













ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಮಸೀದಿಗಳಲ್ಲಿ ಹರಿಕೆ ಡಬ್ಬಿ ಕಳ್ಳತನ ನಡೆಸುತ್ತಿದ್ದ ಆರೋಪಿಯನ್ನು ಸಾರ್ವಜನಿಕರು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಏಲಿಮಲೆಯಿಂದ ವರದಿಯಾಗಿದೆ.
ಎಲೆಮಲೆ ಮಸೀದಿಯಲ್ಲಿ ಇಂದು (ಏ.6) ಹಗಲು 10 ಗಂಟೆಯ ಸಮಯಕ್ಕೆ ಮಸೀದಿಯ ಹೊರಭಾಗದಲ್ಲಿದ್ದ ಹರಿಕೆ ಡಬ್ಬಿ ಒಡೆಯುವುವ ಶಬ್ದ ಕೇಳಿ ಮಸೀದಿಯ ಗುರುಗಳು ಹೊರಬಂದು ನೋಡುವಾಗ ವ್ಯಕ್ತಿಯೊಬ್ಬ ಕಾಣಿಕೆ ಹಣ ಹಾಕುವ ಡಬ್ಬ ಒಡೆಯುವುದು ಕಂಡು ಬಂತು. ತಕ್ಷಣ ಮಸೀದಿಯ ಗುರುಗಳು ಬಂದು ಆತನನ್ನು ಹಿಡಿದರೆಂದೂ, ಆ ಸಂದರ್ಭ ಆತ ಗುರುಗಳ ಕೈ ಯಿಂದ ತಪ್ಪಿಸಿಕೊಂಡು ಓಡಿ ಹೋದನೆನ್ನಲಾಗಿದೆ. ಗುರುಗಳು ತಕ್ಷಣ ಎಲಿಮಲೆ ಪೇಟೆಯಲ್ಲಿ ಅಡಿಕೆ ವ್ಯಾಪಾರ ಮಾಡುವ ಹ್ಯಾರಿಸ್ ಎಂಬವರಿಗೆ ದೂರವಾಣಿ ಕರೆ ಮಾಡಿ ಕಳ್ಳ ರಸ್ತೆ ಕಡೆಗೆ ಓಡಿದ ಬಗ್ಗೆ ತಿಳಿಸಿದರೆನ್ನಲಾಗಿದೆ . ತಕ್ಷಣ ಹಾರಿಸ್ ರವರು ತನ್ನ ಕಾರಿನಲ್ಲಿ ಹೋಗಿ ಎಲಿಮಲೆ ಮಸದಿಯಿಂದ ಸ್ವಲ್ಪ ದೂರದಲ್ಲಿಯೇ ಹಿಂಬಾಲಿಸಿ ಕಳ್ಳನನ್ನು ಹಿಡಿದರೆಂದೂ, ಆಗ ಸ್ಥಳೀಯರು ಸೇರಿ, ಆತನನ್ನು ಹಾರಿಸ್ ರವರ ಕಾರಿನಲ್ಲಿ ಕೂರಿಸಿ ಮಸೀದಿಗೆ ತಂದರೆನ್ನಲಾಗಿದೆ. ಬಳಿಕ ಸುಳ್ಯ ಪೊಲೀಸರಿಗೆ ಮಾಹಿತಿ ನೀಡಿ, ಅವರು ಬಂದು ಆತನನ್ನು ವಶಕ್ಕೆ ಪಡೆದರು.
ಕಳ್ಳನನ್ನು ಆಂದ್ರ ಪ್ರದೇಶ ಮೂಲದ ಮಹಮ್ಮದ್ ಹಾಧಿಬಾಷ ಎಂದು ಗುರುತಿಸಲಾಗಿದೆ. ಕಳೆದ ಕೆಲವು ಸಮಯದಿಂದ ಸುಳ್ಯ ಮಾತ್ರವಲ್ಲದೆ, ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಮಸೀದಿಗಳಲ್ಲಿ ಹಾಡುಹಗಲೇ ಕಾಣಿಕೆ ಹುಂಡಿಗಳನ್ನು ಮುರಿದು ಹಣ ದೋಚುವ ಪ್ರಕರಣಗಳು ವರದಿಯಾಗುತ್ತಿದ್ದವು. ಇತ್ತೀಚೆಗಷ್ಟೇ ಗೂನಡ್ಕದ ಬದ್ರಿಯಾ ಮಸೀದಿಯಲ್ಲಿಯೂ ಇವನು ಕೈಚಳಕ ತೋರಿಸಿ ಪರಾರಿಯಾಗಿದ್ದನು. ಇದರ ಸಿಸಿಟಿವಿ ದೃಶ್ಯಾವಳಿಗಳು ವೈರಲಾಗಿತ್ತು. ಈತನನ್ನು ಪತ್ತೆ ಹಚ್ಚಲು ಪೊಲೀಸರು ಬಲೆ ಬೀಸಿದ್ದರು. ಈತನ ಮೇಲೆ ಹಲವಾರು ಕಳ್ಳತನದ ಆರೋಪಗಳು ಇದ್ದು, ಸುಳ್ಯ ಪೊಲೀಸರು ವಿಚಾರಣೆ ನಡೆಸುತ್ತಿರುವುದಾಗಿ ತಿಳಿದು ಬಂದಿದೆ. ಈತ ಜಿಲ್ಲೆಯಾದ್ಯಂತ ಕೇವಲ ಮಸೀದಿಗಳನ್ನೇ ಗುರಿಯಾಗಿಸಿಕೊಂಡು ಕಳ್ಳತನ ಮಾಡುತ್ತಿದ್ದ. ಮತ್ತು ಜನಸಂದಣಿ ಕಡಿಮೆ ಇರುವ ಸಮಯದಲ್ಲಿ ಈತ ಕಳ್ಳತನ ನಡೆಸುತ್ತಿದ್ದ ಎಂದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿರುವುದಾಗಿ ತಿಳಿದು ಬಂದಿದೆ.







