ಪೆರ್ನಾಜೆ ಬಳಿ ಬಸ್ – ಕಾರು ಅಪಘಾತ

0

ರಸ್ತೆಯಲ್ಲಿ ಚೆಲ್ಲಿದ್ದ ತೈಲಕ್ಕೆ ಜಾರಿದ ಕೆವಿಜಿ ನಿವೃತ್ತ ಪ್ರಾಂಶುಪಾಲರ ಕಾರು

ಸುಳ್ಯದಿಂದ ಪುತ್ತೂರಿಗೆ ಹೋಗುತ್ತಿದ್ದ ಕಾರು ಹಾಗೂ ಮಂಗಳೂರಿನಿಂದ ಮೈಸೂರಿಗೆ ತೆರಳುತ್ತಿದ್ದ ಬಸ್ ನಡುವೆ ಅಪಘಾತ ಸಂಭವಿಸಿ, ಕಾರಿನಲ್ಲಿದ್ದವರು ಗಾಯಗೊಂಡ ಘಟನೆ ಪೆರ್ನಾಜೆ – ಅಮ್ಚಿನಡ್ಕ ನಡುವಿನ ಕಂಟ್ರಮಜಲು ಎಂಬಲ್ಲಿ ನಿನ್ನೆ ನಡೆದಿದೆ.


ಸುಳ್ಯದ ಕೆವಿಜಿ ಪಾಲಿಟೆಕ್ನಿಕ್ ನ ನಿವೃತ್ತ ಪ್ರಾಂಶುಪಾಲರಾದ ಅಮರಪಡ್ನೂರಿನ ಬೊಳ್ಳೂರು ಬಾಲಕೃಷ್ಣ ಗೌಡರು ಹಾಗೂ ಅವರ ಪತ್ನಿ ನಿವೃತ್ತ ನರ್ಸ್ ಸುಶೀಲಾ ಅವರು ನಿನ್ನೆ ಸಂಜೆ ತಮ್ಮ ಇಟಿಯೋಸ್ ಕಾರಿನಲ್ಲಿ ಪುತ್ತೂರು ಕಡೆಗೆ ಹೋಗುತ್ತಿದ್ದರು. ಕನಕಮಜಲು ಪೆರ್ನಾಜೆ ದಾಟಿ ಮುಂದಕ್ಕೆ ಕಂಟ್ರಮಜಲು ಎಂಬಲ್ಲಿ ಹೋಗುತ್ತಿರುವಾಗ ರಸ್ತೆಯಲ್ಲಿ ವಾಹನದ ತೈಲ ಚೆಲ್ಲಿದಂತಿದ್ದು, ಅಲ್ಲಿ ಕಾರು ಜಾರಿ ನಿಯಂತ್ರಣ ತಪ್ಪಿತು. ಎದುರಿನಿಂದ ಬರುತ್ತಿದ್ದ ಮಂಗಳೂರು ಮೈಸೂರು ಬಸ್ಸಿನ ಮುಂಭಾಗದ ಒಂದು ಬದಿಗೆ ಢಿಕ್ಕಿ ಹೊಡೆಯಿತು. ಢಿಕ್ಕಿಯಾದ ರಭಸಕ್ಕೆ ಕಾರು ತಿರುಗಿ ನಿಂತಿತು. ಬಸ್ಸಿಗೆ ಅಲ್ಪಪ್ರಮಾಣದ ಜಖಂ ಆಗಿದ್ದರೆ, ಕಾರಿಗೆ ಮುಂಭಾಗ ಜಜ್ಜಲ್ಪಟ್ಟಿತು. ಬಾಲಕೃಷ್ಣ ಬೊಳ್ಳೂರು ಮತ್ತು ಅವರ ಪತ್ನಿ ಸುಶೀಲಾ ರವರಿಬ್ಬರೂ ಅಲ್ಪಸ್ವಲ್ಪ ಜಖಂಗೊಂಡರು. ಅವರನ್ನು ಪುತ್ತೂರಿನ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕಳುಹಿಸಲಾಯಿತು. ಬಸ್ಸಲ್ಲಿದ್ದ ಪ್ರಯಾಣಿಕರನ್ನು ಬೇರೆ ಬಸ್ಸಲ್ಲಿ ಕಳುಹಿಸಲಾಯಿತು.


ಕಂಟ್ಟಮಜಲು ಬಳಿ ರಸ್ತೆ ತಿರುವು ಮತ್ತು ಇಳಿಜಾರಾಗಿದ್ದು, ಲಾರಿ ಮತ್ತಿತರ ವಾಹನಗಳ ಆಯಿಲ್ ರಸ್ತೆಗೆ ಚೆಲ್ಲಲ್ಪಡುತ್ತದೆ. ಇದರಿಂದ ಈ ಪ್ರದೇಶದಲ್ಲಿ ಆಗಾಗ ಅಪಘಾತಗಳು ಆಗುತ್ತಲೇ ಇರುತ್ತದೆ. ಇಲ್ಲಿ ಅಪಘಾತಗಳು ಆಗದಂತೆ ಹೆದ್ದಾರಿ ಇಲಾಖೆ ಸೂಕ್ತ ವ್ಯವಸ್ಥೆಗಳನ್ನು ಮಾಡಬೇಕಾಗಿದೆ.

ಅಪಘಾತ ವಲಯ ಎಂದೇ ಗುರುತಿಸಿಕೊಂಡಿರುವ ಪೆರ್ನಾಜೆಯ ಕಂಟ್ರಮಜಲು ತಿರುವಿನಲ್ಲಿ ಅಪಘಾತ ನಡೆದಿದೆ. ರಸ್ತೆಯಲ್ಲಿ ತೈಲ ಚೆಲ್ಲಿದ್ದು, ಇದರ ಮೇಲೆ ಕಾರು ಹರಿದಾಗ ಚಾಲಕನ ನಿಯಂತ್ರಣ ಕಳೆದುಕೊಂಡಿದೆ. ಪರಿಣಾಮ ಎದುರಿನಿಂದ ಬಂದ ಬಸ್ ಹಾಗೂ ಕಾರಿನ ನಡುವೆ ಮುಖಾಮುಖಿ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ.

ಕಾರಿನಲ್ಲಿದ್ದ ಗಾಯಾಳುಗಳನ್ನು ಪುತ್ತೂರು ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ತಿಳಿದುಬಂದಿದೆ.