ಕೋಲ್ಚಾರು : ಸುಳ್ಯ ತಾಲೂಕು ಕಾನೂನು ಸೇವೆಗಳ ಸಮಿತಿ ವತಿಯಿಂದ ವಿಶ್ವ ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ

0

ಸುಳ್ಯ ತಾಲೂಕು ಕಾನೂನು ಸೇವೆಗಳ ಸಮಿತಿ ವತಿಯಿಂದ ಕೋಲ್ಚಾರು ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶ್ವ ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನವನ್ನು ಆಚರಿಸಲಾಯಿತು. ಸಂವಿಧಾನ ಗೀತೆಯ ಗಾಯನದೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು.

ಸುಳ್ಯ ನ್ಯಾಯಾಲಯದ ಸಿವಿಲ್ ನ್ಯಾಯಾಧೀಶರಾದ ಸಿ. ಚಿರಾಗ್ ರವರು ಕಾರ್ಯಕ್ರಮವನ್ನು
ಉದ್ಘಾಟಿಸಿದರು. ಶಾಲಾ ಪಾಲನಾ ಮತ್ತು ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಕರುಣಾಕರ ರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಹಿರಿಯ ನ್ಯಾಯವಾದಿ ಭಾಸ್ಕರ ಪಿ. ರಾವ್ ರವರು ಬಾಲ ಕಾರ್ಮಿಕ ಪದ್ಧತಿಯ ದುಷ್ಪರಿಣಾಮಗಳು, ಮಕ್ಕಳ ಹಕ್ಕುಗಳು, ಶಿಕ್ಷಣದ ಮಹತ್ವ ಹಾಗೂ ಬಾಲಕಾರ್ಮಿಕರನ್ನು ತಡೆಗಟ್ಟಲು ಜಾರಿಯಲ್ಲಿರುವ ಕಾನೂನುಗಳ ಕುರಿತು ವಿದ್ಯಾರ್ಥಿಗಳಿಗೆ ಸಮಗ್ರ ಮಾಹಿತಿ ನೀಡಿದರು.

ಮುಖ್ಯ ಅತಿಥಿಗಳಾಗಿ ಸುಳ್ಯ ತಾಲೂಕು ವಕೀಲರ ಸಂಘದ ಅಧ್ಯಕ್ಷರಾದ ಸುಕುಮಾರ್ ಕೋಡ್ತುಗುಳಿ, ಸುಳ್ಯ ನ್ಯಾಯಾಲಯದ ಸಹಕಾರಿ ಸಹಕಾರಿ ಅಭಿಯೋಜಕರಾದ ಕು.ಪ್ರೀತಿ ಎಂ.ಸಿ, ನ್ಯಾಯವಾದಿಗಳಾದ ಧರ್ಮಪಾಲ ಕೊಯಿಂಗಾಜೆ, ಶಾಲಾ ಮುಖ್ಯ ಶಿಕ್ಷಕರಾದ ಚಿನ್ನಸ್ವಾಮಿ ಶೆಟ್ಟಿ, ವೇದಿಕೆಯಲ್ಲಿ ಉಪಸ್ಥಿತರಿದ್ದು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.
ಬಾಲ ಕಾರ್ಮಿಕ ಪದ್ಧತಿ ಸಮಾಜಕ್ಕೆ ಕಳಂಕವಾಗಿದ್ದು, ಪ್ರತಿಯೊಬ್ಬ ಮಗುವಿಗೂ ಶಿಕ್ಷಣ, ಸುರಕ್ಷತೆ ಹಾಗೂ ಉತ್ತಮ ಭವಿಷ್ಯವನ್ನು ಒದಗಿಸುವುದು ಸಮಾಜದ ಜವಾಬ್ದಾರಿಯಾಗಿದೆ ಎಂದು ಮುಖ್ಯ ಅತಿಥಿಗಳು ತಮ್ಮ ಭಾಷಣದಲ್ಲಿ ತಿಳಿಸಿದರು. ಮಕ್ಕಳನ್ನು ಕಾರ್ಮಿಕರನ್ನಾಗಿ ಬಳಸುವುದು ಕಾನೂನುಬಾಹಿರವಾಗಿದ್ದು, ಪ್ರತಿಯೊಬ್ಬರೂ ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಕೈಜೋಡಿಸಬೇಕು ಎಂದು ಕರೆ ನೀಡಿದರು. ವಿದ್ಯಾರ್ಥಿಗಳು ತಮ್ಮ ಹಕ್ಕುಗಳ ಬಗ್ಗೆ ಅರಿವು ಹೊಂದಿ ಶಿಕ್ಷಣದ ಮೂಲಕ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ತಿಳಿಸಿದರು.

ಶಿಕ್ಷಕರಾದ ರಂಗನಾಥ ಎಂ ಎಸ್ ಸ್ವಾಗತಿಸಿ ಶ್ರೀಮತಿ ಜಲಜಾಕ್ಷಿ, ಕಾರ್ಯಕ್ರಮವನ್ನು ನಿರೂಪಿಸಿದರು.

ಶ್ರೀಮತಿ ಮಮತಾ ಕೆ.ವಿ. ಮನು ಕುಮಾರ್ ಸಿ.ಎಂ., ಶ್ರೀಮತಿ ವಿನುತಾ, ಶ್ರೀಮತಿ ವಂದನಾ, ಶ್ರೀಮತಿ ನಿರ್ಮಲ, ಶ್ರೀಮತಿ ಭವ್ಯ ಹಾಗೂ ಅಡುಗೆ ಸಿಬ್ಬಂದಿಗಳು ಸಹಕರಿಸಿದರು.ನ್ಯಾಯಾಲಯದ ಸಿಬ್ಬಂದಿಗಳಾದ ಐಶ್ವರ್ಯ ಹಾಗೂ ಇತರ ಸಿಬ್ಬಂದಿಗಳು ಭಾಗವಹಿಸಿದ್ದರು.ಅತಿಥಿಗಳು ಶಾಲೆಯ ವಿವಿಧ ಸೌಲಭ್ಯಗಳು, ಶೈಕ್ಷಣಿಕ ಚಟುವಟಿಕೆಗಳು, ವಿದ್ಯಾರ್ಥಿಗಳ ಸಾಧನೆಗಳು ಹಾಗೂ ಶಾಲೆಯ ಸಮಗ್ರ ಅಭಿವೃದ್ಧಿ ಕಾರ್ಯಗಳನ್ನು ಅವಲೋಕಿಸಿದರು. ಶಾಲೆಯಲ್ಲಿ ಅನುಷ್ಠಾನಗೊಳ್ಳುತ್ತಿರುವ ನವೀನ ಶೈಕ್ಷಣಿಕ ಕಾರ್ಯಕ್ರಮಗಳು, ಶಿಸ್ತುಬದ್ಧ ವಾತಾವರಣ, ಶಿಕ್ಷಕರ ಸಮರ್ಪಣಾ ಮನೋಭಾವ ಹಾಗೂ ವಿದ್ಯಾರ್ಥಿಗಳ ಪ್ರತಿಭೆಯನ್ನು ಶ್ಲಾಘಿಸಿದರು. ವಿಶೇಷವಾಗಿ ಶಾಲೆಯ ಪ್ರಗತಿಪರ ಕಾರ್ಯಚಟುವಟಿಕೆಗಳು, ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ನೀಡುತ್ತಿರುವ ಆದ್ಯತೆ ಹಾಗೂ ಸಮಾಜಮುಖಿ ಕಾರ್ಯಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.