ನಿಂತಿಕಲ್ಲು: ಕೆ ಎಸ್ ಗೌಡ ಸಮೂಹ ವಿದ್ಯಾಸಂಸ್ಥೆಗಳಲ್ಲಿ ವಾರ್ಷಿಕೋತ್ಸವ – ವರ್ಷ ವೈಭವ – 2025

0

“ಗೆಲುವಿನ ಹಾದಿಗೆ ಬೆಳಕ ಬೀರುವ” ಎಂಬ ಧ್ಯೇಯದೊಂದಿಗೆ ಮುನ್ನಡೆಯುತ್ತಿರುವ ನಿಂತಿಕಲ್ಲಿನ ‘ಕೆ.ಎಸ್. ಗೌಡ ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢಶಾಲೆ ಮತ್ತು ಕೆ ಎಸ್ ಗೌಡ ಪದವಿ ಪೂರ್ವ ಕಾಲೇಜುಗಳ ವಾರ್ಷಿಕೋತ್ಸವ ಡಿ. 3 ರಂದು ನಡೆಯಿತು.

ಸಮೂಹ ವಿದ್ಯಾಸಂಸ್ಥೆಯ ಅಧ್ಯಕ್ಷರಾದ ಅಶೋಕ್ ಕುಮಾರ್ ಕೆ.ಎಸ್ ರವರ ನೇತೃತ್ವದಲ್ಲಿ ಕಾರ್ಯಕ್ರಮವನ್ನು ಧ್ವಜಾರೋಹಣದ ಮೂಲಕ ಸಂಸ್ಥೆಯ ಶಿಕ್ಷಕ ರಕ್ಷಕ ಸಮಿತಿಯ ಪೂರ್ವಾಧ್ಯಕ್ಷ ಬಾಲಕೃಷ್ಣ ರೈ ಪಾದೆಕಲ್ಲು ಉದ್ಘಾಟಿಸಿದರು. ಕೆ.ಎಸ್ ಗೌಡ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಸದಾನಂದ ರೈ ಕೂವೆಂಜ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಕೆ ಎಸ್ ಗೌಡ ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗದ ವಾರ್ಷಿಕ ವರದಿಯನ್ನು ಮುಖ್ಯ ಶಿಕ್ಷಕರಾದ ಉಮೇಶ ಗೌಡ ಹೆಚ್ ಮತ್ತು ಕೆ ಎಸ್ ಗೌಡ ಪದವಿ ಪೂರ್ವ ಕಾಲೇಜು ವಿಭಾಗದ ವಾರ್ಷಿಕ ವರದಿಯನ್ನು ಪ್ರಾಂಶುಪಾಲರಾದ ಸದಾನಂದ ರೈ ಕೂವೆಂಜ ವಾಚಿಸಿದರು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಪುತ್ತೂರು ಪ್ರಗತಿ ಎಜ್ಯುಕೇಶನ್ ಫೌಂಡೇಶನ್ ನ ಸ್ಥಾಪಕ ಸಂಚಾಲಕರಾದ ಗೋಕುಲ್ ನಾಥ್, ವಿದ್ಯಾರ್ಥಿಗಳ ಜೀವನದಲ್ಲಿ ಶಿಸ್ತು ಎಂಬುದು ಅತ್ಯಂತ ಮಹತ್ವದ ಪಾತ್ರ ವಹಿಸುತ್ತದೆ. ವಿದ್ಯಾರ್ಥಿಗಳ ಕಲಿಕೆ ಶಿಸ್ತಿನ ಮೇಲೆ ನಿಂತಿದೆ. ಕಲಿಕೆಯೊಂದಿಗೆ ಶಿಸ್ತು ಪ್ರಾಮಾಣಿಕ ತವಾಗಿ ಸೇರಿಕೊಂಡಾಗ ಮಾತ್ರ ಕಲಿಕೆಗೆ ಪ್ರಗತಿ ಲಭ್ಯವಾಗುತ್ತದೆ ಎಂದು ಶುಭ ಹಾರೈಸಿದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ಸಂಸ್ಥೆಯ ಶಿಕ್ಷಕ ರಕ್ಷಕ ಸಮಿತಿಯ ಪೂರ್ವಾಧ್ಯಕ್ಷರಾದ ಬಾಲಕೃಷ್ಣ ರೈ ಪಾದೆಕಲ್ಲು ಕಾರ್ಯಕ್ರಮದ ಸಂಘಟನೆಯ ಕುರಿತು ಮಾತನಾಡುತ್ತಾ, ಇಂತಹ ಸಂಘಟನೆ ಪ್ರತಿಯೊಬ್ಬನಲ್ಲೂ ಇದ್ದಾಗ ಯಶಸ್ಸು ಎಂಬುದು ಶತಸಿದ್ಧ ಎಂದರು.

ಕೆ ಎಸ್ ಗೌಡ ಸಮೂಹ ವಿದ್ಯಾಸಂಸ್ಥೆಗಳ ಆಡಳಿತಾಧಿಕಾರಿಗಳಾದ ಕುಮಾರಸ್ವಾಮಿ ಕೆ.ಎಸ್ ಸಂಸ್ಥೆ ನಡೆದು ಬಂದ ಹಾದಿಯ ಕುರಿತು ಮೆಲುಕು ಹಾಕುತ್ತಾ ಸಂಸ್ಥೆಯ ಏಳಿಗೆ ಮತ್ತು ವಿದ್ಯಾರ್ಥಿಗಳ ಏಳಿಗೆ ಒಂದಕ್ಕೊಂದು ಪೂರಕವಾಗಿ ಇರುವಂತದ್ದು. ಈ ಅಂಶ ಎಲ್ಲರ ಅರಿವಿನಲ್ಲೂ ಸದಾ ಇರಲಿ. ಆ ಮೂಲಕ ಸಾರ್ಥಕ ಜೀವನ ನಮ್ಮೆಲ್ಲರದ್ದಾಗಲಿ ಎಂದು ಶುಭ ಹಾರೈಸಿದರು. ಕೆ ಎಸ್ ಗೌಡ ಸಮೂಹ ವಿದ್ಯಾಸಂಸ್ಥೆಗಳ ಅಧ್ಯಕ್ಷರಾದ ಅಶೋಕ್ ಕುಮಾರ್ ಕೆ ಎಸ್ ಮಾತನಾಡಿ ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು ಎಂಬ ವಾಕ್ಯವನ್ನು ಸಕಾರಾತ್ಮಕ ನೆಲೆಯಲ್ಲಿ ನಿಜವಾಗಿಸಬೇಕಾದ್ದು ಪ್ರತಿಯೊಬ್ಬರ ಕರ್ತವ್ಯ. ಈ ನಿಟ್ಟಿನಲ್ಲಿ ವಿದ್ಯಾಸಂಸ್ಥೆ ಮತ್ತು ಬೋಧಕ ಬಳಗ ಮಹತ್ವದ ಪಾತ್ರ ವಹಿಸುತ್ತದೆ. ಈ ದಿಶೆಯಲ್ಲಿ ನಾವೆಲ್ಲರೂ ಒಟ್ಟಾಗಿ ಮುಂದೆ ಸಾಗೋಣ ಎಂದರು.

ಕೆ ಎಸ್ ಗೌಡ ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗದ ಶಿಕ್ಷಕ ರಕ್ಷಕ ಸಮಿತಿಯ ಅಧ್ಯಕ್ಷರಾದ ಜಯಪ್ರಕಾಶ್ ಕೆ, ಕೆ ಎಸ್ ಗೌಡ ಪದವಿ ಪೂರ್ವ ಕಾಲೇಜಿನ ಶಿಕ್ಷಕ ರಕ್ಷಕ ಸಮಿತಿಯ ಅಧ್ಯಕ್ಷರಾದ ಸುದರ್ಶನ ಪಟ್ಟಾಜೆ, ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿ ನಾಯಕ ಮೋಹಿತ್, ಪದವಿ ಪೂರ್ವ ಕಾಲೇಜು ವಿಭಾಗದ ವಿದ್ಯಾರ್ಥಿ ನಾಯಕ ಪ್ರತೀಕ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಇದೇ ಸಮಯದಲ್ಲಿ ಪ್ರಾಥಮಿಕ – ಪ್ರೌಢಶಾಲಾ ವಿಭಾಗ ಮತ್ತು ಕಾಲೇಜು ವಿಭಾಗದಲ್ಲಿ ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿದ್ದ ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳ ಚಾಂಪಿಯನ್ ಶಿಪ್ ಬಹುಮಾನಗಳನ್ನು ವಿತರಿಸಲಾಯಿತು..

ಕೆ ಎಸ್ ಗೌಡ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗದ ಮತ್ತು ಕೆ ಎಸ್ ಗೌಡ ಪದವಿ ಪೂರ್ವ ಕಾಲೇಜು ವಿಭಾಗದ ವಿದ್ಯಾರ್ಥಿಗಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. ವಂದನಾರ್ಪಣೆ ಕಾರ್ಯಕ್ರಮವನ್ನು ಕೆ ಎಸ್ ಗೌಡ ಪದವಿ ಪೂರ್ವ ಕಾಲೇಜು ವಿಭಾಗದ ಉಪನ್ಯಾಸಕಿ ಕುಮಾರಿ ಜೋತ್ಸ್ನಾ ನೆರವೇರಿಸಿದರು. ಕೆ ಎಸ್ ಗೌಡ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗದ ಸಹಾಯಕ ಶಿಕ್ಷಕಿ ಶ್ರೀಮತಿ ವಿಶಾಲಾಕ್ಷಿ ಪಿ ಮತ್ತು ಪದವಿ ಪೂರ್ವ ಕಾಲೇಜು ವಿಭಾಗದ ಉಪನ್ಯಾಸಕರಾದ ಉಜ್ವಲ್ ಕೆ ಹೆಚ್ ಕಾರ್ಯಕ್ರಮವನ್ನು ನಿರೂಪಿಸಿದರು.