ಆಲೆಟ್ಟಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ 107 ನೇ ವಾರ್ಷಿಕ ಮಹಾಸಭೆ

0

ನಿವ್ವಳ ಲಾಭ 87.59 ಲಕ್ಷ, ಶೇ. 10 ಡಿವಿಡೆಂಡ್ ಘೋಷಣೆ

ಆಲೆಟ್ಟಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ 107 ನೇ ವರ್ಷದ ವಾರ್ಷಿಕ ಮಹಾಸಭೆ ಯು ಸಂಘದ ಅಧ್ಯಕ್ಷರಾದ ಜಯಪ್ರಕಾಶ್ ಕುಂಚಡ್ಕ ರವರ ಅಧ್ಯಕ್ಷತೆಯಲ್ಲಿ ಸಂಘದ ಕೇಂದ್ರ ಕಚೇರಿಯ ವಜ್ರ ಮಹೋತ್ಸವ ಸಭಾಭವನದಲ್ಲಿ ಆ.29 ರಂದು ನಡೆಯಿತು.

ಸಂಘವು ಪ್ರಸ್ತುತ 2025-26 ನೇ ಸಾಲಿನಲ್ಲಿ 3118 ಮಂದಿ ಎ ತರಗತಿ ಸದಸ್ಯರನ್ನು ಹೊಂದಿದ್ದು 4.5 ಕೋಟಿ ಪಾಲು ಬಂಡವಾಳ ಹಾಗೂ ಶೇ. 98.43 ಸಾಲ ವಸೂಲಾತಿಯಾಗಿರುತ್ತದೆ.
ರೂ.29.52 ಕೋಟಿ ಠೇವಣಿ ಮತ್ತು ಸಂಘದ ದುಡಿಯುವ ಬಂಡವಾಳ ವರ್ಷಾಂತ್ಯದಲ್ಲಿ ರೂ. 54.24 ಕೋಟಿ ಇದ್ದು ನಿವ್ವಳ ಲಾಭ ರೂ. 87.59 ಲಕ್ಷ ಗಳಿಸಿದ್ದು , ಶೇ 10% ರಷ್ಟು ಡಿವಿಡೆಂಡ್ ನೀಡುವುದಾಗಿ ಅಧ್ಯಕ್ಷರಾದ ಜಯಪ್ರಕಾಶ್ ಕುಂಚಡ್ಕ ರವರು ಘೋಷಣೆ ಮಾಡುವ ಮೂಲಕ ಎಲ್ಲರನ್ನೂ ಸ್ವಾಗತಿಸಿದರು.


ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ಶಕುಂತಳ ಕೃಷ್ಣನ್ ರವರು 2025-26 ನೇ ಸಾಲಿನ ವಾರ್ಷಿಕ ವರದಿಯನ್ನು ಸಭೆಗೆ ಮಂಡಿಸಿದರು.
ಆರಂಭದಲ್ಲಿ ಅಗಲಿದ ಸಂಘದ ಸದಸ್ಯರಿಗೆ ಮೌನ ಪ್ರಾರ್ಥನೆ ಸಲ್ಲಿಸಿ ಶ್ರದ್ಧಾಂಜಲಿ ಅರ್ಪಿಸಲಾಯಿತು.

ಮರಣ ಹೊಂದಿದ ಸಂಘದ ಸದಸ್ಯರಿಗೆ ನೋಟಿಸು ನೀಡುವುದು ಸಮಂಜಸವಲ್ಲ. ವಾರಸುದಾರರಿಗೆ ಕಳುಹಿಸುವುದು ಅಥವಾ ನಾಮಿನಿಯವರಿಗೆ ಕಳುಹಿಸಬೇಕು ಎಂದು ದೇವಪ್ಪ ನಾಯ್ಕ್ ಸಲಹೆ ನೀಡಿದರು.
ಈ ಬಗ್ಗೆ ಆಡಳಿತ ಮಂಡಳಿಯ ಸಭೆಯಲ್ಲಿ ನಿರ್ಣಯಿಸಿ ಸಾಲದ ಖಾತೆ ವಾರಸುದಾರರಿಗೆ ವರ್ಗಾಯಿಸಿ ದಾಖಲೆ ಪತ್ರ ಸರಿಪಡಿಸಬೇಕು. ಮರಣ ಸಾಂತ್ವನ ನಿಧಿಗೆ ಠೇವಣಿಯ ಬಡ್ಡಿ ಮೊತ್ತ ಸಾಕಾಗುತ್ತಿದೆಯೇ.? 100 ಮಂದಿ ಪೋಷಕ ಸದಸ್ಯರನ್ನು ಮಾಡುವಂತೆ ದಾಮೋದರ ನಾರ್ಕೋಡು ಸಲಹೆ ನೀಡಿದರು.
ಕಳೆದ ಮಹಾಸಭೆಯಲ್ಲಿ ಸಂಘದ ಶಾಖೆಗಳಲ್ಲಿ ಮಾರಾಟ ಮಳಿಗೆಯಲ್ಲಿ ಕೃಷಿ ಉಪಕರಣಗಳನ್ನು ದಾಸ್ತಾನು ಮಾಡುವುದಾಗಿ ಪ್ರಸ್ತಾಪ ಮಾಡಲಾಗಿತ್ತು. ವ್ಯಾಪಾರ ವಿಭಾಗದಲ್ಲಿ ಗೊಬ್ಬರ ಮಾರಾಟ ಮಳಿಗೆಯನ್ನು ಯಾವ ಕಾರಣಕ್ಕಾಗಿ ಮುಚ್ಚಲಾಯಿತು. ಕೃಷಿಕರಿಗೆ ಬೆಳೆಗಳಿಗೆ ಸಿಂಪಡಿಸುವ ಔಷಧಿಗಳ ಮೇಲೆ ಸಬ್ಸಿಡಿ ನೀಡುವ
ವ್ಯವಸ್ಥೆ ಮಾಡಿದರೆ ಪ್ರಯೋಜನವಾಗಲಿದೆ ಎಂದು ಪುರುಷೋತ್ತಮ ಕೋಲ್ಚಾರು ಪ್ರಸ್ತಾಪಿಸಿದರು.
ಮಾರಾಟ ವಿಭಾಗದಲ್ಲಿ ಲಾಭಾಂಶ ಪಡೆಯಲು ಸದಸ್ಯರಿಗೆ ಗಿಫ್ಟ್ ಕೂಪನ್ ಸಂಘದ ವತಿಯಿಂದ ನೀಡಬೇಕು. ಸಂಘದ ಮಾರಾಟ ಮಳಿಗೆಯಿಂದಲೇ ಖರೀದಿ ಮಾಡುವಂತೆ ಸೂಚಿಸಬೇಕು ಎಂದು ದಾಮೋದರ ನಾರ್ಕೋಡು ಸಲಹೆ ನೀಡಿದರು.
ಕೃಷಿಕರಿಗೆ ಬೇಕಾಗುವ ಉಪಕರಣಗಳನ್ನು ಖರೀದಿಸಲು ಸಂಘದ ವತಿಯಿಂದ ಸಾಲ ಸೌಲಭ್ಯದ ವ್ಯವಸ್ಥೆ ಮಾಡಿದರೆ ಉತ್ತಮ. ಮೈಲು ತುತ್ತು ಬೆಲೆಯಲ್ಲಿ ತುಂಬಾ ವ್ಯತ್ಯಾಸವಿದೆ. ಸ್ಥಳೀಯ ವ್ಯಾಪಾರಿಗಳು ಕೃಷಿಕರಿಗೆ ಕೆ.ಜಿ ಯಲ್ಲಿ 150 ಕ್ಕಿಂತ ‌ಹೆಚ್ಚು ಬೆಲೆಯಲ್ಲಿ ಮಾರಾಟ ಮಾಡುತ್ತಿದ್ದಾರೆ. ಇದನ್ನು ಸಂಘದ ಮಾರಾಟ ಮಳಿಗೆಯಲ್ಲಿ
ದೊರಕುವಂತೆ ಮಾಡಿದರೆ ಪ್ರಯೋಜನವಾಗುವುದು ಎಂದು ತೇಜಕುಮಾರ್ ಬಡ್ಡಡ್ಕ ತಿಳಿಸಿದರು.
ಸಂಘದ ಅಧೀನದಲ್ಲಿ ರುವ ಜಾಗದಲ್ಲಿ ಹೊಸ ಕಟ್ಟಡ ನಿರ್ಮಿಸಿ ವ್ಯಾಪಾರ ಗೊಡಾನ್ ಮಾಡಬಹುದಲ್ಲವೇ ? ದೇವಪ್ಪ ನಾಯ್ಕ್ ಪ್ರಸ್ತಾಪಿಸಿದರು.
ಹಳೆ ಕಟ್ಟಡ ಸುಸ್ಥಿತಿಯಲ್ಲಿದೆ. ಸ್ವಂತ ಜಾಗವಿರುವುದರಿಂದ ಸುಸಜ್ಜಿತ ಸಭಾಭವನ ನಿರ್ಮಿಸಿದರೆ ಊರಿಗೆ ಉಪಕಾರವಾಗುವುದು. ಕೃಷಿ ಉಪಕರಣಗಳನ್ನು ಕೇಂದ್ರ ಕಚೇರಿಯಿಂದ ರೈತರಿಗೆ ಬಾಡಿಗೆ ರೂಪದಲ್ಲಿ ನೀಡುವ ವ್ಯವಸ್ಥೆ ಮಾಡಿದರೆ ಒಳ್ಳೆಯದು ಎಂದು ಬಾಪು ಸಾಹೇಬ್ ಅಭಿಪ್ರಾಯ ವ್ಯಕ್ತಪಡಿಸಿದರು.
ಕೋಲ್ಚಾರು ಶಾಖೆಯಲ್ಲಿ ಉತ್ತಮ ವ್ಯವಹಾರ ನಡೆಯುತ್ತಿದೆ. ಗೋಡನ್ ಕೊಠಡಿಯ ವ್ಯವಸ್ಥೆ ಅಗತ್ಯವಿದೆ. ಕೃಷಿ ಉಪಕರಣಗಳ ಮಾರಾಟ ಮಳಿಗೆ ಮಾಡಿದರೆ ಕೃಷಿಕರಿಗೆ ಅನೂಕೂಲವಾಗಲಿದೆ ಎಂದು ಸುದರ್ಶನ ಪಾತಿಕಲ್ಲು ತಿಳಿಸಿದರು.

ಬೆಳೆ ವಿಮೆ ವಿಚಾರದಲ್ಲಿ ಮಳೆ ಮಾಪನದ ಗೊಂದಲ ಸೃಷ್ಟಿಯಾಗಿ ರೈತರಿಗೆ ಅನ್ಯಾಯವಾಗಿದೆ. ಇದರ ನಿರ್ವಹಣೆ ಮಾಡುವ ಕಂಪನಿಯ ಬದಲಾವಣೆಯಾಗಬೇಕು. ಹಿಂದೆ ಟಾಟಾ ಕಂಪೆನಿಯ ವರಿಗೆ ನೀಡಲಾಗಿತ್ತು . ಬದಲಾಯಿಸುವಂತೆ ತಿಳಿಸಬೇಕು. ಶಾಸಕರು ಮತ್ತು ಸಂಸದರಿಗೆ ಸಮಸ್ಯೆ ಬಗ್ಗೆ ಗಮನಕ್ಕೆ ತರುವ ಕೆಲಸ ಆಡಳಿತ ಮಂಡಳಿಯರು ಮಾಡಬೇಕು.
ಈ ಬಗ್ಗೆ‌ ಮಹಾಸಭೆಯಲ್ಲಿ ನಿರ್ಣಯಿಸುವಂತೆ ಲೋಲಜಾಕ್ಷ ಭೂತಕಲ್ಲು ತಿಳಿಸಿದರು.
ಮಳೆ ಮಾಪನದ ಗೊಂದಲದ ಕುರಿತು ಪಂಚಾಯತ್ ಅಧಿಕಾರಿಯವರ ಜತೆ ಮಾಹಿತಿ ಕೇಳುವಂತೆ ಧನಂಜಯ ಕುಂಚಡ್ಕ ತಿಳಿಸಿದರು.
ಸದಸ್ಯರಿಗೆ 3 % ಬಡ್ಡಿಯಲ್ಲಿ ನೀಡುವ ಸಾಲವನ್ನು 10 ರಿಂದ 15 ಲಕ್ಷ ಏರಿಕೆ ಮಾಡುವುದು. ಬಡ್ಡಿ ರಹಿತ ಸಾಲ 3 ರಿಂದ 5 ಲಕ್ಷ ನೀಡುವ ಬಗ್ಗೆ ಸರಕಾರ ಸುತ್ತೋಲೆ ಹೊರಡಿಸಿದೆ. ನಮ್ಮ ಸಂಘದಲ್ಲಿ ಏನು ಮಾಡಲಾಗಿದೆ ಎಂದು ಲೋಲಜಾಕ್ಷರು ಪ್ರಶ್ನಿಸಿದರು.
ಈ ಬಗ್ಗೆ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನಮಹಾಸಭೆಯಲ್ಲಿ ಪ್ರಸ್ತಾಪಿಸಲಾಗಿದ್ದು, ದ.ಕ ಮತ್ತು ಉಡುಪಿ ಜಿಲ್ಲೆಯಲ್ಲಿ ಯಾವ ಸಹಕಾರಿ ಸಂಘದಲ್ಲಿಯೂ ಕೊಟ್ಟಿಲ್ಲವೆಂದು ತಿಳಿಸಿದ್ದಾರೆ. ನಬಾರ್ಡಿನಿಂದ ಬಾರದೆ ಕೊಡಲಾಗುವುದಿಲ್ಲ. ಸಂಘದ
ಸ್ವಂತ ಬಂಡವಾಳದಿಂದ ಕೊಡಬಹುದು ಎಂದು ಹೇಳಿರುವುದಾಗಿ ಅಧ್ಯಕ್ಷರು ಉತ್ತರಿಸಿದರು.

ಡಿ.ಸಿ.ಸಿ ಬ್ಯಾಂಕಿನವರು ಸರಕಾರದ ಆದೇಶ ದಿಕ್ಕರಿಸಿ ಈ ರೀತಿಯ ಹೇಳಿಕೆ ಕೊಡುವುದು ಸರಿಯಾದ ಕ್ರಮವಲ್ಲ. ಕೋರ್ಟ್ ಮೊರೆ ಹೋಗುವುದು ಒಳ್ಳೆಯದು ಎಂದು ತೇಜಕುಮಾರ್ ಹೇಳಿದರು.

ನಬಾರ್ಡ್ ಸ್ಕೇಲ್ ಫೈನಾನ್ಸ್ ಸುತ್ತೋಲೆ ಪ್ರಕಾರ ಸಂಘದಲ್ಲಿ ವ್ಯವಹರಿಸಬೇಕಾಗಿರುವುದರಿಂದ ಕೋರ್ಟ್ ಮೊರೆ ಹೋದರೆ ಪ್ರಯೋಜನವಿಲ್ಲ. ಸ್ವಂತ ಬಂಡವಾಳದಿಂದ ಕೊಟ್ಟರೆ ಲಾಭಾಂಶ ಕಡಿಮೆಯಾಗುವುದು. ಇದರ ಸಾಧಕ ಬಾಧಕಗಳಿಗೆ ಸಂಘ ನೇರ ಹೊಣೆಯಾಗುವುದು ಎಂದು ಸುಧಾಮರು ತಿಳಿಸಿದರು.
ಸರಕಾರ ಸುತ್ತೋಲೆ ಹೊರಡಿಸಿದ್ದರಿಂದ ನಿರ್ಣಯ ಮಾಡಿ ಪತ್ರ ಬರೆದು ಕಳುಹಿಸುವಂತೆ ದಾಮೋದರ ರವರು ತಿಳಿಸಿದರು.

ಪಿಗ್ಮಿ ಸಂಗ್ರಾಹಕರಿಗೆ ಕೊಡುವ ಕಮಿಷನ್ ನಲ್ಲಿ ಪರ್ಸಂಟೆಜ್ ಸ್ವಲ್ಪ ಏರಿಕೆ ಮಾಡುವ ಬಗ್ಗೆ ಆಡಳಿತ ಮಂಡಳಿ ಚರ್ಚಿಸಿ ತೀರ್ಮಾನಿಸುವಂತೆ ಪುರುಷೋತ್ತಮರು ಸಲಹೆ ನೀಡಿದರು.

ಬೈಲಾ ತಿದ್ದುಪಡಿ ಪ್ರಕಾರ ಅಂತಿಮ ಶಿಲ್ಕು ಕೇಂದ್ರ ಕಚೇರಿಯಲ್ಲಿ 20 ಲಕ್ಷ , ಶಾಖೆಗಳಲ್ಲಿ 10 ಲಕ್ಷದ ಮಿತಿ ಹಾಗೂ ಸಂಘದ ಸದಸ್ಯರು ಪಡೆಯುವ ಒಟ್ಟು ಸಾಲದ ಮೊತ್ತ 70 ಲಕ್ಷ ಮೀರುವಂತಿಲ್ಲ. ಕೃಷಿ ಭೂಮಿ ಹೊಂದಿರುವ ಸಿಬ್ಬಂದಿಗಳು ಸಂಘದ ಕಾರ್ಯವ್ಯಾಪ್ತಿಯಲ್ಲಿರುವವರು ಎ ತರಗತಿ ಸದಸ್ಯರಂತೆ ಕೃಷಿ ಸಾಲ ಪಡೆಯಲು ಅವಕಾಶವಿರುವುದಾಗಿ ಶ್ರೀಪತಿ ಭಟ್ ಮಜಿಗುಂಡಿ ತಿಳಿಸಿದರು.
ಸಂಘದಿಂದ ವಿದ್ಯಾರ್ಥಿ ಪುರಸ್ಕಾರ ನಿಧಿಯಿಂದ ಗ್ರಾಮದ ಸರಕಾರಿ ಶಾಲೆಯ ಪ್ರಾಥಮಿಕ ,ಹೈಸ್ಕೂಲ್, ಕಾಲೇಜ್ ವಿಭಾಗದಲ್ಲಿ ಶೈಕ್ಷಣಿಕ ವರ್ಷದಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ ನೀಡುವ ಬಗ್ಗೆ ಕರುಣಾಕರ ಹಾಸ್ಪಾರೆ ಪ್ರಸ್ತಾಪಿಸಿದರು. ‌
ಈ ಸಂದರ್ಭದಲ್ಲಿ ಮರಣ ಸಾಂತ್ವಾನ ಮಹಾ ಪ್ರ ಸ್ಥಾನ ನಿಧಿಯ ಪೋಷಕ ಸದಸ್ಯರನ್ನು ಸನ್ಮಾನಿಸಲಾಯಿತು.

ಕಸ್ತೂರಿ ರಂಗನ್ ವರದಿಯನ್ನು ವಿರೋಧಿಸುವುದಾಗಿ ಮಹಾ ಸಭೆಯಲ್ಲಿ ನಿರ್ಣಯಿಸುವಂತೆ ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ವತಿಯಿಂದ ಪ್ರಸ್ತಾಪಿಸಿದರು.

ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ಹರಿಪ್ರಸಾದ್ ಕಾಪುಮಲೆ, ನಿರ್ದೇಶಕರಾದ ಶ್ರೀಪತಿ ಭಟ್ ಮಜಿಗುಂಡಿ, ಕರುಣಾಕರ ಹಾಸ್ಪಾರೆ, ಸುಧಾಕರ ಆಲೆಟ್ಟಿ, ಚಿದಾನಂದ ಕೋಲ್ಚಾರು, ಗಂಗಾಧರ ಬಿ.ಕೆ, ಧರ್ಮಪಾಲ ಕೊಯಿಂಗಾಜೆ, ಉಮೇಶ ಮಜಿಗುಂಡಿ, ಶ್ರೀಮತಿ ಉಷಾ ಎಚ್ ಪಾಲಡ್ಕ, ಶ್ರೀಮತಿ ವಿದ್ಯಾ ಜಿ.ಆರ್ ಕುಡೆಕಲ್ಲು, ರಾಮದಾಸ ಮೊರಂಗಲ್ಲು, ನಿವೃತ್ತ ಸಿ.ಇ.ಒ ದಿನಕರ ಆಲೆಟ್ಟಿ ಉಪಸ್ಥಿತರಿದ್ದರು.

ಸಿಬ್ಬಂದಿ ಪ್ರವೀಣ್ ಆಲೆಟ್ಟಿ ಪ್ರಾರ್ಥಿಸಿದರು. ಜಯಪ್ರಕಾಶ್ ಕುಂಚಡ್ಕ ಸ್ವಾಗತಿಸಿದರು. ಶ್ರೀಪತಿ ಭಟ್ ಮಜಿಗುಂಡಿ ವಂದಿಸಿದರು.