ಸುಳ್ಯ: ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣದ ಬಗ್ಗೆ ಕಾನೂನು ಅರಿವು ಕಾರ್ಯಕ್ರಮ

0

ಹಿರಿಯರ ಹಕ್ಕುಗಳ ರಕ್ಷಣೆ ಮತ್ತು ಪಾಲನೆ ಕಿರಿಯರ ಕರ್ತವ್ಯವಾಗಿದೆ : ನ್ಯಾಯಾಧೀಶೆ ಟಿ. ದಮಯಂತಿ ಸೋಮಯ್ಯ

ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ತಾಲೂಕು ಕಾನೂನು ಸೇವೆಗಳ ಸಮಿತಿ ಸುಳ್ಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸುಳ್ಯ, ಹಾಗೂ ತಾಲೂಕು ಪಂಚಾಯತ್ ಸುಳ್ಯ ಇವರ ಸಂಯುಕ್ತ ಆಶ್ರಯದಲ್ಲಿ ೨೦೨೬-೨೭ನೇ ಸಾಲಿನ ಕೇಂದ್ರ ಸರಕಾರದ ಹಿರಿಯ ನಾಗರಿಕರ ರಾಜ್ಯ ಕ್ರಿಯಾ ಯೋಜನೆಯಂತೆ ತಾಲೂಕು ಮಟ್ಟದಲ್ಲಿ ವಿಕಲಚೇತನರ ಹಾಗೂ
ಹಿರಿಯ ನಾಗರಿಕರಿಗಾಗಿ ಕಾನೂನು ಅರಿವು ಮತ್ತು ನೆರವು ಕಾರ್ಯಕ್ರಮ ಸುಳ್ಯ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಸೆ. ೨೩ ರಂದು ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುಳ್ಯ ತಾಲೂಕು ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ರಾಜಣ್ಣ ವಹಿಸಿದ್ದರು.

ಸುಳ್ಯ ತಾಲೂಕು ಕಾನೂನು ಸೇವೆಗಳ ಸಮಿತಿಯ ಅಧ್ಯಕ್ಷರು ಹಾಗೂ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶರಾದ ಶ್ರೀಮತಿ ಟಿ. ದಮಯಂತಿ ಸೋಮಯ್ಯರವರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ಸಮಾಜದಲ್ಲಿ ಪ್ರತಿಯೊಬ್ಬರಿಗೂ ಜೀವಿಸಲು ಸಂವಿಧಾನವು ಅವರಿಗಾದ ಹಕ್ಕುಗಳನ್ನು ನೀಡಿದೆ. ವಿಶೇಷವಾಗಿ ಹಿರಿಯ ನಾಗರಿಕರ ಹಕ್ಕುಗಳನ್ನು ಕಿರಿಯರು ಅರ್ಥೈಸಿಕೊಂಡು ಅದನ್ನು ಸಂಪೂರ್ಣವಾಗಿ ಮಾಡುವುದು ಅವರ ಕರ್ತವ್ಯವಾಗಿದೆ. ವೃದ್ಧ ತಂದೆ ತಾಯಂದಿರನ್ನು ವೃದ್ಧಾಶ್ರಮಗಳಲ್ಲಿ ಸೇರಿಸುವ ಕೆಲವು ಘಟನೆಗಳು ಸಮಾಜದಲ್ಲಿ ಕಂಡುಬರುತ್ತದೆ. ಅಲ್ಲದೆ ಹಿರಿಯರನ್ನು ಅಗೌರವದಿಂದ ಕಾಣುವುದು ಮತ್ತು ಸಂವಿಧಾನ ಅವರಿಗೆ ನೀಡಿರುವ ಹಕ್ಕುಗಳನ್ನು ಕಿರಿಯರು ಉಲ್ಲಂಘಿಸುವುದು ಕಾನೂನಿನಲ್ಲಿ ಅಪರಾಧವಾಗಿದೆ. ಆದ್ದರಿಂದ ಪ್ರತಿಯೊಬ್ಬರೂ ಹಿರಿಯರಿಗೆ ಆಶ್ರಯವನ್ನು ನೀಡಿ ಅವರ ಆಗುಹೋಗುಗಳಿಗೆ ಸ್ಪಂದಿಸಬೇಕಾಗಿದೆ ಎಂದು ಕಾನೂನು ಅರಿವನ್ನು ಮೂಡಿಸಿದರು.
ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಸುಳ್ಯ ಕ್ಷೇತ್ರ ಶಿಕ್ಷಣಾಧಿಕಾರಿ ವೈ.ಎಸ್. ಹರಗಿ, ನಿವೃತ್ತ ಪ್ರಾಂಶುಪಾಲರಾದ ಕೆವಿ ದಾಮೋದರ ಗೌಡ, ಸುಳ್ಯ ತಾಲೂಕು ಆರೋಗ್ಯಧಿಕಾರಿ
ಶ್ರೀಮತಿ ಆಶಾ ಅಭಿಕಾರ್ ಮಾತನಾಡಿ, ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.


ವೇದಿಕೆಯಲ್ಲಿ ಸುಳ್ಯ ಯುವಜನ ಸೇವಾ ಕ್ರೀಡಾಧಿಕಾರಿ ದೇವರಾಜ್ ಮುತ್ಲಾಜೆ ಹಾಗೂ ಮೊದಲಾದವರು ಉಪಸ್ಥಿತರಿದ್ದರು.
ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದ ಸುಳ್ಯದ ಹಿರಿಯ ವಕೀಲರಾದ ಎಂ.ಎಂ.ಬೊಳ್ಳಪ್ಪ ರವರು ಹಿರಿಯ ನಾಗರಿಕರಿಗೆ ಕಾನೂನು ಮಾಹಿತಿಯನ್ನು, ಗ್ರಾಮೀಣ ಪುನರ್ ವಸತಿ ಕಾರ್ಯಕರ್ತರಾದ ಪುಟ್ಟಣ್ಣ ವಾಲ್ಕಜೆ ಯವರು ವಿಕಲಚೇತನರಿಗೆ ಮತ್ತು ಹಿರಿಯರಿಗೆ ಸರ್ಕಾರದಿಂದ ದೊರೆಯುವ ಯೋಜನೆಗಳ ಕುರಿತು, ಬ್ಯಾಂಕಿನಿಂದ ಸಿಗುವ ಸೌಲಭ್ಯಗಳ ಕುರಿತು ಕೆನರಾ ಬ್ಯಾಂಕ್ ನ ನೋಡಲ್ ಅಧಿಕಾರಿ ಶ್ರೀಮತಿ ಸುಜಾತಾ ರವರು ಮಾಹಿತಿಯನ್ನು ನೀಡಿದರು.

ಸಿಬ್ಬಂದಿಗಳಾದ ಚಂದ್ರಶೇಖರ್ ರವರು ಸ್ವಾಗತಿಸಿ, ಹರ್ಷಿತ್ ಹಾಗೂ ಶ್ರೀಮತಿ ಮೀನಾಕ್ಷಿ ಕಾರ್ಯಕ್ರಮ ನಿರೂಪಿಸಿ, ಷಣ್ಮುಖ ವಂದಿಸಿದರು.