ಸುಳ್ಯ ಪೊಲೀಸ್ ಠಾಣೆಯಲ್ಲಿ ಇತ್ತಂಡಗಳಿಂದ ದೂರು, ಪ್ರಕರಣ ದಾಖಲು
ಸುಳ್ಯ ಮೆಸ್ಕಾಂ ಕಚೇರಿಯಲ್ಲಿ ಗ್ರಾಹಕರು ಮತ್ತು ಮೆಸ್ಕಾಂ ಕಚೇರಿಯ ಅಧಿಕಾರಿ ಇವರಿಬ್ಬರ ನಡುವೆ ಮಾತಿನ ಚಕಮಕಿ ನಡೆದು ಪರಸ್ಪರ ಹಲ್ಲೆ ಮಾಡಿಕೊಂಡಿರುವ ಬಗ್ಗೆ ಇತ್ತಂಡಗಳಿಂದ ಸುಳ್ಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿರುವ ಬಗ್ಗೆ ತಿಳಿದು ಬಂದಿದೆ.














ಮೆಸ್ಕಾಂ ಅಧಿಕಾರಿ ಹಲ್ಲೆ ಮಾಡಿದ್ದಾರೆ ಎಂದು ಹೇಳಲಾಗುತ್ತಿರುವ ಗ್ರಾಹಕ
ಅಂಬಟಡ್ಕ ನಿವಾಸಿ ಕುಲ್ ದೀಪ್ ಎಂಬುವರಾಗಿದ್ದು ಅವರು ನೀಡಿರುವ ದೂರಿನಲ್ಲಿ ‘ಮಾ 28 ರಂದು ಸಂಜೆ ಸಮಯ ಸುಮಾರು 4 ಗಂಟೆಯಿಂದ ದಿನಾಂಕ :29.03.2026 ರಂದು ಮದ್ಯಾಹ್ನ 2 ಗಂಟೆ ವರೆಗೆ ಅವರ ವಠಾರದಲ್ಲಿ ಕರೆಂಟ್ ಇಲ್ಲದೇ ಇದ್ದುದರಿಂದ ಅವರು ಮತ್ತು ಅವರ ನೆರೆಕರೆಯವರಾದ ಸಂದೀಪ್ ರವರು ಸುಳ್ಯದ ಕೇರ್ಪಳದಲ್ಲಿರುವ ಮೆಸ್ಕಾಂ ಕಛೇರಿಯ ಬಳಿಗೆ ಹೋಗಿ, ಕಛೇರಿಯ ಹೊರ ಬಾಗದಲ್ಲಿ ನಿಂತಿದ್ದ ಮೆಸ್ಕಾಂ ಸಹಾಯಕ ಇಂಜಿನಿಯರ್ ಸುಪ್ರೀತ್ ರವರಲ್ಲಿ ನಮ್ಮ ವಠಾರದಲ್ಲಿ ನೆನ್ನೆಯಿಂದ ಕರೆಂಟ್ ಇಲ್ಲ ಯಾವಾಗ ಕರೆಂಟ್ ಬರುತ್ತದೆಂದು ಕೇಳಿದೆವು.
ಆ ಸಮಯ ಸುಪ್ರೀತ್ ರವರು ನಮ್ಮನ್ನು ಅವಾಚ್ಯ ಶಬ್ದಗಳಿಂದ ಬೈದು ನನ್ನ ಕುತ್ತಿಗೆಯ ಮೇಲೆ ಕೈ ಹಾಕಿ ನನ್ನನ್ನು ದೂಡಿ ಹಾಕಿ ಗಾಯಗೊಳಿಸಿದ್ದು ಈ ಸಮಯದಲ್ಲಿ ತಡೆಯಲು ಬಂದ ಸಂದೀಪ್ ರವರನ್ನು ಕೂಡ ನೆಲಕ್ಕೆ ದೂಡಿರುತ್ತಾರೆ. ಮತ್ತು ನಮ್ಮ ಕೈಯಲ್ಲಿದ್ದ ನಮ್ಮ ಬೈಕಿನ ಕೀ ಯನ್ನು ದೂರಕ್ಕೆ ಎಸೆದಿದ್ದು ಬಳಿಕ ಬೈಕಿನ ಪೆಟ್ರೋಲ್ ಟ್ಯಾಂಕಿನ ಕೆಳಭಾಗದ ಪೈಪನ್ನು ಚಾಕುವಿನಿಂದ ಕುಯ್ದಿರುತ್ತಾರೆ . ಬಳಿಕ ನಾವು ಸುಳ್ಯ ಸರ್ಕಾರಿ ಆಸ್ಪತ್ರೆಗೆ ಹೋಗಿ ಚಿಕಿತ್ಸೆಯನ್ನು ಪಡೆದು ಬಂದಿರುತ್ತೇವೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಇದೇ ಘಟನೆಗೆ ಸಂಬಂಧಿಸಿದಂತೆ ಸುಳ್ಯ ಮೆಸ್ಕಾಂ ಇಲಾಖೆಯ ಸಹಾಯಕ ಇಂಜಿನಿಯರ್ ಸುಪ್ರೀತ್ ರವರು ಕೂಡ ಸುಳ್ಯ ಠಾಣೆಯಲ್ಲಿ ದೂರು ನೀಡಿದ್ದು 29.03.2026 ರಂದು ಮದ್ಯಾಹ್ನ 2:45 ಗಂಟೆಗೆ ಸುಳ್ಯ ಕಸಬಾ ಗ್ರಾಮದ ಕೇರ್ಪಳದಲ್ಲಿರುವ ಮೆಸ್ಕಾಂ ಕಛೇರಿಯಲ್ಲಿ ಕರ್ತವ್ಯದಲ್ಲಿರುವ ಸಮಯ ಕುಲದೀಪ್ ಎಂಬವರು ವಿದ್ಯುತ್ ಬಗ್ಗೆ ಚರ್ಚೆ ನಡೆಸಿ ದಟ್ಟ ಮಾತಿನಿಂದ ಅವಾಚ್ಯ ಶಬ್ದಗಳಿಂದ ಬೈದು, ಕೈಯಿಂದ ದೈಹಿಕ ಹಲ್ಲೆ ಮಾಡಿರುತ್ತಾರೆ. ಈ ವೇಳೆ ನಾನು ಮೊಬೈಲ್ ನಲ್ಲಿ ವಿಡೀಯೋ ಮಾಡಿಕೊಂಡಿದ್ದು ನಂತರ ಕುಲದೀಪ್ ರವರು ಆತನ ಸ್ನೇಹಿತ ಸಂದೀಪನಿಗೆ ಕರೆ ಮಾಡಿ ಕಚೇರಿಗೆ ಬರಲು ಹೇಳಿದ್ದಾರೆ. ಅಲ್ಲಿಗೆ ಬಂದ ಸಂದೀಪನು ದಾರಿ ಬದಿಯಲ್ಲಿ ಬಿದ್ದಿರುವ ಕಲ್ಲಿನಿಂದ ನನ್ನ ಮೇಲೆ ಹಲ್ಲೆ ಮಾಡಲು ಪ್ರಯತ್ನಿಸಿದ್ದು, ಸರ್ಕಾರಿ ಕರ್ತವ್ಯದಲ್ಲಿರುವ ನನ್ನ ಮೇಲೆ ದೈಹಿಕ ಹಲ್ಲೆ ಮಾಡಿರುತ್ತಾರೆ. ಬಳಿಕ ನಾನು ಸುಳ್ಯ ಸರಕಾರಿ ಆಸ್ವತ್ರೆಗೆ ಹೋಗಿ ಹೊರ ರೋಗಿಯಾಗಿ ಚಿಕಿತ್ಸೆ ಪಡೆದುಕೊಂಡು ಠಾಣೆಗೆ ಬಂದು ಈ ದೂರನ್ನು ನೀಡಿರುವುದಾಗಿದೆ ಎಂದು ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಸುಳ್ಯ ಪೊಲೀಸರು ಇತ್ತಂಡಗಳಿಂದ ದೂರು ಸ್ವೀಕರಿಸಿ ಪ್ರಕರಣ ದಾಖಲಿಸಿಕೊಂಡಿರುತ್ತಾರೆ.







