ಕರಾವಳಿಯಲ್ಲಿ ಹೈಕೋರ್ಟ್ ಪೀಠ ಸ್ಥಾಪನೆ – ಪರಿಶೀಲನೆಗೆ ಸಮಿತಿ ರಚನೆ ಸ್ವಾಗತಾರ್ಹ : ಶ್ರೀಹರಿ ಕುಕ್ಕುಡೇಲು

0

ಕರಾವಳಿ ಕರ್ನಾಟಕ ಭಾಗದಲ್ಲಿ ಕರ್ನಾಟಕ ಹೈಕೋರ್ಟ್‌ನ ಸರ್ಕ್ಯೂಟ್‌ ಬೆಂಚ್‌ ಅಥವಾ ಶಾಶ್ವತ ಪೀಠ ಸ್ಥಾಪಿಸುವ ಸಾಧ್ಯತೆಯನ್ನು ಪರಿಶೀಲಿಸಲು ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳು ಸಮಿತಿ ರಚಿಸಿರುವುದನ್ನು ಸುಳ್ಯ ವಕೀಲರ ಸಂಘದ ನೂತನ ಅಧ್ಯಕ್ಷ ಶ್ರೀಹರಿ ಕುಕ್ಕುಡೇಲು ಸ್ವಾಗತಿಸಿದ್ದಾರೆ.

ಕರ್ನಾಟಕ ಹೈಕೋರ್ಟ್‌ನ ಸೆ.29ರ ಅಧಿಸೂಚನೆಯಂತೆ, ಮಂಗಳೂರು ಸೇರಿದಂತೆ ಕರಾವಳಿ ಕರ್ನಾಟಕ ಪ್ರದೇಶ, ಮೈಸೂರು, ಕೊಡಗು–ಮಡಿಕೇರಿ, ಹಾಸನ, ದಾವಣಗೆರೆ ಹಾಗೂ ಉತ್ತರ ಕನ್ನಡ ಜಿಲ್ಲಾ ಕೇಂದ್ರಗಳಲ್ಲಿ ಹೈಕೋರ್ಟ್‌ನ ಸರ್ಕ್ಯೂಟ್‌ ಬೆಂಚ್‌ ಅಥವಾ ಶಾಶ್ವತ ಪೀಠ ಸ್ಥಾಪಿಸುವ ಸಾಧ್ಯತೆಯನ್ನು ಪರಿಶೀಲಿಸಲು ಸಮಿತಿ ರಚಿಸಲಾಗಿದೆ.

ಹೈಕೋರ್ಟ್ ನ್ಯಾಯಮೂರ್ತಿಗಳಾದ ನ್ಯಾಯಮೂರ್ತಿ ಅನು ಶಿವರಾಮನ್, ನ್ಯಾಯಮೂರ್ತಿ ಎಸ್.ಜಿ. ಪಂಡಿತ್ ಹಾಗೂ ನ್ಯಾಯಮೂರ್ತಿ ಮೊಹಮ್ಮದ್ ನವಾಜ್ ಅವರನ್ನು ಸಮಿತಿಯ ಸದಸ್ಯರನ್ನಾಗಿ ನೇಮಿಸಲಾಗಿದ್ದು, ಸಂಬಂಧಪಟ್ಟ ಎಲ್ಲ ಪಾಲುದಾರರ ಅಭಿಪ್ರಾಯಗಳನ್ನು ಪಡೆದು ಈ ಕುರಿತು ವರದಿ ಸಲ್ಲಿಸುವ ಜವಾಬ್ದಾರಿ ನೀಡಲಾಗಿದೆ.

ಕರಾವಳಿ ಭಾಗದ ಜನರು ನ್ಯಾಯಾಂಗ ಸೇವೆಗಾಗಿ ದೂರದ ಬೆಂಗಳೂರು ಸೇರಿದಂತೆ ಇತರ ಪ್ರದೇಶಗಳಿಗೆ ತೆರಳಬೇಕಾಗುವ ಪರಿಸ್ಥಿತಿ ಇದೆ. ಮಂಗಳೂರಿನಲ್ಲಿ ಹೈಕೋರ್ಟ್‌ನ ಪೀಠ ಸ್ಥಾಪನೆಯಾದಲ್ಲಿ ದಕ್ಷಿಣ ಕನ್ನಡ ಸೇರಿದಂತೆ ಕರಾವಳಿ ಭಾಗದ ಜನರಿಗೆ ನ್ಯಾಯಾಂಗ ಸೇವೆ ಇನ್ನಷ್ಟು ಸುಲಭವಾಗಿ ಲಭ್ಯವಾಗುವ ಸಾಧ್ಯತೆ ಇದೆ. ವಕೀಲರು ಹಾಗೂ ಕಕ್ಷಿದಾರರಿಗೂ ಸಮಯ ಮತ್ತು ಪ್ರಯಾಣದ ಹೊರೆ ಕಡಿಮೆಯಾಗಲಿದೆ ಎಂಬ ನಿರೀಕ್ಷೆ ಇದೆ ಎಂದವರು ತಿಳಿಸಿದ್ದಾರೆ.