ನಮ್ಮ ಜೀವನದ ಮೂಲಬೇರು ದೇವತಾರಾಧನೆ – ಸುಬ್ರಹ್ಮಣ್ಯ ಶ್ರೀ
ಭಕ್ತಿ ಶ್ರದ್ಧೆಯಿಂದ ದೇವರ ಸೇವೆ ಮಾಡಿ ಮಾನವ ಜನ್ಮ ಸಾರ್ಥಕಗೊಳಿಸೋಣ – ಸತ್ಯನಾರಾಯಣ ಹೆಗ್ಡೆ















ನಮ್ಮ ಜೀವನದ ಮೂಲಬೇರು ದೇವತಾರಾಧನೆ. ದೇವರ ಸಾನಿಧ್ಯಕ್ಕೆ ನೀರೆದರರೆ ಮರದ ಬೇರಿಗೆ ನೀರೆರೆದಂತೆ ಆಗ ಮರ ಹೇಗೆ ಚಿಗುರೊಡೆಯುತ್ತದೋ ಅದೇ ರೀತಿ ದೇವತಾ ಸಾನಿಧ್ಯದ ವೃದ್ಧಿಯಾದರೆ ನಮ್ಮ ಬದುಕಲ್ಲಿ ಅಭಿವೃದ್ಧಿ ಸಾಧ್ಯ. ಸಂಕಷ್ಟದಲ್ಲಿ ಎಲ್ಲರೂ ಕೈಚೆಲ್ಲಿದಾಗ ಕೈಹಿಡಿತುವವರು ಶ್ರೀ.ಕ್ಷೇ.ಧ.ಗ್ರಾ. ಯೋಜನೆಯ ಶೌರ್ಯ ವಿಪತ್ತು ದಳದ ಸದಸ್ಯರು. ಅವರಿಗೆ ದೇವರ ಅನುಗ್ರಹ ಇರಲಿ ಎಂದು ಸುಬ್ರಹ್ಮಣ್ಯ ಶ್ರೀ ಹೇಳಿದರು. ಅವರು ಸೆ. 26ರಂದು ಬೆಳ್ಳಾರೆಯ ಗೌರಿಪುರಂ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ ಸಂದರ್ಭದಲ್ಲಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ, ಶೌರ್ಯ ವಿಪತ್ತು ಘಟಕದ ಸದಸ್ಯರನ್ನು ಗೌರವಿಸಿದರು. ಧಾರ್ಮಿಕ ಉಪನ್ಯಾಸ ನೀಡಿದ ಮರ್ದಾಳ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಕಾರ್ಯದರ್ಶಿ ಸತ್ಯನಾರಾಯಣ ಹೆಗ್ಡೆ ನಡುಮಜಲು ಮಾತನಾಡಿ “ನಾವು ಅರಿಯದೇ ಮಾಡಿದ ತಪ್ಪನ್ನು ತಿದ್ದಿಕೊಂಡು ದೇವಿಯ ಸೇವೆ ಮಾಡಿದರೆ ದೇವಿ ನಮ್ಮನ್ನು ಕ್ಷಮಿಸಿ ಅನುಗ್ರಹಿಸುತ್ತಾಳೆ. ಗೊತ್ತಿದ್ದೂ ಪುಣ್ಯಕ್ಷೇತ್ರದಲ್ಲಿ ತಪ್ಪು ಮಾಡಿದರೆ ನಮ್ಮ ಪರಿವಾರಕ್ಕೆ ಶಾಪ ತಟ್ಟುತ್ತದೆ. ಭಕ್ತಿತಿಂದ ಶ್ರದ್ಧೆಯಿಂದ ರಾಜರಾಜೇಶ್ವರಿ ತಾಯಿಯ ಸೇವೆ ಮಾಡಿ ನಮ್ಮ ಪವಿತ್ರ ಮಾನವ ಜನ್ಮವನ್ನು ಸಾರ್ಥಕಗೊಳಿಸೋಣ” ಎಂದರು.

ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಗೋಪಾಲಕೃಷ್ಣ ನಾಯಕ್ ಪೊಸವಳಿಗೆಯವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದ ವೇದಿಕೆಯಲ್ಲಿ ಆಡಳಿತ ಸಮಿತಿ ಅಧ್ಯಕ್ಷ ಚಂದ್ರಹಾಸ ಮಣಿಯಾಣಿ ಪಡ್ಪು, ಪ್ರಧಾನ ಕಾರ್ಯದರ್ಶಿ ಕುಶಾಲಪ್ಪ ಗೌಡ ಮಣಿಮಜಲು, ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ರಾಮಕೃಷ್ಣ ಭಟ್ ಕುರುಂಬುಡೇಲು, ಕ್ಷೇತ್ರದ ತಂತ್ರಿಗಳಾದ ಕುನ್ನತ್ತಿಲ್ ಬ್ರಹ್ಮಶ್ರೀ ತಂತ್ರಿ ಮುರಳಿಕೃಷ್ಣ ನಂಬೂದಿರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕು. ಶ್ರೇಯಾ ಕುರುಂಬುಡೇಲು ಧೃತಿ ಪಡ್ಪು ಪ್ರಾರ್ಥಿಸಿದರು. ಚಂದ್ರಹಾಸ ಮಣಿಯಾಣಿ ಪಡ್ಪು ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿ, ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ಆರ್.ಕೆ. ಭಟ್ ಕುರುಂಬುಡೇಲು ವಂದಿಸಿದರು. ಪ್ರದೀಪ್ ಕುಮಾರ್ ರೈ ಪನ್ನೆ ಕಾರ್ಯಕ್ರಮ ನಿರೂಪಿಸಿದರು. ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಪದಾಧಿಕಾರಿಗಳು, ಸದಸ್ಯರು, ಆಡಳಿತ ಸಮಿತಿ ಪದಾಧಿಕಾರಿಗಳು ಮತ್ತು ಸದಸ್ಯರು, ಭಕ್ತಾದಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಸೆ. 21ರಂದು ಆರಂಭಗೊಂಡ ನವರಾತ್ರಿ ಉತ್ಸವ ಅ. 1ರ ತನಕ ನಡೆಯಲಿದೆ. ಪ್ರತಿದಿನ ಸಂಜೆ 6.00 ಗಂಟೆಯಿಂದ ವಿವಿಧ ಭಜನಾ ತಂಡಗಳಿಂದ ಭಜನಾ ಕಾರ್ಯಕ್ರಮ, ಶ್ರೀ ರಾಜರಾಜೇಶ್ವರಿ ದೇವಿಗೆ ಮಹಾಪೂಜೆ, ಪ್ರಸಾದ ವಿತರಣೆ ಬಳಿಕ ಅನ್ನಸಂತರ್ಪಣೆ ಜರಗಲಿದೆ. ಸೆ. 26ರಂದು ವಿಶೇಷವಾಗಿ ಶ್ರೀ ಕ್ಷೇತ್ರದ ತಂತ್ರಿಗಳಾದ ಕುನ್ನತ್ತಿಲ್ ಬ್ರಹ್ಮಶ್ರೀ ತಂತ್ರಿ ಮುರಳಿಕೃಷ್ಣ ನಂಬೂದರಿಯವರ ನೇತೃತ್ವದಲ್ಲಿ ಬೆಳಿಗ್ಗೆ ಗಣಪತಿ ಹವನ, ವಾಹನಪೂಜೆ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ಬಳಿಕ ಅನ್ನಸಂತರ್ಪಣೆ, ಸಂಜೆ ಶ್ರೀಚಕ್ರ ದುರ್ಗಾಪೂಜೆ ನಡೆಯಿತು.











