ಜಾಲ್ಸೂರು : ಮಂಗಳೂರು ಪಡಿ ಸಂಸ್ಥೆ ವತಿಯಿಂದ ಗ್ರಾಮ ಶಿಕ್ಷಣ ಅವಲೋಕನ ಕಾರ್ಯಕ್ರಮ

0

ಪಡಿ ಸಂಸ್ಥೆ ಮಂಗಳೂರು ಹಾಗೂ ಜಾಲ್ಸೂರು ಗ್ರಾಮ ಪಂಚಾಯತ್,ಸುಳ್ಯ ಶಿಕ್ಷಣ ಸಂಪನ್ಮೂಲ ಕೇಂದ್ರ ಇದರ ಸಂಯುಕ್ತ ಆಶ್ರಯದಲ್ಲಿ ಸೆ 12 ರಂದು ಗ್ರಾಮ ಶಿಕ್ಷಣ ಅವಲೋಕನ ಕಾರ್ಯಕ್ರಮ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಾಲ್ಸೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಸಾವಿತ್ರಿ ಅಡ್ಕಾರ್ ರವರು ವಹಿಸಿದ್ದರು.
ವೇದಿಕೆಯಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ತಿರುಮಲೇಶ್ವರಿ ಅರ್ಬಡ್ಕ,ಮಾಜಿ ಅಧ್ಯಕ್ಷರಾದ ಕೆ ಎಂ ಬಾಬು,ಪಿ ಡಿ ಓ ಶ್ರೀಮತಿ ಶೈಲಜಾ ಪ್ರಕಾಶ್,
ಪಡಿ ಸಂಸ್ಥೆಯ ತರಬೇತಿ ಸಂಯೋಜಕ ವಿವೇಕ್ ಕಾನಾಡಿ ಮೊದಲಾದವರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಕುರಿತು ಪ್ರಸ್ತಾವಿಕ ಮಾತನಾಡಿದ ಮಂಗಳೂರು ಪಡಿ ಸಂಸ್ಥೆಯ ಜಿಲ್ಲಾ ಸಂಯೋಜಕಿ ಶ್ರೀಮತಿ ರಾಜೇಶ್ವರಿ ‘ಗ್ರಾಮೀಣ ಭಾಗದ ಶಿಕ್ಷಣ ಅವಲೋಕನ ಕಾರ್ಯಕ್ರಮಗಳ ಮೂಲಕ ಪ್ರತಿಯೊಂದು ಗ್ರಾಮದಲ್ಲಿ ಈ ಮೊದಲು ಶಿಕ್ಷಣ ವ್ಯವಸ್ಥೆಗಳು ಯಾವ ರೀತಿ ಇದ್ದವು ಇದೀಗ ಯಾವ ರೀತಿ ಇದೆ ಮತ್ತು ಮುಂದೆ ಅದರ ಹೆಚ್ಚಿನ ಅಭಿವೃದ್ಧಿಗೆ ಯಾವ ರೀತಿಯ ಕೆಲಸ ಕಾರ್ಯಗಳು ನಡೆಯಬೇಕಾಗಿದೆ ಎಂಬ ಬಗ್ಗೆ ಚಿಂತನೆಗಳನ್ನು ನಡೆಸುವುದು ಮತ್ತು ದಾಖಲೆಗಳ ಸಂಗ್ರಹಣೆ ಮಾಡುವುದಾಗಿದೆ. ಅಲ್ಲದೆ ಸಮಾಜದಲ್ಲಿ ಮೂಲಭೂತ ವ್ಯವಸ್ಥೆಗಳಿಂದ ವಂಚಿತಗೊಂಡಿರುವ ಮಕ್ಕಳಿಗೆ ಕಾನೂನಿನ ರೀತಿಯಲ್ಲಿ ಬೇಕಾಗುವ ದಾಖಲೆ ಪತ್ರಗಳನ್ನು ಹೊದಗಿಸಿಕೊಡುವುದು, ಪೋಷಕರಿಗೆ ಅದರ ಮಾಹಿತಿ ನೀಡುವುದು, ಸಂಗ್ರಹ ಈ ಎಲ್ಲಾ ಕೆಲಸ ಕಾರ್ಯಗಳನ್ನು ನಡೆಸುವ ಉದ್ದೇಶವಾಗಿದೆ.ಈಗಾಗಲೇ ಗ್ರಾಮ ಪಂಚಾಯತಿಗೆ ಸಂಬಂಧಪಟ್ಟಂತೆ ಎಷ್ಟು ಮಕ್ಕಳಲ್ಲಿ ಆಧಾರ್ ಕಾರ್ಡ್ ಮತ್ತು ಜನನ ಪ್ರಮಾಣ ಪತ್ರ ಹಾಗೂ ಎಷ್ಟು ಕುಟುಂಬಗಳಿಗೆ ರೇಷನ್ ಕಾರ್ಡ್ ಇನ್ನೂ ಲಭಿಸದೆ ಇದೆ ಎಂಬಿತ್ಯಾದಿ ಮಾಹಿತಿಗಳನ್ನು ಸಂಗ್ರಹಗಳನ್ನು ಮಾಡಲಾಗಿದೆ.ಹಾಗೂ ಮಾಡಿರುವ ಮಾಹಿತಿಗಳನ್ನು ಕಾನೂನು ಸೇವಾ ಪ್ರಾಧಿಕಾರದ ಮೂಲಕ ಅವರ ಗಮನಕ್ಕೆ ನೀಡಿ ಮಕ್ಕಳ ಹಕ್ಕಿನ ವ್ಯವಸ್ಥೆಯನ್ನು ಕಲ್ಪಿಸಿಕೊಡಲು ನಾವೆಲ್ಲರೂ ಯಾವ ರೀತಿ ಸನ್ನದರಾಗಬೇಕಾಗಿದೆ ಎಂಬ ಬಗ್ಗೆ ತರಬೇತಿಯನ್ನು ಪಡಿ ಸಂಸ್ಥೆ ನೀಡುತ್ತಿದೆ ಎಂದು ಹೇಳಿದರು.

ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಸಾವಿತ್ರಿ ಯವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಪಿ ಡಿ ಓ ಶ್ರೀಮತಿ ಶೈಲಜಾ ಮಾತನಾಡಿ ‘ಬದಲಾವಣೆ ಜಗದ ನಿಯಮ, ತಳಹಂತದ ಸಮಸ್ಯೆಗಳನ್ನು ಗುರುತಿಸಿ ಅವುಗಳನ್ನು ಬದಲಾಯಿಸುವುದು ಅಗತ್ಯ.ಈ ರೀತಿಯ ಚರ್ಚೆಗಳು ಗ್ರಾಮೀಣ ಭಾಗದಲ್ಲಿ ನಡೆಯಬೇಕಾಗಿದೆ. ಮಕ್ಕಳಲ್ಲಿ ಹೊಂದಾಣಿಕೆ ಸ್ವಭಾವ ಅತ್ಯಾಗತ್ಯವಿದ್ದು ನೀತಿ ಪಾಠಗಳು, ಪ್ರಾಯೋಗಿಕ ಜ್ಞಾನ ಮಕ್ಕಳಲ್ಲಿ ಬೆಳೆಸಬೇಕಿದೆ. ಜೊತೆಗೆ ಮಕ್ಕಳಿಗೆ ಪಾಠದೊಂದಿಗೆ ಆಟವು ಅಗತ್ಯವಾಗಿದ್ದು ಗ್ರಾಮ ಮಟ್ಟದಲ್ಲಿ ಶಿಕ್ಷಣ ಹಕ್ಕು ಕಾಯಿದೆಯ ಅನುಷ್ಠಾನ ಕ್ಕಾಗಿ ಇಂತಹ ಅವಲೋಕನ ಕಾರ್ಯಕ್ರಮಗಳು ನಡೆಯಬೇಕಾಗಿದೆ ಎಂದರು.

ಉಪಾಧ್ಯಕ್ಷರು ಶ್ರೀಮತಿ ತಿರುಮಲೇಶ್ವರಿ ಮಾತನಾಡಿ ಜಾಲ್ಸೂರು ಪಂಚಾಯತ್ ಮೂಲಕ ಗ್ರಾಮ ಪಂಚಾಯತ್ ಗೆ ಒಂದು ಮಾದರಿ ಶಾಲೆ ನಿರ್ಮಾಣಕ್ಕೆ ಸರಕಾರಕ್ಕೆ ಮನವಿ ನೀಡುವ ಬಗ್ಗೆ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನಿವೃತ ಶಿಕ್ಷಕರಾದ ಶಾಂತಪ್ಪ ಮಾಸ್ಟರ್ ಕಾಳಮ್ಮನೆ, ಅರುಳಪ್ಪನ್ ಮೊದಲಾದವರು ಮಾತನಾಡಿ ಹಿಂದಿನ ಶೈಕ್ಷಣಿಕ ವ್ಯವಸ್ಥೆಗಳು ಹಾಗೂ ಈಗಿನ ಶೈಕ್ಷಣಿಕ ವ್ಯವಸ್ಥೆ ಬಗ್ಗೆ ಮತ್ತು ಮುಂದಿನ ದಿನಗಳಲ್ಲಿ ಯಾವ ರೀತಿ ಬದಲಾವಣೆ ಗೊಳ್ಳಬೇಕಾಗಿದೆ ಎಂಬುದರ ಬಗ್ಗೆ ತಮ್ಮ ಸಲಹೆಗಳನ್ನು ನೀಡಿದರು. ಕದಿಕಡ್ಕ ಶಾಲಾ ಎಸ್‌ಡಿಎಂಸಿ ಅಧ್ಯಕ್ಷೆ ಶ್ರೀಮತಿ ಸುಜಾತ ಭಟ್, ಉಪಾಧ್ಯಕ್ಷ ತಿಮ್ಮಯ್ಯ ಆಚಾರಿ, ಸೋಣಂಗೇರಿ ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಚಿದಾನಂದ ಸೋಣಂಗೇರಿ, ಹಾಗೂ ಅಂಗನವಾಡಿ ಕಾರ್ಯಕರ್ತರು,ಆಶಾ ಕಾರ್ಯಕರ್ತರು,ಸುಳ್ಯ ಶಿಕ್ಷಣ ಸಂಪನ್ಮೂಲ ಕೇಂದ್ರದ ಸದಸ್ಯರು ಹಾಗೂ ತರಬೇತುದಾರರಾದ ನಾರಾಯಣ ಕಿಲಂಗೋಡಿ, ಶಿಕ್ಷಣ ಸಂಪನ್ಮೂಲ ಕೇಂದ್ರಗಳ ಒಕ್ಕೂಟ ದಕ್ಷಿಣ ಕನ್ನಡ ಜಿಲ್ಲೆ ಇದರ ಉಪಾಧ್ಯಕ್ಷ ಹಸೈನಾರ್ ಜಯನಗರ ಮೊದಲಾದವರು ಭಾಗವಹಿಸಿದ್ದರು.

ಕಾರ್ಯಕ್ರಮದ ಸಂಯೋಜಕಿ ಹಾಗೂ ಪುತ್ತೂರು ನ್ಯಾಯಾಲಯದ ಪ್ಯಾನಲ್ ವಕೀಲೆ ಕು.ರಾಜೇಶ್ವರಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.