ಸುಳ್ಯ ನ.ಪಂ. ಶೆಡ್ ನಲ್ಲಿ ತುಂಬುತ್ತಿರುವ ಕಸ : ಜಾಗ ಗುರುತಿಸಲು ಸಚಿವರ ಸೂಚನೆ

0

ನ.ಪಂ. ಸದಸ್ಯರ ಅಧ್ಯಯನ ಪ್ರವಾಸ : ಸಚಿವರ ಮುಂದೆ ಬೇಸರ ತೋಡಿಕೊಂಡ ನ.ಪಂ.ಅಧ್ಯಕ್ಷೆ

ಸುಳ್ಯ‌ ‌ನಗರ ಪಂಚಾಯತ್ ಕಸ ವಿಲೇವಾರಿಗೆ ಸೂಕ್ತ ಜಾಗ ಗುರುತಿಸುವಂತೆ ನಗರ ಪಂಚಾಯತ್ ಮುಖ್ಯಾಧಿಕಾರಿಗಳಿಗೆ ದ.ಕ. ಜಿಲ್ಲಾ ಉಸ್ತುವಾರಿ ಸಚಿವರು ಸೂಚನೆ‌ ನೀಡಿದ್ದಾರೆ.

ನಗರ ಪಂಚಾಯತ್ ನಲ್ಲಿ ನಡೆದ ಕಾರ್ಯಕ್ರಮ ಮುಗಿಸಿ ಹೊರಡುವ ವೇಳೆಗೆ ಅಲ್ಲಿದ್ದ ನ.ಪಂ. ಸದಸ್ಯರು, ಸಾರ್ವಜನಿಕರು, ಕಾರ್ಯಕರ್ತರು ನ.ಪಂ‌. ಮುಂಭಾಗದ ಶೆಡ್ ನಲ್ಲಿರುವ ಕಸದ ರಾಶಿಗೆ ಪರಿಹಾರ‌ ನೀಡಬೇಕು, ತಾವು ಶೆಡ್ ವೀಕ್ಷಿಸುವಂತೆ‌ ಕೇಳಿಕೊಂಡರು. ಕಾರು‌ ಹತ್ತಿದ ಸಚಿವ ದಿನೇಶ್ ಗುಂಡೂರಾವ್ ಇಳಿದು ಕಸದ ರಾಶಿಯಿದ್ದ ಶೆಡ್‌ ಬಳಿ ಬಂದರು.

ಈ ವೇಳೆ ಅಲ್ಲಿಗೆ‌ ಬಂದ ನಗರ ಪಂಚಾಯತ್ ಅಧ್ಯಕ್ಷೆ ಶಶಿಕಲಾ ನೀರಬಿದಿರೆಯವರು ಜಾಗದ ಅಭಾವವಿರುವುದನ್ನು‌ ಹೇಳಿದರಲ್ಲದೆ ಸೂಕ್ತ‌ ಜಾಗ ಗುರುತಿಸುವಂತೆ ಅಧಿಕಾರಿಗಳಿಗೆ ಸೂಚಿಸಬೇಕೆಂದು‌ ಮನವಿ ಮಾಡಿದರು. ಕಳೆದ ವಾರ ನ.ಪಂ. ವತಿಯಿಂದ ಸರಕಾರದ ಅನುದಾನದಲ್ಲಿ ಗೋವಾಕ್ಕೆ ಅಧ್ಯಯನ ಪ್ರವಾಸ ಹೋಗಿದ್ದೆವು.‌ ಅಲ್ಲಿಯ ಘನತ್ಯಾಜ್ಯ ಘಟಕಕ್ಕೆ ಭೇಟಿ‌ ನೀಡಿ, ಇಲ್ಲಿಯೂ ಅದರ ಅನುಷ್ಠಾನದ ಕುರಿತು‌ ಸಮಾಲೋಚಿಸಿದ್ದೆವು. ಆದರೆ ನಮ್ಮಲ್ಲಿ‌ ಜಾಗದ‌ ಕೊರತೆ ಇದೆ. ನಾವು‌ ಕೈಗೊಂಡ ಅಧ್ಯಯನ ಪ್ರವಾಸಕ್ಕೆ ಕೆಲವರು ಆಕ್ಷೇಪಣೆಯೂ‌ ಮಾಡಿದ್ದಾರೆ.

ಇಲ್ಲ ಸಲ್ಲದ ಮಾತನಾಡಿದ್ದಾರೆ ಎಂದು ಬೇಸರ ವ್ಯಕ್ತ ಪಡಿಸಿದರು. ಆಗ ಅಲ್ಲೇ ಇದ್ದ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಶಾಹುಲ್‌ಹಮೀದ್ ರವರು “ನಾವು ಆಕ್ಷೇಪಿಸಿದ್ದು ಪ್ರವಾಸದ ವಿಚಾರಕ್ಕಲ್ಲ. ರಾಜ್ಯದ ಸಭಾಪತಿಗಳ ಬಗ್ಗೆ ಅವರು ಆಡಿದ‌ ಮಾತಿಗೆ‌ ನಾವೂ ಆಕ್ಷೇಪಿಸಿದ್ದೇವೆ”. ಎಂದು ಹೇಳಿದರು. ” ನನಗೆ ಅವಮಾನವಾಗಿದೆ. ನನ್ನ ಮತ್ತು ‌ಮುಖ್ಯಾಧಿಕಾರಿಗಳ ಫೋಟೊ ಪತ್ರಿಕೆಯಲ್ಲಿ ಹಾಕಿ ಬರೆದಿದ್ದಾರೆ. ನಾನು ಮಾನನಷ್ಟ ಹೂಡುತ್ತೇನೆ. ಮುಂದಿನ ನಮ್ಮ ಸಾಮಾನ್ಯ ಸಭೆಯಲ್ಲಿ ಈ ಕುರಿತು ನಿರ್ಣಯಕೈಗೊಳ್ಳುತ್ತೇವೆ” ಎಂದು ಶಶಿಕಲಾ ನೀರಬಿದಿರೆ ಹೇಳಿದರು. ಆಗ ಸಚಿವರು “ಯಾರೂ ಯಾರಿಗೂ ಅವಮಾನ ಮಾಡಬಾರದು ಎಂದು‌ ಹೇಳಿ ಕಸ ವಿಲೇವಾರಿಗೆ ತಹಶೀಲ್ದಾರ್ ಜತೆ‌ ಮಾತನಾಡಿ
ಸೂಕ್ತ ಜಾಗ ಗುರುತಿಸಿ ಎಂದು ಅಲ್ಲೇ ಇದ್ದ ಮುಖ್ಯಾಧಿಕಾರಿ ಗಳಿಗೆ ಸೂಚನೆ ನೀಡಿ, ನಾವು ಅನುಮೋದನೆ ನೀಡುತ್ತೇವೆ” ಎಂದು‌ ಹೇಳಿದರು.