ಕೇಂದ್ರ ಸಚಿವರಿಗೆ ನಿಹಾಲ್ ಕೋಡ್ತುಗುಳಿ ಮನವಿ
ಸುಳ್ಯ ತಾಲೂಕಿನ ಅಡಿಕೆ ಕೃಷಿಗೆ ಬಾಧಿಸಿರುವ ಎಲೆಚುಕ್ಕಿ ಮತ್ತು ಹಳದಿ ರೋಗದ ವ್ಯಾಪಕ ಸಮಸ್ಯೆಗೆ ವೈಜ್ಞಾನಿಕ ಪರಿಹಾರದ ಕುರಿತು ಕ್ರಮ ಕೈಗೊಳ್ಳಬೇಕೆಂದು ಜೆಡಿಎಸ್ ಯುವ ನಾಯಕ ನಿಹಾಲ್ ಎಸ್. ಕೋಡ್ತುಗುಳಿ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿಯವರಿಗೆ ಮನವಿ ಸಲ್ಲಿಸಿದ್ದಾರೆ.

ಕೇಂದ್ರ ಸಚಿವರಿಗೆ ಸಲ್ಲಿಸಿದ ಮನವಿಯಲ್ಲಿ ಸುಳ್ಯ ತಾಲೂಕಿನ ಹೆಚ್ಚಿನ ರೈತರು ಅಡಿಕೆ ಕೃಷಿಯನ್ನು ಅವಲಂಬಿಸಿದ್ದು ಇದೀಗ ಕೆಲವು ವರ್ಷಗಳಿಂದ ವ್ಯಾಪಕವಾಗಿ ಅಡಿಕೆ ಮರಗಳಿಗೆ ಎಲೆಚುಕ್ಕಿ ಮತ್ತು ಹಳದಿ ಎಲೆ ರೋಗ ತಗುಲಿ ಸುಳ್ಯ ತಾಲೂಕಿನ ಸುಮಾರು 35 ಗ್ರಾಮಗಳ ರೈತರು ಕಂಗಾಲಾಗಿದ್ದು ಶೋಚನೀಯ ಪರಿಸ್ಥಿತಿಯಲ್ಲಿದ್ದಾರೆ. ಈ ಬಗ್ಗೆ ಈ ತನಕ ಕೇಂದ್ರೀಯ ವಿಜ್ಞಾನ ಮತ್ತು ಕೃಷಿ ಸಂಶೋಧನಾ ಸಂಸ್ಥೆಗಳಿಂದ (CPCRI) ಯಾವುದೇ ವೈಜ್ಞಾನಿಕ ಪರಿಹಾರ ಸಿಕ್ಕಿರುವುದಿಲ್ಲ. ತಾಲೂಕಿನ ಕೃಷಿಕರ ಆರ್ಥಿಕ ಸಮಸ್ಯೆ ದಿನಂದಿನ ಬಿಗಡಾಯಿಸುತ್ತಿದೆ. ಅಲ್ಲದೆ ಇತ್ತೀಚೆಗಿನ WHO ವರದಿಗಳ ಪ್ರಕಾರ ಅಡಿಕೆ ಬೆಳೆಗಾರರ ತಲೆ ಮೇಲೆ ‘ಅಡಿಕೆ ಆರೋಗ್ಯ ಹಾನಿಕಾರಕ’ ಎಂಬ ತೂಗುಗತ್ತಿಯು ನೇತಾಡುತ್ತಿದೆ.
















ಈ ಮಾರಕ ರೋಗ ನಿವಾರಣೆಗೆ ಸೂಕ್ತ ವೈಜ್ಞಾನಿಕ ಪರಿಹಾರದ ತುರ್ತು ಅವಶ್ಯಕತೆ ಇರುತ್ತದೆ. ಗ್ರಾಮೀಣ ಮಟ್ಟದ ಕೃಷಿಕರ ತಳಮಟ್ಟದ ಸಮಸ್ಯೆಯನ್ನು ಅರಿತಿರುವ ತಾವು ಈ ಬಗ್ಗೆ ಸೂಕ್ತ ಕಾರ್ಯಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸಚಿವರನ್ನು ಭೇಟಿಯಾದ ನಿಹಾಲ್ ಸುಧೀರ್ಘ ವಾಗಿ ಸಮಸ್ಯೆಗಳನ್ನು ವಿವರಿಸಿರುವುದಾಗಿ ತಿಳಿದುಬಂದಿದೆ. ಸಮಸ್ಯೆ ಆಲಿಸಿದ ಸಚಿವರು ಈ ಕುರಿತು ಸ್ಪಂದನೆ ನೀಡುವ ಭರವಸೆ ನೀಡಿದ್ದಾರೆಂದು ನಿಹಾಲ್ ಸುದ್ದಿಗೆ ತಿಳಿಸಿದ್ದಾರೆ.










