ಇನ್ಮುಂದೆ ಈ ಪಂಚಾಯತ್ನ ಎಲ್ಲಾ ದಾಖಲೆ ಪತ್ರಗಳು ಅತೀ ಸುಲಭವಾಗಿ ಸಿಗುತ್ತೆ ; ಇತರ ಗ್ರಾ.ಪಂ.ಗಳಿಗೆ ಮಾದರಿಯಾದ ಈ ಕಾರ್ಯ
ಅರಂತೋಡು ಗ್ರಾ.ಪಂ. ವತಿಯಿಂದ ಜಲ್ ಅರ್ಪಣ್ ದಿವಸ್ ಮತ್ತು ಗ್ರಾಮ ಪಂಚಾಯತ್ ಕಲಿಕಾ ಕೇಂದ್ರ ಹಾಗೂ ಸುಸಜ್ಜಿತ ಅಭಿಲೇಖಾಲಯ (ರೆಕಾರ್ಡ್ ರೂಮ್) ಉದ್ಘಾಟನಾ ಕಾರ್ಯಕ್ರಮ ಫೆ.12 ರಂದು ನಡೆಯಿತು.
ಕಾರ್ಯಕ್ರಮವನ್ನು ಶಾಸಕಿ ಭಾಗೀರಥಿ ಮುರುಳ್ಯ ಉದ್ಘಾಟಿಸಿ ಮಾತನಾಡಿ, ಜಿಲ್ಲೆಯಲ್ಲಿ ಎಲ್ಲೂ ಮಾಡದ ಕೆಲಸವನ್ನು ಈ ಗ್ರಾ.ಪಂ.ಮಾಡಿದೆ. ಇದು ಬೇರೆ ಗ್ರಾ.ಪಂ.ಗಳಿಗೆ ಮಾದರಿಯಾಗಲಿ. ಗ್ರಾ.ಪಂ, ಮತ್ತು ಸೊಸೈಟಿ ಒಟ್ಟಾಗಿ ಕೆಲಸ ಮಾಡುವುದರಿಂದ ಗ್ರಾಮದ ಅಭಿವೃದ್ಧಿ ಸಾಧ್ಯ. ಗ್ರಾಮ ಪಂಚಾಯತ್ನಲ್ಲಿ ಕಲಿಕಾ ಕೇಂದ್ರ, ಗ್ರಂಥಾಲಯ ಮತ್ತು ಜಿಮ್ನಂತಹ ಸೌಲಭ್ಯಗಳನ್ನು ಒದಗಿಸಲಾಗಿದ್ದು ಒಂದೊಳ್ಳೆ ಕೆಲಸ ಎಂದರು. ಶಾಸಕರಾಗಿ ನಮ್ಮ ವಿಧಾನಸಭಾ ಕ್ಷೇತ್ರವಾದ ಕಡಬ ಮತ್ತು ಸುಳ್ಯದ ಸರ್ವತೋಮುಖ ಅಭಿವೃದ್ಧಿಗೆ ಬದ್ಧರಾಗಿದ್ದೇನೆ. ಅಧಿಕಾರಿಗಳು, ಜನಪ್ರತಿನಿಧಿಗಳು, ರೈತರು, ನಾಗರೀಕರು ಒಟ್ಟಾಗಿ ಕೆಲಸ ಮಾಡುವ ಮೂಲಕ ಮಾದರಿ ಗ್ರಾಮ ಮತ್ತು ತಾಲೂಕನ್ನಾಗಿ ನಿರ್ಮಿಸುವ ಗುರಿ ನನ್ನದು ಎಂದು ತಿಳಿಸಿದರು.















ಬಳಿಕ ಮಾತನಾಡಿದ ಗ್ರಾ.ಪಂ.ಅಧ್ಯಕ್ಷ ಕೇಶವ ಅಡ್ತಲೆ ಸುಳ್ಯ ತಾಲೂಕಿನಲ್ಲಿ ಮಾದರಿಯಾಗಿ ಏನಾದರೂ ಕೆಲಸ ಮಾಡಬೇಕು ಎನ್ನುವ ದೃಷ್ಟಿಯಿಂದ, ನಮ್ಮ ಗ್ರಾಮ ಪಂಚಾಯತ್ನಿ0ದ ಕ್ಲಪ್ತ ಸಮಯದಲ್ಲಿ ಜನರಿಗೆ ಉತ್ತಮ ಸೇವೆ ನೀಡುವ ಉದ್ದೇಶದಿಂದ ನಾವು ಮತ್ತು ಪಿಡಿಒ ರವರು ಬೇರೆ ಜಿಲ್ಲೆಗೆ ತೆರಳಿ ಅಲ್ಲಿಂದ ತರಬೇತಿ ಪಡೆದು ಈ ರೆಕಾರ್ಡ್ ರೂಮ್ನ್ನು ಮಾಡಲಾಗಿದೆ. ಜೊತೆಗೆ ಕಲಿಕಾ ಕೇಂದ್ರ, ತೊಡಿಕಾನ ಗ್ರಾಮದ ಅಡ್ಯಡ್ಕ ಕಾಲನಿಗೆ ನಿರಂತರ ನೀರನ್ನು ಜಲಜೀವನ್ ಮಿಷನ್ ಯೋಜನೆಯಿಂದ ಮಾಡಲಾಗಿದ್ದು, ಜನರಿಗೆ ಇದರಿಂದ ಉಪಯೋಗವಾಗಲಿದೆ ಎಂದರು.

ಪಿಡಿಒ ಜಯಪ್ರಕಾಶ್ ಮಾತನಾಡಿ ನಮ್ಮ ಗ್ರಾ.ಪಂ. ವಿವಿಧ ಕ್ಷೇತ್ರದಲ್ಲಿ ಉತ್ತಮ ಕೆಲಸ ಮಾಡಿ, ಇದೀಗ ದಾಖಲೆ ಸೃಷ್ಠಿ ಮಾಡಿದೆ. ಇನ್ಮುಂದೆ ಬಟ್ಟೆಯಲ್ಲಿ ಕಟ್ಟಿರುವ ಪೈನಲ್ಗಳು ಜನರಿಗೆ ಕಾಣ ಸಿಗುವ ಬದಲು ವ್ಯವಸ್ಥಿತವಾಗಿ ನಿರ್ಮಿಸಿಲಾದ ರೆಕಾರ್ಡ್ ರೂಮ್ ಮೂಲಕ ತಮ್ಮ ಫೈಲ್ಗಳನ್ನು ಜನರು ಸುಲಭವಾಗಿ ಸಿಗುವಂತೆ ಮಾಡಿದ್ದೇವೆ. 3 ತಿಂಗಳಿನ ಪರಿಶ್ರಮದ ಫಲವಾಗಿ ಇಂದು ಉದ್ಘಾಟಿಸಿದ್ದೇವೆ ಎಂದರು.
ತಾ.ಪಂ.ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ ಮಾತನಾಡಿ, ಈ ತಂಡ ಉತ್ತಮ ಕೆಲಸವನ್ನು ಮಾಡುತ್ತ ಬರುತ್ತಿದೆ. ಈ ರೀತಿಯ ಕೆಲಸವನ್ನು ನಮ್ಮ ಜಿಲ್ಲೆಯಲ್ಲೆ ಯಾರು ಮಾಡಿಲ್ಲ. ಒಂದೊಳ್ಳೆ ಕೆಲಸವಾಗಿದ್ದು, ಎಲ್ಲರಿಗೂ ಮಾದರಿ ಕೂಡ ಆಗಿದೆ. ಇದು ಮಾತ್ರವಲ್ಲದೆ ಈ ಹಿಂದೆಯೂ ರಸ್ತೆ ಬದಿ ಸ್ವಚ್ಛತೆ ಸೇರಿದಂತೆ ತುಂಬಾ ಉತ್ತಮ ಕೆಲಸವನ್ನು ಮಾಡುತ್ತ ಬರುತ್ತಿದೆ ಶುಭವಾಗಲಿ ಎಂದು ಹಾರೈಸಿದರು.
ರಾಷ್ಟ್ರ ಪ್ರಶಸ್ತಿ ವಿಜೇತ ವಿಶ್ರಾಂತ ಪ್ರಾಂಶುಪಾಲರಾದ. ಕೆ. ಆರ್. ಗಂಗಾಧರ್ ರವರು ಮಾತನಾಡಿ ಆರಂತೋಡು ಗ್ರಾಮ ಪಂಚಾಯತ್ ನಾವು ಹೆಮ್ಮೆ ಪಡುವಂತಹ ಮಾದರಿ ಪ್ರಗತಿ ಪರ ಅಭಿವೃದ್ಧಿ ಕೆಲಸ ಮಾಡಿದೆ. ಆರಂತೋಡಿನಲ್ಲಿ ಪಿ. ಬಿ. ದಿವಾಕರ ರೈ ಯವರು ಮಂಡಲ ಪ್ರಧಾನವಾದ ನಂತರ ಈಗಿನ ಅಧ್ಯಕ್ಷರು ಓರ್ವ ಕ್ರಿಯಾಶೀಲಾ ಅಧ್ಯಕ್ಷರಾಗಿ ಕೆಲಸ ನಿರ್ವಹಿಸುತ್ತಿರುವುದು ಶ್ಲಾಘನೀಯ ವಿಷಯವಾಗಿದೆ ಎಂದು ಹಾರೈಸಿದರು.

ಅರಂತೋಡು -ತೊಡಿಕಾನ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ ಮಾತನಾಡಿ, ರಾಜ್ಯಕ್ಕೆ ಮಾದರಿಯಾಗುವ ರೀತಿಯಲ್ಲಿ ಕೆಲಸ ಮಾಡುತ್ತ ಬರುತ್ತಿರುವ ನಮ್ಮ ಗ್ರಾ.ಪಂ. ಇದೀಗ ಇನ್ನೂ ಒಳ್ಳೆಯ ಕೆಲಸಗಳನ್ನು ಮಾಡುತ್ತಿದೆ. ಇನ್ಮುಂದೆ ಜನರಿಗೆ 1ದಿನದ ಕೆಲಸ 3 ನಿಮಿಷದಲ್ಲಿ ಆಗುತ್ತದೆ ಎಂದರು, 1993 ರಿಂದ 2026 ರವರೆಗಿನ ಅವಳಿ ಗ್ರಾಮದ ದಾಖಲೆಗಳು ಇಲ್ಲಿದ್ದು ಜನರಿಗೆ ಉಪಕಾರಿಯಾಗಲಿದೆ ಎಂದರು.
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಇಂಜಿನಿಯರ್ ಜಯಪ್ರಕಾಶ್ ಮಾತನಾಡಿ ಜಲಜೀವನ್ ಮಿಷನ್ ಮೂಲಕ ನಾವು ತೊಡಿಕಾನ ಗ್ರಾಮದ ಅಡ್ಯಡ್ಕದ ಒಟ್ಟು 95 ಮನೆಗಳಿಗೆ 24*7 ನೀರನ್ನು ಪೂರೈಸಿದ್ದು, ಮನೆ ಮನೆಗೆ ಗಂಗೆ ಇದಾಗಿದೆ. ಜಿಲ್ಲೆಯಲ್ಲಿ 3 ನೇ ಗ್ರಾಮದ ಇದಾಗಿದ್ದು, ಸುಳ್ಯ ತಾ.ಗೆ ಮೊದಲ ಪ್ರಯತ್ನವಾಗಿದೆ ಎಂದರು.

ಈ ಸಂದರ್ಭದಲ್ಲಿ ಸಹಕಾರಿ ಸಂಘಗಳ ವ್ಯವಹಾರಗಳು ಮೊಬೈಲ್ ಮೂಲಕ ತಿಳಿಯಲು ಸಹಕಾರಿ ಆಯಪ್ನ್ನು ಶಾಸಕರ ಸಮ್ಮುಖದಲ್ಲಿ ಲಾಂಚ್ ಮಾಡಲಾಯಿತು, ಈ ಕುರಿತು ಸೊಸೈಟಿ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ ಮಾಹಿತಿ ನೀಡಿದರು.
ವೇದಿಕೆಯಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಎಇಇ ಚೈತ್ರ, ಪುಷ್ಪಾ ಮೇದಪ್ಪ, ಭಾರತಿ ಪುರೊಷೋತ್ತಮ, ದಯಾನಂದ ಕುರುಂಜಿ, ಶಿವಾನಂದ ಕುಕ್ಕುಂಬಳ, ಚಂದ್ರಶೇಖರ ಜೋಡಿಪಣೆ, ರವಿ ಪೂಜಾರಿ, ಭವಾನಿ ಚಿಟ್ನೂರು, ವೆಂಕಟ್ರಮಣ ಪೆತ್ತಾಜೆ, ಅಧಿಕಾರಿ ವರ್ಗ, ಪಂಚಾಯತ್ ಮತ್ತು ಸೊಸೈಟಿ ಸಿಬ್ಬಂದಿಗಳು, ಊರ ಗಣ್ಯರು ಉಪಸ್ಥತರಿದ್ದರು. ಪಿಡಿಒ ಜಯಪ್ರಕಾಶ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.







