ಸಂಪಾಜೆ ವಲಯ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸೋಮಶೇಖರ ಕೊಯಿಂಗಾಜೆ ಮಾಹಿತಿ
ಭಾರತ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ಸಂಪಾಜೆ ವಲಯ ಇದರ ವತಿಯಿಂದ ಮತಗಳ್ಳತನದ ವಿರುದ್ಧ ಜನಜಾಗೃತಿ ಜಾಥಾ ಮತ್ತು ಸನ್ಮಾನ ಕಾರ್ಯಕ್ರಮ ಡಿಸೆಂಬರ್ 7ರಂದು ಕಲ್ಲುಗುಂಡಿ ಸಹಕಾರ ಸಂಘದ ಸಮನ್ವಯ ಸಭಾಂಗಣದಲ್ಲಿ ನಡೆಯಲಿದೆ ಎಂದು ಸಂಪಾಜೆ ವಲಯ ಕಾಂಗ್ರೆಸ್ ಅಧ್ಯಕ್ಷ ಸೋಮಶೇಖರ ಕೊಯಿಂಗಾಜೆ ಹೇಳಿದ್ದಾರೆ.
ಡಿ.6ರಂದು ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು ವಿವರ ನೀಡಿದರು.
















“ದೇಶದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ನೀತಿ ಸಂಹಿತೆ ಜಾರಿಯಲ್ಲಿರುವಾಗ ಒಂದು ಸರಕಾರ ಜನರಿಗೆ 10 ಸಾವಿರ ರೂಪಾಯಿ ಮತ ಖರೀದಿಗಾಗಿ ಅಧಿಕೃತ ಲಂಚವನ್ನಾಗಿ ಹಂಚಿದ್ದು ಬಿಹಾರದ ಚುನಾವಣೆಯಲ್ಲಿ ಕಾಣುವಂತಾಯಿತು. ಆದರೆ ಚುನಾವಣಾ ಆಯೋಗ ನಿಯಮಗಳ ಪ್ರಕಾರ ಕಾನೂನು ಕ್ರಮ ಕೈಗೊಳ್ಳಬೇಕಿತ್ತು. ಇದು ನಡೆಯಲಿಲ್ಲ. ಇದರ ಅರ್ಥ ನಮ್ಮ ಸಂವಿಧಾನವು ಕೊನೆಯುಸಿರು ಎಳೆಯುವ ಸ್ಥಿತಿಯಲ್ಲಿದೆ. ಆದ್ದರಿಂದ ಮುಂದಿನ ಪೀಳಿಗೆಗೆ ಸಂವಿಧಾನ ವನ್ನು ಮತ್ತು ಪ್ರಜಾಪ್ರಭುತ್ವವನ್ನು ಉಳಿಸಿ ಹಸ್ತಾಂತರಿಸಬೇಕಾದ ಜವಾಬ್ದಾರಿ ನಮ್ಮ ಮೇಲಿದೆ.
ಮತಗಳ್ಳತನದ ವಿರುದ್ಧ ಗ್ರಾಮ ಗ್ರಾಮದಲ್ಲಿ ಜಾಗೃತಿ ಮೂಡಿಸುವುದು ಇಂದಿನ ಅಗತ್ಯ. ಅದಕ್ಕಾಗಿ ಸಂಪಾಜೆಯಲ್ಲಿಜಾಥಾ ಹಮ್ಮಿಕೊಂಡಿದ್ದೇವೆ. ಸಂಜೆ 3 ಗಂಟೆಗೆ ಕೂಲಿಶೆಡ್ಡಿನಿಂದ ಜಾಥಾ ಆರಂಭಗೊಳ್ಳುವುದು ಎಂದು ಅವರು ಹೇಳಿದರು.
ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಭರತ್ ಮುಂಡೋಡಿ ಮುಖ್ಯ ಭಾಷಣ ಮಾಡಲಿದ್ದಾರೆ. ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತರಾದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ. ಜಯರಾಮರನ್ನು ಸನ್ಮಾನಿಸಲಾಗುವುದು. ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪಿ.ಎಸ್.ಗಂಗಾಧರ್ ಭಾಗವಹಿಸಲಿದ್ದಾರೆ ಎಂದವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಮಹಮ್ಮದ್ ಕುಂಞಿ ಗೂನಡ್ಕ, ರಾಜ್ಯ ಕಾರ್ಮಿಕ ಮಂಡಳಿ ಸದಸ್ಯ ಕೆ.ಪಿ.ಜಾನಿ, ಮುಖಂಡರಾದ ವಸಂತ ಪೆಲ್ತಡ್ಕ, ಲೂಕಾಸ್ ಟಿ.ಐ, ರಾಜು ನೆಲ್ಲಿಕುಮೇರಿ ಉಪಸ್ಥಿತರಿದ್ದರು










