ಮೆಸ್ಕಾಂ,ಪಿಡಬ್ಲ್ಯುಡಿ ಇಲಾಖಾಧಿಕಾರಿಗಳು ಗೈರು ಬಗ್ಗೆ ಸುದೀರ್ಘ ಚರ್ಚೆ














ಬಾಳಿಲ ಗ್ರಾಮ ಪಂಚಾಯತ್ 2025 – 26. ನೇ ಸಾಲಿನ ಪ್ರಥಮ ಹಂತದ ಗ್ರಾಮ ಸಭೆಯು ಗ್ರಾಮ ಪಂಚಾಯತ್ ಆಡಳಿತಾಧಿಕಾರಿ ಗುರುಪ್ರಸಾದ್ ಎಂ.ಎಸ್.ರವರ ಅಧ್ಯಕ್ಷತೆಯಲ್ಲಿ ಆ.05 ರಂದು ಪಂಚಾಯತ್ ವಠಾರದಲ್ಲಿ ನಡೆಯಿತು.
ಗ್ರಾಮ ಪಂಚಾಯತ್ ಪಿಡಿಒ ಸರಿತಾ ಓಲ್ಗಾ ಡಿಸೋಜಾರವರು ಸ್ವಾಗತಿಸಿ,ಪ್ರಾಸ್ತಾವಿಕ ಮಾತನಾಡಿದರು.
ಗ್ರಾಮ ಪಂಚಾಯತ್ ಕಾರ್ಯದರ್ಶಿ ಜಯಶೀಲ ರೈಯವರು ವರದಿ ಮಂಡಿಸಿದರು.

ಮೆಸ್ಕಾಂ ಅಧಿಕಾರಿಗಳು ಮತ್ತು ಪಿಡಬ್ಲ್ಯುಡಿ ಇಲಾಖಾಧಿಕಾರಿಗಳು ಗ್ರಾಮಸಭೆಗೆ ಯಾಕೆ ಬರಲಿಲ್ಲ ಅವರು ಮುಖ್ಯವಾಗಿ ಬರಬೇಕಿತ್ತು.
ಪ್ರತೀ ಗ್ರಾಮ ಸಭೆಗೆ ಅವರು ಬರುವುದಿಲ್ಲ ನಮಗೆ ಹಲವು ಸಮಸ್ಯೆಗಳನ್ನು ಅವರ ಜೊತೆ ಕೇಳಬೇಕಿತ್ತು ಎಂದು ಬಾಲಕೃಷ್ಣ ಮರಂಗಾಲ ಮತ್ತು ಶರೀಫ್ ಭಾರತ್ ಮತ್ತಿತರರು ಕೇಳಿದರು.ಇದಕ್ಕೆ ಪಿಡಿಒ ರವರು ಅವರಿಗೆ ಮೀಟಿಂಗ್ ಇದೆಯಂತೆ ಎಂದು ಹೇಳಿದರು.ಆಗ ಬಾಲಕೃಷ್ಣರವರು ಅವರಿಗೆ ವರ್ಷವಿಡೀ ಮೀಟಿಂಗೆ ಆಯಿತು ಎಂದು ಹೇಳಿದರು.
ಬೇಡಿಕೆ ಇದ್ದದ್ದು ಕೊಡಿ ಎಂದು ಪಿಡಿಒ ಕೇಳಿದರು.ಇದಕ್ಕೆ ಬಾಲಕೃಷ್ಣ ರವರು ನಾವು ಮೊದಲು ಕೊಟ್ಟ ಬೇಡಿಕೆಗಳು ಏನಾಗಿದೆ? ಎಂದು ಕೇಳಿದರು.ಇದಕ್ಕೆ ಪಿಡಿಒ ರವರು ನಾವು ಕೂಡ ಕೆಲವು ಬೇಡಿಕೆ ಹೇಳಿದ್ದೆವು ಅದೂ ಅಗಲಿಲ್ಲ ಎಂದು ಹೇಳಿದರು.ಇದಕ್ಕೆ ಶರೀಫ್ ಭಾರತ್ ರವರು ನೀವೆ ಕೊಟ್ಟ ಬೇಡಿಕೆ ಆಗಲಿಲ್ಲ ಎಂದು ಹೇಳುತ್ತೀರಿ ಮತ್ತೆ ನಮ್ಮ ಬೇಡಿಕೆ ಎಲ್ಲಿ ಆಗುತ್ತದೆ ಎಂದು ಕೇಳಿದರು.ಇದಕ್ಕೆ ಪಿಡಿಒ ರವರು ಅವರಿಗೆ ಲೆಟರ್ ಮಾಡುವ ಈ ಬಾರಿ ಎಂದು ಉತ್ತರಿಸಿದರು.
ಪಲ್ಲತ್ತಡ್ಕ ಕೊಡೆಂಕಿರಿ ಮರೆಂಗಾಲ ಸಮೀಪ ಹಳೆಯ ಹೆಚ್.ಟಿ.ಲೈನ್ ಬೀಳಲಿಕ್ಕೆ ಆಗಿದೆ.ಕೊಡೆಂಕಿರಿ ಕಾಪುತ್ತಡ್ಕದಲ್ಲಿ ಟಿ.ಸಿ.ಬದಲಾವಣೆ ಮಾಡಬೇಕು.ಅಯ್ಯನಕಟ್ಟೆ ಕಾಲನಿ ರಸ್ತೆಯಲ್ಲಿ ವಿದ್ಯುತ್ ಕಂಬ ಅಪಾಯದಲ್ಲಿದೆ ಎಂದು ಜುನೈದ್ ಎಂಬವರು ಹೇಳಿದರು.
ವಿದ್ಯುತ್ ಕಂಬಗಳಲ್ಲಿ ಕೇಬಲ್ ಎಳೆದಿದ್ದಾರೆ ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ.ಅಲ್ಲಲ್ಲಿ ರಸ್ತೆಯಲ್ಲಿ ಕೇಬಲ್ ತುಂಡಾಗಿ ಬಿದ್ದಿರುತ್ತದೆ.ಇದರಿಂದ ಬೈಕ್ ಸವಾರರಿಗೆ ಅಪಾಯವಾಗುವ ಸಾಧ್ಯತೆ ಇದೆ.ಇದು ಕಪ್ಪು ಕೇಬಲ್ ಆಗಿರುವ ಕಾರಣ ಬೈಕ್ ಸವಾರರಿಗೆ ಕಾಣುವುದು ಕೂಡ ಇಲ್ಲ.ಈ ಬಗ್ಗೆ ಕ್ರಮ ಕೈಗೊಳ್ಳವಂತೆ ನಿರ್ಣಯ ಮಾಡಬೇಕೆಂದು ಬಾಲಕೃಷ್ಣರವರು ಹೇಳಿದರು.
ಬೀದಿ ನಾಯಿಗಳ ಕಾಟ ಶಾಲಾ ಮಕ್ಕಳು,ಸಾರ್ವಜನಿಕರಿಗೆ ತೊಂದರೆ
ಶರೀಫ್ ಬಾಳಿಲರವರು ಮಾತನಾಡಿ ಬಾಳಿಲದಲ್ಲಿ ಬೀದಿನಾಯಿಗಳ ಕಾಟ ವಿಪರೀತವಾಗಿದೆ ಎಂದು ಹೇಳಿದರು.ಇದಕ್ಕೆ ವಾರಿಜ ಬೊಳಿಯಕಂಡ ,ರವೀಂದ್ರ ರೈ,ಹರ್ಷ ಜೋಗಿಬೆಟ್ಟು,ಬಾಲಕೃಷ್ಣ ರೈ ಪಾದೆಕಲ್ಲು ರವರು ಕೂಡ ಧ್ವನಿಗೂಡಿಸಿ ಬೀದಿ ನಾಯಿಗಳಿಂದ ತುಂಬಾ ತೊಂದರೆಯಾಗುತ್ತಿದೆ ಎಂದು ಹೇಳಿದರು.ಇದಕ್ಕೆ ನೋಡೆಲ್ ಅಧಿಕಾರಿಯವರು ಬೀದಿ ನಾಯಿಗಳನ್ನು ಏನೂ ಮಾಡುವಂತಿಲ್ಲ.ಅದಕ್ಕೆ ಸಂತಾನ ಹರಣ ಚಿಕಿತ್ಸೆ ಮಾತ್ರ ಮಾಡಬೇಕಷ್ಟೆ ಎಂದು ಉತ್ತರಿಸಿದರು.ಆಗ ಪಿಡಿಒರವರು ಸಾಕು ಪ್ರಾಣಿಗಳನ್ನು ಜನರು ಸಾರ್ವಜನಿಕ ಸ್ಥಳಕ್ಕೆ ಬಿಡುವಂತಿಲ್ಲ ಅವರು ಕಟ್ಟಿ ಹಾಕಿಯೇ ಸಾಕಬೇಕು ಎಂದು ಹೇಳಿದರು.
ಉಡುಪಿಯಲ್ಲಿ ಒಂದು ಕಡೆ ಒಬ್ಬರು ಬೀದಿನಾಯಿಗಳನ್ನು ಸಾಕುತ್ತಾರಂತೆ ಅಲ್ಲಿಗೆ ನಾಯಿಗಳನ್ನು ತಲುಪಿಸುವ ಕೆಲಸ ಮಾಡಬೇಕೆ ಎಂದು ಪಿಡಿಒ ಹೇಳಿದರು.ನಾಯಿಗಳನ್ನು ಹಿಡಿಯುವ ವ್ಯವಸ್ಥೆ ಯಾರು ಮಾಡುವುದು ಎಂದು ಗ್ರಾಮಸ್ಥರು ಕೇಳಿದರು. ಯಾರಾದರೂ ಹಿಡಿಯುವವರು ಇದ್ದಾರ ಎಂದು ಗ್ರಾಮಸ್ಥರು ಕೇಳಿದರು.
ಆಗ ಪಿಡಿಒರವರು ಮಂಗಳೂರಿನಲ್ಲಿನಾಯಿ ಹಿಡಿಯುವ ಒಂದು ಟೀಮ್ ಇದೆಯಂತೆ ಎಂದು ಹೇಳಿದರು.ಈ ಬಗ್ಗೆ ಹಲವು ಹೊತ್ತು ಚರ್ಚೆಗಳು ನಡೆದವು.
ಶಾಲೆಗಳಲ್ಲಿ ಶಿಕ್ಷಕರ ಕೊರತೆ ಬಗ್ಗೆ ಚರ್ಚೆ
ಶಿಕ್ಷಣ ಇಲಾಖೆಯ ಬಗ್ಗೆ ಇಲಾಖೆಯ ಜಯಂತ್ ರವರು ಇಲಾಖೆಯ ಮಾಹಿತಿ ನೀಡುತ್ತಿದ್ದಂತೆ ರಾಜೇಶ್ ಅಯ್ಯನಕಟ್ಟೆಯವರು ನೀವು ಮಕ್ಕಳನ್ನು ಸರಕಾರಿ ಶಾಲೆಗೆ ಕಳುಹಿಸಿ ಎಂದು ಹೇಳುತ್ತೀರಿ ಆದರೆ ಸರಕಾರಿ ಶಾಲೆಗಳಲ್ಲಿ ಶಿಕ್ಷಕರೇ ಇಲ್ಲವಲ್ಲ.ಇದ್ದ ಶಿಕ್ಷಕರನ್ನು ಎಸ್.ಐ.ಆರ್ ಗೆ ಹಾಕಿದ್ದೀರಿ ಮತ್ತೆ ಮಕ್ಕಳಿಗೆ ಪಾಠ ಮಾಡುವುದು ಯಾರು? ಅಯ್ಯನಕಟ್ಟೆ ಶಾಲೆಯಲ್ಲಿ ಶಿಕ್ಷಕರೇ ಇಲ್ಲ.2 ಶಿಕ್ಷಕರು ಇದ್ದಾರೆ ಎಂದು ಹೇಳಿದರು.
ಇದಕ್ಕೆ ಜಯಂತರವರು ನಾವು ಶಿಕ್ಷಣ ಇಲಾಖೆಯಿಂದ ಸರಕಾರಕ್ಕೆ ನಮ್ಮನ್ನು ಎಸ್.ಐ.ಆರ್ ನಿಂದ ಕೈ ಬಿಡಬೇಕೆಂದು ಮನವಿ ನೀಡಿದ್ದೇವೆ.ಕೆಲವು ಶಿಕ್ಷಕರನ್ನು ಡೆಪ್ಯುಟೇಷನ್ ಮಾಡಿದ್ದೇವೆ ಸ್ವಲ್ಪ ಸಮಸ್ಯೆ ಆಗಿದೆ ಅದು ಸರಿ ಆಗುತ್ತದೆ ಎಂದು ಉತ್ತರಿಸಿದರು.ಇದಕ್ಕೆ ರಾಜೇಶ್ ರವರು ಸಮಸ್ಯೆ ಇದೆ ಹೌದು. ಮಕ್ಕಳಿಗೆ ಸರಕಾರದ ಎಲ್ಲಾ ಯೋಜನೆಗಳು ಇದೆ ಆದರೆ ಶಿಕ್ಷಕರನ್ನು ಕೊಡುವುದಿಲ್ಲ ಇದರಿಂದ ತೊಂದರೆಯಾಗಿದೆ.
ಬಿಟ್ಟಿ ಕೆಲಸಕ್ಕೆ ಶಿಕ್ಷಕರನ್ನು ಬಳಸಿಕೊಳ್ಳಬೇಡಿ.ಶಿಕ್ಷಕರನ್ನು ಪಾಠಕ್ಕೆ ಮಾತ್ರ ಬಿಡಿ ಎಂದು ರಾಜೇಶ್ ಹೇಳಿದರು.
ಬಾಳಿಲದಿಂದ ಕಳಂಜ ಸಂಪರ್ಕ ರಸ್ತೆ ದುರಸ್ಥಿಯಾಗದೆ ಸಮಸ್ಯೆಯಾಗಿರುವುದಾಗಿ ಸುಬ್ರಹ್ಮಣ್ಯ ಕಾವಿನಮೂಲೆಯವರು ಹೇಳಿದರು.ಈ ಬಗ್ಗೆ ಪರಿಶೀಲಿಸುವುದಾಗಿ ನೋಡೆಲ್ ಅಧಿಕಾರಿ ಹೇಳಿದರು.
ವರದಿಯಲ್ಲಿ ಬಾಳಿಲ ಗ್ರಾಮ ಪಂಚಾಯತ್ ವ್ಯಾಪ್ತಿಯ ರಾಮಕುಮೇರಿ ನೀರು ಸರಬರಾಜು ಯೋಜನೆಯ ಕೊಳವೆ ಬಾವಿಗೆ ಪಂಪನ್ನು ಇಳಿಸಲು ಪಂಜಿಗಾರು ನೀರು ಸರಬರಾಜು ಯೋಜನೆಯ ಕೊಳವೆ ಬಾವಿಯಿಂದ ಪಂಪನ್ನು ಎತ್ತುವರಿ ಮಾಡಿದ ಬಾಬ್ತು 3250 ಎಂದಿದೆ.
ರಾಮಕುಮೇರಿ ನೀರು ಸರಬರಾಜು ಕೊಳವೆ ಬಾವಿಯಿಂದ ಪಂಪನ್ನು ಎತ್ತುವರಿ ಮಾಡಿ ದಾಸ್ತಾನು ಇರಿಸಿ ಪಂಜಿಗಾರು ನೀರು ಸರಬರಾಜು ಯೋಜನೆಯ ಕೊಳವೆ ಬಾವಿಯಿಂದ ಎತ್ತುವರಿ ಮಾಡಿದ ಪಂಪನ್ನು ಇಳಿಸಿದ ಕಾಮಗಾರಿ ಬಾಬ್ತು ರೂ. 6550 ಎಂದು ಇದೆ ಇದು ಎಂತ ಎಂದು ರಾಧಾಕೃಷ್ಣ ರಾವ್ ಉಡುವೆಕೋಡಿಯವರು ಕೇಳಿದರು.
ಇದಕ್ಕೆ ಪಿಡಿಒರವರು ಅದು ಬೇರೆ ಬೇರೆ ಬಿಲ್ಲು ಎಂದು ಉತ್ತರಿಸಿದರು.
ಇಲಾಖಾಧಿಕಾರಿಗಳು ಇಲಾಖಾ ಮಾಹಿತಿ ನೀಡಿದರು.
ಗ್ರಾಮ ಪಂಚಾಯತ್ ವ್ಯಾಪ್ತಿಯ ಅರ್ಹ ಫಲಾನುಭವಿಗಳಿಗೆ ಚೆಕ್ ವಿತರಣೆ ಮಾಡಲಾಯಿತು.
ಮಧುರ ತೋಟದಮೂಲೆ ಪ್ರಾರ್ಥಿಸಿ,
ಗ್ರಂಥಾಲಯ ಮೇಲ್ವಿಚಾರಕ ಬಾಬು ಮರುವಂಜ ಕಾರ್ಯಕ್ರಮ ನಿರೂಪಿಸಿದರು.
ಪಂಚಾಯತ್ ಸಿಬ್ಬಂದಿ ವರ್ಗದವರು ಸಹಕರಿಸಿದರು.
ಆರೋಗ್ಯ ಇಲಾಖೆಯಿಂದ ಬಿ.ಪಿ.ಶುಗರ್ ಉಚಿತ ಪರೀಕ್ಷೆ,
ಬಾಳಿಲ ಆರೊಗ್ಯ ಕೇಂದ್ರದ ವತಿಯಿಂದ ಗ್ರಾಮ ಸಭೆಯಲ್ಲಿ ಭಾಗವಹಿಸಿದವರ ಬಿ.ಪಿ ಹಾಗೂ ಶುಗರ್ ಪರೀಕ್ಷೆಯನ್ನು ಉಚಿತವಾಗಿ ಮಾಡಲಾಯಿತು.
ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಶ್ರೀಮತಿ ಮೋಹಿನಿ ಮತ್ತು ಸಮುದಾಯ ಆರೋಗ್ಯಾಧಿಕಾರಿ ಶ್ರೀಮತಿ ಜ್ಯೋತಿಯವರು ಉಚಿತವಾಗಿ ಬಿ.ಪಿ,ಶುಗರ್ ಪರೀಕ್ಷೆ ನಡೆಸಿದರು.







