ವೈಭವದ ಸುಳ್ಯ ದಸರಾ ಉತ್ಸವ ಸಂಪನ್ನ

0

ಹತ್ತಾರು ಟ್ಯಾಬ್ಲೋ, ವೈವಿಧ್ಯಮಯ ತಂಡಗಳ ಪ್ರದರ್ಶನವನ್ನು ಕಣ್ತುಂಬಿಕೊಂಡ ಸಾವಿರಾರು ಮಂದಿ

ವೈಭವದ ಸುಳ್ಯ ಶ್ರೀ ಶಾರದಾಂಬ ಉತ್ಸವ – ಸುಳ್ಯ ದಸರಾ ವೈಭವದ ಶೋಭಾಯಾತ್ರೆಯೊಂದಿಗೆ ನಿನ್ನೆ ಸಂಪನ್ನಗೊಂಡಿದೆ.

ಸುಳ್ಯ ಶಾರದಾಂಬ ವೇದಿಕೆಯಿಂದ ಶಾಸಕಿ ಭಾಗೀರಥಿ ಮುರುಳ್ಯ ಚಾಲನೆ ನೀಡುವುದರೊಂದಿಗೆ ಶೋಭಾಯಾತ್ರೆ ಆರಂಭಗೊಂಡಿತು. ಶಾರದಾ ಮಾತೆಯನ್ನು ಕುಳ್ಳಿರಿಸಿದ ವಾಹನದ ಹಿಂದೆ ಹತ್ತಾರು ಟ್ಯಾಬ್ಲೋಗಳು, ಸಾಂಸ್ಕೃತಿಕ ಕಲಾ ತಂಡಗಳು ಮೆರವಣಿಗೆಗೆ ಮೆರುಗು ನೀಡಿದವು.

ಶಾರದಾಂಬ ವೇದಿಕೆ ಬಳಿಯಿಂದ ಹೊರಟ ಮೆರವಣಿಗೆ ವಿವೇಕಾನಂದ ವೃತ್ತ, ಜೂ‌.ಕಾಲೇಜು ರಸ್ತೆಯಾಗಿ ಮುಖ್ಯ ರಸ್ತೆ ಸೇರಿ ಓಡಬಾಯಿವರೆಗೆ ಸಾಗಿ ಬಂದು ಮುಖ್ಯರಸ್ತೆಯಲ್ಲಿ ಗಾಂಧಿನಗರಕ್ಕೆ ಹೋಗಿ, ರಥಬೀದಿಯಿಂದಾಗಿ ಸಾಗಿ ಕಾಂತಮಂಗಲ ಪಯಸ್ವಿನಿ ಹೊಳೆಯಲ್ಲಿ ಶಾರದಾ ದೇವಿಯ ಜಲಸ್ಥಂಭನ ನಡೆಯಿತು.

ರಸ್ತೆ ಎರಡೂ ಬದಿಗಳಲ್ಲಿ ಸಾವಿರಾರು ಮಂದಿ ನಿಂತು ಶೋಭಾಯಾತ್ರೆ ವೀಕ್ಷಿಸಿದರು. ಅಲ್ಲಲ್ಲಿ ರಸಮಂಜರಿ ಕಾರ್ಯಕ್ರಮ ಆಯೋಜಿಸಿದ್ದರು. ಬಿಗು ಪೋಲಿಸ್ ಬಂದೋಬಸ್ತ್ ಮಾಡಲಾಗಿತ್ತು. ಸಮಿತಿಗಳ ಸಂಘಟಕರು ಮುತುವರ್ಜಿ ವಹಿಸಿ ಮೆರವಣಿಗೆ ಗೆ ಯಶಸ್ವಿಯಾಗಿ ಮತ್ತು ನಿಗದಿತ ಸಮಯಕ್ಕೆ ಮುಗಿಯುವಂತೆ ನೋಡಿಕೊಂಡರು. (ಚಿತ್ರ : ನವೀನ್ ಗೋಪಾಲ್ ಸ್ಟುಡಿಯೋ)