ಸುಳ್ಯ : ಸ್ಕೂಟಿಯಿಂದ ಬಿದ್ದು ಗಾಯಗೊಂಡಿದ್ದ ಮಹಿಳೆ ಮೃತ್ಯು

0

ಪತಿಯ ಜತೆ ಸ್ಕೂಟಿಯಲ್ಲಿ ಹೋಗುತ್ತಿರುವ ಸಂದರ್ಭ ಜಾರಿ ರಸ್ತೆಗೆ ಬಿದ್ದು ತೀವ್ರ ಜಖಂಗೊಂಡಿದ್ದ ಮಹಿಳೆಯೊಬ್ಬರು ಕೊನೆಯುಸಿರೆಳೆದಿರುವ ಘಟನೆ ಸುಳ್ಯದಿಂದ ವರದಿಯಾಗಿದೆ.
ಸುಳ್ಯ ಕೇರ್ಪಳದ ಸುರೇಶ್ ಸರಳಾಯರು ಮತ್ತು ಅವರ ಪತ್ನಿ ಸೌಮಿನಿಯವರು ಎ.13 ರಂದು ಬೆಳಿಗ್ಗೆ ತಮ್ಮ ಸ್ಕೂಟಿಯಲ್ಲಿ ಸುಳ್ಯ ಪೇಟೆಗೆ ಬಂದು ಮರುದಿನದ ವಿಷುಕಣಿಗೆ ಸಂಬಂಧಿಸಿ ವಸ್ತ್ರ ಖರೀದಿಸಿ ಹಿಂತಿರುಗಿ ಮನೆ ಕಡೆಗೆ ಹೋಗುತ್ತಿರುವಾಗ, ಸೌಮಿನಿಯವರು ಕೇರ್ಪಳ ರಸ್ತೆಯ ಭಗವತಿ ದ್ವಾರದ ಬಳಿ ಸ್ಕೂಟಿಯಿಂದ ಜಾರಿ ಬಿದ್ದರು. ಪರಿಣಾಮವಾಗಿ ಅವರ ತಲೆಗೆ ಕಾಂಕ್ರೀಟ್ ರಸ್ತೆ ಬಡಿದು ತೀವ್ರ ಜಖಂಗೊಂಡರು.
ಅವರನ್ನು ಸುಳ್ಯದ ಆಸ್ಪತ್ರೆಗೆ ಕರೆದೊಯ್ದು, ಅಲ್ಲಿಂದ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ಕರೆದೊಯ್ಯಲಾಯಿತು. ಆದರೆ ಬದುಕಿಸುವುದು ಅಸಾಧ್ಯವೆಂದು ವೈದ್ಯರು ಹೇಳಿದ ಕಾರಣ ಸಂಜೆ ಅವರನ್ನು ವಾಪಸ್ ಕರೆತಂದು ಕೆ.ವಿ.ಜಿ. ಆಸ್ಪತ್ರೆಯಲ್ಲಿ ಇರಿಸಲಾಯಿತು. ಅಲ್ಲಿ ಅವರು ರಾತ್ರಿ 8 ಗಂಟೆಯ ವೇಳೆಗೆ ನಿಧನರಾದರೆಂದು ತಿಳಿದುಬಂದಿದೆ.