ಬೀದಿ ನಾಯಿಗಳ ಸಮಸ್ಯೆ, ಭಸ್ಮಡ್ಕ ಹೊಳೆ ಬದಿ ಪಾರ್ಟಿ ಸಹಿತ ಹಲವು ವಿಷಯ ಪ್ರಸ್ತಾಪ
ಸುಳ್ಯ ನಗರದ ಪೋಲೀಸ್ ಬೀಟ್ ಸಭೆಯು ಸುಳ್ಯದ ಪುರಭವನದಲ್ಲಿ ಪೋಲೀಸ್ ಉಪ ನಿರೀಕ್ಷಕ ಸಂತೋಷ್ ರವರ ನೇತೃತ್ವದಲ್ಲಿ ಜೂ.6ರಂದು ಸಂಜೆ ನಡೆಯಿತು.














ಸಭೆಯಲ್ಲಿ ಮಾಹಿತಿ ನೀಡಿದ ಉಪ ನಿರೀಕ್ಷರಾದ ಸಂತೋಷ್ ರವರು, “ಲಾಕ್ಡ್ ಹೌಸ್ ಬೀಟ್ ಸಿಸ್ಟಮ್ ನ ಪ್ರಯೋಜನ, ಮನೆಯಲ್ಲಿ ಒಬ್ಬಂಟಿಯಾಗಿ ವಾಸಿಸುವ ಹಿರಿಯ ನಾಗರಿಕರಿಗಾಗಿ ಜಾರಿಯಾಗಿರುವ ಆಸರೆ ಯೋಜನೆ, ಸೈಬರ್ ಫ್ರಾಡ್ ಆಗುತ್ತಿರುವ ಕುರಿತು ವಿವರವಾಗಿ ಮಾಹಿತಿ ನೀಡಿದರಲ್ಲದೆ, ಹೆಲ್ಮೆಟ್ ಹಾಕದೇ ದ್ವಿಚಕ್ರ ವಾಹನ ಚಾಲನೆಯಿಂದ ಆಗುವ ತೊಂದರೆ, ಸೀಟ್ ಬೆಲ್ಟ್ ಹಾಕಬೇಕಾದ ಕುರಿತು ತಿಳಿಸಿದರು. ಇನ್ಶೂರೆನ್ಸ್ ಮಾಡಿಸಬೇಕಾದ ಕುರಿತು ಅವರು ವಿವರ ನೀಡಿದರಲ್ಲದೆ, ಸಮಸ್ಯೆಗಳಾದಾಗ ಬೀಟ್ ಪೋಲೀಸರಿಗೆ ಮಾಹಿತಿ ನೀಡಿ, ಹಾಗೂ 1930, 112 ಗೂ ಕರೆ ಮಾಡಿ ಮಾಹಿತಿ ನೀಡುವಂತೆ ಹೇಳಿದರು.

ಬೀದಿ ನಾಯಿಗಳ ಸಮಸ್ಯೆ
ಉಪ ನಿರೀಕ್ಷಕರು ಮಾಹಿತಿ ನೀಡಿದ ಬಳಿಕ ಸಭೆಯಲ್ಲಿ ಸೇರಿದವರಿಂದ ಅಭಿಪ್ರಾಯ ಪಡೆದಾಗ, ಸುನಿಲ್ ಕೇರ್ಪಳ ರವರು ” ಪುರಭವನದಿಂದ ಕೇರ್ಪಳ ರಸ್ತೆಯಲ್ಲಿ ನಾಯಿಗಳ ಸಮಸ್ಯೆ ವಿಪರೀತವಾಗಿದೆ. ಕೆಲವರು ನಾಯಿಗಳನ್ನು ಬೇರೆಡೆಯಿಂದ ತಂದು ಕೂಡಾ ಬಿಡುತ್ತಾರೆ” ಎಂದು ಸಮಸ್ಯೆ ಹೇಳಿಕೊಂಡರು. ಈ ಕುರಿತು ಪಂಚಾಯತ್ ಗೆ ತಿಳಿಸುವುದಾಗಿ ಎಸ್.ಐ. ಹೇಳಿದರು. ವಿನ್ಯಾಸ್ ಕುರುಂಜಿಯವರು, “ಭಸ್ಮಡ್ಕ ಹೊಳೆ ಬದಿಯಲ್ಲಿ ಪಾರ್ಟಿಗಳು ನಡೆಯುತ್ತಿರುತ್ತವೆ. ಆ ರಸ್ತೆಯಲ್ಲಿ ಹುಡುಗರು ಗುಂಪು ಸೇರುತ್ತಿರುತ್ತಾರೆ ಇತ್ಯಾದಿ ಸಮಸ್ಯೆ ಹೇಳಿಕೊಂಡರು. ಸುಳ್ಯದ ರೋಟರಿ ವಿದ್ಯಾಸಂಸ್ಥೆ ಎದುರು ಬೆಳಗ್ಗೆ ಸಂಜೆ ಟ್ರಾಫಿಕ್ ಸಮಸ್ಯೆ ಆಗುತ್ತಿರುವ ಬಗ್ಗೆ ಕುಸುಮಾಧರ ಬೂಡು ಹೇಳಿದರೆ, “ಸುಳ್ಯ ಬಸ್ ನಿಲ್ದಾಣದ ಮುಂಭಾಗ ಬೆಳಗ್ಗೆ ಕಾರ್ಮಿಕರು ನಿಲ್ಲುತ್ತಿದ್ದಾರೆ. ರಸ್ತೆಯ ಬದಿಗೆ ಗುಟ್ಕಾ ತಿಂದು ಉಗಿಯುತ್ತಿದ್ದು ಕಡಿವಾಣ ಹಾಕಬೇಕೆಂದು ಶಿವರಾಮ ಕೇರ್ಪಳ ಅಭಿಪ್ರಾಯ ಮುಂದಿಟ್ಟರು. ಮಕ್ಕಳಿಗೂ ಹೆಲ್ಮೆಟ್ ಹಾಕಬೇಕಾದ ಅಗತ್ಯತೆ, ಸ್ಥಳೀಯರಿಗೆ ಸೀಟ್ ಬೆಲ್ಟ್ ಹಾಕುವುದರಲ್ಲಿ ವಿನಾಯಿತಿ ಹೀಗೆ ಹಲವು ಅಭಿಪ್ರಾಯ ಗಳು ಸಭೆಯಲ್ಲಿ ವ್ಯಕ್ತವಾದವು. ಎ.ಎಸ್.ಐ. ತಾರನಾಥ, ಬೀಟ್ ಪೋಲೀಸ್ ನಾಗರಾಜ್ ಸಿಂಧೆ ಉಪಸ್ಥಿತರಿದ್ದರು.








