಜೆಪಿ ನಾಯಕರು ಕೂಡಾ ತಮ್ಮ ಬೇಡಿಕೆಯನ್ನು ಸಂಸದರ ಮುಂದಿಟ್ಟರು.
ಆಧಾರ್ ಕೇಂದ್ರ ಅವಶ್ಯಕತೆ ಕುರಿತು ಹಲವರು ಪ್ರಸ್ತಾಪಿಸಿದರು. ಸುಳ್ಯಕ್ಕೆ ಆಧಾರ್ ಕೇಂದ್ರದ ಆಗಬೇಕೆಂದು ಜಿಲ್ಲಾಧಿಕಾರಿ ಗಳ ಬಳಿ ಮಾತನಾಡುತ್ತೇನೆ ಎಂದು ಸಂಸದ ಬ್ರಿಜೇಶ್ ಚೌಟರು ಭರವಸೆ ನೀಡಿದರು.
ತಹಶೀಲ್ದಾರ್ ವಿರುದ್ಧ ಗರಂ
ಯುವ ವಿಕಾಸ ಕಾರ್ಯಕ್ರಮ ಮುಗಿಸಿ ತಾಲೂಕು ಪಂಚಾಯತ್ ಮೇಲಿನ ಮಹಡಿಯಿಂದ ಸಂಸದರು ಇಳಿದು ಬರುತ್ತಿರುವಾಗ ಅಲ್ಲಿಗೆ ಬಂದಿದ್ದ ಸಾರ್ವಜನಿಕರು ಬೇರೆ ಬೇರೆ ಮನವಿ ನೀಡುತ್ತಿದ್ದರು.
ಜಾಗದ ವಿಚಾರಕ್ಕೆ ಸಂಬಂಧಿಸಿ ಮನವಿಯೊಂದು ಬಂದಾಗ ಸಂಸದರು ತಹಶೀಲ್ದಾರ್ ಎಲ್ಲಿ ಎಂದು ಕೇಳಿದರು. ಆಗಷ್ಟೇ ತಾಲೂಕು ಪಂಚಾಯತ್ ಗೆ ಬಂದಿದ್ದ ತಹಶೀಲ್ದಾರ್ ಸಂಸದರ ಮುಂದೆ ಬಂದರು. ಆಗ ಸಂಸದರು “ನೀವಾ ತಹಶೀಲ್ದಾರ್. ಎಂ.ಪಿ. ಬರುವಾಗ ನೀವು ಇಲ್ಲಿ ಇರಬೇಕೆಂದು ಗೊತ್ತಿಲ್ಲವೇ?” ಎಂದು ಕೇಳಿದಾಗ, “ನನಗೆ ಮಾಹಿತಿ ಇರಲಿಲ್ಲ” ಎಂದು ತಹಶೀಲ್ದಾರ್ ಮಂಜುಳಾ ಹೇಳಿದರು. ” ಏನು ಮಾಹಿತಿ ಇಲ್ಲ ಎಂದು ಅವರ ವಿರುದ್ಧ ಗರಂ ಆದ ಸಂಸದರು ಶಾಸಕರ ಕಚೇರಿಗೆ ತೆರಳಿದರು.










