ರಕ್ಷಾಬಂಧನವು ಸಂಬಂಧಗಳ ಬೆಸುಗೆ, ಸಹೋದರತ್ವದ ಸಂಕೇತ: ಕುಂಬ್ರ ದಯಾಕರ ಆಳ್ವ
ಪ್ರೀತಿ, ವಿಶ್ವಾಸದ ಬಾಂಧವ್ಯ ಗಟ್ಟಿಗೊಳಿಸುವ ಹಬ್ಬ: ಬೃಂದಾ ಪೂಜಾರಿ ಮುಕ್ಕೂರು

ರಕ್ಷಾಬಂಧನವು ಕೇವಲ ರಾಖಿ ಕಟ್ಟುವ ಸಂಪ್ರದಾಯವಲ್ಲ. ಪರಸ್ಪರ ಪ್ರೀತಿ, ವಿಶ್ವಾಸ, ಗೌರವ ಹಾಗೂ ಸಹೋದರತ್ವದ ಭಾವನೆಗಳನ್ನು ಗಟ್ಟಿಗೊಳಿಸುವ ಮೂಲಕ ಸಮಾಜದಲ್ಲಿ ಒಗ್ಗಟ್ಟು ಮೂಡಿಸುವ ಮಹತ್ವದ ಆಚರಣೆಯಾಗಿದೆ ಎಂದು ಲಯನ್ಸ್ ಕ್ಲಬ್ ಬೆಳ್ಳಾರೆ ಜಲದುರ್ಗಾ ಅಧ್ಯಕ್ಷ ಕುಂಬ್ರ ದಯಾಕರ ಆಳ್ವ ಹೇಳಿದರು.

ಮುಕ್ಕೂರು ನೇಸರ ಯುವಕ ಮಂಡಲ, ನೇಸರ ಯುವತಿ ಮಂಡಲ ಹಾಗೂ ಲಯನ್ಸ್ ಕ್ಲಬ್ ಬೆಳ್ಳಾರೆ ಜಲದುರ್ಗಾ ಸಹಭಾಗಿತ್ವದಲ್ಲಿ ಆ.29ರಂದು ಬೋಳಕುಮೇರು ಆಳ್ವ ಫಾರ್ಮ್ಸ್ನಲ್ಲಿ ನಡೆದ ರಕ್ಷಾಬಂಧನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ರಕ್ಷಾಬಂಧನದ ಮೂಲಕ ಪರಸ್ಪರ ಸಂಬಂಧಗಳನ್ನು ಮತ್ತಷ್ಟು ಗಟ್ಟಿಗೊಳಿಸುವುದರ ಜತೆಗೆ ಸಮಾಜದಲ್ಲಿ ಸೌಹಾರ್ದತೆ, ಸಹಕಾರ ಮತ್ತು ಒಗ್ಗಟ್ಟಿನ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ಇಂತಹ ಆಚರಣೆಗಳು ಯುವಜನರಲ್ಲಿ ಉತ್ತಮ ಮೌಲ್ಯಗಳನ್ನು ಬೆಳೆಸಲು ಸಹಕಾರಿಯಾಗುತ್ತವೆ ಎಂದರು.














ಮುಕ್ಕೂರು ನೇಸರ ಯುವತಿ ಮಂಡಲ ಅಧ್ಯಕ್ಷೆ ಬೃಂದಾ ಪೂಜಾರಿ ಮುಕ್ಕೂರು ರಕ್ಷಾಬಂಧನದ ಸಂದೇಶ ನೀಡಿ, ರಕ್ಷಾಬಂಧನವು ಸಹೋದರ-ಸಹೋದರಿಯರ ನಡುವಿನ ಪ್ರೀತಿ, ವಿಶ್ವಾಸ ಮತ್ತು ಬಾಂಧವ್ಯವನ್ನು ಗಟ್ಟಿಗೊಳಿಸುವ ಹಬ್ಬವಾಗಿದೆ. ರಾಖಿಯು ಕೇವಲ ಒಂದು ದಾರವಾಗಿರದೆ, ಪರಸ್ಪರ ಕಾಳಜಿ, ರಕ್ಷಣೆ, ಗೌರವ ಮತ್ತು ಜವಾಬ್ದಾರಿಯ ಸಂಕೇತವಾಗಿದೆ ಎಂದರು.
ಕುಟುಂಬದೊಳಗಿನ ಸಂಬಂಧಗಳನ್ನು ಗಟ್ಟಿಗೊಳಿಸುವುದರ ಜತೆಗೆ ಸಮಾಜದಲ್ಲಿ ಪರಸ್ಪರ ಸಹಕಾರ, ಸೌಹಾರ್ದತೆ ಹಾಗೂ ಸಹೋದರತ್ವದ ಭಾವನೆ ಬೆಳೆಸುವುದು ರಕ್ಷಾಬಂಧನದ ಆಶಯವಾಗಿದೆ. ಇಂದಿನ ಯುವಜನತೆ ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯ ಮೌಲ್ಯಗಳನ್ನು ಅರಿತುಕೊಂಡು, ಅವುಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಜವಾಬ್ದಾರಿ ವಹಿಸಬೇಕು. ಜಾತಿ, ಧರ್ಮ, ಭಾಷೆ ಹಾಗೂ ಭೇದಭಾವಗಳನ್ನು ಮೀರಿ ಎಲ್ಲರೂ ಒಂದಾಗಿ, ಪರಸ್ಪರ ಗೌರವದಿಂದ ಬದುಕುವ ಮೂಲಕ ಬಲಿಷ್ಠ ಸಮಾಜ ನಿರ್ಮಿಸಬೇಕು ಎಂದು ಬೃಂದಾ ಅವರು ಅಭಿಪ್ರಾಯಿಸಿದರು.
ಮುಕ್ಕೂರು ಹಾಲು ಉತ್ಪಾದಕರ ಸಹಕಾರ ಸಂಘದ ಉಪಾಧ್ಯಕ್ಷ ಗಣೇಶ ಶೆಟ್ಟಿ ಕುಂಜಾಡಿ ಮಾತನಾಡಿ, ರಕ್ಷಾಬಂಧನವು ಕುಟುಂಬದ ಸಂಬಂಧಗಳ ಜತೆಗೆ ಸಮಾಜದ ವಿವಿಧ ವರ್ಗಗಳ ನಡುವಿನ ಬಾಂಧವ್ಯವನ್ನು ಬೆಸೆಯುವ ಆಚರಣೆಯಾಗಿದೆ. ಪರಸ್ಪರ ಕಷ್ಟ-ಸುಖಗಳಿಗೆ ಸ್ಪಂದಿಸುವ ಹಾಗೂ ಸಹಕಾರ ನೀಡುವ ಮನೋಭಾವ ಬೆಳೆಸಿಕೊಳ್ಳಬೇಕು. ಯುವ ಸಂಘಟನೆಗಳು ಇಂತಹ ಅರ್ಥಪೂರ್ಣ ಕಾರ್ಯಕ್ರಮಗಳ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ನೀಡುತ್ತಿರುವುದು ಶ್ಲಾಘನೀಯ ಎಂದರು.
ವೇದಿಕೆಯಲ್ಲಿ ಲಯನ್ಸ್ ಕ್ಲಬ್ ಬೆಳ್ಳಾರೆ ಜಲದುರ್ಗಾ ಪ್ರಥಮ ಉಪಾಧ್ಯಕ್ಷ ಚಂದ್ರಹಾಸ ರೈ ಪುಡ್ಕಜೆ, ಶಾಲಿನಿ ಎಸ್ ಆಳ್ವ ಉಪಸ್ಥಿತರಿದ್ದರು. ಲಯನ್ಸ್ ಕ್ಲಬ್ ಬೆಳ್ಳಾರೆ ಜಲದುರ್ಗಾ ಕೋಶಾಧಿಕಾರಿ ಈಶ್ವರ ವಾರಣಾಶಿ ಸ್ವಾಗತಿಸಿದರು. ನೇಸರ ಯುವಕ ಮಂಡಲದ ಅಧ್ಯಕ್ಷ ರಕ್ಷಿತ್ ಗೌಡ ಕಾನಾವು ವಂದಿಸಿದರು. ನೇಸರ ಯುವತಿ ಮಂಡಲದ ಸದಸ್ಯೆ ದೀಕ್ಷಾ ನೀರ್ಕಜೆ ನಿರೂಪಿಸಿದರು.
ಭಾರತ ಮಾತೆಗೆ ಪುಷ್ಪ ನಮನ
ಕಾರ್ಯಕ್ರಮದಲ್ಲಿ ಭಾರತ ಮಾತೆಗೆ ಪುಷ್ಪ ನಮನ ಸಲ್ಲಿಸಲಾಯಿತು. ದೇಶದ ಏಕತೆ, ಅಖಂಡತೆ ಹಾಗೂ ಸೌಹಾರ್ದತೆಯನ್ನು ಕಾಪಾಡುವ ಸಂಕಲ್ಪದೊಂದಿಗೆ ಭಾರತ ಮಾತೆಗೆ ಪುಷ್ಪಾರ್ಚನೆ ನೆರವೇರಿಸಲಾಯಿತು. ಬಳಿಕ ಪರಸ್ಪರ ರಾಖಿ ಕಟ್ಟುವ ಮೂಲಕ ಸಹೋದರತ್ವದ ಸಂದೇಶ ಸಾರಲಾಯಿತು. ಆರತಿ ಎತ್ತಿ, ಹಣೆಗೆ ತಿಲಕವಿಟ್ಟು ರಾಖಿ ಕಟ್ಟುವ ಮೂಲಕ ರಕ್ಷಾಬಂಧನ ಆಚರಣೆಯನ್ನು ಅರ್ಥಪೂರ್ಣವಾಗಿ ನೆರವೇರಿಸಲಾಯಿತು. ಆಳ್ವ ಫಾರ್ಮ್ಸ್ ವತಿಯಿಂದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವರಿಗೆ ಉಪಹಾರದ ವ್ಯವಸ್ಥೆ ಮಾಡಲಾಗಿತ್ತು.







