ತೋಟಗಾರಿಕಾ ಇಲಾಖೆ, ಸುಳ್ಯ, ಕನಕಮಜಲು, ಮಂಡೆಕೋಲು, ಆಲೆಟ್ಟಿ ಸಹಕಾರ ಸಂಘದಿಂದ ಕೃಷಿ‌ ಮಾಹಿತಿ

0

ಕರಾವಳಿ ಮಣ್ಣು ಸಾಂಬಾರ ಬೆಳೆಗಳಿಗೆ ಸೂಕ್ತ, ಆದರೆ ಶ್ರಮವಹಿಸಿ ದುಡಿಯಬೇಕು: ಡಾ.ಅಂಕೇ ಗೌಡ

“ಕರಾವಳಿಯ ಮಣ್ಣು ಸಾಂಬಾರ‌ ಬೆಳೆ ಬೆಳೆಯಲು ಸೂಕ್ತವಾಗಿದ್ದು, ಶ್ರಮ ವಹಿಸಿ ದುಡಿದರೆ ಉತ್ತಮ ಆದಾಯ‌ ಪಡೆಯಬಹುದು” ಎಂದು ಮಡಿಕೇರಿ ಅಪ್ಪಂಗಳದ ಐಐಹೆಚ್ ಆರ್ ಪ್ರಾಂತೀಯ ಕೇಂದ್ರದ ಮುಖ್ಯಸ್ಥರಾಗಿರುವ ಡಾ.ಅಂಕೇ ಗೌಡ ಹೇಳಿದರು.

ಜು.28ರಂದು ಸುಳ್ಯ ಸಿ.ಎ. ಬ್ಯಾಂಕ್ ‌ಸಭಾಂಗಣದಲ್ಲಿ ತೋಟಗಾರಿಕೆ ಇಲಾಖೆ ಸುಳ್ಯ ಇದರ ವತಿಯಿಂದ ಸುಳ್ಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಇದರ ಸಹಯೋಗದೊಂದಿಗೆ ಕನಕಮಜಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಜಾಲ್ಸೂರು, ಮಂಡೆಕೋಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ಆಲೆಟ್ಟಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಇವರ ಸಹಕಾರದೊಂದಿಗೆ 2025-26 ನೇ ಸಾಲಿನ ಜಿಲ್ಲಾ ಪಂಚಾಯತ್ ಯೋಜನೆಯಡಿ ಕಾಳುಮೆಣಸು, ಜಾಯಿಕಾಯಿ, ಅಪ್ರಧಾನ ಹಣ್ಣುಗಳು ಹಾಗೂ ಕಾಫಿ ಬೇಸಾಯು ಕುರಿತು ಮಾಹಿತಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಸಾಂಬಾರ ಬೆಳೆಯ‌ ಕುರಿತು ನೀಡಿದರು.

“ಸಾಂಬಾರ ಬೆಳೆಗಳಾದ ಕರಿಮೆಣಸು, ಏಳಕ್ಕಿ, ಜಾಯಿಕಾಯಿ, ಶುಂಠಿ, ಅರಸಿನ, ವೆನಿಲ್ಲಾ ಮೊದಲಾದ ಸಾಂಬಾರ ಕೃಷಿ‌ ಈ‌ ಮಣ್ಣಿನಲ್ಲಿ‌ ಬೆಳೆಯಬಹುದು. ಇಲ್ಲಿಯ ವಾತಾವರಣ ಕೂಡಾ ಅದಕ್ಕೆ ಸೂಕ್ತವಾಗಿದೆ” ಎಂದರು.

ಸುಳ್ಯ ಕೃಷಿಕ ಸಮಾಜದ ಅಧ್ಯಕ್ಷ ಕುಸುಮಾಧರ ಎ.ಟಿ. ಕಾರ್ಯಕ್ರಮ ಉದ್ಘಾಟಿಸಿದರು. ನಮ್ಮ ಸಾಂಪ್ರದಾಯಿಕ ಕೃಷಿಯಲ್ಲಿ ತೊಂದರೆಯಾಗಿರುವ ಈ ಸಂದರ್ಭದಲ್ಲಿ ತೋಟಗಾರಿಕೆ ಇಲಾಖೆ ಕೃಷಿಕರಿಗೆ ಧೈರ್ಯ ತುಂಬಿ ಈ ರೀತಿಯ ಮಾಹಿತಿ ನೀಡುತ್ತಿರುವುದು ಶ್ಲಾಘನೀಯ ಎಂದರು.

ಸುಳ್ಯ‌ ಸಿ.ಎ.‌ಬ್ಯಾಂಕ್ ಅಧ್ಯಕ್ಷ ವಿಕ್ರಂ ಅಡ್ಪಂಗಾಯ ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕರಾದ ಪ್ರಮೋದ್, ಜಾಲ್ಸೂರು – ಕನಕಮಜಲು ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸುಧಾಕರ ಕಾಮತ್, ಆಲೆಟ್ಟಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಜಯಪ್ರಕಾಶ್ ಕುಂಚಡ್ಕ, ಮಂಡೆಕೋಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸುರೇಶ್ ಕಣೆಮರಡ್ಕ ಆಗಮಿಸಿದ್ದರು.

ಸಂಪನ್ಮೂಲ ವ್ಯಕ್ತಿಗಳಾಗಿದ್ದ ಭವಾನಿಶಂಕರ್ ಪಿಂಡಿಮನೆ, ಚೇತನ್ ಶೆಟ್ಟಿ ಪೆರುವಾಜೆ ತಾವು ಬೆಳೆದ ಕೃಷಿಗಳು ಕುರಿತು ಮಾಹಿತಿ ನೀಡಿದರು.

ಸಹಾಯಕ ತೋಟಗಾರಿಕಾ ನಿರ್ದೇಶಕರಾದ ಶ್ರೀಮತಿ ಸುಹಾನ ಸ್ವಾಗತಿಸಿದರು. ಹೇಮಂತ್ ಕುಮಾರ್ ಕಂದಡ್ಕ ಹಾಗೂ ಮುರಳಿಕೃಷ್ಣ ಮುಳ್ಯ ಕಾರ್ಯಕ್ರಮ ನಿರ್ವಹಿಸಿದರು. ತೋಟಗಾರಿಕಾ ಅಧಿಕಾರಿ ಅರಬಣ್ಣ ಪೂಜೇರಿ ವಂದಿಸಿದರು.