ಷಷ್ಟ್ಯಬ್ಧ ಆಚರಣೆಗಾಗಿ ಶಾಸಕರ ಸೂಚನೆಯಂತೆ ಪೂರ್ವಭಾವಿ ಸಭೆ
ಅಡ್ ಹಾಕ್ ಸಮಿತಿ ರಚನೆ – ದ.9 ರಂದು ವಿಸ್ತೃತ ಸಭೆ

ಸುಳ್ಯ ತಾಲೂಕು ರಚನೆಯಾಗಿ 60 ವರ್ಷ ತುಂಬಿದ್ದು, ಆ ಕುರಿತು ಸಂಭ್ರಮ ಆಚರಿಸಲು ಹಾಗೂ ಮುಂದಿನ ಸುಳ್ಯ ತಾಲೂಕು ಹೇಗಿರಬೇಕೆಂಬ ಬಗ್ಗೆ ಚಿಂತನ ಮಂಥನ ನಡೆಸಲು ಪೂರ್ವಭಾವಿ ಸಭೆ ನ.5 ರಂದು ಸುಳ್ಯ ತಾಲೂಕು ಪಂಚಾಯತ್ ನಲ್ಲಿ ಪೂರ್ವಭಾವಿ ಸಭೆ ನಡೆಯಿತು.
ಶಾಸಕರ ಅನುಪಸ್ಥಿತಿಯಲ್ಲಿ ತಹಶೀಲ್ದಾರ್ ಕು.ಮಂಜುಳರವರು ಅಧ್ಯಕ್ಷತೆ ವಹಿಸಿದ್ದರು.
ತಾಲೂಕು ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿ ರಾಜಣ್ಣ, ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷ ಡಾ.ನಿತಿನ್ ಪ್ರಭು, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಹಾಗೂ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಎಸ್.ಎನ್.ಮನ್ಮಥ, ತಾಲೂಕು ಪಂಚಾಯತ್ ಮಾಜಿ ಉಪಾಧ್ಯಕ್ಷ ರಾಧಾಕೃಷ್ಣ ಬೊಳ್ಳೂರು, ಗಾಂಧಿ ಚಿಂತನ ವೇದಿಕೆ ಸಂಚಾಲಕರಾಗಿರುವ ಸುಳ್ಯ ಪ್ರೆಸ್ ಕ್ಲಬ್ ಗೌರವಾಧ್ಯಕ್ಷ ಸುದ್ದಿ ಬಿಡುಗಡೆಯ ಸಂಪಾದಕ ಹರೀಶ್ ಬಂಟ್ವಾಳ್ ವೇದಿಕೆಯಲ್ಲಿದ್ದರು.

ಬಹುತೇಕ ಸರಕಾರಿ ಇಲಾಖಾ ಅಧಿಕಾರಿಗಳು, ಯುವಜನ ಸಂಯುಕ್ತ ಮಂಡಳಿ ಅಧ್ಯಕ್ಷ ಪವನ್ ಪಲ್ಲತಡ್ಕ, ಕಾರ್ಯದರ್ಶಿ ಮುರಳಿ ನಳಿಯಾರು, ಕೋಶಾಧಿಕಾರಿ ಲೋಹಿತ್ ಬಾಳಿಕಳ ಸಂತೋಷ್ ಜಾಕೆ, ಸಂತೋಷ್ ಕುತ್ತಮೊಟ್ಟೆ, ಐವರ್ನಾಡು ಗ್ರಾ.ಪಂ. ಉಪಾಧ್ಯಕ್ಷ ಬಾಲಕೃಷ್ಣ ಕೀಲಾಡಿ, ಪತ್ರಕರ್ತರು ಸಭೆಯಲ್ಲಿ ಉಪಸ್ಥಿತರಿದ್ದರು.
ಸಭೆಯ ಆರಂಭದಲ್ಲಿ ಸ್ವಾಗತಗೈದ ಪತ್ರಕರ್ತ ಹರೀಶ್ ಬಂಟ್ವಾಳರು, ” ಹಿಂದೆ ಪುತ್ತೂರು ತಾಲೂಕಿನ ಭಾಗವಾಗಿದ್ದ ಸುಳ್ಯವು ಕುರುಂಜಿ ವೆಂಕಟ್ರಮಣ ಗೌಡರೂ ಸೇರಿದಂತೆ ಸುಳ್ಯದ ಹಲವು ಮುಖಂಡರ ಪ್ರಯತ್ನದ ಫಲವಾಗಿ, ಎಸ್. ಸುಬ್ಬಯ್ಯ ನಾಯ್ಕರು ಶಾಸಕರಾಗಿರುವ ಸಂದರ್ಭ 1965 ಡಿಸೆಂಬರ್ ತಿಂಗಳಲ್ಲಿ ಪ್ರತ್ಯೇಕ ತಾಲೂಕಾಯಿತು.
ಸುಳ್ಯ ತಾಲೂಕು ರಚನೆಯ ಕಡತಕ್ಕೆ ಆಗಿನ ಮುಖ್ಯಮಂತ್ರಿ ಎಸ್.ನಿಜಲಿಂಗಪ್ಪರು ಏರೋಡ್ರಾಮ್ ನಲ್ಲಿ ಸಹಿ ಹಾಕಿದ್ದೆಂದು ಸುಬ್ಬಯ್ಯ ನಾಯ್ಕರು ಹೇಳುತ್ತಿದ್ದರು. ಅದರಂತೆ ತಾಲೂಕು ರಚನೆಯಾಗಿ 60 ವರ್ಷಗಳಾದವು. ಆ ಬಳಿಕ ಸುಳ್ಯವು ತುಂಬ ಬದಲಾಗಿದೆ. ಕುರುಂಜಿಯವರು ವಿದ್ಯಾಸಂಸ್ಥೆಗಳನ್ನು ಸ್ಥಾಪಿಸಿದ ಪರಿಣಾಮವಾಗಿ ಇದೊಂದು ಶಿಕ್ಷಣ ಕೇಂದ್ರವಾಗಿ ಬೆಳೆಯುವಂತಾಯಿತು. ತಾಲೂಕು ರಚನೆಯಾಗಿ 50 ವರ್ಷವಾದಾಗಲೂ ಸುವರ್ಣ ವರ್ಷಾಚರಣೆಯಾಗಲೀ ಮುಂದೆ ಸುಳ್ಯ ಯಾವ ರೀತಿಯ ಅಭಿವೃದ್ಧಿ ಸಾಧಿಸಬೇಕೆಂಬ ಚಿಂತನ ಮಂಥನವಾಗಲೀ ಮಾಧ್ಯಮಗಳಲ್ಲಿ ಹೊರತುಪಡಿಸಿ ಜನಸಮೂಹ ಸೇರಿ ಆಗಿಲ್ಲ. ಈಗ 60 ವರ್ಷ ತುಂಬಿದ ಸಂದರ್ಭದಲ್ಲಾದರೂ ಅದು ನಡೆಯಬೇಕು. ಅದಕ್ಕಾಗಿ ಶಾಸಕರು ತಾಲೂಕು ಆಡಳಿತದ ಮೂಲಕ ಈ ಪೂರ್ವಭಾವಿ ಸಭೆ ಕರೆದಿದ್ದಾರೆ ” ಎಂದರು.















ಬಳಿಕ ಮಾತನಾಡಿದ ಎಸ್.ಎನ್.ಮನ್ಮಥರು, ಸಭೆಯಲ್ಲಿ ಭಾಗವಹಿಸಿರುವವರು ತಮ್ಮ ಅಭಿಪ್ರಾಯಗಳನ್ನು ನೀಡಬೇಕೆಂದು ಕೇಳಿದರು.
ತಾಲೂಕಿನ ಷಷ್ಟ್ಯಬ್ಧ ಪ್ರಯುಕ್ತ ಸುಳ್ಯ ನಗರದಲ್ಲಿ ಬೃಹತ್ ಮೆರವಣಿಗೆ ನಡೆಸುವುದು, ಜ್ಯೋತಿ ಸರ್ಕಲ್ ನಿಂದ ತೊಡಗಿ ಬಸ್ ನಿಲ್ದಾಣ, ಗಾಂಧಿನಗರದ ವರೆಗೆ ಸಾಗಿ ಹಿಂತಿರುಗಿ ಬಂದು ಚೆನ್ನಕೇಶವ ದೇವಸ್ಥಾನದ ಎದುರು ಸೇರಿ, ಸುಳ್ಯ ಮುಂದೆ ಹೇಗಿರಬೇಕು ಎಂಬ ಬಗ್ಗೆ ವಿಚಾರ ಸಂಕಿರಣ ಮಾಡುವುದು, ತಾಲೂಕಿನ ಇತಿಹಾದ ಸಾರುವ ಸಾಕ್ಷ್ಯಚಿತ್ರ ಮಾಡುವುದು, ತಾಲೂಕಿನಿಂದ ಹೊರಗಿರುವ ತಾಲೂಕಿನ ಸಾಧಕರನ್ನು ಕರೆದು ವಿಚಾರ ವಿನಿಮಯ ಮಾಡುವುದು ಮೊದಲಾದ ಸಲಹೆಗಳು ಸಭಾಸದರಿಂದ ಬಂದವು.
ತಾಲೂಕಿನ ಮಂಜೂರಾತಿ ಮತ್ತು ನಂತರದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿರುವ ದಿ.ಡಾ.ಕುರುಂಜಿ ವೆಂಕಟ್ರಮಣ ಗೌಡರ ಹುಟ್ಟುಹಬ್ಬದ ದಿನವಾದ ಡಿಸೆಂಬರ್ 26 ರಂದೇ ಭವ್ಯ ಸುಳ್ಯ ಸಂಕಲ್ಪ ದಿನವಾಗಿ ಈ ಕಾರ್ಯಕ್ರಮ ನಡೆಸಬೇಕೆಂಬ ಅಭಿಪ್ರಾಯ ಬಂದಿತು.
ತಹಶೀಲ್ದಾರ್ ಮಂಜುಳಾರವರು ಮಾತನಾಡಿ, ಇವತ್ತಿನ ಸಭೆಯ ಸಲಹೆಗಳನ್ನು ನಿರ್ಣಯಗಳನ್ನಾಗಿ ದಾಖಲಿಸಿಕೊಂಡು ಮುಂದುವರಿಯೋಣ. ನಾವು ಅಧಿಕಾರಿಗಳನ್ನು ಜೋಡಿಸುತ್ತೇವೆ. ಸಾರ್ವಜನಿಕ ಸಂಘಸಂಸ್ಥೆಗಳನ್ನು ನೀವೆಲ್ಲ ಸೇರಿ ಜೋಡಿಸಬೇಕು ” ಎಂದು ಹೇಳಿದರು.
ತಾ.ಪಂ. ಕಾರ್ಯನಿರ್ಹಣಾಧಿಕಾರಿ ರಾಜಣ್ಣ ಸೂಕ್ತ ಸಲಹೆಗಳನ್ನು ನೀಡಿದರು. ರಾಧಾಕೃಷ್ಣ ಬೊಳ್ಳೂರು ಸಲಹೆ ಸೂಚನೆ ನೀಡಿದರಲ್ಲದೆ, ಸಾರ್ವಜನಿಕರು ಮತ್ತು ಅಧಿಕಾರಿಗಳೆಲ್ಲ ಈ ಕಾರ್ಯಕ್ರಮಕ್ಕೆ ಪೂರ್ಣ ಸಹಕಾರ ನೀಡಬೇಕೆಂದು ವಿನಂತಿಸಿಕೊಂಡರು.
ಸಂತೋಷ್ ಜಾಕೆ, ಸಂತೋಷ್ ಕುತ್ತಮೊಟ್ಟೆ , ಪತ್ರಕರ್ತರು, ಸರಕಾರಿ ಅಧಿಕಾರಿಗಳು ತಮ್ಮ ಅಭಿಪ್ರಾಯಗಳನ್ನು ಹೇಳಿಕೊಂಡರು.
” ಶಾಸಕರು ಹಿಂದಿನ ದಿನ ಹೇಳಿ ಮರುದಿನ ಕರೆದ ಸಭೆಯಾದುದರಿಂದ ಹೆಚ್ಚು ಮಂದಿ ಸಾರ್ವಜನಿಕರಿಗೆ ತಿಳಿಸಲು ಸಾಧ್ಯವಾಗಿಲ್ಲ. ಆದ್ದರಿಂದ ದ.9 ಮಂಗಳವಾರ ಅಪರಾಹ್ನ 3.30 ಕ್ಕೆ ಊರಗಣ್ಯರು, ಎಲ್ಲಾ ಸಂಘಸಂಸ್ಥೆಯ ಪ್ರಮುಖರು, ಅಧಿಕಾರಿಗಳನ್ನೆಲ್ಲ ತಾಲೂಕು ಪಂಚಾಯತ್ ಸಭಾಂಗಣಕ್ಕೆ ಆಹ್ವಾನಿಸಿ ವಿಸ್ತೃತವಾದ ಸಭೆ ನಡೆಸಿ, ಚರ್ಚಿಸಿ ಕಾರ್ಯಕ್ರಮದ ರೂಪುರೇಷೆಯನ್ನು ಅಂತಿಮಗೊಳಿಸೋಣ” ಎಂದು ಎಸ್.ಎನ್.ಮನ್ಮಥರು ಹೇಳಿದರು.
ಜನರನ್ನು ಪೂರ್ವಭಾವಿ ಸಭೆಗೆ ಕರೆಯುವುದಕ್ಕಾಗಿ ಶಾಸಕಿ ಕು.ಭಾಗೀರಥಿಯವರು ಅಧ್ಯಕ್ಷರಾಗಿ, ತಹಶೀಲ್ದಾರ್ ಕು.ಮಂಜುಳಾ ಹಾಗೂ ತಾ.ಪಂ. ಇ.ಒ. ರಾಜಣ್ಣ ಉಪಾಧ್ಯಕ್ಷರಾಗಿರುವ, ಎಸ್.ಎನ್.ಮನ್ಮಥರು ಕಾರ್ಯಾಧ್ಯಕ್ಷರಾಗಿ, ರಾಧಾಕೃಷ್ಣ ಬೊಳ್ಳೂರು ಸಂಚಾಲಕರಾಗಿರುವ ಅಡ್ ಹಾಕ್ ಸಮಿತಿಯೊಂದನ್ನು ರಚಿಸಲಾಯಿತು.
ದ.9 ರ ಸಭೆಯಲ್ಲಿ ಸಮಿತಿಯನ್ನು ಅಂತಿಮಗೊಳಿಸುವುದೆಂದು ನಿರ್ಧರಿಸಲಾಯಿತು.
ಅಧಿಕಾರಿಗಳಾದ ತಾಲೂಕು ಆರೋಗ್ಯ ಅಧಿಕಾರಿ ಡಾ.ಆಶಾ ಅಭಿಕಾರ್, ಅಬಕಾರಿ ಇಲಾಖೆಯ ಎಸ್.ಐ. ಜಯಾನಂದ ಬಿ., ಕಾನ್ ಸ್ಟೇಬಲ್ ಅಶೋಕ್ ಬಿ.ಎನ್., ಸಿ.ಡಿ.ಪಿ.ಒ. ಪರವಾಗಿ ಮೇಲ್ವಿಚಾರಕಿ ಶ್ರೀಮತಿ ವಿಜಯ , ಬಿ.ಇ.ಒ. ಪರವಾಗಿ ಶ್ರೀಮತಿ ಧನಲಕ್ಷ್ಮಿ ಕುದ್ಪಾಜೆ, ಪಿ.ಎಂ.ಪೋಷಣ್ ವಿಭಾಗದ ಸುರೇಶ್ ಕುಮಾರ್, ಬಿ.ಸಿ.ಎಂ. ಇಲಾಖೆಯ ಅಧಿಕಾರಿ ರೇವಣಪ್ಪ, ತೋಟಗಾರಿಕಾ ಇಲಾಖೆಯ ಶ್ರೀಮತಿ ರಮ್ಯ, ಸಮಾಜ ಕಲ್ಯಾಣ ಇಲಾಖೆಯ ಪ್ರವೀಣ್ ಕುಮಾರ್, ಜಿಲ್ಲಾ ಪಂಚಾಯತ್ ಇಂಜಿನಿಯರಿಂಗ್ ವಿಭಾಗದ ಎ.ಇ.ಇ. ಫಯಾಜ್ ಅಹ್ಮದ್, ಗ್ರಾಮೀಣಾಭಿವೃದ್ಧಿ ಇಂಜಿನಿಯರಿಂಗ್ ವಿಭಾಗದ ಎ.ಇ.ಇ. ಚೈತ್ರಾ ಎಸ್.ಆರ್., ಉಪವಲಯಾರಣ್ಯಾಧಿಕಾರಿ ರಾಘವೇಂದ್ರ ಪ್ರಸಾದ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೇಲ್ವಿಚಾರಕ ದಿನೇಶ್ ಡಿ., ಗ್ರಾಮಾಭಿವೃದ್ಧಿ ಯೋಜನೆಯ ಸುಳ್ಯ ವಲಯಾಧ್ಯಕ್ಷ ಮನೋಹರ್, ನಗರ ಪಂಚಾಯತ್ ಮುಖ್ಯಾಧಿಕಾರಿ ಎಚ್.ಆರ್. ಬಸವರಾಜ್ ಹಾಗೂ ಪತ್ರಕರ್ತರು ಉಪಸ್ಥಿತರಿದ್ದರು.



