ನಮ್ಮದೇ ಭಾಷೆ ಎಂಬ ಭಾವದಲ್ಲಿ ಕೆಲಸ ಮಾಡಿದಾಗ ಭಾಷೆಯ ಬಗೆಗೆ ಪ್ರೀತಿ, ಮೋಹ ಹೆಚ್ಚಾಗುತ್ತದೆ : ಡಾ.ಬಿಳಿಮಲೆ
” ನಮ್ಮದೇ ಭಾಷೆ ಎಂಬ ಭಾವದಲ್ಲಿ ಕೆಲಸ ಮಾಡಿದಾಗ ಭಾಷೆಯ ಬಗೆಗೆ ಪ್ರೀತಿ, ಮೋಹ ಹೆಚ್ಚಾಗುತ್ತದೆ. ಪ್ರಭುತ್ವದ ಭಾಷೆ ಕನ್ನಡ ಆಡಳಿತದ ಭಾಷೆಯೂ ಆದಾಗ ಹೆಚ್ಚು ಜನರನ್ನು ತಲುಪುತ್ತದೆ ” ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಹೇಳಿದರು.















ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮತ್ತು ಸುಳ್ಯ ನೆಹರೂ ಮೆಮೋರಿಯಲ್ ಕಾಲೇಜಿನ ಹಿರಿಯ ವಿದ್ಯಾರ್ಥಿ ಸಂಘದ ಸಹಯೋಗದಲ್ಲಿ , ಸುವರ್ಣ ಮಹೋತ್ಸವ ಸಂಭ್ರಮಾಚರಣೆ ಅಂಗವಾಗಿ ಇಂದು ನೆಹರು ಮೆಮೋರಿಯಲ್ ಕಾಲೇಜಿನ ಸಭಾಂಗಣದಲ್ಲಿ ನಡೆದ ” ಗಡಿನಾಡು ಸುಳ್ಯ ಪರಿಸರದ ಭಾಷಾ ಪರಂಪರೆ ” ಕುರಿತಾದ ಒಂದು ದಿನದ ವಿಚಾರಗೋಷ್ಠಿಯನ್ನು ಉದ್ಘಾಟಿಸಿ ಅವರು ಆಶಯ ಭಾಷಣ ಮಾಡಿದರು.

” ಭಾಷೆಯ ಕುರಿತಾಗಿ ಎಚ್ಚರಿಕೆ ಮೂಡಿಸಲು ಸಾಧ್ಯವಾದರೆ ಅದು ನಮ್ಮನ್ನು ನಾವೇ ಎಚ್ಚರಿಸಿದಂತೆ ” ಎಂದ ಅವರು, ” ಭಾಷೆಗಳು ಪತನಮುಖಿಯಾದರೆ ಸಂಸ್ಕೃತಿ ದುರ್ಬಲವಾದಂತೆ. ಎಲ್ಲ ಭಾಷೆಗಳೂ ಉಳಿದ ಭಾರತವೇ ಚೆಂದ. ಏಕ ಭಾಷೆಯೆಡೆಗೆ ಚಲಿಸಿದರೆ ಭಾರತ ಬಡವವಾಗುತ್ತದೆ ” ಎಂದರು.
ಎನ್ನೆಂಸಿ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕೆ.ಟಿ ವಿಶ್ವನಾಥ್ ಅಧ್ಯಕ್ಷತೆ ವಹಿಸಿದ್ದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ.ಸಂತೋಷ್ ಹಾನಗಲ್ಲ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ, ಸಣ್ಣ ಭಾಷೆಗಳನ್ನು ಉಳಿಸುವ ಮೂಲಕ ಕನ್ನಡವನ್ನು ಬೆಳೆಸುವುದು ಪ್ರಾಧಿಕಾರದ ಅಧ್ಯಕ್ಷರ ಸಂಕಲ್ಪ ಎಂದರು.
ಕಾಲೇಜಿನ ಪ್ರಾಂಶುಪಾಲ ಡಾ.ರುದ್ರಕುಮಾರ್ ಸ್ವಾಗತಿಸಿದರು. ಉಪನ್ಯಾಸಕಿ ಡಾ. ಅನುರಾಧಾ ಕುರುಂಜಿ ಕಾರ್ಯಕ್ರಮ ನಿರೂಪಿಸಿದ ದರು. ಹಿರಿಯ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಶ್ರೀಮತಿ ಮಧುರಾ ಎಂ.ಆರ್. ವಂದಿಸಿದರು. ಕಾಲೇಜಿನ ಆಡಳಿತಾಧಿಕಾರಿ ಚಂದ್ರಶೇಖರ ಪೇರಾಲು ವೇದಿಕೆಯಲ್ಲಿ ಉಪಸ್ಥಿತರಿದ್ದರು.







