ಮೊಗರ್ಪಣೆ : ರಸ್ತೆ ಬದಿಯ ತಡೆ ಬೇಲಿಗೆ ರಿಕ್ಷಾ ಗುದ್ದಿ ಜಖಂ

0

ಪುತ್ತೂರಿನಿಂದ ಸುಳ್ಯದ ಕಡೆಗೆ ಬರುತ್ತಿದ್ದ ರಿಕ್ಷಾವೊಂದು ಮೊಗರ್ಪಣೆಯಲ್ಲಿ ರಸ್ತೆಬದಿಯ ತಡೆಬೇಲಿಗೆ ಗುದ್ದಿ ಜಖಂಗೊಂಡ ಹಾಗೂ ಚಾಲಕ ಗಾಯಗೊಂಡು ಆಸ್ಪತ್ರೆಗೆ ಸೇರಿರುವ ಘಟನೆ ಇಂದು ಮುಂಜಾನೆ ಸಂಭವಿಸಿದೆ.


ಆಲೆಟ್ಟಿ ಗ್ರಾಮ ಪಂಚಾಯತ್ ಸದಸ್ಯ ಅರಂಬೂರಿನ ಸುದೇಶ್ ರವರು ತಮ್ಮ ಮಗು ಮತ್ತು ಅರಂಬೂರಿನ ಪರಮೇಶ್ವರ ಎಂಬವರೊಂದಿಗೆ ತಮ್ಮ ರಿಕ್ಷಾದಲ್ಲಿ ಪುತ್ತೂರಿನ ಜಾತ್ರೆಗೆ ಹೋಗಿ ಮುಂಜಾನೆಯ ನಾಲ್ಕು ಗಂಟೆ ವೇಳೆಗೆ ಹಿಂದಿರುಗುತ್ತಿದ್ದಾಗ ಸುಳ್ಯ ಸಮೀಪ ಮೊಗರ್ಪಣೆಯಲ್ಲಿ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಸರಿದ ರಿಕ್ಷಾ ರಸ್ತೆಬದಿಯ ತಡೆ ಬೇಲಿಗೆ ಗುದ್ದಿತು. ಪರಿಣಾಮವಾಗಿ ರಿಕ್ಷಾ ಜಖಂ ಗೊಂಡದ್ದಲ್ಲದೆ ಸುದೇಶ್ ರವರ ಮುಖಕ್ಕೆ ಗಾಯವಾಗಿದೆ ಎನ್ನಲಾಗಿದೆ. ಅವರನ್ನು ಸರಕಾರಿ ಆಸ್ಪತ್ರೆಗೆ ಕರೆದೊಯ್ದು ಬಳಿಕ ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ತಿಳಿದು ಬಂದಿದೆ.