ತತ್ವಮಸಿ ಚಾರಿಟೇಬಲ್ ಟ್ರಸ್ಟ್ ನಿಂದ ವಂಚನೆ ಪ್ರಕರಣ ಸಾಬೀತು: ಶಿಕ್ಷೆಯ ಪ್ರಮಾಣ ಪ್ರಕಟಿಸಿದ ಸುಳ್ಯದ ನ್ಯಾಯಾಲಯ

0

ತತ್ವಮಸಿ ಚಾರಿಟೇಬಲ್ ಎಂಬ ಹೆಸರಿನಲ್ಲಿ ಬೆನಿಫಿಟ್ ಸ್ಕೀಮ್ ನಡೆಸಿ ಜನರಿಗೆ ವಂಚಿಸಿದ್ದಾರೆನ್ನುವ ಪ್ರಕರಣದ ವಿಚಾರಣೆ ನ್ಯಾಯಾಲಯದಲ್ಲಿ ನಡೆದು ಆರೋಪ ಸಾಬೀತಾಗಿದ್ದು, ಇದೀಗ ನ್ಯಾಯಾಲಯ ಶಿಕ್ಷೆ ಪ್ರಮಾಣವನ್ನು ಘೋಷಿಸಿದೆ.

ಆರೋಪಿಗಳಾದ 1) ಶಿವಪ್ರಕಾಶ್, 2) ಕೆ.ಪಿ. ಗಣೇಶ್, 3) ಕೆ.ಪಿ. ಕೃಷ್ಣಪ್ಪ ಗೌಡ, 4) ಗೀತಾ ಕೆ.ಎಸ್., 5) ಭಾರತಿ, 6) ಗೀತಾ ಗಣೇಶ್, 7) ಎನ್.ಇ. ವೈ. ಕಮಲಾಕ್ಷ, 8) ಕೆ. ನಾಗೇಶ ರವರು ಸುಳ್ಯ ತಾಲೂಕಿನ ಸುಳ್ಯ ಕಸಬಾ ಗ್ರಾಮದ ವಿವೇಕಾನಂದ ಸರ್ಕಲ್ ಬಳಿ ಅಂಬಟಡ್ಕ ಎಂಬಲ್ಲಿರುವ ಸಮೃದ್ಧಿ ಎಂಬ ಹೆಸರಿನ ಕಾಂಪ್ಲೆಕ್ಸ್ ನಲ್ಲಿ 2013 ನೇ ಇಸವಿಯ ನವೆಂಬರ್‌ ತಿಂಗಳಿನಲ್ಲಿ ಶ್ರಿ ತತ್ವಮಸಿ ಚಾರಿಟೇಬಲ್ ಟ್ರಸ್ಟ್(ರಿ) ಮತ್ತು ಶ್ರೀ ತತ್ವಮಸಿ ಎಂಟರ್ ಪ್ರೈಸಸ್ (ರಿ) ಎಂಬ ಹೆಸರಿನಲ್ಲಿ ಸಂಸ್ಥೆ ಪ್ರಾರಂಭಿಸಿ ಈ ಸಂಸ್ಥೆಯ ಪರವಾಗಿ ಸುಳ್ಯ ಪೇಟೆಯ ಗಾಂಧಿನಗರ ಎಂಬಲ್ಲಿ ತತ್ವಮಸಿ ಇಲೆಕ್ಟ್ರಾನಿಕ್ಸ್ ಎಂಬ ಹೆಸರಿನ ಅಂಗಡಿಯನ್ನು ತೆರೆದು ಆರೋಪಿಗಳು ಈ ಸಂಸ್ಥೆಯಲ್ಲಿ ಒಟ್ಟು ಸುಮಾರು 70 ಮಂದಿ ಏಜೆಂಟರುಗಳನ್ನು ನೇಮಕ ಮಾಡಿಕೊಂಡು ಬೆನಿಫಿಟ್ ಸ್ಕೀಂ ಒಂದನ್ನು ಪ್ರಾರಂಭಿಸಿ ಪ್ರತಿ ಏಜೆಂಟರುಗಳು ಸದಸ್ಯರನ್ನು ನೇಮಿಸುವಂತೆ ಹಾಗೂ ಪ್ರತೀ ಸದಸ್ಯರಿಂದ ವಾರವೊಂದರ ₹150/- ರಂತೆ 50 ವಾರಗಳ ಕಾಲ ಸಂಗ್ರಹಿಸುವಂತೆ ಹಾಗೂ ವಿಜೇತರಾದವರು ಮುಂದಿನ ಕಂತನ್ನು ಕಟ್ಟದೇ ಇರುವ ಬಗ್ಗೆ ಹಾಗೂ 50 ವಾರಗಳ ಹಣವನ್ನು ಸಂಸ್ಥೆಗೆ ತುಂಬಿದ ನಂತರ ಅವರುಗಳು ತುಂಬಿದ ಒಟ್ಟು ಹಣ ₹7500/- ರ ವಸ್ತುಗಳನ್ನು ಸಂಸ್ಥೆಯಿಂದ ಕೊಡುವುದಾಗಿ ಆರೋಪಿಗಳು ಏಜೆಂಟರುಗಳ ಮುಖಾಂತರ ಸಾರ್ವಜನಿಕರನ್ನು ನಂಬಿಸಿ ಏಜೆಂಟರುಗಳಿಂದ ಒಪ್ಪಿಗೆ ಪತ್ರಗಳನ್ನು ಪಡೆದುದಲ್ಲದೇ ಏಜೆಂಟರುಗಳು ಒಟ್ಟು ಸುಮಾರು 6824 ಸದಸ್ಯರನ್ನು ಸಂಸ್ಥೆಯ ಬೆನಿಫಿಟ್ ಸ್ಕೀಂ ಗೆ ಸೇರಿಸಿಕೊಂಡಿದ್ದು ಸದಸ್ಯರುಗಳಿಗೆ ಹಣ ತುಂಬಿದ ಲೆಕ್ಕಾಚಾರ ಬರೆಯಲು ಏಜೆಂಟರುಗಳು ಸಂಸ್ಥೆಯಿಂದ ನೀಡಿರುವ ಕಾಡ್೯ಗಳನ್ನು ಎಲ್ಲರಿಗೂ ವಿತರಣೆ ಮಾಡಿದ್ದು ಈ ಸಂಸ್ಥೆಯು 49 ವಾರಗಳು ಸರಿಯಾಗಿ ನಡೆದು ಪ್ರತೀವಾರ ಡ್ರಾ ಮಾಡಿ ವಿಜೇತರಾದವರಿಗೆ ಬಹುಮಾನಗಳನ್ನು ಕೊಟ್ಟಿದ್ದು, 50 ನೇ ಡ್ರಾ ವನ್ನು ಆರೋಪಿಗಳು ನಡೆಸಿರಲಿಲ್ಲ. ಈ ವಿಚಾರದಲ್ಲಿ ಸದಸ್ಯರುಗಳು ಮತ್ತು ಏಜೆಂಟರುಗಳು ಕೇಳಿದಾಗ ಆರೋಪಿಗಳು 8 ಮಂದಿ ಈ ಬಗ್ಗೆ ಸರಿಯಾಗಿ ಜವಾಬು ನೀಡದೇ ಸಂಸ್ಥೆಯನ್ನು ಮುಚ್ಚಿ ಅಲ್ಲಿಂದ ಪರಾರಿಯಾಗಿರುತ್ತಾರೆ‌. ಅದರಲ್ಲಿ ಒಂದರಿಂದ ಆರನೇ ಆರೋಪಿಗಳು ಪರಸ್ಪರ ಸಂಬಂಧಿಕರಾಗಿದ್ದು ಏಳು ಮತ್ತು ಎಂಟನೇ ರವರು ಸಂಸ್ಥೆಯಲ್ಲಿ ಕೆಲಸ ಮಾಡಿಕೊಂಡು ಏಜೆಂಟ್ ಆಗಿರುವವರಾಗಿರುತ್ತಾರೆ. ಈ ಸಂಸ್ಥೆಯ ಒಟ್ಟು 70 ಏಜೆಂಟರುಗಳು ಒಟ್ಟು 6824 ಸದಸ್ಯರನ್ನು ಸಂಸ್ಥೆಗೆ ಸೇರಿಸಿದ್ದು, ಸಂಸ್ಥೆಯವರು 1757 ಸದಸ್ಯರಿಗೆ ಬಹುಮಾನವನ್ನು ನೀಡಿದ್ದು , ಈ ಪೈಕಿ 952 ಸದಸ್ಯರು ಹಣ ಕಟ್ಟದೇ ಅವರ ಸದಸ್ಯತ್ವ ರದ್ದಾಗಿರುತ್ತದೆ. ಉಳಿದ 4115 ಸದಸ್ಯರಿಗೆ ಅವರು ಕಟ್ಟಿದ ₹3,08,62,500/- ಹಣವನ್ನಾಗಲೀ ಯಾವುದೇ ವಸ್ತುವನ್ನಾಗಾಲಿ ನೀಡದೇ ವಂಚಿಸಿದ ಪ್ರಕರಣವಾಗಿರುತ್ತದೆ.

ಪ್ರಕರಣದ ವಿಚಾರಣೆಯು ಹಿರಿಯ ಸಿವಿಲ್ ಜಡ್ಜ್ ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯದಲ್ಲಿ ನ್ಯಾಯಾಧೀಶರಾದ ಬಿ. ಮೋಹನ್ ಬಾಬು ರವರ ಸಮಕ್ಷಮ ನಡೆದು ಅಕ್ಟೋಬರ್ 30 ರಂದು ಈ ಆರೋಪಿಗಳಲ್ಲಿ ಆರೋಪಿ 2, 4 ಮತ್ತು 5 ರವರುಗಳ ಅಪರಾಧ ಸಾಬೀತಾಗಿ ಅವರುಗಳನ್ನು ದೋಷಿ ಎಂದು ತೀರ್ಮಾನಿಸಿ ಉಳಿದ ಆರೋಪಿ 3, 6, 7 ಮತ್ತು 8 ರವರುಗಳ ಅಪರಾಧ ಸಾಬೀತಾಗದೆ ಅವರುಗಳನ್ನು ಬಿಡುಗಡೆಮಾಡಿ ತೀರ್ಪು ನೀಡಿರುತ್ತಾರೆ. 1ನೇ ಆರೋಪಿಯು ಮರಣಹೊಂದಿರುವುದರಿಂದ ಅವರಮೇಲಿನ ಪ್ರಕರಣ ಸ್ಥಗಿತಗೊಳಿಸಲಾಗಿರುತ್ತದೆ.

ನವೆಂಬರ್ 3 ರಂದು ಶಿಕ್ಷೆಯ ಪ್ರಮಾಣಕ್ಕಾಗಿ ವಾದಮಂಡಿಸಲು ಅವಕಾಶ ನೀಡಿ, ನ್ಯಾಯಾಧೀಶರು ಈ ಕೆಳಕಂಡಂತೆ ಶಿಕ್ಷೆ ಪ್ರಕಟಿಸಿರುತ್ತಾರೆ.

ಆರೋಪಿಗಳಾದ 2, 4 ಮತ್ತು 5 ರವರುಗಳಿಗೆ ಕಲಂ 406 ಸಹವಾಚಕ 149 ರಡಿಯಲ್ಲಿ 3 ವರ್ಷಗಳ ಸಾದಾ ಕಾರಾಗೃಹ ವಾಸ, ಕಲಂ 409 ಮತ್ತು 420 ರಡಿಯಲ್ಲಿ ಸಹವಾಚಕ 149 ರೊಂದಿಗೆ ಎರಡೂ ಕಲಂಗಳಿಗೆ ಆರೋಪಿಗಳಿಗೆ ಪ್ರತ್ಯೇಕವಾಗಿ 3 ವರ್ಷಗಳ ಕಾಲ ಸಾದಾ ಕಾರಾಗೃಹ ವಾಸ ಮತ್ತು ₹10,000/- ದಂಡ, ದಂಡ ಕಟ್ಟಲು ತಪ್ಪಿದ್ದಲ್ಲಿ 6 ತಿಂಗಳ ಹೆಚ್ಚುವರಿ ಸಾದಾ ಕಾರಾಗೃಹ ವಾಸ ವಿಧಿಸಲಾಗಿದೆ. ಈ ಮೇಲಿನ ಎಲ್ಲಾ ಶಿಕ್ಷೆಗಳು ಏಕಕಾಲಕ್ಕೆ ಜಾರಿಗೊಳಿಸುವಂತೆ ಆದೇಶಿಸಲಾಗಿದೆ.

ಸರ್ಕಾರದ ಪರವಾಗಿ ಪ್ರಕರಣವನ್ನು ಸಹಾಯಕ ಸರ್ಕಾರಿ ಅಭಿಯೋಜಕರು ನಡೆಸಿ ವಾದ ಮಂಡಿಸಿರುತ್ತಾರೆ.