ಜ್ಞಾನಗಂಗಾ ಸೆಂಟ್ರಲ್ ಸ್ಕೂಲ್, ಬೆಳ್ಳಾರೆಯಲ್ಲಿ ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆ

0

ಜ್ಞಾನಗಂಗಾ ಸೆಂಟ್ರಲ್ ಸ್ಕೂಲ್, ಬೆಳ್ಳಾರೆಯಲ್ಲಿ ಆ.15ರಂದು 80ನೇ ಸ್ವಾತಂತ್ರ್ಯೋತ್ಸವವನ್ನು ಸಂಭ್ರಮ ಹಾಗೂ ದೇಶಭಕ್ತಿಯ ವಾತಾವರಣದಲ್ಲಿ ಆಚರಿಸಲಾಯಿತು.

ಶಾಲಾ ಬ್ಯಾಂಡ್‌ಸೆಟ್‌ನೊಂದಿಗೆ ಆಗಮಿಸಿದ ಶಾಲಾ ಸಂಚಾಲಕರಾದ ಶ್ರೀ ಎಂ. ಪಿ. ಉಮೇಶ್ ಹಾಗೂ ಶಾಲಾ ಪ್ರಾಂಶುಪಾಲರಾದ ಕುಮಾರಿ ಟಿ. ಎಂ. ದೇಚಮ್ಮ ಅವರು ವೇದಿಕೆಗೆ ಆಗಮಿಸಿ ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ರಾಷ್ಟ್ರಗೀತೆ, ವಂದೇ ಮಾತರಂ ಹಾಗೂ ಧ್ವಜಗೀತೆಗಳನ್ನು ಹಾಡಿ ದೇಶಭಕ್ತಿಯ ಭಾವನೆ ಮೂಡಿಸಿದರು.

ನಂತರ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಶಾಲಾ ಸಂಚಾಲಕರಾದ ಶ್ರೀ ಎಂ. ಪಿ. ಉಮೇಶ್ ಅವರು, ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ ಮಹನೀಯರನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯವೆಂದರು. ದೇಶಕ್ಕಾಗಿ ವಿವಿಧ ಸಂದರ್ಭಗಳಲ್ಲಿ ಹೋರಾಡಿ, ತ್ಯಾಗ ಮಾಡಿದ ಮಹನೀಯರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಭಾರತದ ಪ್ರಗತಿ, ಆರ್ಥಿಕ ಬೆಳವಣಿಗೆ ಹಾಗೂ ಸಾಧನೆಗಳ ಕುರಿತು ಮಾತನಾಡಿದ ಅವರು, ಆರ್ಥಿಕತೆಯಲ್ಲಿ ನಾಲ್ಕನೇ ಸ್ಥಾನದಲ್ಲಿರುವ ಭಾರತವು ಭವಿಷ್ಯದಲ್ಲಿ ಮೊದಲ ಸ್ಥಾನಕ್ಕೇರಬೇಕು ಎಂಬ ಆಶಯ ವ್ಯಕ್ತಪಡಿಸಿದರು. ಪುಣ್ಯಭೂಮಿಯಾದ ಭಾರತದಲ್ಲಿ ಜನಿಸಿರುವ ನಾವು ಧನ್ಯರು ಎಂದು ಹೇಳಿದರು. ಸ್ವಾತಂತ್ರ್ಯಪೂರ್ವದ ಭಾರತಕ್ಕೂ ಸ್ವಾತಂತ್ರ್ಯೋತ್ತರ ಭಾರತದ ಇಂದಿನ ಸ್ಥಿತಿಗೂ ಇರುವ ವ್ಯತ್ಯಾಸವನ್ನು ವಿವಿಧ ಉದಾಹರಣೆಗಳ ಮೂಲಕ ವಿವರಿಸಿ, ದೇಶದ ಪ್ರಗತಿಯಲ್ಲಿ ಪ್ರತಿಯೊಬ್ಬ ನಾಗರಿಕನ ಪಾತ್ರವೂ ಮಹತ್ವದ್ದಾಗಿದೆ ಎಂದು ತಿಳಿಸಿದರು.

ನಂತರ ಶಾಲಾ ವಿದ್ಯಾರ್ಥಿಗಳಿಂದ ದೇಶಭಕ್ತಿ ಹಾಗೂ ರಾಷ್ಟ್ರಪ್ರೇಮವನ್ನು ಬಿಂಬಿಸುವ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ವಿದ್ಯಾರ್ಥಿಗಳ ಮನಮೋಹಕ ಪ್ರದರ್ಶನಗಳು ಕಾರ್ಯಕ್ರಮಕ್ಕೆ ಮತ್ತಷ್ಟು ಮೆರುಗು ನೀಡಿದವು.

ಕೊನೆಯಲ್ಲಿ ವಿದ್ಯಾರ್ಥಿಗಳಿಗೆ ಸಿಹಿ ತಿಂಡಿ ವಿತರಿಸುವುದರೊಂದಿಗೆ 80ನೇ ಸ್ವಾತಂತ್ರ್ಯೋತ್ಸವದ ಸಂಭ್ರಮಾಚರಣೆಯು ಯಶಸ್ವಿಯಾಗಿ ಸಂಪನ್ನಗೊಂಡಿತು.